ಹಿರೇಕೆರೂರ: ಸರ್ವೆ ಇಲಾಖೆಯ ವಿಷಯವಾಗಿ ಸಾಕಷ್ಟು ದೂರು ಬಂದಿದ್ದರಿಂದ ಭೂಮಾಪನಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರ ಅವರನ್ನು ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರ ತೀವ್ರವಾಗಿ ತರಾಟೆ ತಗೆದುಕೊಂಡರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಲೋಕಾಯುಕ್ತ ಪೊಲೀಸ್ ವಿಭಾಗ ಹಾವೇರಿ ವತಿಯಿಂದ ಬುಧವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆಗಳ ಸಭೆಯಲ್ಲಿ ಸಾಕಷ್ಟು ದೂರು ಬಂದವು.
ಆಗ ಮಾತನಾಡಿದ ಲೋಕಾಯುಕ್ತ ಎಸ್ಪಿ, ಸರ್ವೆ ಇಲಾಖೆ ತನ್ನ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಿದ್ದರೆ, ರೈತರಲ್ಲಿ ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ. ಸಮರ್ಪಕ ಮಾಹಿತಿ, ದಾಖಲಾತಿ, ಅಳತೆಯ ನಕ್ಷೆ ಇಟ್ಟುಕೊಂಡಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಈ ಕುರಿತು ತನಿಖೆ ಮಾಡಿ ಶಿಕ್ಷೆ ಕೊಡುವುದು ದೊಡ್ಡದಲ್ಲ. ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಸರ್ವೆ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನರೇಗಾ ಯೋಜನೆ ಕುರಿತು ರ್ಚಚಿಸಿದ ಎಂ.ಎಸ್. ಕೌಲಾಪುರ, ಅಧಿಕಾರಿಗಳು ಸರಿಯಾದ ದಾಖಲಾತಿ ಇಟ್ಟುಕೊಳ್ಳದೆ ಹೋದರೆ, ಅಂತಹವರ ವಿರುದ್ಧ ಕಾನೂನಿನಲ್ಲಿ 5 ವರ್ಷ ಜೈಲು ಶಿಕ್ಷೆ ಇದೆ. ಪಿಡಿಒಗಳು ಗ್ರಾಪಂ ಕೇಂದ್ರ ಕಚೇರಿಯಲ್ಲಿ ಲಭ್ಯವಿರುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ವಸತಿ ಯೋಜನೆ ಫಲಾನುಭವಿ ಜಾತಿ ವಿವರ ತಿದ್ದುಪಡಿ ಮಾಡಿ ಶೀಘ್ರವೇ ಮಂಜೂರಾತಿ ಆದೇಶ ಪತ್ರ ವಿತರಣೆ ಮಾಡಬೇಕು ಎಂದು ತಾಪಂ ಇಒ ಲಕ್ಷ್ಮೀಕಾಂತ ಬೊಮ್ಮಣ್ಣನವರಿಗೆ ಸೂಚಿಸಿದರು.
ತಾಲೂಕಿನ ಎಂ.ಕೆ. ಯತ್ತಿನಹಳ್ಳಿ ಗ್ರಾಮದ ಕರೇಗೌಡ ಭೋಗಾವಿ ಅವರ ಸಾಲ ಸಂಘದ ವ್ಯವಸ್ಥಾಪಕರ ನಿಷ್ಕಾಳಜಿಯಿಂದ ಸಾಲ ಮನ್ನಾ ಆಗಿಲ್ಲ ಎಂಬ ದೂರು ಬರುತ್ತಿದ್ದಂತೆ, ಈ ಬಗ್ಗೆ ಕೂಡಲೆ ಸೂಕ್ತ ದಾಖಲಾತಿ, ಕಾರಣ ತಿಳಿಸುವಂತೆ ಸಭೆಯಲ್ಲಿದ್ದ ಕೆಸಿಸಿ ಬ್ಯಾಂಕ್ ನೀರಿಕ್ಷಕ ರಮೇಶ ಬಾಬು ಅವರಿಗೆ ಲೋಕಾಯುಕ್ತ ಎಸ್ಪಿ ಸೂಚನೆ ನೀಡಿದರು.
ತಾಲೂಕಿನ ಹೊಲಬಿಕೊಂಡ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ಗ್ರಾಪಂ ಸದಸ್ಯರು ಕೆಲಸ ಮಾಡುತ್ತಿದ್ದು, ನಮಗೆ ಕೆಲಸವಿಲ್ಲದಂತಾಗಿದೆ. ಗ್ರಾಮದ ರಸ್ತೆಗಳು ಕಳಪೆಯಾಗಿವೆ ಎಂದು ದೂರು ನೀಡಿದರೂ ಕ್ರಮ ಜರುಗಿಸಿಲ್ಲ ಎಂಬುದಾಗಿ ಶಿವಕುಮಾರ ಶಿರಸಂಗಿ ಅವರು ನೀಡಿದ ಅರ್ಜಿ ವಿಚಾರಣೆ ನಡೆಸಿದ ಲೋಕಾಯುಕ್ತರು, ತಾಪಂ ಇಒ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ವರದಿ ನೀಡಬೇಕು. ನಂತರ ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದರು.
