ಚಿಂತಾಮಣಿ ಪ್ರಸಾದ ದುರಂತ: ಆರೋಪಿ ಲೋಕೇಶ್ ಬಂಧನ

ಶಿವಮೊಗ್ಗ: ಚಿಂತಾಮಣಿ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷವಿಕ್ಕಿದ ಪ್ರಕರಣದ ಪ್ರಮುಖ ಆರೋಪಿ ಲಕ್ಷ್ಮೀ ಎಂಬಾಕೆಯ ಪ್ರಿಯಕರ ಲೋಕೇಶ್ ಎಂಬಾತನನ್ನು ಚಿಂತಾಮಣಿ ಪೊಲೀಸರು ಮಂಗಳವಾರ ಭದ್ರಾವತಿಯಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ.

20 ದಿನಗಳ ಹಿಂದೆ ಲೋಕೇಶ್ ಕಾಣೆಯಾಗಿದ್ದಾನೆಂದು ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದೇ ಸಮಯದಲ್ಲಿ ಲೋಕೇಶ್ ಭದ್ರಾವತಿ ಬೈಪಾಸ್ ರಸ್ತೆ ಸಮೀಪದ ಖಾಸಗಿ ಶಾಲೆಯಲ್ಲಿ ಗುಮಾಸ್ತನಾಗಿ ಸೇರಿಕೊಂಡಿದ್ದ. ಆತ ಇಲ್ಲಿಗೆ ಬಂದು ಕೆಲ ದಿನಗಳ ಬಳಿಕ ಪ್ರಸಾದಕ್ಕೆ ವಿಷವಿಕ್ಕಿದ ಪ್ರಕರಣ ನಡೆದು, ಅದರಲ್ಲಿ ಇಬ್ಬರು ಮೃತಪಟ್ಟಿದ್ದರು.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಲಕ್ಷ್ಮೀ ಎಂಬಾಕೆ ಜತೆ ಈತ ಫೋನ್​ನಲ್ಲಿ ಮಾತನಾಡಿದ್ದನ್ನು ಪತ್ತೆ ಮಾಡಿದ ಚಿಂತಾಮಣಿ ಪೊಲೀಸರು, ಮೊಬೈಲ್ ಟವರ್ ಲೊಕೇಷನ್ ಮೂಲಕ ಪತ್ತೆ ಮಾಡಿದ್ದರು.

ಈ ಪ್ರಕರಣದಲ್ಲಿ ಈತನ ಪಾತ್ರವೇನು? ತನಿಖೆಗೆ ಈತನ ಬಂಧನದಿಂದ ಎಷ್ಟು ಸಹಾಯವಾಗಲಿದೆ? ಎಂಬುದರ ಬಗ್ಗೆ ನಮಗೆ ಮಾಹಿತಿಯಿಲ್ಲ. ಆದರೆ ಆತನನ್ನು ಬಂಧಿಸಿ ಕರೆದೊಯ್ಯುತ್ತಿರುವುದಾಗಿ ನ್ಯೂಟೌನ್ ಠಾಣೆಗೆ ಚಿಂತಾಮಣಿ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಎಎಸ್ಪಿ ಎಂ.ಮುತ್ತುರಾಜ್ ತಿಳಿಸಿದ್ದಾರೆ.