ಕರಾವಳಿ ಕದನ ಕಣ ಅಂತಿಮ: ಉಡುಪಿಯಲ್ಲಿ 12 ಮಂದಿ ಸ್ಪರ್ಧೆ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ವಾಪಸ್ ಪಡೆಯುವ ಅವಧಿ ಶುಕ್ರವಾರ ಮುಕ್ತಾಯಗೊಂಡಿದ್ದು, ಕ್ಷೇತ್ರದಲ್ಲಿ ಅಂತಿಮವಾಗಿ 12 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.

ಒಟ್ಟು 14 ಅರ್ಹ ಅಭ್ಯರ್ಥಿಗಳ ಪೈಕಿ ಪಕ್ಷೇತರರಾದ ಗಣಪತಿ ಶೆಟ್ಟಿಗಾರ್ ಮತ್ತು ಸುಧೀರ್ ಕಾಂಚನ್ ನಾಮಪತ್ರ ವಾಪಸ್ ಪಡೆದಿದ್ದಾರೆ. ಅಂತಿಮವಾಗಿ ಕಣದಲ್ಲಿರುವ 12 ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳ ವಿವರ, ಅವರಿಗೆ ಹಂಚಿಕೆಯಾದ ಚಿಹ್ನೆಗಳನ್ನು ನೀಡಲಾಗಿದೆ ಎಂದು ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶೋಭಾ ಕರಂದ್ಲಾಜೆ (ಚಿಹ್ನೆ- ಕಮಲ, ಪಕ್ಷ- ಬಿಜೆಪಿ), ಪ್ರಮೋದ್ ಮಧ್ವರಾಜ್ (ಚಿಹ್ನೆ- ತೆನೆ ಹೊತ್ತ ಮಹಿಳೆ, ಪಕ್ಷ-ಜೆಡಿಎಸ್), ಪಿ.ಪರಮೇಶ್ವರ (ಚಿಹ್ನೆ-ಆನೆ, ಪಕ್ಷ- ಬಿಎಸ್‌ಪಿ), ಶೇಖರ ಹಾವಂಜೆ (ಚಿಹ್ನೆ- ಕಪ್ ಮತ್ತು ಸಾಸರ್, ಪಕ್ಷ- ಆರ್‌ಪಿಐ), ಎಂ.ಕೆ ದಯಾನಂದ (ಚಿಹ್ನೆ-ಟ್ರಾಕ್ಟರ್ ಓಡಿಸುತ್ತಿರುವ ರೈತ, ಪಕ್ಷ- ಪ್ರೌಟಿಸ್ಟ್ ಸರ್ವ ಸಮಾಜ್), ಪಿ.ಗೌತಮ್ ಪ್ರಭು (ಚಿಹ್ನೆ- ಬಿಲ್ಲು ಮತ್ತು ಬಾಣ, ಪಕ್ಷ- ಶಿವಸೇನೆ), ಸುರೇಶ್ ಕುಂದರ್ (ಚಿಹ್ನೆ- ಆಟೋ ರಿಕ್ಷಾ, ಪಕ್ಷ-ಯುಪಿಪಿ), ವಿಜಯ ಕುಮಾರ್ (ಚಿಹ್ನೆ- ಗರಗಸ, ಪಕ್ಷ- ಸಿಪಿಐ ಎಂಎಲ್ ರೆಡ್ ಸ್ಟಾರ್), ಕೆ.ಸಿ ಪ್ರಕಾಶ್ (ಚಿಹ್ನೆ- ಗ್ಯಾಸ್ ಸಿಲಿಂಡರ್, ಪಕ್ಷೇತರ), ಅಮೃತ್ ಶೆಣೈ ಪಿ (ಚಿಹ್ನೆ- ವಜ್ರ, ಪಕ್ಷೇತರ), ಅಬ್ದುಲ್ ರೆಹಮಾನ್(ಚಿಹ್ನೆ- ಕಬ್ಬು ರೈತ, ಪಕ್ಷೇತರ), ಎಂ.ಕೆ ಗಣೇಶ್ (ಚಿಹ್ನೆ- ಸೀಟಿ, ಪಕ್ಷೇತರ) ಕಣದಲ್ಲಿ ಉಳಿದವರು.

14.98 ಲಕ್ಷ ಮತದಾರರು: ಕ್ಷೇತ್ರದಲ್ಲಿ 14,98,016 ಮತದಾರರಿದ್ದು, 7,65,823 ಮಹಿಳಾ ಮತದಾರರು, 7,32,193 ಪುರುಷ ಮತದಾರರಿದ್ದಾರೆ. 30,826 ಯುವ ಮತದಾರರನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 1401 ಪ್ರಿಸೈಡಿಂಗ್ ಆಫೀಸರ್, 1405- 1ನೇ ಮತಗಟ್ಟೆ ಅಧಿಕಾರಿಗಳು, 2810- 3ನೇ ಮತಗಟ್ಟೆ ಅಧಿಕಾರಿಗಳು, ಒಟ್ಟು 5616 ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದರು.