ಖಾಸಗಿ ಚೌಕಿದಾರನಿಗಿಲ್ಲ ಮತದಾನ

ಮಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈ ಭೀ ಚೌಕಿದಾರ್ (ನಾನೂ ಕಾವಲುಗಾರ) ಅಭಿಯಾನದಿಂದಾಗಿ ಕಾವಲುಗಾರರ ಹೆಸರು ಮುಂಚೂಣಿಗೆ ಬಂದಿದೆ. ಆದರೆ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಕಾವಲುಗಾರರು ಮಾತ್ರ ಮತದಾನದಿಂದ ವಂಚಿತರು!

ಮಂಗಳೂರು ನಗರದಲ್ಲಿಯೇ 50ಕ್ಕಿಂತ ಅಧಿಕ ಸೆಕ್ಯುರಿಟಿ ಏಜೆನ್ಸಿಗಳಿದ್ದು, ಸಾವಿರಾರು ಮಂದಿ ಉದ್ಯೋಗದಲ್ಲಿದ್ದಾರೆ. ಉತ್ತರ ಭಾರ ತದ ನೂರಾರು ಮಂದಿ ಜಿಲ್ಲೆಯಲ್ಲಿ ಖಾಸಗಿ ಭದ್ರತೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಮತದಾನದಲ್ಲಿ ಪಾಲ್ಗೊಳ್ಳುವುದೇ ಇಲ್ಲ. ಇದಕ್ಕೆ ಕಾರಣ, ರಜೆ ಸಿಗದಿರುವುದು.

ಹೊರಜಿಲ್ಲೆಯ ಸಿಬ್ಬಂದಿಗೆ ರಜೆ ಕೊಟ್ಟರೆ ಆ ಜಾಗಕ್ಕೆ ತಾತ್ಕಾಲಿಕವಾಗಿ ಉದ್ಯೋಗಿಗಳನ್ನು ಏಜೆನ್ಸಿಗಳಿಗೆ ನೇಮಿಸಬೇಕು. ಕೆಲವು ಏಜೆನ್ಸಿಗಳಲ್ಲಿ 300ಕ್ಕೂ ಅಧಿಕ ಸಿಬ್ಬಂದಿ ಇರುತ್ತಾರೆ. ಹೊರಜಿಲ್ಲೆಯ ಸಿಬ್ಬಂದಿ ಕನಿಷ್ಠ 20 ದಿನ ರಜೆ ತೆಗೆದುಕೊಂಡು ಮನೆಗೆ ತೆರಳುತ್ತಾನೆ. ಏಕಕಾಲದಲ್ಲಿ ಹೀಗಾದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗುತ್ತದೆ. ಹೊರಜಿಲ್ಲೆಯಲ್ಲಿ ಉದ್ಯೋಗದಲ್ಲಿರುವವರಿಗೆ ವಿಶೇಷ ಮತದಾನದ ವ್ಯವಸ್ಥೆ ಮಾಡುವುದೇ ಉತ್ತಮ ಎನ್ನುತ್ತಾರೆ ಖಾಸಗಿ ಭದ್ರತಾ ಏಜೆನ್ಸಿಯ ವ್ಯವಸ್ಥಾಪಕ ಚರಣ್ ಕುಮಾರ್.

ಹೊರ ಜಿಲ್ಲೆ, ರಾಜ್ಯ ಮಾತ್ರವಲ್ಲ. ಇದೇ ಊರಿನಲ್ಲಿದ್ದರೂ ನಮಗೆ ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ನಗರದ ಪಿವಿಎಸ್ ಸಮೀಪದ ಕಟ್ಟಡವೊಂದರಲ್ಲಿ ಸೆಕ್ಯುರಿಟಿಯಾಗಿರುವ ನಾಗೇಶ್. ಏಜೆನ್ಸಿ ಭದ್ರತಾ ಸಿಬ್ಬಂದಿ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗದಿದ್ದಲ್ಲಿ ಸಂಬಳ ಕಡಿತ ಮಾಡುತ್ತಾರೆ. ರಜೆಯೂ ಕೊಡುವುದಿಲ್ಲ. ಹೀಗಾಗಿ ಮುಂಜಾನೆಯೇ ಕೆಲಸಕ್ಕೆ ಬರಬೇಕಾಗುತ್ತ ದೆ. ಸಾಯಂಕಾಲ ವೇಳೆ ಕೆಲಸ ಮುಗಿಸಿ ಮತಗಟ್ಟೆಗೆ ಮುಟ್ಟುವಾಗ ಮತದಾನ ಮುಗಿದಿರುತ್ತದೆ. ಪ್ರತಿ ಬಾರಿಯೂ ಹೀಗಾಗುತ್ತದೆ ಎನ್ನುತ್ತಾರವರು.

ಸರ್ಕಾರಿ ಪೊಲೀಸರಿಗೆ, ಭದ್ರತಾ ಪಡೆಯ ಸಿಬ್ಬಂದಿಗೆ, ಚುನಾವಣಾ ಕರ್ತವ್ಯದಲ್ಲಿ ತೊಡಗುವ ಸರ್ಕಾರಿ ಸಿಬ್ಬಂದಿಗೆ ಮಾತ್ರ ಪೋಸ್ಟಲ್ ಓಟ್‌ಗೆ ಅವಕಾಶವಿದೆ. ದೂರದೂರಿನಲ್ಲಿ ನಮಗೂ ಈ ಅವಕಾಶ ನೀಡಬೇಕು ಅಥವಾ ಆನ್‌ಲೈನ್ ಓಟಿಂಗ್ ವ್ಯವಸ್ಥೆ ಮಾಡಬೇಕು.
|ಅಮಿತಾನಂದ, ರಾಜಸ್ಥಾನದ ಭದ್ರತಾ ಸಿಬ್ಬಂದಿ

Leave a Reply

Your email address will not be published. Required fields are marked *