ಬೆಂಗಳೂರು: ಮಹಾರಾಣಿ ಕ್ಲಸ್ಟರ್ ಕಾಲೇಜಿನ ವಸತಿ ನಿಲಯಕ್ಕೆ ಉಪಲೋಕಾಯುಕ್ತರು ಪರಿಶೀಲನೆ ವೇಳೆ ಕಂಡು ಬಂದ ಅವ್ಯವಸ್ಥೆಗಳ ಬಗ್ಗೆ ಪ್ರಾಥಮಿಕ ತನಿಖೆ ಕೈಗೊಂಡು ಸಮರ್ಪಕ ವರದಿಯನ್ನು ಸಲ್ಲಿಕೆ ಮಾಡುವಂತೆ ಲೋಕಾಯುಕ್ತ ಸಂಸ್ಥೆಯು ಉನ್ನತ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.
ಇತ್ತೀಚೆಗೆ ಉಪಲೋಕಾಯುಕ್ತರಾದ ನ್ಯಾ.ಕೆ.ಎನ್.ಫಣೀಂದ್ರ ಮತ್ತು ನ್ಯಾ.ಬಿ.ವೀರಪ್ಪ ಅವರು ಮಹಾರಾಣಿ ಕಾಲೇಜಿನ ವಾಣಿಜ್ಯ,ಕಲಾ ಮತ್ತು ವಿಜ್ಞಾನ ವಿಭಾಗದ ವಸತಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಹಲವು ನ್ಯೂನತೆಗಳನ್ನು ಕಂಡು ಬಂದಿದ್ದವು. ಕೊಠಡಿಯ ಗೋಡೆಗಳ ಮೇಲೆ ಅಸಭ್ಯ ಬರಹಗಳು, ಕೋಣೆಗಳ ಗೋಡೆ ಒದ್ದೆಯಾಗಿರುವುದು, ಬಣ್ಣ ಮಾಸಿಹೋಗಿರುವುದು, ಕಿಟಕಿಗಳು ಮುರಿದಿರುವುದು ಸೇರಿ ಹಲವು ಅವ್ಯವಸ್ಥೆಗಳನ್ನು ಕಂಡು ಉಪಲೋಕಾಯುಕ್ತರು ಕಾಲೇಜು ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದರು.
ವಿದ್ಯಾರ್ಥಿನಿಯರಿಗೆ ವಸತಿ ನಿಲಯದಲ್ಲಿ ಸರಿಯಾದ ಶೌಚಾಲಯಗಳು, ಸ್ನಾನದ ಕೊಠಡಿಗಳು ಇಲ್ಲದಿರುವುದು ಕಂಡು ಬಂದಿದೆ. ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಒಂದೇ ವಿಧವಾದ ಆಹಾರವನ್ನು ವಿತರಣೆ ಮಾಡಲಾಗುತ್ತಿದೆ. ಯಾವುದೇ ರೀತಿಯ ಸಿಹಿ ತಿಂಡಿ, ಮೊಟ್ಟೆ ಅಥವಾ ಮಾಂಸದ ಆಹಾರ ನೀಡದಿರುವ ಬಗ್ಗೆ ವಿದ್ಯಾರ್ಥಿಗಳು ಲೋಕಾಯುಕ್ತರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಅಲ್ಲದೇ, ವಿದ್ಯಾರ್ಥಿಗಳು ಮಲಗಲು ಮಂಚ ನೀಡಲಾಗಿದೆ. ಆದರೆ, ಹಾಸಿಗೆ, ದಿಂಬು ನೀಡಿಲ್ಲ. ಕೊಠಡಿಗಳಿಗೆ ಸರಿಯಾದ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಕುಡಿಯಲು ನೀರು ಮತ್ತು ಬಳಕೆಗೂ ನೀರು ಸಹ ಸರಿಯಾಗಿ ಸಿಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ವಸತಿ ನಿಲಯಕ್ಕೆ ಯಾವುದೇ ಸಂಪ್ ಅಥವಾ ಬೋರ್‌ವೆಲ್ ಇರದಿರುವುದು ಸಹ ಪತ್ತೆಯಾಗಿದೆ.
ಪರಿಶೀಲನೆ ವೇಳೆ ಪತ್ತೆಯಾದ ಎಲ್ಲಾ ನ್ಯೂನತೆಗಳನ್ನು ಆದಷ್ಟು ಬೇಗ ಸರಿಪಡಿಸಬೇಕು. ಈ ಬಗ್ಗೆ ಸಮಪರ್ಕವಾಗಿ ಪ್ರಾಥಮಿಕ ತನಿಖೆ ನಡೆಸಿ ಸೂಕ್ತ ವರದಿಯನ್ನು ಸಲ್ಲಿಕೆ ಮಾಡುವಂತೆ ಉಪಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ.