ಒಂದು ಚುನಾವಣೆಯಲ್ಲಿ ಮಾತ್ರ ನೇರ ಸ್ಪರ್ಧೆ

ಪಿ.ಬಿ.ಹರೀಶ್ ರೈ ಮಂಗಳೂರು

ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ನಡೆದ ಒಟ್ಟು 16 ಹಾಗೂ ಉಡುಪಿ ಕ್ಷೇತ್ರದಲ್ಲಿ ಉಪ ಚುನಾವಣೆ ಸಹಿತ ನಡೆದ ಒಟ್ಟು 17 ಚುನಾವಣೆಗಳಲ್ಲಿ ತಲಾ ಒಮ್ಮೆ ಮಾತ್ರ ನೇರ ಸ್ಪರ್ಧೆ ನಡೆದಿತ್ತು.
2014ರ ಚುನಾವಣೆಯಲ್ಲಿ ದ.ಕ. (ಹಿಂದಿನ ಮಂಗಳೂರು) ಕ್ಷೇತ್ರದಲ್ಲಿ 14 ಮತ್ತು 2012ರ ಉಪ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇದುವರೆಗಿನ ಗರಿಷ್ಠ ಅಭ್ಯರ್ಥಿಗಳ ಸ್ಪರ್ಧೆಯ ದಾಖಲೆಯಾಗಿದೆ.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಜತೆ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ಕಣಕ್ಕಿಳಿಯುವ ಕಾರಣ ಚುನಾವಣಾ ಕಣ ರಂಗೇರುತ್ತದೆ. ಈ ಬಾರಿ ದ.ಕ. ಕ್ಷೇತ್ರದಲ್ಲಿ 7 ಪಕ್ಷೇತರರ ಸಹಿತ 13 ಹಾಗೂ ಉಡುಪಿ ಕ್ಷೇತ್ರದಲ್ಲಿ 5 ಪಕ್ಷೇತರರ ಸಹಿತ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕರಾವಳಿಯಲ್ಲಿ ಒಂದೆರಡು ಚುನಾವಣೆಗಳ ಫಲಿತಾಂಶ ಹೊರತು ಪಡಿಸಿದರೆ, ಉಳಿದ ಚುನಾವಣೆಗಳಲ್ಲಿ ಬಹುಕೋನ ಸ್ಪರ್ಧೆಯಿಂದ ಫಲಿತಾಂಶದ ಮೇಲೆ ಯಾವುದೇ ಪರಿಣಾಮವಾಗಿಲ್ಲ. ಕಾರಣ ಇಲ್ಲಿ ವ್ಯಕ್ತಿ ಆಧಾರಿತ ಮತ ಚಲಾವಣೆಯಾಗುವುದು ತೀರಾ ಕಡಿಮೆ.

ಮೊದಲು ತ್ರಿಕೋನ ಸ್ಪರ್ಧೆ: 1951ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಆಗಿನ ಸೌತ್ ಕೆನರಾ ಸೌತ್ ಮತ್ತು ಸೌತ್ ಕೆನರಾ ನಾರ್ತ್ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆದಿತ್ತು. ಕಾಂಗ್ರೆಸ್ ಮತ್ತು ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೆ, ಸೌತ್ ಕೆನರಾ ಸೌತ್‌ನಲ್ಲಿ ಪಕ್ಷೇತರ ಮತ್ತು ಸೌತ್ ಕೆನರಾ ನಾರ್ತ್‌ನಲ್ಲಿ ಸ್ವತಂತ್ರ ಪಾರ್ಟಿ ಅಭ್ಯರ್ಥಿ ಕಣದಲ್ಲಿದ್ದರು.

57ರ ಚುನಾವಣೆಯಲ್ಲಿ ಕ್ಷೇತ್ರದ ಹೆಸರು, ವ್ಯಾಪ್ತಿ ಬದಲಾಗಿ ಮಂಗಳೂರು ಮತ್ತು ಉಡುಪಿ ಕ್ಷೇತ್ರ ರಚನೆಯಾಗಿತ್ತು. ಉಡುಪಿ ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ಮಲ್ಯ ಮತ್ತು ಪ್ರಜಾ ಸೋಶಲಿಸ್ಟ್ ಪಾರ್ಟಿಯ ಮೋಹನ್ ರಾವ್ ಮಧ್ಯೆ ನೇರ ಸ್ಪರ್ಧೆ. 29 ಸಾವಿರ ಮತಗಳ ಅಂತರದಲ್ಲಿ ಮಲ್ಯ ಗೆಲುವು ಸಾಧಿಸಿದ್ದರು.

ನೇರ ಸ್ಪರ್ಧೆಯಲ್ಲಿ ಪೂಜಾರಿ: 1977ರಲ್ಲಿ ಮಂಗಳೂರು ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್‌ನಿಂದ ಜನಾರ್ದನ ಪೂಜಾರಿ ಸ್ಪರ್ಧಿಸಿದ್ದರು. ಕಣದಲ್ಲಿ ಜನತಾ ಪಾರ್ಟಿ ಆಭ್ಯರ್ಥಿಯಾಗಿ ಎ.ಕೆ.ಸುಬ್ಬಯ್ಯ. ನೇರ ಸ್ಪರ್ಧೆಯಲ್ಲಿ ಪೂಜಾರಿ 78 ಸಾವಿರ ಮತಗಳ ಅಂತರದ ಜಯ ಸಾಧಿಸಿ ಲೋಕಸಭೆ ಪ್ರವೇಶಿಸಿದ್ದರು. ಆ ಬಳಿಕ ನಡೆದ ಯಾವುದೇ ಚುನಾವಣೆಯಲ್ಲಿ ನೇರ ಸ್ಪರ್ಧೆ ಇರಲಿಲ್ಲ. ಮಂಗಳೂರು ಕ್ಷೇತ್ರದಲ್ಲಿ ಒಟ್ಟು 3 ಬಾರಿ ಹಾಗೂ ಉಡುಪಿ ಕ್ಷೇತ್ರದಲ್ಲಿ ಒಟ್ಟು 4 ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.

ಎರಡಂಕೆ ದಾಟಿತ್ತು: ಮಂಗಳೂರು ಕ್ಷೇತ್ರದಲ್ಲಿ 1996ರ ಚುನಾವಣೆಯಲ್ಲಿ 12 ಅಭ್ಯರ್ಥಿಗಳು, ಈಗಿನ ದ.ಕ.ಕ್ಷೇತ್ರದಲ್ಲಿ 2009ರಲ್ಲಿ 11 ಹಾಗೂ 2014ರ ಚುನಾವಣೆಯಲ್ಲಿ 14 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಉಡುಪಿ ಕ್ಷೇತ್ರದಲ್ಲಿ 1996 ಚುನಾವಣೆಯಲ್ಲಿ 13, ಈಗಿನ ಉಡುಪಿ – ಚಿಕ್ಕಮಗಳೂರು ಕ್ಷೇತ್ರಕ್ಕೆ 2012ರಲ್ಲಿ ನಡೆದ ಉಪ ಚುನಾವಣೆಯಲ್ಲಿ 14 ಹಾಗೂ 2014ರಲ್ಲಿ ಒಟ್ಟು 11 ಮಂದಿ ಸ್ಪರ್ಧಿಸುವ ಮೂಲಕ ಅಭ್ಯರ್ಥಿಗಳ ಸಂಖ್ಯೆ ಎರಡಂಕೆ ಗಡಿ ದಾಟಿತ್ತು.