ದಕ್ಷಿಣ, ಉಡುಪಿ-ಚಿಕ್ಕಮಗಳೂರು: 18 ನಾಮಪತ್ರ ಸಲ್ಲಿಕೆ, ಪ್ರಚಾರ ಆರಂಭ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಿಗೆ ಸೋಮವಾರ ಒಟ್ಟು 18 ನಾಮಪತ್ರಗಳು ಸಲ್ಲಿಕೆಯಾಗಿವೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸೋಮವಾರ ಐದು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್‌ನಿಂದ ಮಿಥುನ್ ರೈ, ಪಕ್ಷೇತರ ಅಭ್ಯರ್ಥಿಯಾಗಿ ಮ್ಯಾಕ್ಸಿಂ ಪಿಂಟೋ, ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದಿಂದ ಮಹಮ್ಮದ್ ಇಲಿಯಾಸ್, ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದಿಂದ ಇಸ್ಮಾಯಿಲ್ ಶಾಫಿ ಕೆ. ಜಿಲ್ಲಾ ಚುನಾವಣಾಧಿಕಾರಿ ಶಶಿಕಾಂತ್ ಸೆಂಥಿಲ್‌ಗೆ ನಾಮಪತ್ರ ಸಲ್ಲಿಸಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸೋಮವಾರ 8 ಅಭ್ಯರ್ಥಿಗಳಿಂದ 13 ನಾಮಪತ್ರಗಳು ಸಲ್ಲಿಕೆಯಾಗಿವೆ.

ಎಂ.ಕೆ. ದಯಾನಂದ (ಪ್ರೌಟಿಸ್ಟ್ ಸರ್ವ ಸಮಾಜ್ ) 2 ನಾಮಪತ್ರ, ಎಂ.ಕೆ. ಗಣೇಶ್ (ಪಕ್ಷೇತರ) 2 ನಾಮಪತ್ರ, ಪ್ರಮೋದ್ ಮಧ್ವರಾಜ್(ಜೆಡಿಎಸ್) 2 ನಾಮಪತ್ರ, ಗೌತಮ್ ಪ್ರಭು (ಶಿವಸೇನಾ) 2 ನಾಮಪತ್ರ, ಶೇಖರ ಹಾವಂಜೆ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ) 2 ನಾಮಪತ್ರ ಮತ್ತು ಸುರೇಶ್ ಕುಂದರ್ (ಉತ್ತಮ ಪ್ರಜಾಕೀಯ ಪಾರ್ಟಿ), ಗಣಪತಿ ಶೆಟ್ಟಿಗಾರ್ (ಪಕ್ಷೇತರ), ವಿಜಯ್ ಕುಮಾರ್ (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕಿಸ್ಟ್ ಲೆನಿನಿಸ್ಟ್) ರೆಡ್ ಸ್ಟಾರ್ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಮಾರ್ಚ್ 26 ಕೊನೆಯ ದಿನವಾಗಿದ್ದು, ಮಾರ್ಚ್ 27 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಮಾರ್ಚ್ 29 ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.