Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಭಾರತದ ವಿದೇಶಾಂಗ ನೀತಿಗೆ ಒದಗಿರುವ ಸವಾಲುಗಳು

Thursday, 18.10.2018, 3:05 AM       No Comments

ರೇಂದ್ರ ಮೋದಿಯವರು 2014ರ ಮೇ ತಿಂಗಳಲ್ಲಿ ಪ್ರಧಾನಮಂತ್ರಿಯಾಗಿ ಚುನಾಯಿಸಲ್ಪಟ್ಟಾಗ, ಭಾರತದ ಪ್ರತಿಷ್ಠೆ ಮತ್ತು ಹಿತಾಸಕ್ತಿಗಳ ಪ್ರವರ್ತನೆಗೆಂದು ಅಂತಾರಾಷ್ಟ್ರೀಯ ಅಖಾಡದಲ್ಲಿ ಪೂರ್ವನಿಯಾಮಕ ಪಾತ್ರ-ನಿರ್ವಹಣೆಗೆ ಕ್ಷಿಪ್ರವಾಗಿ ಶುರುವಿಟ್ಟುಕೊಳ್ಳುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ.

ಮೇ 26ರಂದು ರಾಷ್ಟ್ರಪತಿ ಭವನದಲ್ಲಿ ಹಮ್ಮಿಕೊಳ್ಳಲಾದ ಪ್ರಧಾನಿ ಹುದ್ದೆಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ‘ಸಾರ್ಕ್’ ಸದಸ್ಯರಾಷ್ಟ್ರಗಳ ಎಲ್ಲ ಮುಖ್ಯಸ್ಥರನ್ನು ಆಹ್ವಾನಿಸುವ ಮೂಲಕ ಮೋದಿ ಅಭೂತಪೂರ್ವ ಹೆಜ್ಜೆಯನ್ನೇ ಇಟ್ಟರೆನ್ನಬೇಕು. ಆಗಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಸೇರಿದಂತೆ ಇಂಥ ಎಲ್ಲ ಮುಖ್ಯಸ್ಥರೂ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದು ಗೊತ್ತಿರುವಂಥದ್ದೇ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಪಾಲ್ಗೊಳ್ಳಲಾಗದಿದ್ದರೂ, ಅವರ ಪರವಾಗಿ ಸಮಾರಂಭದಲ್ಲಿ ಅಲ್ಲಿನ ಸಂಸತ್ತಿನ ಸ್ಪೀಕರ್ ಉಪಸ್ಥಿತರಿದ್ದರು. ಪ್ರಮಾಣವಚನ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ‘ವಿಶ್ವಶಾಂತಿ ಮತ್ತು ಅಭಿವೃದ್ಧಿಯ ಉದ್ದೇಶಕ್ಕೆ ಬಲತುಂಬುವ ನಿಟ್ಟಿನಲ್ಲಿ ಜಾಗತಿಕ ಸಮುದಾಯದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬಲ್ಲ ಸದೃಢ-ಸಂಯೋಜಿತ-ಅಭಿವೃದ್ಧಿಹೊಂದಿದ ಭಾರತದ ಕುರಿತು ಕನಸುಕಟ್ಟುವಂತೆ’ ಪ್ರಧಾನಮಂತ್ರಿ ಕಚೇರಿಯ ಜಾಲತಾಣದ ಮೂಲಕ ಅವರು ಎಲ್ಲ ಭಾರತೀಯರನ್ನೂ ಪ್ರಚೋದನಾಪೂರ್ವಕವಾಗಿ ಒತ್ತಾಯಿಸಿದರು.

ನೆರೆಹೊರೆಯ ಎಲ್ಲ ಸಾರ್ಕ್ ರಾಷ್ಟ್ರಗಳೊಂದಿಗೆ ಇಂಥದೊಂದು ‘ಸೌಹಾರ್ದಹಸ್ತ’ ಚಾಚುವ ಅವರ ವರ್ತನೆ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದ್ದು, ಶಾಂತಿ-ಸಾಮರಸ್ಯದ ವರ್ಧನೆಯಲ್ಲಿ ಆಸಕ್ತರಾಗಿರುವ ಓರ್ವ ವಿಶ್ವನಾಯಕರಾಗಿ ಅವರನ್ನು ಪ್ರತಿಬಿಂಬಿಸಿದ್ದು ಸುಳ್ಳಲ್ಲ; ಭಾರತದ ಪ್ರಧಾನಿಯಾಗಿ ಅವರು ಅಮೆರಿಕಕ್ಕೆ ನೀಡಿದ ಪ್ರಥಮಭೇಟಿಗೂ ಇದೊಂದು ಗಮನಾರ್ಹ ಹೆಜ್ಜೆಯಾಗಿ ಪರಿಣಮಿಸಿತು.

ಈ ಭೇಟಿ ಜರುಗಿದಾಗ, ನಾನು ಸ್ಯಾನ್​ಫ್ರಾನ್ಸಿಸ್ಕೊದಲ್ಲಿ ಭಾರತದ ಕಾನ್ಸಲ್ ಜನರಲ್ ಆಗಿ ಸೇವೆಸಲ್ಲಿಸುತ್ತಿದ್ದೆ. 2002ರ ಗೋಧ್ರಾ ದುರ್ಘಟನೆಯ ತರುವಾಯ ಮೋದಿಯವರನ್ನು ದೂರವಿಟ್ಟಿದ್ದ ಅಮೆರಿಕ, 2005ರ ಬಳಿಕ ಅವರಿಗೆ ರಾಜತಾಂತ್ರಿಕ ವೀಸಾವನ್ನು ನಿರಾಕರಿಸಿತ್ತು ಮತ್ತು ಅವರು ಹೊಂದಿದ್ದ ವ್ಯವಹಾರ/ಪ್ರವಾಸಿ ವೀಸಾವನ್ನೂ ರದ್ದುಗೊಳಿಸಿತ್ತು ಎಂಬ ಹಿನ್ನೆಲೆಯಲ್ಲಿ ಸದರಿ ಭೇಟಿಯ ಸುತ್ತ ಅಪಾರ ಅಳುಕು ಸುತ್ತುವರಿದಿತ್ತು, ಅಷ್ಟೇಕೆ, ಸ್ಪಷ್ಟಗೋಚರ ಯಶಸ್ಸಾಗಿ ಹೊಮ್ಮಲೇಬೇಕಾದಂಥ ಅತೀವ ಮಹತ್ವ ಈ ಭೇಟಿಗಿತ್ತು. ವಿಶ್ವಸಂಸ್ಥೆಯ ಸಾಮಾನ್ಯಸಭೆಯನ್ನುದ್ದೇಶಿಸಿ ನರೇಂದ್ರ ಮೋದಿ ಮಾಡಿದ ಭಾಷಣ, ಅಧ್ಯಕ್ಷ ಬರಾಕ್ ಒಬಾಮ ಹಾಗೂ ಮತ್ತಿತರ ನಾಯಕರೊಂದಿಗಿನ ಭೇಟಿ/ಮಾತುಕತೆಗಳು ಮೋದಿಯವರನ್ನು ಓರ್ವ ರಾಜತಂತ್ರಜ್ಞರಾಗಿ, ವಿಶ್ವನಾಯಕರಾಗಿ ಬಿಂಬಿಸಿದವೆನ್ನಬೇಕು. ಅಷ್ಟೇ ಅಲ್ಲ, ಉದ್ಯಮ/ವ್ಯವಹಾರ ವಲಯದ ಅತಿರಥ-ಮಹಾರಥರು, ಅಮೆರಿಕ ಶಾಸನಸಭೆಯ 34 ಶಾಸಕರು, ಸೆನೆಟರ್​ಗಳು ಮತ್ತು ಓರ್ವ ಗವರ್ನರ್ ಕೂಡ ಸೇರಿದಂತೆ 20,000ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದ ಮ್ಯಾಡಿಸನ್ ಸ್ಕೆ್ವೕರ್ ಗಾರ್ಡನ್​ನಲ್ಲಿನ ಭಾರಿ ಬಹಿರಂಗ ಸಭೆ ಮೋದಿಯವರನ್ನು ಓರ್ವ ಜನಪ್ರಿಯ ಸೆಲೆಬ್ರಿಟಿಯನ್ನಾಗಿಸಿತು; ಇದು ಇತ್ತೀಚಿನ ದಶಕಗಳಲ್ಲಿ ಅಮೆರಿಕ ಕಂಡಿರದ ವಿದ್ಯಮಾನ ಎಂದರೆ ಅತಿಶಯೋಕ್ತಿಯಲ್ಲ.

