ಯಡಿಯೂರಪ್ಪ ಭಿನ್ನಮತ ಶಮನ ಮಾಡಿದರು, ನಮ್ಮ ಪಕ್ಷದಲ್ಲಿ ಅದು ಆಗಿಲ್ಲ ಎಂದು ಅತೃಪ್ತಿ ಹೊರಹಾಕಿದ ರಮೇಶ ಜಾರಕಿಹೊಳಿ

ಗೋಖಾಕ್​: ಕಾಂಗ್ರೆಸ್​ ಬಂಡಾಯ ಶಾಸಕ ಬಹುದಿನಗಳ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ನನಗೆ ಬೇಸರವಾಗಿದೆ ಎಂದು ಗೊತ್ತಿದ್ದರೂ ನಮ್ಮ ಪಕ್ಷದ ಯಾವುದೇ ಮುಖಂಡರೂ ಇದುವರೆಗೂ ಮಾತುಕತೆ ನಡೆಸಿಲ್ಲ. ಅದೇ ಬಿಜೆಪಿಯಲ್ಲಾದರೆ ಮೊನ್ನೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದ ರಮೇಶ್​ ಕತ್ತಿಯವರು ಬಂಡಾಯ ಎದ್ದಿದ್ದು ಗೊತ್ತಾದಕೂಡಲೇ ಯಡಿಯೂರಪ್ಪನವರು ಹೋಗಿ, ಮಾತುಕತೆ ನಡೆಸಿ ಭಿನ್ನಮತ ಶಮನ ಮಾಡಿದ್ದಾರೆ. ನಾನು ತಾಂತ್ರಿಕವಾಗಿ ಕಾಂಗ್ರೆಸ್​ನಲ್ಲಿದ್ದೇನೆ. ರಾಜೀನಾಮೆ ನೀಡಿದ ಬಳಿಕ ಮುಂದೇನೆಂದು ಯೋಚನೆ ಮಾಡುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್​ ಇತಿಹಾಸ ಇರುವ ಪಕ್ಷ. 1999ರ ವರೆಗೆ ಎಲ್ಲ ಸರಿಯಾಗಿತ್ತು. ಆ ಬಳಿಕ ಗುಂಪುಗಾರಿಕೆ, ಜಾತೀಯತೆ ಹೆಚ್ಚಾಗಿದೆ. ನಾನು ಬೇಜವಾಬ್ದಾರಿಯಿಂದ, ಹತಾಶೆಯಿಂದ ಯಾವುದೇ ಹೇಳಿಕೆ ನೀಡುವುದಿಲ್ಲ. ಆದರೆ, ರಾಜೀನಾಮೆ ನೀಡುವುದು ನಿಕ್ಕಿಯಾಗಿದೆ. ಯಾವಾಗ ಎಂಬ ಬಗ್ಗೆ ಯೋಚಿಸುತ್ತೇನೆ ಎಂದು ಹೇಳಿದ ಅವರು, ನಾನು ಐದು ಬಾರಿ ಶಾಸಕನಾದವನು. ಶಾಸಕನ ಜವಾಬ್ದಾರಿ ನನಗೆ ಗೊತ್ತು. ಕತ್ತಲಲ್ಲಿ ಕುಳಿತು ಏನೂ ಮಾಡುವುದಿಲ್ಲ ಎಂದರು.

ಲಖನ್​ ಜಾರಕಿಹೊಳಿ ಅವರಿಗೆ ಕಾಂಗ್ರೆಸ್​ನಿಂದ ಗೋಕಾಕ್​ ಟಿಕೆಟ್​ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಖಂಡಿತ ನೀಡಲಿ. ನಾನು ಬೇಡ ಎನ್ನುವುದಿಲ್ಲ. ಈಗಾಗಲೇ ಒಬ್ಬ ಸಹೋದರನನ್ನು ಹಾಳು ಮಾಡಿದ್ದಾರೆ. ಮತ್ತೊಬ್ಬ ಸಹೋದರ ಹಾಳಾಗಲು ಬಿಡುವುದಿಲ್ಲ ಎಂದು ಹೇಳಿದ ಅವರು, ಸತೀಶ್​ ಜಾರಕಿಹೊಳಿ ಅವರಿಗೆ ತಲೆ ಸರಿ ಇಲ್ಲ ಎಂದರು.