ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಆರೋಪದ ಮೇಲೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಲೋಕಾಯುಕ್ತ ಪೊಲೀಸರು ರಾಜ್ಯದ ಏಳು ಅಧಿಕಾರಿಗಳಿಗೆ ಸೇರಿದ ೩೫ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ 22.76 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಗಳೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. 7 ಅಧಿಕಾರಿಗಳಿಗೆ ಸೇರಿದ ನಿವಾಸ, ಕಚೇರಿ, ಸಂಬಂಧಿಕರ ಮನೆಗಳು ಸೇರಿದಂತೆ ೩೫ ಸ್ಥಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ನಸುಕಿನ ಜಾವದಲ್ಲಿಯೇ ಲೋಕಾಯುಕ್ತ ಪೊಲೀಸರನ್ನು ಕಂಡ ಭ್ರಷ್ಟ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. 200ಕ್ಕೂ ಹೆಚ್ಚು ಲೋಕಾಯುಕ್ತ ಸಿಬ್ಬಂದಿ, ಭ್ರಷ್ಟರ ಮನೆಗಳಲ್ಲಿ ಇಂಚಿಂಚೂ ಶೋಧ ನಡೆಸಿದ್ದಾರೆ. ಇಡೀ ದಿನ ಮನೆ ಹಾಗೂ ಕಚೇರಿಗಳನ್ನು ಜಾಲಾಡಿದ ಪೊಲೀಸರು, ಅಧಿಕಾರಿಗಳ ಸಂಪತ್ತು ಮತ್ತು ವಿಲಾಸಿ ಜೀವನ ಕಂಡು ನಿಬ್ಬೆರಗಾಗಿದ್ದಾರೆ. ಕೆಲ ಅಧಿಕಾರಿಗಳ ಮನೆಯಲ್ಲಿ ಕಂತೆ ಕಂತೆ ನೋಟುಗಳು, ಕೆ.ಜಿ.ಗಟ್ಟಲೇ ಚಿನ್ನಾಭರಣ, ಐಷಾರಾಮಿ ಕಾರು-ಬೈಕ್‌ಗಳು, ಜಮೀನಿನ ದಾಖಲೆಪತ್ರಗಳು ಸಿಕ್ಕಿವೆ. ಭ್ರಷ್ಟ ಅಧಿಕಾರಿಗಳ ಬೇನಾಮಿ ಆಸ್ತಿ ರಹಸ್ಯ ದಾಳಿ ವೇಳೆ ಬಯಲಾಗಿದೆ. ಅಧಿಕಾರಿಗಳು ಅಕ್ರಮವಾಗಿ ಗಳಿಸಿದ ಹಣವನ್ನು ಷೇರು ವ್ಯವಹಾರ, ರಿಯಲ್ ಎಸ್ಟೇಟ್ ಉದ್ಯಮ, ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಖಾಸಗಿ ಉದ್ದಿಮೆಗಳಲ್ಲಿ ಹೂಡಿಕೆ ಮಾಡಿರುವುದು ದಾಳಿ ವೇಳೆ ಗೊತ್ತಾಗಿದೆ. ಅಧಿಕಾರಿಗಳು ಹಾಗೂ ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳು, ಸ್ೇ ಲಾಕರ್‌ಗಳ ಪರಿಶೀಲನೆ ಮುಂದುವರಿದಿದೆ.

5.74 ಕೋಟಿ ಆಸ್ತಿಯ ಒಡೆಯ ರಾಜಶೇಖರ್:
ದಾಳಿಗೊಳಗಾದ ಅಧಿಕಾರಿಗಳ ಪೈಕಿ ತುಮಕೂರು, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಡಿ.ರಾಜಶೇಖರ್ ಬಳಿ ಅತೀ ಹೆಚ್ಚಿನ ಅಂದರೆ 5.74 ಕೋಟಿ ರೂ. ಮೌಲ್ಯದ ಆಸ್ತಿಪತ್ತೆಯಾಗಿದೆ. ಇದೇ ರೀತಿ ಬೆಂಗಳೂರಿನ ಕಾನೂನು ಮಾಪನ ನಿರೀಕ್ಷಕ ಎಚ್.ಆರ್.ನಟರಾಜ್ ಬಳಿ ೩.೯೪ ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ.