Wednesday, 12th December 2018  

Vijayavani

Breaking News

ಪುತಿನ್ ರಷ್ಯಾದ ಪರ್ಯಾಯಪದವೇ ಆಗಿಬಿಟ್ಟರೇ?!

Friday, 23.03.2018, 3:05 AM       No Comments

| ಎನ್​. ಪಾರ್ಥಸಾರಥಿ

ಅಮೆರಿಕ ಮತ್ತು ರಷ್ಯಾ ನಡುವಿನ ಹಗೆತನ ಹೀಗೇ ಬೆಳೆದು ಮುಂದುವರಿದಲ್ಲಿ, ರಷ್ಯಾದೊಂದಿಗಿನ ಸಂಬಂಧವನ್ನು ಕಾಯ್ದುಕೊಳ್ಳುವುದು ಭಾರತದ ಪಾಲಿಗೆ ಅತಿಮುಖ್ಯ ಸಂಗತಿಯಾಗುತ್ತದೆ. ರಕ್ಷಣಾ ಸಾಮಗ್ರಿ, ಶಸ್ತ್ರಾಸ್ತ್ರ ಸಂಗ್ರಹಣೆಗೆ ಭಾರತ ವಿವಿಧ ‘ದೇಶಮೂಲ’ಗಳನ್ನು ನೆಚ್ಚಿದ್ದರೂ ಈ ವಿಷಯದಲ್ಲಿ ಈಗಲೂ ರಷ್ಯಾದ್ದೇ ಸಿಂಹಪಾಲು.

ಮತ್ತೆ ಐದು ವರ್ಷಗಳ ದರ್ಬಾರು ನಡೆಸುವುದಕ್ಕೆಂದು ಪುನರಾಯ್ಕೆಗೊಂಡಿದ್ದಕ್ಕೆ ಚೀನಿ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು ಕಳೆದ ವಾರದ ವಿದ್ಯಮಾನ. ಈ ಮಧ್ಯೆ, ಅಲ್ಲಿನ ಕಮ್ಯುನಿಸ್ಟ್ ಪಾರ್ಟಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿತು- ಎರಡು ಅವಧಿವರೆಗೆ ಮಾತ್ರವೇ ಅಧ್ಯಕ್ಷ ಪದವಿ ಅಲಂಕರಿಸಬಹುದು ಎಂದಿದ್ದ ಮಿತಿಯನ್ನು ತೆಗೆದುಹಾಕುವುದಕ್ಕೆ ಪಕ್ಷ ಸರ್ವಾನುಮತದಿಂದ ಸಮ್ಮತಿಸಿದ ಕಾರಣದಿಂದಾಗಿ, ಜಿನ್​ಪಿಂಗ್ ಆಜೀವ ಪರ್ಯಂತ ಅಧ್ಯಕ್ಷರಾಗಿ ಮುಂದುವರಿಯುವುದಕ್ಕೆ ಹಾದಿ ಸುಗಮವಾದಂತಾಗಿದೆ.

ಅದೇ ವೇಳೆಗೆ, ಕಳೆದ ಭಾನುವಾರ, ರಷ್ಯಾದ ಪ್ರಭಾವಿ ನಾಯಕ ವ್ಲಾದಿಮಿರ್ ಪುತಿನ್ ಕೂಡ ಇಂಥದೇ ಸಾಧನೆ ಮೆರೆದಿದ್ದಾರೆ. ರಷ್ಯಾ ಒಕ್ಕೂಟದ ಅಧ್ಯಕ್ಷರಾಗಿ ದಾಖಲಾರ್ಹ ಎನ್ನಬಹುದಾದ ನಾಲ್ಕನೇ ಅವಧಿಗೂ ಮರುಚುನಾಯಿತರಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರು ಶೇ. 76.68ರಷ್ಟು ಮತಗಳನ್ನು ದಕ್ಕಿಸಿಕೊಂಡಿದ್ದಾರೆ; 2012ರಲ್ಲಿ ಅವರ ಮಡಿಲು ಸೇರಿದ್ದ ಶೇ. 63.6ರಷ್ಟು ಮತಗಳಿಗೆ ಹೋಲಿಸಿದರೆ ಇದು ಗಣನೀಯ ಜಿಗಿತವೇ. ಪುತಿನ್​ರ ಸಮೀಪದ ಪ್ರತಿಸ್ಪರ್ಧಿ ಪಾವೆಲ್ ಗ್ರುಡಿನಿನ್​ಗೆ ಕೇವಲ ಶೇ. 11.78 ಮತಗಳು ಬಿದ್ದವು. ಸಾರ್ವಜನಿಕ ಹಣದ ದುರುಪಯೋಗದ ಆರೋಪಗಳ ಮೇಲೆ ತಪ್ಪಿತಸ್ಥರೆಂದು ನಿರ್ಣಯಿಸಲ್ಪಟ್ಟ ಕಾರಣದಿಂದಾಗಿ, ಪುತಿನ್​ರ ಗಂಭೀರ ಪ್ರತಿಸ್ಪರ್ಧಿ ಎಂದೇ ಪರಿಗಣಿಸಲ್ಪಟ್ಟಿದ್ದ ಅಲೆಕ್ಸಿ ನವಾನ್ಲಿ, ಸ್ಪರ್ಧಿಸದಂತೆ ನಿಷೇಧಕ್ಕೊಳಗಾಗುವಂತಾಯಿತು. ಒಟ್ಟಾರೆ ಹೇಳುವುದಾದರೆ, ತಮ್ಮ ಬಹುತೇಕ ಎದುರಾಳಿಗಳು ಒಂದೋ ಜೈಲುಪಾಲಾಗಿರುವುದರಿಂದ ಇಲ್ಲವೇ ಮೂಲೆಗುಂಪಾಗಿರುವುದರಿಂದ, ರಷ್ಯಾದ ಮೇಲಿನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುವುದಕ್ಕೆ ಈ ಭರ್ಜರಿ ವಿಜಯ ಅಧ್ಯಕ್ಷ ಪುತಿನ್​ಗೆ ಸುವರ್ಣಾವಕಾಶವನ್ನೇ ಒದಗಿಸಿದೆ.

ವಿಶ್ವದ ಅತಿದೊಡ್ಡ ರಾಷ್ಟ್ರವಾದ ರಷ್ಯಾದ ಅತ್ಯಂತ ಪ್ರಭಾವಿ ರಾಜಕಾರಣಿಯ ಪಟ್ಟವನ್ನು ಕಳೆದ 18 ವರ್ಷಗಳಿಂದಲೂ ಪಟ್ಟಾಗೇ ಹಿಡಿದಿರುವುದು ಪುತಿನ್ ವೈಶಿಷ್ಟ್ಯ ಹಾಗೂ ತಾಕತ್ತು. ಕೆಜಿಬಿಯಲ್ಲಿ ಅಧಿಕಾರಿಯಾಗಿದ್ದ ಪುತಿನ್​ರನ್ನು 1999ರ ಆಗಸ್ಟ್ 9ರಂದು ಹಂಗಾಮಿ ಪ್ರಧಾನಮಂತ್ರಿಯಾಗಿ ನೇಮಿಸಲಾಯಿತು; ಆದರೆ ವಿಧಿಯಾಟ ಹೇಗಿದೆ ನೋಡಿ, ರಷ್ಯಾದ ಅಂದಿನ ಅಧ್ಯಕ್ಷ ಯೆಲ್ಸಿನ್ 1999ರ ಡಿಸೆಂಬರ್ 31ರಂದು ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದಾಗ, ತರುವಾಯದ ಕೆಲವೇ ತಿಂಗಳಲ್ಲಿ ರಷ್ಯಾದ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ಜಿಗಿದುಬಿಟ್ಟರು ಪುತಿನ್. ಅಲ್ಲಿಂದೀಚೆಗೆ, 2000ದ ವರ್ಷದಿಂದ 2008ರವರೆಗೆ 4 ವರ್ಷಗಳ ಅವಧಿಯ ಎರಡು ‘ಅಧ್ಯಕ್ಷ ಅಧಿಕಾರಾವಧಿ’ಗಳನ್ನು ಅನುಭವಿಸಿದ ಪುತಿನ್, ನಂತರದಲ್ಲಿ 2012ರಿಂದ ಇತ್ತೀಚಿನ ದಿನದವರೆಗೆ ಮೂರನೇ ಅವಧಿಯನ್ನೂ ಖಾತೆಗೆ ಸೇರಿಸಿಕೊಂಡಿದ್ದು ಗೊತ್ತಿರುವಂಥದ್ದೇ. 2006-2012ರ ಅವಧಿಯಲ್ಲಿ ಅವರು ಪ್ರಧಾನಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಿದೆ.

ಪುತಿನ್ ರಷ್ಯಾದ ನಾಯಕತ್ವವನ್ನು ವಹಿಸಿಕೊಳ್ಳುವ ಹೊತ್ತಿಗಾಗಲೇ, ಸೋವಿಯತ್ ಒಕ್ಕೂಟದ ಕೊನೆಯ ನಾಯಕ ಮಿಖಾಯಿಲ್ ಗೊರ್ಬಚೆವ್ ಮತ್ತು ರಷ್ಯಾದ ಮೊದಲ ಅಧ್ಯಕ್ಷ ಬೋರಿಸ್ ಯೆಲ್ಸಿನ್ ಈ ಇಬ್ಬರೂ ದುರ್ಬಲರೆಂದು ಪರಿಗಣಿತವಾಗಿಬಿಟ್ಟಿದ್ದರು; ಹೀಗಾಗಿ ರಷ್ಯಾ ಬಾಹ್ಯಪ್ರಪಂಚದ ತುಳಿತಕ್ಕೊಳಗಾಗಿತ್ತು. ಸೋವಿಯತ್ ಒಕ್ಕೂಟ ಕುಸಿಯತೊಡಗಿದಂತೆ, ಹಿಂದಿನ ವಾರ್ಸಾ ಒಪ್ಪಂದದ ರಾಷ್ಟ್ರಗಳನ್ನು ನ್ಯಾಟೋ (NATO) ಸಂಘಟನೆಯ ಸದಸ್ಯರನ್ನಾಗಿಸುವುದಿಲ್ಲ ಎಂಬುದಾಗಿ ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಅವರು ಗೊರ್ಬಚೆವ್​ಗೆ ಭರವಸೆ ನೀಡಿದ್ದರು ಎನ್ನಲಾಗುತ್ತದೆ. ಆದರೆ ಕೆಲವೇ ವರ್ಷಗಳಲ್ಲಿ, ಹಿಂದೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಬಹುತೇಕ ರಾಷ್ಟ್ರಗಳು ರಷ್ಯಾದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನ್ಯಾಟೊ ಸಂಘಟನೆಯ ಸದಸ್ಯರಾಗಿಬಿಟ್ಟವು; ಎಲ್ಲಕ್ಕಿಂತ ಮುಖ್ಯವಾಗಿ, ಭೌಗೋಳಿಕವಾಗಿ ನಿರ್ಣಾಯಕ ನೆಲೆಗಟ್ಟಿನಲ್ಲಿದ್ದ ಜಾರ್ಜಿಯಾ ಮತ್ತು ಉಕ್ರೇನ್ ನ್ಯಾಟೋ ಮೈತ್ರಿಕೂಟಕ್ಕೆ ಸೇರುವಂತಾಗಬೇಕೆಂಬ ಒತ್ತಡ ಹೆಚ್ಚಾಗುತ್ತಲೇ ಹೋಯಿತು ಮತ್ತು ಇದು ರಷ್ಯಾದ ಭದ್ರತೆಗೆ ಗಂಭೀರ ಧಕ್ಕೆಯುಂಟುಮಾಡುವ ಬಾಬತ್ತಾಗಿತ್ತು. ಆಂತರಿಕವಾಗಿ ಹೇಳುವುದಾದರೆ, ರಷ್ಯಾದ ಶಕ್ತಿಯುಡುಗಿತ್ತು, ಭ್ರಷ್ಟಾಚಾರ ರಾಜಾರೋಷವಾಗಿತ್ತು. ರಷ್ಯಾದ ಭದ್ರತಾ ಹಿತಾಸಕ್ತಿಗಳಿಗೆ ಚೆಚನ್ಯಾ ದೇಶ ಕೂಡ ಗಂಭೀರ ಸಮಸ್ಯೆಗಳನ್ನು ಒಡ್ಡಿತ್ತು. ಒಕ್ಕೂಟದಿಂದ ಚೆಚನ್ಯಾ ಪ್ರದೇಶವು ಪ್ರತ್ಯೇಕಗೊಳ್ಳುವುದನ್ನು ತಡೆಯಲೆಂದು 1990ರ ದಶಕದಲ್ಲಿ ಚೆಚನ್ಯಾದಲ್ಲಿ ರಷ್ಯಾ ಎರಡು ಭೀಕರ ಯುದ್ಧಗಳಲ್ಲಿ ಹೋರಾಡಿತ್ತು. ಆದರೆ ಪುತಿನ್​ರ ದೃಢಸಂಕಲ್ಪದ ಯತ್ನಗಳಿಂದಾಗಿ ಚೆಚನ್ಯಾ ವಿಷಯದಲ್ಲಿ ನಿರ್ಣಾಯಕ ವಿಜಯ ದಕ್ಕುವಂತಾಯಿತು ಮತ್ತು ಅಲ್ಲಿಂದೀಚೆಗೆ ಈ ಪ್ರದೇಶ ರೂಪಾಂತರಗೊಂಡು ಸುಸಂಘಟಿತವಾಗಿದೆ. ಪ್ರತ್ಯೇಕತಾವಾದಿ ಚಳವಳಿಯ ಎಲ್ಲ ಜಾಡುಗಳೂ ನಿರ್ನಾಮಗೊಂಡಿವೆ.

ಜಾರ್ಜಿಯಾದಲ್ಲಿ, 2003ರಿಂದಲೂ ಪಾಶ್ಚಾತ್ಯ-ಪ್ರಪಂಚ ಪರವಾದ ಸದೃಢ ಕಾರ್ಯನೀತಿಗಳನ್ನು ಅನುಸರಿಸಲಾಗುತ್ತಿತ್ತು; ನ್ಯಾಟೋ ಸಂಘಟನೆಯ ಸದಸ್ಯತ್ವ ಹಾಗೂ ಐರೋಪ್ಯ ಒಕ್ಕೂಟದೊಂದಿಗಿನ ಏಕೀಕರಣ ಈ ನಡೆಯ ಹಿಂದಿನ ಗುರಿಯಾಗಿತ್ತೆನ್ನಬೇಕು. 2008ರಲ್ಲಿ, ದಕ್ಷಿಣ ಒಸೆಟಿಯಾ ಮತ್ತು ಅಬ್ಖಾಜಿಯಾದಂಥ ಜಾರ್ಜಿಯನ್ ಪ್ರಾಂತ್ಯಗಳ ವ್ಯಾಪ್ತಿಯಲ್ಲಿರುವ ರಷ್ಯನ್ ಜನಾಂಗೀಯರನ್ನು ಸಂರಕ್ಷಿಸುವುದರ ನೆಪವಿಟ್ಟುಕೊಂಡು ರಷ್ಯಾ ಸಾಮರಿಕ ಹಸ್ತಕ್ಷೇಪಕ್ಕೆ ಮುಂದಾಯಿತು. ಈ ಕ್ರಮಕ್ಕೆ ತಕ್ಕ ಶಿಕ್ಷೆಯಾಗಲಿದೆ ಎಂಬ ಅಮೆರಿಕದ ಖಡಕ್ ಎಚ್ಚರಿಕೆಯ ಹೊರತಾಗಿಯೂ, ಜಾರ್ಜಿಯನ್ ಪ್ರಾಂತ್ಯಗಳ ವಶದ ಯತ್ನವನ್ನು ರಷ್ಯಾ ಮುಂದುವರಿಸಿತು. ಕ್ರಿಮಿಯಾದ ಪ್ರಧಾನ ಹಿತಾಸಕ್ತಿಗಳಿಗೆ ಧಕ್ಕೆಯೊದಗಿದಾಗ ಅದನ್ನು ತನ್ನೊಳಗೆ ಏಕೀಕರಿಸಿಕೊಳ್ಳುವುದಕ್ಕೂ ಈ ಬೆಳವಣಿಗೆ ಅನುವುಮಾಡಿಕೊಟ್ಟಿತು. ಇನ್ನು ಉಕ್ರೇನ್ ವಿಷಯ. ಐತಿಹಾಸಿಕ ಪ್ರಾಮುಖ್ಯದ ಹೊರತಾಗಿ, ವ್ಯೂಹಾತ್ಮಕವಾಗಿಯೂ ಮತ್ತು ರಾಜಕೀಯವಾಗಿಯೂ ಉಕ್ರೇನ್ ರಷ್ಯಾದ ಪಾಲಿಗೆ ಗಣನೀಯ ಮಹತ್ವದ ಪ್ರದೇಶವಾಗಿದೆ. ಆದ್ದರಿಂದ, ಪಾಶ್ಚಾತ್ಯ ಅಧಿಕಾರಶಕ್ತಿಗಳಿಂದ ಪ್ರಭಾವಿತಗೊಂಡ ಉಕ್ರೇನ್ ನ್ಯಾಟೋ ಸದಸ್ಯತ್ವದ ಪಥವನ್ನು ಅನುಸರಿಸಲು ನಿರ್ಧರಿಸಿದಾಗ, 2014ರಲ್ಲಿ ನಿರ್ಣಾಯಕ ಮಧ್ಯಪ್ರವೇಶಕ್ಕೆ ಮುಂದಾದ ರಷ್ಯಾ, ಕ್ರಿಮಿಯಾವನ್ನು ತನ್ನ ಒಕ್ಕೂಟದೊಳಗೆ ಏಕೀಕರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಈಗ ನಾಲ್ಕನೇ ಬಾರಿಗೆ ಅಧ್ಯಕ್ಷ ಗದ್ದುಗೆಗೇರಿರುವ ಪುತಿನ್ ತೆಕ್ಕೆಯಲ್ಲಿ ಹೊಸ 6 ವರ್ಷಗಳ ಅಧಿಕಾರಾವಧಿಯಿದೆ; ಹೀಗಾಗಿ ರಷ್ಯನ್ನರ ಆತ್ಮಾಭಿಮಾನವನ್ನು ಮರುಸ್ಥಾಪಿಸುವ ಮತ್ತು ರಷ್ಯಾವನ್ನು ವಿಶ್ವದ ಒಂದು ಪ್ರಬಲ ರಾಷ್ಟ್ರವಾಗಿ ಮರುಹೊಮ್ಮಿಸುವ ಸವಾಲು/ಕಾರ್ಯಭಾರವನ್ನು ಅವರು ಸೂಕ್ತವಾಗಿಯೇ ನಿಭಾಯಿಸಬಲ್ಲರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅಮೆರಿಕ ಮತ್ತು ಅದರ ನ್ಯಾಟೋ ಮಿತ್ರರಾಷ್ಟ್ರಗಳು ಯುರೋಪ್​ನಲ್ಲಿ ವಿಧಿಸಿರುವ ನಿರ್ಬಂಧ/ದಿಗ್ಭಂಧನಗಳು ರಷ್ಯಾದ ಆರ್ಥಿಕತೆಯ ಮೇಲೆ ಈಗಾಗಲೇ ಪರಿಣಾಮ ಬೀರಿವೆ; ರಷ್ಯಾವನ್ನು ಏಕಾಂಗಿಯಾಗಿಸುವ ಯತ್ನಗಳು, ಶೀತಲಸಮರದ ಪುನರುದಯಕ್ಕೆ ಕಾರಣವಾಗಿವೆ. ಇದಕ್ಕೆ ಪ್ರತ್ಯುತ್ತರವೆಂಬಂತೆ, ಚೀನಾದೊಂದಿಗಿನ ಬಾಂಧವ್ಯಗಳನ್ನು ಮತ್ತಷ್ಟು ಗಟ್ಟಿಮಾಡಿಕೊಂಡಿರುವ ರಷ್ಯಾ, ಸಿರಿಯಾಕ್ಕೆ ಒತ್ತಾಸೆಯಾಗಿ ನಿಂತು ಮಧ್ಯಪ್ರಾಚ್ಯ ವಲಯದಲ್ಲಿ ಮಧ್ಯಪ್ರವೇಶ ಮಾಡಿದೆ ಮತ್ತು ತನ್ಮೂಲಕ ಆ ದೇಶದಲ್ಲಿನ ‘ವಿನಾಶಕ ಘರ್ಷಣೆ’ಯ ಗತಿಯನ್ನು ಮಾರ್ಪಡಿಸಿದೆ. ಯೆಮನ್, ಅಫ್ಘಾನಿಸ್ತಾನ ಮತ್ತು ಇನ್ನೂ ಅನೇಕ ಸ್ಥಳಗಳಲ್ಲಿ ಶೀತಲ ಸಮರ ಮುಂದುವರಿದಿದೆ ಎಂಬುದು ಗಮನಿಸಬೇಕಾದ ಸಂಗತಿ.

ರಷ್ಯಾದಲ್ಲಿನ ಚುನಾವಣೆಗಳಿಗೂ ಕೆಲವೇ ದಿನ ಮುಂಚೆ, ರಷ್ಯಾ ಮತ್ತು ಬ್ರಿಟನ್ ಎರಡರ ಪರವಾಗಿಯೂ ಕೆಲಸ ಮಾಡಿದ್ದ ಹಾಗೂ ಬ್ರಿಟನ್​ನ ಸ್ಯಾಲಿಸ್​ಬರಿಯಲ್ಲಿ ವಾಸಿಸುತ್ತಿದ್ದ ಸೆರ್ಗಿ ಸ್ಕ್ರಿಪಲ್ ಎಂಬ ಮಾಜಿ ‘ಡಬಲ್ ಏಜೆಂಟ್’ (ಉಭಯ ಗುಪ್ತಚಾರ), ರೂಢಿಯಲ್ಲದ ‘ಘಛ್ಟಿಡಛಿ ಅಜಛ್ಞಿಠಿ’ (ಒಂದು ರೀತಿಯ ಮಾರಕ ದ್ರವ್ಯ) ಒಂದಕ್ಕೆ ಒಡ್ಡಿಕೊಂಡು ವಿಷಮಾವಸ್ಥೆಯ ರೋಗಕ್ಕೆ ಸಿಲುಕಿದ. ರಷ್ಯಾದಿಂದ ಆಗಷ್ಟೇ ಬಂದಿದ್ದ ಅವನ ಮಗಳು ಯೂಲಿಯಾ ಕೂಡ ಇಂಥ ಕಾಯಿಲೆಗೆ ಬಿದ್ದಳು. ಇದೊಂದು ಕೊಲೆಯತ್ನ ಎಂದೇ ರಷ್ಯಾದ ಮೇಲೆ ಆರೋಪ ಹೊರಿಸಿದ ಬ್ರಿಟಿಷ್ ಪ್ರಧಾನ ಮಂತ್ರಿ ತೆರೆಸಾ ಮೇ, 23 ಮಂದಿ ರಷ್ಯನ್

ರಾಜತಂತ್ರಜ್ಞರನ್ನು ಉಚ್ಚಾಟಿಸಿದ್ದರ ಜತೆಗೆ, ದ್ವಿಪಕ್ಷೀಯ ಒಪ್ಪಂದಗಳನ್ನು ರದ್ದುಗೊಳಿಸಿದರಲ್ಲದೆ, ಈ ಬೇಸಿಗೆಯಲ್ಲಿ ಜರುಗುವ ಸಾಕರ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಬ್ರಿಟಿಷ್ ಮಂತ್ರಿಗಳು ಹಾಗೂ ರಾಜವಂಶಸ್ಥರು ಪಾಲ್ಗೊಳ್ಳುವುದಿಲ್ಲ ಎಂದೂ ಘೋಷಿಸಿದರು. ಇದಕ್ಕೆ ಪ್ರತೀಕಾರವೆಂಬಂತೆ ರಷ್ಯಾ ಕೂಡ 23 ಬ್ರಿಟಿಷ್ ರಾಜತಂತ್ರಜ್ಞರನ್ನು ಉಚ್ಚಾಟಿಸಿತು. ಪಾಶ್ಚಾತ್ಯ ರಾಷ್ಟ್ರಗಳು ಮತ್ತು ರಷ್ಯಾ ನಡುವಿನ ಹಗೆತನ ಮತ್ತಷ್ಟು ವೇಗವಾಗಿ ಬೆಳೆಯುವಂತಾದುದು ಗಂಭೀರ ವಿಷಯವಾಗಿದೆ ಎಂಬುದನ್ನೂ ಅಲ್ಲಗಳೆಯುವಂತಿಲ್ಲ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ರಷ್ಯಾ ಡೊನಾಲ್ಡ್ ಟ್ರಂಪ್ ಪರವಾಗಿ ಅನಗತ್ಯವಾಗಿ ತಲೆಹಾಕಿತು ಎಂದು ಮತ್ತೊಮ್ಮೆ ಆರೋಪಿಸಿರುವ ಅಮೆರಿಕ, ರಷ್ಯಾದ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಿತು. ಇದಕ್ಕೆ ಪ್ರತಿಯಾಗಿ, ರಷ್ಯಾದ ಹೊಸ ಗೌಪ್ಯ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಹೈಪರ್​ಸಾನಿಕ್ ವ್ಯವಸ್ಥೆಗಳು ವಿಶ್ವದ ಯಾವುದೇ ರಕ್ಷಣಾ ವ್ಯವಸ್ಥೆಯನ್ನು ನಿರ್ನಾಮ ಮಾಡಬಲ್ಲವು ಎಂದು ತಿರುಗೇಟು ನೀಡಿದ ಪುತಿನ್, ರಷ್ಯಾ ಈ ನಿಟ್ಟಿನಲ್ಲಿ ಅಮೆರಿಕಕ್ಕಿಂತ ಮುಂದಿದೆ ಎಂದು ತೊಡೆತಟ್ಟಿದರು.

