ಲೋಕ ಸಮರಕ್ಕೆ ಎಸ್​ಪಿ, ಬಿಎಸ್​ಪಿ ಮೈತ್ರಿ ಪಕ್ಕಾ: ತಲಾ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧಾರ

ಲಖನೌ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್​ ಯಾದವ್ ಹಾಗೂ ಬಹುಜನ ಸಮಾಜ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ.

ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ಎರಡೂ ಪಕ್ಷಗಳ ಮುಖ್ಯಸ್ಥರು, ಉತ್ತರ ಪ್ರದೇಶದ ಒಟ್ಟು 80 ಕ್ಷೇತ್ರಗಳಲ್ಲಿ ಎಸ್​ಪಿ ಹಾಗೂ ಬಿಎಸ್​ಪಿ ತಲಾ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಕಾಂಗ್ರೆಸ್​ ಬಲಿಷ್ಠವಾಗಿರುವ ರಾಹುಲ್​ ಗಾಂಧಿಯ ಕ್ಷೇತ್ರ ಅಮೇಠಿ ಮತ್ತು ಸೋನಿಯಾ ಗಾಂಧಿ ಕ್ಷೇತ್ರ ರಾಯ್​ಬರೇಲಿ ಸೇರಿ ಮತ್ತೆರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡದೆ ಇರಲು ನಿರ್ಧರಿಸಿದ್ದಾಗಿ ತಿಳಿಸಿದರು.

ಮೈತ್ರಿ ನಿದ್ದೆಗೆಡಿಸಲಿದೆ

ಎಸ್​ಪಿ ಮತ್ತು ಬಿಎಸ್​ಪಿ ಮೈತ್ರಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರ ನಿದ್ದೆಗೆಡಿಸಲಿದೆ ಎಂದು ಮಾಯಾವತಿ ವ್ಯಂಗ್ಯವಾಡಿದರು.

ಕಾಂಗ್ರೆಸ್​ನ ಕೆಲವು ನೀತಿಗಳಿಂದಾಗಿ ನಮ್ಮ ಪಕ್ಷಗಳು ಅಸ್ತಿತ್ವಕ್ಕೆ ಬಂದಿವೆ. ಬಿಜೆಪಿ ಅಥವಾ ಕಾಂಗ್ರೆಸ್​ ಎರಡರಲ್ಲಿ ಯಾವುದು ಅಧಿಕಾರಕ್ಕೆ ಬಂದರೂ ನಮಗೆ ಏನೂ ವ್ಯತ್ಯಾಸವಾಗುವುದಿಲ್ಲ. ಕಾಂಗ್ರೆಸ್​ ಜತೆಗೆ ಮೈತ್ರಿ ಮಾಡಿಕೊಂಡರೆ ನಮಗೆ ಯಾವುದೇ ಲಾಭ ಇಲ್ಲ. ಬಿಎಸ್​ಪಿ, ಎಸ್​ಪಿ ಒಗ್ಗಟ್ಟು ದೇಶದಲ್ಲಿ ಹೊಸ ರಾಜಕೀಯ ಕ್ರಾಂತಿಗೆ ಕಾರಣವಾಗಲಿದೆ ಎಂದು ಹೇಳಿದರು.

ದೇಶದ ಒಳಿತಿಗಾಗಿ ಲಖನೌ ಗೆಸ್ಟ್​ಹೌಸ್​ ಹಗರಣದ ಘಟನೆಯನ್ನು ಮೀರಿ ಮತ್ತೆ ಒಂದಾಗಲು ನಿರ್ಧರಿಸಿದ್ದೇವೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು. ಎಸ್​ಪಿ, ಬಿಎಸ್​ಪಿ ಮೈತ್ರಿ ಕುರಿತಂತೆ ಪ್ರಧಾನಿ ಮೋದಿಯವರು 1995ರ ಲಖನೌ ಗೆಸ್ಟ್​ಹೌಸ್ ಪ್ರಕರಣ ​ಬಗ್ಗೆ ಮಾತನಾಡಿದ್ದರು. ಆಗ ಮುಲಾಯಂ ಮತ್ತು ಮಾಯಾವತಿ ಮೈತ್ರಿಯನ್ನು ಮುರಿದುಕೊಂಡ ಬಗ್ಗೆ ಹೇಳಿದ್ದರು.

ಕಳೆದ ವರ್ಷ ಉಪಚುನಾವಣೆಯನ್ನು ಬಿಎಸ್​ಪಿ, ಎಸ್​ಪಿ ಒಟ್ಟಾಗಿ ಎದುರಿಸಿ ಗೆದ್ದಿದ್ದೇವೆ. ಕಾಂಗ್ರೆಸ್​ ಕೂಡ ಅದರ ಠೇವಣಿಯನ್ನು ಕಳೆದುಕೊಂಡಿತ್ತು. ಆಗಲೇ ನಮಗೆ ಅರಿವಾಗಿತ್ತು ಬಿಎಸ್​ಪಿ, ಎಸ್​ಪಿ ಒಂದಾದರೆ ಬಿಜೆಪಿಯನ್ನೂ ಸೋಲಿಸಬಹುದು ಎಂಬುದು ಎಂದು ಮಾಯಾವತಿ ತಿಳಿಸಿದರು.

ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಮಾತನಾಡಿ, ಮಾಯಾವತಿ ಅವರಿಗೆ ಯಾವುದೇ ರೀತಿಯಲ್ಲಿ ಅವಮಾನ, ನೋವಾದರೆ ಅದು ನನಗೆ ಆದಂತೆ. ಇದನ್ನು ನನ್ನ ಪಕ್ಷದ ಕಾರ್ಯಕರ್ತರಿಗೂ ತಿಳಿಸಲು ಇಚ್ಛಿಸುತ್ತೇನೆ ಎಂದು ತಿಳಿಸಿದರು.