ಮೈತ್ರಿ ಸರ್ಕಾರಕ್ಕೆ ಸೋಲಿನ ಭೀತಿ: ಆರ್.ಅಶೋಕ್

ಮಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಮೈತ್ರಿ ಸರ್ಕಾರದಲ್ಲಿ ಕಿತ್ತಾಟ, ಒಳಜಗಳ ಹೆಚ್ಚಾಗಿದೆ. ಇದೀಗ ಸರ್ಕಾರ ಸೋಲಿನ ಭೀತಿ ಎದುರಿಸುತ್ತಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಆರ್.ಅಶೋಕ್ ಹೇಳಿದರು.

ಮಂಡ್ಯದಲ್ಲಿ ಕಾಂಗ್ರೆಸ್‌ನವರು ಜೆಡಿಎಸ್ ಅನ್ನು ಸೋಲಿಸಲು ಪಣ ತೊಟ್ಟಿದ್ದಾರೆ. ಬಿಜೆಪಿಯಲ್ಲಿ ‘ಮೋದಿ ಮೋದಿ’ ಎನ್ನುವ ಘೋಷಣೆಗಳು ಸಾಮಾನ್ಯ. ಈಗ ಕಾಂಗ್ರೆಸ್ ಮಾಜಿ ಶಾಸಕ ಪುಟ್ಟೇಗೌಡ ಅವರ ಮನೆಯಲ್ಲಿ ಕರೆದ ಸಭೆಯಲ್ಲಿ ‘ಮೋದಿ ಮೋದಿ’ ಘೋಷಣೆ ಕೇಳಿಬರುತ್ತಿವೆ. ಶುಕ್ರವಾರ ಮೈಸೂರಿನ ಜೆಡಿಎಸ್ ಸಭೆಯಲ್ಲಿ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರ ಎದುರು ‘ಮೋದಿ’ ಘೋಷಣೆ ಕೇಳಿ ಬಂದಿದೆ ಎಂದು ಶನಿವಾರ ಜಿಲ್ಲಾ ಬಿಜೆಪಿ ಕಚೇರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈತ್ರಿ ಸರ್ಕಾರದಲ್ಲಿ ಒಗ್ಗಟ್ಟಿಲ್ಲನ ಎನ್ನುವುದಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ ಅವರ ಹೇಳಿಕೆ ಪೂರಕವಾಗಿದೆ. ಮಂಡ್ಯದ ಚುನಾವಣಾ ಪ್ರಚಾರಕ್ಕೆ ಸಿದ್ದರಾಮಯ್ಯ ಬಂದರೆ ಮೂರು ಪೈಸೆಯ ಲಾಭವಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಮಂಡ್ಯಕ್ಕೆ ಕಾಲಿಡಬಾರದು ಎಂದು ಅವರು ಹೇಳಿದಂತಾಗಿದೆ. ಮೈಸೂರಿನಲ್ಲಿ ಜಿ.ಟಿ.ದೇವೇಗೌಡರು ಕಾಂಗ್ರೆಸ್ ಅಭ್ಯರ್ಥಿ ಸೋತರೆ ತಾವು ಜವಾಬ್ದಾರರಲ್ಲ ಎನ್ನುವ ಮೂಲಕ ಮೊದಲೇ ಸೋಲಿನ ಸರ್ಟಿಫಿಕೆಟ್ ಕೊಟ್ಟಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಶಾಸಕರಾದ ಸಂಜೀವ ಮಠಂದೂರುಮೊದಲಾದವರು ಇದ್ದರು.

ಮಂಡ್ಯದಲ್ಲಿ ಪ್ರಚಾರ ನಿರ್ಧಾರ ಆಗಿಲ್ಲ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಬೆಂಬಲ ಸೂಚಿಸಿರುವ ಮಂಡ್ಯ ಕ್ಷೇತ್ರದಲ್ಲಿ, ಬಿಜೆಪಿ ನಾಯಕರು ಚುನಾವಣಾ ಪ್ರಚಾರ ಕೈಗೊಳ್ಳುವ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ಆರ್.ಅಶೋಕ್ ಸ್ಪಷ್ಟಪಡಿಸಿದರು.

ಮಂಗಳೂರಿನ ಉಳಾಯಿಬೆಟ್ಟುವಿನಲ್ಲಿ ಹಿಂದೂ ಯುವತಿ ಮಾನಭಂಗ ಯತ್ನ, ಯುವಕರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದ ಪ್ರಕರಣಗಳನ್ನೇ ಸರ್ಕಾರ ಹಿಂಪಡೆಯುವುದು ಒಂದು ಧರ್ಮದ ಓಲೈಕೆ ಯತ್ನ.
|ಆರ್.ಅಶೋಕ್, ಬಿಜೆಪಿ ಮುಖಂಡ