ಅಮೆರಿಕ ಮತ್ತು ರಷ್ಯಾ ನಡುವಿನ ಹಗೆತನ ಹೀಗೇ ಬೆಳೆದು ಮುಂದುವರಿದಲ್ಲಿ, ರಷ್ಯಾದೊಂದಿಗಿನ ಸಂಬಂಧವನ್ನು ಕಾಯ್ದುಕೊಳ್ಳುವುದು ಭಾರತದ ಪಾಲಿಗೆ ಅತಿಮುಖ್ಯ ಸಂಗತಿಯಾಗುತ್ತದೆ. ರಷ್ಯಾ ಓರ್ವ ಪ್ರಧಾನ ಪಾತ್ರಧಾರನಾಗಿರುವ ಮತ್ತು ಭಾರತೀಯ-ರಷ್ಯನ್ ಹಿತಾಸಕ್ತಿಗಳು ಒಮ್ಮುಖವಾಗಿ ಸೇರುವ ಮಧ್ಯಪ್ರಾಚ್ಯ ವಲಯದಲ್ಲಿ ಭಾರತಕ್ಕೆ ಅಗಾಧ ಹಿತಾಸಕ್ತಿಗಳಿವೆ. ಆದ್ದರಿಂದ ರಷ್ಯಾದೊಂದಿಗಿನ ಸಂವಹನಾ ವಿಧಾನವನ್ನು ಭಾರತ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ರಕ್ಷಣಾ ಸಾಮಗ್ರಿ, ಶಸ್ತ್ರಾಸ್ತ್ರ ಸಂಗ್ರಹಣೆಗೆ ಭಾರತ ವಿವಿಧ ‘ದೇಶಮೂಲ’ಗಳನ್ನು ನೆಚ್ಚಿರಬಹುದು; ಆದರೆ ನಮ್ಮ ರಕ್ಷಣಾ ಪೂರೈಕೆಗಳು ಮತ್ತು ಸೇವೆಗಳ ವಿಷಯದಲ್ಲಿ ಈಗಲೂ ರಷ್ಯಾದ್ದೇ ಸಿಂಹಪಾಲು. ಚೀನಾದೆಡೆಗಿನ ತನ್ನ ವ್ಯೂಹಾತ್ಮಕ ಸ್ಥಿತ್ಯಂತರದ ಫಲವಾಗಿ ರಷ್ಯಾ, ಅಮೆರಿಕ ನೇತೃತ್ವದ ‘ಚತುರ್ಭಜ’ ರಾಷ್ಟ್ರಗಳ (ಭಾರತ, ಜಪಾನ್, ಆಸ್ಟ್ರೇಲಿಯಾ, ಅಮೆರಿಕ) ಕುರಿತಾಗಿ ಒಂದಷ್ಟು ಪರಿಮಿತಿಗಳನ್ನು ಹಾಕಿಕೊಂಡಿರಬಹುದು; ಈ ರಾಷ್ಟ್ರಗಳು ಚೀನಾದ ಹಿತಾಸಕ್ತಿಗಳಿಗೆ ವಿರುದ್ಧವಾಗಿವೆ ಎಂಬ ಗ್ರಹಿಕೆಯೂ ಇದಕ್ಕೆ ಕಾರಣವಾಗಿರಬಹುದು. ಆದರೆ ರಷ್ಯಾದೊಂದಿಗಿನ ಭಾರತದ ಬಾಂಧವ್ಯಗಳು ‘ಸಮಯ ಪ್ರಮಾಣಿತ’ವಾಗಿರುವಂಥವು ಮತ್ತು ಭವಿಷ್ಯತ್ತಿನ ದೃಷ್ಟಿಯಿಂದ ಅವು ಅತಿ ಮುಖ್ಯವಾಗಿವೆ ಎಂಬುದು ದಿಟ. ಈ ಬಾಂಧವ್ಯಗಳನ್ನು ಕಾಪಿಟ್ಟುಕೊಂಡು ಪ್ರವರ್ತಿ ಸುವ ನಿಟ್ಟಿನಲ್ಲಿ ಭಾರತ ಮತ್ತಷ್ಟು ಪರಿಶ್ರಮ ಪಡಬೇಕಿದೆ ಎಂಬುದೂ ಅಷ್ಟೇ ನಿಜ.

(ಲೇಖಕರು ಮಾಜಿ ರಾಯಭಾರಿ, ಜಾಗತಿಕ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top