ಭಾರತ-ಅಮೆರಿಕ ಬಾಂಧವ್ಯವನ್ನು ಯಶಸ್ವಿಯಾಗಿ ಕಟ್ಟುತ್ತಲೇ, ತಮ್ಮ ‘ನೆರೆಹೊರೆ ಮೊದಲು’ ಮತ್ತು ‘ಆಕ್ಟ್ ಈಸ್ಟ್’ ಕಾರ್ಯನೀತಿಗಳನ್ನು ಬೆನ್ನತ್ತುವ ಮೂಲಕ ಓರ್ವ ‘ವಿಶ್ವಸಂಚಾರಿ’ ಎನಿಸಿಕೊಂಡವರು ಮೋದಿ. ವಿದೇಶಾಂಗ ನೀತಿಯನ್ನು ಆರ್ಥಿಕ ಅಭಿವೃದ್ಧಿಯೊಂದಿಗೆ ತಳುಕುಹಾಕುವ ಮತ್ತು ಅನಿವಾಸಿ ಭಾರತೀಯರು ತಾವು ನೆಲೆಸಿರುವ ದೇಶ ಹಾಗೂ ತಾಯ್ನಾಡಿನ ನಡುವೆ ಒಂದು ಬಾಂಧವ್ಯಸೇತುವಾಗುವಂತಾಗುವ ನಿಟ್ಟಿನಲ್ಲಿ ಮೋದಿ ಆದ್ಯಗಮನ ಹರಿಸಿದರೆನ್ನಬೇಕು.

2015ರ ಜೂನ್​ನಲ್ಲಿ ಐತಿಹಾಸಿಕ ಒಡಂಬಡಿಕೆಯೊಂದನ್ನು ಯಶಸ್ವಿಯಾಗಿ ಕುದುರಿಸಿದ್ದು ಅವರೇ. 1974ರ ಭಾರತ-ಬಾಂಗ್ಲಾದೇಶ ಭೂ-ಗಡಿ ಒಪ್ಪಂದವನ್ನು ಕಾರ್ಯಕಾರಿಯಾಗಿಸುವ ಮೂಲಕ, ಬಾಂಗ್ಲಾ ಜತೆಗಿನ ದಶಕಗಳಷ್ಟು ಹಳತಾದ ಗಡಿವಿವಾದವೊಂದರ ಇತ್ಯರ್ಥಕ್ಕೆ ಅವರು ಅನುವುಮಾಡಿಕೊಟ್ಟರೆನ್ನಬೇಕು. ಇಷ್ಟೇ ಅಲ್ಲ, ಚೀನಾ ಮತ್ತು ಭೂತಾನ್ ನಡುವಿನ ವಿವಾದಿತ ಪ್ರದೇಶ

ಡೋಕ್ಲಾಂನಲ್ಲಿನ ಚೀನಾದ ಕಾರ್ಯಾಚರಣೆಗಳನ್ನು ಪ್ರತಿರೋಧಿಸುವಲ್ಲಿ ಹಾಗೂ ಸದರಿ ಬಿಕ್ಕಟ್ಟನ್ನು ರಾಜತಾಂತ್ರಿಕ ಮಾತುಕತೆಯ ಮೂಲಕ ಪರಿಹರಿಸಿ ಚೀನಾವನ್ನು ಹಿಮ್ಮೆಟ್ಟಿಸುವಲ್ಲಿ ಮೋದಿ ಸರ್ಕಾರ ತೋರಿದ ಬದ್ಧತೆಗೆ, ತನ್ಮೂಲಕ ವಿದೇಶಾಂಗನೀತಿಯ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿದ ಪರಿಗೆ ಒಂದಿಡೀ ದೇಶವೇ ‘ಸಲಾಂ’ ಎಂದಿತು.

ಕಳೆದ 4 ವರ್ಷಗಳಲ್ಲಿ, ಇಂಥ ಯಶಸ್ಸುಗಳ ಬೆನ್ನೇರಿ 50ಕ್ಕೂ ಹೆಚ್ಚಿನ ದೇಶಗಳಿಗೆ ಭೇಟಿಯಿತ್ತಿರುವ ಮೋದಿ, ಭಾರತದ ಹಿತಾಸಕ್ತಿಗಳನ್ನು ಉತ್ತೇಜಿಸಲು ಇನ್ನಿಲ್ಲದಂತೆ ಯತ್ನಿಸಿದ್ದಾರೆ. ಇಷ್ಟಾಗಿಯೂ, ಅವರ ಇಂಥ ’ಅಪು್ಪಗೆ ರಾಜತಂತ್ರ’ಕ್ಕೆ ಗುರುತರ ಸವಾಲುಗಳೂ ಒದಗಿವೆಯೆನ್ನಿ. 2015ರ ಡಿಸೆಂಬರ್​ನಲ್ಲಿ, ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಷರೀಫ್​ರನ್ನು ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿನಂದಿಸಲು ಮೋದಿಯವರು ಪ್ರಯಾಣದ ನಡುವೆ ಲಾಹೋರ್​ಗೆ ಅಚ್ಚರಿಯ ಭೇಟಿಯಿತ್ತ ಹೊರತಾಗಿಯೂ, ಪಾಕ್ ಜತೆಗಿನ ಭಾರತದ ಸಂಬಂಧ ತೃಪ್ತಿಕರವಾಗೇನೂ ಇಲ್ಲ; ಮುಂಬೈ ದಾಳಿಯ ಹೊಣೆಗಾರನಾಗಿರುವ ಪಾಕಿಸ್ತಾನಿ ಉಗ್ರಗಾಮಿ ಹಫೀಜ್ ಸಯೀದ್ ಬಿಡುಬೀಸಾಗೇ ಓಡಾಡಿಕೊಂಡಿದ್ದಾನೆ ಮತ್ತು ತನ್ನ ಉಗ್ರಕೃತ್ಯಗಳ ಸಮರ್ಥನೆಗೆಂದು ರಾಜಕೀಯ ಪಕ್ಷವನ್ನೂ ಕಟ್ಟಿದ್ದಾನೆ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂಗುತೂರಿಸುವ, ಹಿಂಸಾಕೃತ್ಯಗಳಿಗೆ ಚಿತಾವಣೆ ನೀಡುವ ಮತ್ತು ಜಿಹಾದಿ ಭಯೋತ್ಪಾದನೆಯನ್ನು ರಫ್ತುಮಾಡುವ ಪಾಕ್ ಕಿಡಿಗೇಡಿತನ ಮುಂದುವರಿದೇ ಇದೆ.

ಮಾಲ್ಡೀವ್ಸ್​ನಲ್ಲಿ ಅಧ್ಯಕ್ಷ ಯಾಮೀನ್ ಅಬ್ದುಲ್ಲಾ ತುರ್ತಪರಿಸ್ಥಿತಿಯನ್ನು ಹೇರಿ ಪ್ರಜಾಸತ್ತಾತ್ಮಕ ಆಳ್ವಿಕೆಗೆ ಭಂಗತಂದಾಗ ಕಳವಳ ವ್ಯಕ್ತಪಡಿಸಿದ ಭಾರತ, ಅದರ ಮೇಲೆ ಚೀನಾದ ಪ್ರಭಾವ ಬೆಳೆಯುತ್ತಲೇ ಇರುವುದನ್ನು ಕಿರುಗಣ್ಣಲ್ಲೇ ವೀಕ್ಷಿಸಿತು. ಚೀನಾದೊಂದಿಗೆ ಒಂದು ಎಫ್​ಟಿಎ ಒಪ್ಪಂದಕ್ಕೂ ಸಹಿಹಾಕಿ, ಕಳಪೆ ಚೀನಿ ಸರಕುಗಳು ಅಗಾಧ ಪ್ರಮಾಣದಲ್ಲಿ ಆಮದಾಗುವಂತಾಗುವುದಕ್ಕೆ ಅನುವುಮಾಡಿಕೊಟ್ಟ ಮಾಲ್ಡೀವ್ಸ್ ಈಗ ಚೀನಾದ ಸಾಲದಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಹೊಸದಾಗಿ ಚುನಾಯಿತರಾಗಿರುವ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ಅವರು ‘ಭಾರತ ಮಾಲ್ಡೀವ್ಸ್​ನ

ಆಪ್ತಮಿತ್ರ’ ಎಂದು ಬಹಿರಂಗವಾಗೇ ಒಪ್ಪಿಕೊಂಡಿದ್ದಾರಾದರೂ, ಚೀನಾದ ಬಿಗಿಹಿಡಿತದಿಂದ ಮಾಲ್ಡೀವ್ಸ್ ನುಣಚಿಕೊಳ್ಳುವುದು ಅಸಂಭವವೇ ಎನ್ನಬೇಕು; ‘ಒನ್ ಬೆಲ್ಟ್ ಒನ್ ರೋಡ್’ ಉಪಕ್ರಮದಲ್ಲಿ ಮಾಲ್ಡೀವ್ಸ್​ಗಿರುವ ಪ್ರಾಮುಖ್ಯ ಮತ್ತು ಹಿಂದೂ ಮಹಾಸಾಗರ ವಲಯದಲ್ಲಿ ಚೀನಾಕ್ಕಿರುವ ಮಹತ್ವಾಕಾಂಕ್ಷೆಗಳೇ ಇದಕ್ಕೆ ಕಾರಣ. ಆದ್ದರಿಂದ ವಾಸ್ತವವನ್ನು ಅರ್ಥಮಾಡಿಕೊಂಡು, ವ್ಯೂಹಾತ್ಮಕ ಮತ್ತು ಆರ್ಥಿಕ ಪ್ರಯೋಜನಗಳನ್ನು ಆಧರಿಸಿರುವ ಸುಸ್ಥಿರ ಮತ್ತು ವಿಶ್ವಾಸಾರ್ಹ ಬಾಂಧವ್ಯಗಳನ್ನು ಈ ಎರಡೂ ದೇಶಗಳೊಂದಿಗೆ ಸ್ಥಾಪಿಸುವ ನಿಟ್ಟಿನಲ್ಲಿ ಭಾರತ ಕಾರ್ಯಪ್ರವೃತ್ತವಾಗಬೇಕಿದೆ.

ಇನ್ನು ಶ್ರೀಲಂಕಾ ವಿಚಾರಕ್ಕೆ ಬರೋಣ. ಚೀನಾದೊಂದಿಗೆ ನಂಟುಬೆಳೆಸಿಕೊಂಡಿದ್ದ ಹಾಗೂ ತಮ್ಮ ಹೆಸರನ್ನು ಜನಪ್ರಿಯವಾಗಿಸಬಲ್ಲಂಥ ಯೋಜನೆಗಳಿಗಾಗಿ ಅಗಾಧ ಸಾಲಮಾಡಿದ್ದ ಅಧ್ಯಕ್ಷ ಮಹೀಂದ್ರಾ ರಾಜಪಕ್ಸ, 2015ರ ಚುನಾವಣೆಗಳಲ್ಲಿ ಸೋಲಬೇಕಾಯಿತು. ಆದರೆ, ಚೀನಾದ ಯೋಜನೆಗಳ ರದ್ದತಿಯಾಗಲೀ ಅಥವಾ ಆ ಕುರಿತಾದ ಮರುಸಂಧಾನವಾಗಲೀ ಅಧ್ಯಕ್ಷ ಸಿರಿಸೇನಾ ಮುಂದಾಳತ್ವದ ಹೊಸ ಸರ್ಕಾರದ ಪಾಲಿಗೆ ಬಿಸಿತುಪ್ಪವಾಗಿದೆ. ಚೀನಾದ ಸಾಲಜಾಲದಲ್ಲಿ ಶ್ರೀಲಂಕಾ ಈಗಾಗಲೇ ಸಿಲುಕಿರುವುದರಿಂದ, ವ್ಯೂಹಾತ್ಮಕ ಮಹತ್ವವಿದ್ದ ಹಂಬನ್​ಟೋಟಾ ಬಂದರಿನ ಕಾರ್ಯಕಾರಿ ಹತೋಟಿಯನ್ನು 99 ವರ್ಷಾವಧಿ ಗುತ್ತಿಗೆಯ ಮೇಲೆ ಅವರು ಚೀನಾಕ್ಕೆ ವರ್ಗಾಯಿಸಬೇಕಾಗಿ ಬಂತು. ಭಾರತದ ಪಾಲಿಗೆ ಮಹತ್ವದ್ದಾಗಿದ್ದು, ತಮಿಳರ ಪ್ರಾಬಲ್ಯದ ಸೂಕ್ಷ್ಮನೆಲೆಯೆನಿಸಿರುವ ಜಾಫ್ನಾದಲ್ಲಿ 40,000 ಮನೆಗಳ ನಿರ್ವಣದ ಗುತ್ತಿಗೆಯನ್ನು ಚೀನಿ ಕಂಪನಿಯೊಂದು ಇತ್ತೀಚೆಗಷ್ಟೇ ತನ್ನದಾಗಿಸಿಕೊಂಡಿದೆ. ಇಷ್ಟು ಸಾಲದೆಂಬಂತೆ, ಶ್ರೀಲಂಕಾದ ಚಹಾ ನೆಡುತೋಪು ಉದ್ಯಮದಲ್ಲೂ ಹೂಡಿಕೆಗೆ ಚೀನಾ ಶುರುವಿಟ್ಟುಕೊಂಡಿದೆ. ಅಧ್ಯಕ್ಷ ಸಿರಿಸೇನಾ ಬಯಸುವ ಯಾವುದೇ ಯೋಜನೆಗಳಿಗೆ ವಿನಿಯೋಗಿಸಲೆಂದು ಈಗಾಗಲೇ ಸುಮಾರು 295 ಶತಕೋಟಿ ಡಾಲರ್ ಮೊತ್ತವನ್ನು ಚೀನಾ ಅವರಿಗೆ ಕೊಡುಗೆಯಾಗಿತ್ತಿದೆ. ಈ ದ್ವೀಪರಾಷ್ಟ್ರದಲ್ಲಿ ಚೀನಾ ಪ್ರಭಾವ ಬೆಳೆಯುತ್ತಲೇ ಇದೆ ಎಂಬುದಕ್ಕೆ ಈ ಸಂಗತಿಗಳು ಪುಷ್ಟಿನೀಡಬಲ್ಲವು.

2015ರಲ್ಲಿ ಹೊಸ ಸಂವಿಧಾನವನ್ನು ನೇಪಾಳ ಪ್ರಕಟಿಸುತ್ತಿದ್ದಂತೆ, ಭಾರತ-ನೇಪಾಳ ಬಾಂಧವ್ಯ ಹಳಸಿತು. ನೇಪಾಳದ ತರಾಯ್ ವಲಯದಲ್ಲಿ ನೆಲೆಸಿರುವ ಮಧೇಶಿ ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡಬಲ್ಲಂಥ ಅಂಶಗಳು ಈ ಸಂವಿಧಾನದಲ್ಲಿಲ್ಲ ಎಂದು ಭಾರತ ಬಲವಾಗಿ ಆಕ್ಷೇಪಿಸಿದ್ದೇ ಇದಕ್ಕೆ ಕಾರಣ. ದಿನಬಳಕೆಯ ಸಾಮಗ್ರಿಗಳು ಕಾಠ್ಮಂಡುವಿಗೆ ಪೂರೈಕೆಯಾಗದಂತೆ ಮಧೇಶಿಗಳು ತಡೆಯೊಡ್ಡಿದ್ದರಿಂದಾಗಿ, ನೇಪಾಳಿ ಜನರು ಭಾರಿ ತೊಂದರೆ ಅನುಭವಿಸುವಂತಾಯಿತು. ಆದ್ದರಿಂದ, ನೇಪಾಳ ಜತೆಗಿನ ನಂಟಿಗೆ ಮರುಜೀವ ನೀಡಲು ಭಾರತವು ಉತ್ತಮವಾಗಿ ಯತ್ನಿಸುವುದರ ಜತೆಗೆ, ಚೀನಾದ ‘ಒನ್ ಬೆಲ್ಟ್ ಒನ್ ರೋಡ್’ ಯೋಜನೆಯ ಓರ್ವ ಪಾಲುದಾರನಾಗಲು ನೇಪಾಳ ಈಗಾಗಲೇ ಸಮ್ಮತಿಸಿದೆ ಹಾಗೂ ಸರಿಸುಮಾರು 50,000 ಕೋಟಿ ರೂ. ವೆಚ್ಚದಲ್ಲಿ ಟಿಬೆಟ್​ನ ಲಾಸಾದಿಂದ ಕಾಠ್ಮಂಡುವಿಗೆ ರೈಲುಸಂಪರ್ಕ ಕಲ್ಪಿಸಲು ಚೀನಾ ಯೋಜಿಸುತ್ತಿದೆ ಎಂಬುದನ್ನು ಭಾರತ ಮರೆಯಬಾರದು. ಹೆಚ್ಚುವರಿ ಒಡಂಬಡಿಕೆಯೊಂದಕ್ಕೆ ಸಹಿಹಾಕಿರುವ ನೇಪಾಳ, ಚೀನಾದ ಬಂದರುಗಳಿಗೆ ಪ್ರವೇಶಾವಕಾಶ ದಕ್ಕಿಸಿಕೊಂಡಿದೆ. “BIMSTEC’ ದೇಶಗಳ (ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಶ್ರೀಲಂಕಾ, ಮ್ಯಾನ್ಮಾರ್ ಮತ್ತು ಥಾಯ್ಲೆಂಡ್) ಮಹತ್ವದ ಶೃಂಗಸಭೆಯೊಂದನ್ನು ಆಯೋಜಿಸಿದ ನಂತರ ನೇಪಾಳವು ಕಳೆದ ತಿಂಗಳು ಮಹತ್ವದ ಹೆಜ್ಜೆಯೊಂದನ್ನು ಇರಿಸಿತು; ಅರೆ-ನಗರದ ಪರಿಸರದಲ್ಲಿನ ಭಯೋತ್ಪಾದಕ-ವಿರೋಧಿ ಸನ್ನಿವೇಶವೊಂದರಲ್ಲಿ ಅತ್ಯುತ್ತಮ ತಾಲೀಮು, ತಂಡವನ್ನು ಕಟ್ಟುವಿಕೆ ಮತ್ತು ಯುದ್ಧತಂತ್ರದ ವಿಶೇಷ ಕಾರ್ಯಾಚರಣೆಗಳನ್ನು ನಡೆಸುವ ಕುರಿತು ಆದ್ಯಗಮನ ನೀಡಲೆಂದು ಆಯೋಜಿಸಲಾಗಿದ್ದ “BIMSTEC’ ಸೇನಾ ಕವಾಯಿತು/ಕಾರ್ಯಾಚರಣೆಯಿಂದ ನಿರ್ಗಮಿಸಲು ಅದು ನಿರ್ಧರಿಸಿತು. ನೇಪಾಳದೊಂದಿಗೆ ಈ ಸೂಕ್ಷ್ಮ ಬಾಂಧವ್ಯವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ಒಂದು ಸವಾಲಾಗೇ ಉಳಿದುಬಿಟ್ಟಿದೆ. ಚೀನಾದೊಂದಿಗೆ ನಿಕಟ ಬಾಂಧವ್ಯ ಬೆಳೆಸಿಕೊಳ್ಳುವುದು ಬೇಡ ಎಂಬುದಾಗಿ ನೇಪಾಳವನ್ನು ಭಾರತ ಒತ್ತಾಯಿಸಲಾಗದು; ಆದರೆ ತನಗಿರುವ ಭೂ-ವ್ಯೂಹಾತ್ಮಕ ನೆಲೆಗಟ್ಟು ಮತ್ತು ಸಾಂಸ್ಕೃತಿಕ ಸುಸಂಘಟನೆಯ ಕಾರಣದಿಂದಾಗಿ ಹಾಗೂ ತನ್ನ ಅಸ್ತಿತ್ವ ಹಾಗೂ ಬೆಳವಣಿಗೆಯನ್ನು ಕಾಯ್ದುಕೊಳ್ಳಲು ನೇಪಾಳವು ಭಾರತದ ಮೇಲೆ ದೀರ್ಘಾವಧಿಯವರೆಗೆ ಅವಲಂಬಿತವಾಗಿರುತ್ತದೆ ಎಂದು ಭಾವಿಸುವುದು ವಾಸ್ತವಿಕ ಎನಿಸುತ್ತದೆ.

(ಲೇಖಕರು ಮಾಜಿ ರಾಯಭಾರಿ, ಜಾಗತಿಕ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top