ದ.ಕ.ದಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ

ಮಂಗಳೂರು: ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಕೈಗೊಂಡಿರುವ ಜನಕಲ್ಯಾಣ ಕಾರ್ಯಕ್ರಮಗಳು, ನರೇಂದ್ರ ಮೋದಿಯವರ ದಿಟ್ಟ ನಿರ್ಧಾರ ಹಾಗೂ 10 ವರ್ಷಗಳಲ್ಲಿ ನಳಿನ್‌ಕುಮಾರ್ ಕಟೀಲು ಅವರ ವ್ಯಾಪಕ ಜನಸಂಪರ್ಕ, ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿರುವುದು ಮತ್ತೊಮ್ಮೆ ಗೆಲ್ಲುವುದಕ್ಕೆ ನೆರವಾಗಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಳಿನ್‌ಕುಮಾರ್ ಕಟೀಲು 2 ಲಕ್ಷಕ್ಕೂ ಹೆಚ್ಚು ಮತದ ಅಂತರದಲ್ಲಿ ಗೆಲುವು ಸಾಧಿಸುವುದು ನಿಶ್ಚಿತ. ಲೋಕಸಭಾ ಕ್ಷೇತ್ರದ ಎಲ್ಲ 8 ವಿಧಾನಸಭಾ ಕ್ಷೇತ್ರಗಳು ಮತ್ತು 1,861 ಮತಗಟ್ಟೆಗಳ ಕಾರ್ಯಕರ್ತರ ಅನುಭವ ಮತ್ತು ಅವರು ನೀಡುವ ಮಾಹಿತಿಯಂತೆ ದೇಶ ಮೊದಲು ಎನ್ನುವವರ ಪರವಾಗಿ ಮತದಾರರಿದ್ದಾರೆ. ಅಭ್ಯರ್ಥಿ ನಳಿನ್‌ಕುಮಾರ್ ಅವರನ್ನು ಗೆಲ್ಲಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಬೆಂಬಲಿಸಲು ಮತದಾರರು ಉತ್ಸುಕರಾಗಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿ ಮುಖಂಡರಾದ ನಿತಿನ್‌ಕುಮಾರ್, ವಿಕಾಸ್ ಪುತ್ತೂರು ಮತ್ತು ಕೃಷ್ಣಪ್ಪ ಪೂಜಾರಿ ಸುದ್ದಿಗೋಷ್ಠಿಯಲ್ಲಿದ್ದರು.

ಕರ್ನಾಟಕದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಕೇಂದ್ರದ ಜನಪರ ಯೋಜನೆಗಳನ್ನು ಜಾರಿ ಮಾಡಲು ಆಸಕ್ತಿ ಹೊಂದಿಲ್ಲ. ಸರ್ಕಾರ ಅಸಹಕಾರ ನೀಡುವ ಮೂಲಕ ಕೇಂದ್ರದ ಯೋಜನೆಗಳು ಜನತೆಯ ಬಳಿಗೆ ತಲುಪದಂತೆ ಅಡ್ಡಗಾಲು ಹಾಕುತ್ತಿದೆ. ಕಿಸಾನ್ ಸಮ್ಮಾನ್‌ಗೆ ರಾಜ್ಯದ 76 ಲಕ್ಷ ರೈತರು ಅರ್ಹರಿದ್ದರೂ ಕೇವಲ 16 ಲಕ್ಷ ರೈತರ ಪಟ್ಟಿ ಮಾಡಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ತುರ್ತು ಸಂದರ್ಭದಲ್ಲೂ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಹೆಸರು ನೋಂದಾಯಿಸಬೇಕು ಎಂಬ ನಿಯಮ ರೂಪಿಸಿ ಆರೋಗ್ಯ ಸೌಲಭ್ಯದಿಂದ ಬಡವರನ್ನು ವಂಚಿಸುತ್ತಿದೆ.
|ಕೋಟ ಶ್ರೀನಿವಾಸ ಪೂಜಾರಿ