ಅನುಕಂಪದ ಆಧಾರದ ಮೇಲೆ ನೇಮಕಗೊಂಡ ನೌಕರ ನಟರಾಜ ನಂದಿಹಳ್ಳಿ ಅವರಿಗೆ ತಹಸೀಲ್ದಾರ್ ಕಚೇರಿಯಲ್ಲಿ ಹಲವು ಜವಾಬ್ದಾರಿ ನೀಡಲಾಗಿದೆ. ಅನುಭವವಿಲ್ಲದ ಅವರಿಂದ ಸಮರ್ಪಕ ಸೇವೆ ಸಿಗುತ್ತಿಲ್ಲ. ಅವರು ಈ ಕಚೇರಿಯಲ್ಲಿ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದಾರೆ ಎಂದು ದಾಖಲೆ ಸಮೇತ ಸಂಬಂಧಿಸಿದ ಮೇಲಧಿಕಾರಿಗಳಿಗೆ ದೂರು ನೀಡಿದ್ದರೂ, ಈವರೆಗೆ ಅವರ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ಗ್ರಾಪಂ ಸದಸ್ಯ ನಾಗರಾಜ ಹೊಲಬಿಕೊಂಡ ಅರ್ಜಿ ನೀಡಿದರು.
ಅಲ್ಲಿಯೇ ಇದ್ದ ನಟರಾಜ ನಂದಿಹಳ್ಳಿ, ಕಂದಾಯ ನಿರೀಕ್ಷಕರು ಸೇರಿದಂತೆ ವಿವಿಧ ಹುದ್ದೆ ಖಾಲಿ ಇವೆ. ಇಲಾಖೆ ನೇಮಿಸಿದಂತೆ ನಾನು ಕೆಲಸ ಮಾಡಿದ್ದೇನೆ ಎಂದರು. ಇದಕ್ಕೆ ಸ್ವಲ್ಪ ಗರಂ ಆದ ಲೋಕಾಯುಕ್ತ ಎಸ್ಪಿ, ಇಷ್ಟೊಂದು ಹುದ್ದೆ ಒಬ್ಬರೇ ನಿರ್ವಹಿಸುತ್ತಿರುವುದನ್ನು ನೋಡಿದರೆ ದೊಡ್ಡಮಟ್ಟದಲ್ಲಿ ಶಿಫಾರಸು ಇರಬೇಕು. ಸರ್ಕಾರಿ ಕಚೇರಿ ಸಾರ್ವಜನಿಕರ ಸ್ವತ್ತು. ಅಧಿಕಾರಿಗಳು ಸ್ವಹಿತಕ್ಕಾಗಿ ಏನನ್ನೂ ಬಳಸುವಂತಿಲ್ಲ. ಜನ್ಮದಿನ ಆಚರಣೆ ಸರಿಯಲ್ಲ ಎಂದು ಕಟುವಾಗಿ ಎಚ್ಚರಿಕೆ ನೀಡಿದರು.
ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಬಸನಗೌಡ ಸಿದ್ದಪ್ಪಗೌಡ್ರ ಸಲ್ಲಿಸಿದ್ದ ಅರ್ಜಿ ವಿಚಾರಿಸಿದ ಲೋಕಾಯುಕ್ತ ಎಸ್ಪಿ, ಹಳ್ಳಿಗಳಿಗೆ ತೆರಳಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಬಕಾರಿ ಸಬ್ಇನ್ಸ್ಪೆಕ್ಟರ್ ಸುಧಾ ಅವರಿಗೆ ಸೂಚಿಸಿದರು.
ಆರೋಗ್ಯ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಎಪಿಎಂಸಿ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕುರಿತು ಸಾರ್ವಜನಿಕರು ಸಲ್ಲಿಸಿದ ಅರ್ಜಿ ವಿಚಾರವಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸ್ಥಳದಲ್ಲಿಯೇ ಕೆಲವು ಸಮಸ್ಯೆ ಬಗೆ ಹರಿಸಲಾಯಿತು. ಇನ್ನು ಕೆಲವು ಅರ್ಜಿಗಳ ಕುರಿತು ಆಯಾ ಇಲಾಖೆಗೆ ಗಡುವು ನೀಡಲಾಯಿತು.
ಲೋಕಾಯಕ್ತ ಡಿವೈಎಸ್ಪಿ ಡಾ.ಬಿ.ಪಿ.ಚಂದ್ರಶೇಖರ, ಲೋಕಾಯುಕ್ತ ಇನ್ಸ್ಪೆಕ್ಟರ್ ಯು.ಎಸ್. ಅವಟಿ, ಗ್ರೇಡ್ 2 ತಹಸೀಲ್ದಾರ್ ಜಿ.ಎನ್. ಶೆಟ್ಟರ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.