ಮತದಾನಕ್ಕೆ ಆಗಮಿಸಿದ್ದ ತೇಜ್​ ಪ್ರತಾಪ್​ ಯಾದವ್​ ಕಾರಿನ ಗಾಜು ಒಡೆದ ಮಾಧ್ಯಮ ಕ್ಯಾಮೆರಾಮನ್​

ಬಿಹಾರ: ಆರ್​ಜಿಡಿ ಮುಖಂಡ ಲಾಲೂ ಪ್ರಸಾದ್​ ಯಾದವ್​ ಅವರ ಹಿರಿಯ ಪುತ್ರ ತೇಜ್​ ಪ್ರತಾಪ್​ ಯಾದವ್​ ಇಂದು ಮತದಾನ ಮಾಡಿ ಅಲ್ಲಿಂದ ಹೊರಡುವ ವೇಳೆ ಹೊಡೆದಾಟ ನಡೆದಿದೆ.

ತೇಜ್​ಪ್ರತಾಪ್​ ಯಾದವ್​ ಅವರ ಅಂಗರಕ್ಷಕ ಮಾಧ್ಯಮವೊಂದರ ಕ್ಯಾಮೆರಾಮನ್​ಗೆ ಥಳಿಸಿದ್ದಾನೆ ಎನ್ನಲಾಗಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತೇಜ್​ಪ್ರತಾಪ್​ ಯಾದವ್​, ಈ ಘಟನೆ ನನ್ನನ್ನು ಕೊಲ್ಲಲು ನಡೆಸಿದ್ದ ಪಿತೂರಿ ಎಂದು ಆರೋಪಿಸಿದ್ದಾರೆ.

ತೇಜ್​ ಪ್ರತಾಪ್​ ಮತದಾನ ಮಾಡಿ ಹೊರಗೆ ಬಂದು ಕಾರಿನ ಬಳಿ ತೆರಳುತ್ತಿದ್ದಂತೆ ಮಾಧ್ಯಮದವರೆಲ್ಲ ಸುತ್ತುವರಿದಿದ್ದಾರೆ. ಕ್ಯಾಮೆರಾಮನ್​ಗಳೂ ಕೂಡ ನೂಕು ನುಗ್ಗಲು ನಡೆಸಿದ್ದಾರೆ. ಈ ವೇಳೆ ಓರ್ವ ಛಾಯಾಗ್ರಾಹಕ ತೇಜ್​ ಪ್ರತಾಪ್​ ಅವರ ಕಾರಿನ ಮುಂಭಾಗದ ಗಾಜುಗಳನ್ನು ಒಡೆದಿದ್ದಾನೆ. ಬಳಿಕ ಭದ್ರತಾ ಸಿಬ್ಬಂದಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಘಟನೆ ಬಗ್ಗೆ ಮಾಧ್ಯಮದವರ ಜತೆ ಮಾತನಾಡಿದ ತೇಜ್​ ಪ್ರತಾಪ್​, ನನ್ನ ಅಂಗರಕ್ಷಕ ಯಾರನ್ನೂ ಹೊಡೆದಿಲ್ಲ. ಆದರೆ ಆತನ ಕೈಯಿಗೆ ಗಾಯವಾಗಿದೆ. ಕ್ಯಾಮೆರಾಮನ್​ ನನ್ನ ಕಾರಿನ ಮುಂಭಾಗದ ಗಾಜುಗಳನ್ನು ಒಡೆದಿದ್ದಾನೆ ಎಂದು ಆರೋಪಿಸಿದ್ದಾರೆ.

ಪೊಲೀಸರಿಗೆ ದೂರು ನೀಡಿದ್ದೇನೆ. ಇದು ನನ್ನ ಕೊಲೆ ಮಾಡಲೆಂದು ಮಾಡಿದ ಪ್ರಯತ್ನ. ಈಗಾಗಲೇ ಹಲವು ಜೀವ ಬೆದರಿಕೆ ಕರೆಗಳು ಬಂದಿವೆ. ಪದೇಪದೆ ನನ್ನ ಮೇಲೆ ದಾಳಿ ನಡೆಯುತ್ತಲೇ ಇದೆ ಎಂದು ಹೇಳಿದ್ದಾರೆ.
ತೇಜ್​ಪ್ರತಾಪ್​ ಅವರು ಮತದಾನ ಮಾಡಲು ಇ-ರಿಕ್ಷಾದಲ್ಲಿ ಆಗಮಿಸಿದ್ದರು. ಕಾರಣ ಕೇಳಿದ್ದಕ್ಕೆ, ನನ್ನ ಕಾರು ಬರುವುದು ಸ್ವಲ್ಪ ತಡವಾಗಲಿದೆ ಎಂದಿದ್ದರು.