ಅಪ್ಪನ ಹಾದಿ ತುಳಿದ ಪುತ್ರ: ಭತ್ತ ನಾಟಿ ಮಾಡಿ ಮತಯಾಚನೆ ಮಾಡಿದ ನಿಖಿಲ್​ ಕುಮಾರಸ್ವಾಮಿ

ಮಂಡ್ಯ: ಚುನಾವಣೆ ಪ್ರಚಾರ ಕೈಗೊಂಡಿರುವ ಮಂಡ್ಯ ಲೋಕಸಭೆ ಕ್ಷೇತ್ರ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರ್​ಸ್ವಾಮಿ ಅವರು ಮದ್ದೂರು ತಾಲೂಕಿನ ಆತಗೂರು ಗ್ರಾಮದಲ್ಲಿ ಇಂದು ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಗ್ರಾಮದ ಶ್ರೀರಾಮಣ್ಣ ಎಂಬುವರ ಜಮೀನಿನಲ್ಲಿ ಕೃಷಿ ಕಾರ್ಮಿಕ ಮಹಿಳೆಯರು ನಾಟಿ ಮಾಡುತ್ತಿದ್ದರು. ಅದನ್ನು ನೋಡಿದ ನಿಖಿಲ್​ ಕುಮಾರಸ್ವಾಮಿ ಅವರೊಂದಿಗೆ ಸೇರಿ ಕೆಲ ನಿಮಿಷ ಭತ್ತ ನಾಟಿ ಮಾಡಿದ್ದಾರೆ.
ಇದಕ್ಕೂ ಮೊದಲು ಹೆಮ್ಮನಹಳ್ಳಿಯಲ್ಲಿ ಪ್ರಚಾರ ನಡೆಸಿದ ನಿಖಿಲ್​ ಕುಮಾರಸ್ವಾಮಿಯವರನ್ನು ಅಲ್ಲಿನ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದ್ದಾರೆ. ನಿಖಿಲ್​ಗೆ ಸಚಿವ ಡಿ.ಸಿ. ತಮ್ಮಣ್ಣ ಸಾಥ್​ ನೀಡಿದ್ದಾರೆ.

ಇಂದು ಮಗ ಅಂದು ಅಪ್ಪ…
ಎಚ್​.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ಹೊಸತರಲ್ಲಿ ಮಂಡ್ಯದ ಜಮೀನೊಂದರಲ್ಲಿ ಭತ್ತ ನಾಟಿ ಮಾಡಿ ತಾವು ಅನ್ನದಾತನ ಪರ ಎಂಬುದನ್ನು ತೋರಿಸಿ ರೈತ ಪರ ಯೋಜನೆಗಳನ್ನು ಪ್ರಸ್ತಾಪಿಸಿದ್ದರು. ರೈತ ಕಲ್ಯಾಣವೇ ತಮ್ಮ ಅಧಿಕಾರಾವಧಿ ಗುರಿ ಎಂದು ರೈತರಿಗೆ ಆಶ್ವಾಸನೆ ನೀಡಿದ್ದರು.