ಚಿಕ್ಕಮಗಳೂರು: ಕರ್ತಿಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಲೋಕೇಶ್.ಬಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ರಂಗನಾಥ್ ಘೋಷಣೆ ಮಾಡಿದರು.
ಉಪಾಧ್ಯಕ್ಷ ಸ್ಥಾನ ತೆರವಾದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲೋಕೇಶ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಘೋಷಿಸಲಾಯಿತು.
ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಸಫಾಯಿ ಕರ್ಮಾಚಾರಿ ನಿಗಮದ ಮಾಜಿ ಅಧ್ಯಕ್ಷ ಕೆ.ಪಿ.ವೆಂಕಟೇಶ್, ಗ್ರಾಮಪಂಚಾಯಿತಿಯ ಸದಸ್ಯರು ಹಾಗೂ ಅಧಿಕಾರಿ ವರ್ಗವನ್ನು ವಿಶ್ವಾಸಕ್ಕೆ ಪಡೆದು ಹೆಚ್ಚಿನ ಅನುದಾನ ತಂದು ಸರ್ಕಾರದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಮಾದರಿ ಪಂಚಾಯಿತಿಯನ್ನಾಗಿಸುವಲ್ಲಿ ಎಲ್ಲರೂ ಶ್ರಮಿಸಲಿ ಎಂದು ಆಶಿಸಿದರು.
ಕರ್ತಿಕೆರೆ ಪಂಚಾಯಿತಿಯು ನುಡಿದಂತೆ ನಡೆದುಕೊಂಡು ಹೋಗುತ್ತಿದೆ. ಬಿಜೆಪಿ ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುವುದರ ಜೊತೆಗೆ ಭಾರತೀಯ ಜನತಾ ಪಾರ್ಟಿ ಸತತವಾಗಿ ಅಧಿಕಾರ ಹಿಡಿದುಕೊಂಡು ಬಂದಿದೆ. ಕರ್ತಿಕೆರೆ ಗ್ರಾಪಂ ಎಂಟು ಗ್ರಾಮಗಳನ್ನು ಒಳಗೊಂಡಿದ್ದು ಹಂತಹAತವಾಗಿ ೮ ಗ್ರಾಮಗಳ ಅಭಿವೃದ್ಧಿಗಾಗಿ ಮಾಜಿ ಶಾಸಕ ಸಿ.ಟಿ.ರವಿ ಶ್ರಮಿಸಿದ್ದಾರೆ. ೩೫ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸವನ್ನು ಮಾಡಿದ ನಮ್ಮ ಮೆಚ್ಚಿನ ನಾಯಕರಿಗೆ ಗ್ರಾಮದ ಪರವಾಗಿ ಧನ್ಯವಾದಗಳು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ನಿಮ್ಮ ಬಳಿ ತಂದಾಗ ಮೊದಲು ಗೌರವಯುತವಾಗಿ ಮಾತನಾಡಿಸುವುದರ ಜೊತೆಗೆ ಅವರ ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳಬೇಕು. ಅಭಿವೃದ್ಧಿ ಕೆಲಸಗಳಿಗಾಗಿ ಬಿಜೆಪಿ ಪಕ್ಷದ ಮುಖಂಡರು ಸದಾ ನಿಮ್ಮೊಂದಿಗೆ ಇರುತ್ತಾರೆ. ಎಲ್ಲರು ಒಗ್ಗಟ್ಟಿನಿಂದ ಗ್ರಾಮ ಪಂಚಾಯಿತಿಗೆ ಒಳ್ಳೆಯ ಹೆಸರನ್ನು ತಂದುಕೊಡೊಣ ಎಂದರು.
ಜಿಪಂ ಮಾಜಿ ಸದಸ್ಯ ಸೋಮಶೇಖರ್ ಮಾತನಾಡಿ, ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಎಲ್ಲರ ಸಹಕಾರದೊಂದಿಗೆ ಕಾರ್ಯಗತ ಮಾಡಲಾಗುವುದು. ಮುಖ್ಯವಾಗಿ ಗ್ರಾಮಗಳಲ್ಲಿನ ಕುಡಿಯುವ ನೀರು, ಬೀದಿ ದೀಪ ಸಮಸ್ಯೆ, ಸ್ವಚ್ಚತೆಗೆ ಆಧ್ಯತೆ ನೀಡಿ ಕೆಲಸ ಮಾಡಬೇಕು ಎಂದರು.
ಕರ್ತಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾರಾಣಿ ಗುರುಸ್ವಾಮಿ ಮಾತನಾಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿಯ ಜೊತೆಗೆ ಗ್ರಾಮಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ.ಬೀದಿ ದೀಪ, ಕುಡಿಯುವ ನೀರು, ಚರಂಡಿ ಮತ್ತು ರಸ್ತೆಗೆ ಪ್ರಮುಖ ಆದ್ಯತೆ ನೀಡಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡುತ್ತೇವೆ ಎಂದರು.
ಗ್ರಾಪಂ ಉಪಾಧ್ಯಕ್ಷ ಲೋಕೇಶ್.ಬಿ ಮಾತನಾಡಿ, ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಗಮನ ನೀಡಿ ಎಲ್ಲಾ ಸದಸ್ಯರ ಸಹಕಾರದಿಂದ ಮಾದರಿ ಗ್ರಾಮ ಪಂಚಾಯಿತಿ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷರಾದ ಕನಕರಾಜ್ ಅರಸ್, ನೆಟ್ಟೆಕೆರೆಹಳ್ಳಿ ಜಯಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜೀವ್, ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಪ್ರಮುಖರಾದ ಜಯವರ್ಧನ್, ನಿಂಗೇಗೌಡ, ಹೇಮರಾಜ್,ಯತೀಶ್, ಪುಟ್ಟಸ್ವಾಮಿ ಶೆಟ್ಟಿ, ಮೋಹನ್, ಗಣೇಶ್ ರಾಜ್ ಅರಸ್, ರೇಣುಕಾ, ಚಂದ್ರಶೇಖರ್ ರಾಜ್ ಅರಸ್, ಹೇಮಾವತಿ ಕೃಷ್ಣರಾಜ್ ಅರಸ್, ಭಾಗ್ಯ, ಪಾರ್ವತಮ್ಮ, ಸಿದ್ಧರಾಮೇಶ್ವರ, ನೇತ್ರ, ನಾಗೇಶ್, ರೇಖಾ, ಲೋಕೇಶ್, ಸೌಮ್ಯ ಮತ್ತಿತರರಿದ್ದರು.