ಕಡತ ವಿಲೇವಾರಿ ವಿಳಂಬ ಆರೋಪ, ತಾಲೂಕು ಕಚೇರಿಗೆ ಲೋಕಾಯುಕ್ತ ಇನ್​ಸ್ಪೆಕ್ಟರ್ ಭೇಟಿ

ಮೂಡಿಗೆರೆ: ತಾಲೂಕು ಕಚೇರಿಯಲ್ಲಿ ವಿವಿಧ ದಾಖಲೆ ನೀಡಲು, ಸಾರ್ವಜನಿಕರ ಕೆಲಸ ಮಾಡಿಕೊಡಲು ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಜನಸಾಮಾನ್ಯರಿಂದ ದೂರು ಕೇಳಿಬಂದಿದ್ದರಿಂದ ಲೋಕಾಯುಕ್ತ ಇನ್​ಸ್ಪೆಕ್ಟರ್ ಸಚಿನ್ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.

ಹಣ ಕೊಟ್ಟವರಿಗೆ ಬೇನಾಮಿ ಕಡತಗಳನ್ನು ಸೃಷ್ಟಿಸಿ ಕೊಡಲಾಗುತ್ತಿದೆ. ಸಾಮಾನ್ಯರು ತಾಲೂಕು ಕಚೇರಿಗೆ ಪ್ರತಿದಿನ ಅಲೆದಾಡಿದರೂ ಕೆಲಸಗಳಾಗುತ್ತಿಲ್ಲ. ಈ ಕಾರಣದಿಂದ ಕಚೇರಿಯ ಕಂದಾಯ ಮತ್ತಿತರೆ ಭೂದಾಖಲೆಗಳ ಕಡತ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಹಕ್ಕುಪತ್ರಕ್ಕಾಗಿ ಕಳಸ ನಾಡಕಚೇರಿಗೆ 94ಸಿ ಅಡಿ ಎರಡು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿ, 3 ತಿಂಗಳಿಂದ ಮೂಡಿಗೆರೆ ಕಚೇರಿಗೆ ಕಳಸದಿಂದ ಬಂದು ಹೋಗುತ್ತಿದ್ದರೂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಹಿರೇಬೈಲಿನ ರವಿ ಗೌಡ, ಕಳಸದ ಮುತ್ತಪ್ಪ, ಜನಾರ್ದನ್, ಶಶಿ, ಉಮೇಶ, ಅಣ್ಣು, ಸುಂದರ, ಬಾಬು, ಸಂಜೀವ ಮತ್ತಿತರರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಇನ್ಸ್​ಪೆಕ್ಟರ್, ಅರ್ಹರಿಗೆ ಕೂಡಲೇ ಕಾನೂನು ರೀತಿಯಲ್ಲಿ ಹಕ್ಕುಪತ್ರ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಿದರಳ್ಳಿ ಮುರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಊಟ, ವಸತಿ ವ್ಯವಸ್ಥೆ ಪರಿಶೀಲಿಸಿದರು. ಖುದ್ದು ತಾವೇ ಊಟ ಮಾಡಿ ಆಡಳಿತ ವ್ಯವಸ್ಥೆ ಉತ್ತಮವಾಗಿದೆ. ಆದರೆ ಕಟ್ಟಡ ಕಿರಿದಾಗಿರುವುದರಿಂದ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.