ದ.ಕ ಲೋಕಸಭಾ ಕ್ಷೇತ್ರದಲ್ಲಿ 14 ಕ್ರಮಬದ್ಧ

ಮಂಗಳೂರು: ದ.ಕ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳು ಸಲ್ಲಿಸಿರುವ 15 ನಾಮಪತ್ರಗಳಲ್ಲಿ 14 ಕ್ರಮಬದ್ಧವಾಗಿದ್ದು, ಒಂದು ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಬುಧವಾರ ನಾಮಪತ್ರ ಪರಿಶೀಲನೆ ಬಳಿಕ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿಯಿಂದ ಸುದರ್ಶನ್ ಸಲ್ಲಿಸಿದ್ದ ಡಮ್ಮಿ ನಾಮಪತ್ರ ತಿರಸ್ಕೃತಗೊಂಡಿದೆ. ನಾಮಪತ್ರಗಳನ್ನು ಹಿಂಪಡೆಯಲು ಮಾ.29 ಕೊನೇ ದಿನವಾಗಿದೆ. ಸುಪ್ರೀತ್ ಕುಮಾರ್ ಪೂಜಾರಿ(ಎಚ್‌ಜೆಪಿ), ವಿಜಯ್ ಶ್ರೀನಿವಾಸ್ ಸಿ(ಯುಪಿಪಿ), ನಳಿನ್ ಕುಮಾರ್ ಕಟೀಲ್(ಬಿಜೆಪಿ), ಮಿಥುನ್ ರೈ (ಕಾಂಗ್ರೆಸ್), ಸತೀಶ್ ಸಾಲ್ಯಾನ್ (ಬಿಎಸ್‌ಪಿ), ಮೊಹಮ್ಮದ್ ಇಲ್ಯಾಸ್(ಎಸ್‌ಡಿಪಿಐ), ಪಕ್ಷೇತರರಾದ ದೀಪಕ್ ರಾಜೇಶ್ ಕುವೆಲ್ಲೊ, ಮ್ಯಾಕ್ಸಿಂ ಪಿಂಟೊ, ಇಸ್ಮಾಯಿಲ್ ಶಾಫಿ, ಮೊಹಮ್ಮದ್ ಖಾಲಿದ್, ಡೊಮೆನಿಕ್ ಅಲೆಕ್ಸಾಂಡರ್ ಡಿ’ಸೋಜ, ವೆಂಕಟೇಶ ಬೆಂಡೆ, ಅಬ್ದುಲ್ ಹಮೀದ್ ಹಾಗೂ ಎಚ್.ಸುರೇಶ್ ಪೂಜಾರಿ ನಾಮಪತ್ರಗಳು ಕ್ರಮಬದ್ಧವಾಗಿವೆ.
ನಳಿನ್ ನಾಮಪತ್ರದ ಅಫಿಡವಿಟ್‌ನ ಅಂಶಗಳು ಸರಿಯಿಲ್ಲ ಎಂಬ ಆಕ್ಷೇಪವನ್ನು ಕಾಂಗ್ರೆಸ್ ಮುಖಂಡರು ಹಾಕಿದ್ದಾರೆ, ಆದರೆ ಅದು ಗಂಭೀರ ವಿಚಾರವಲ್ಲ ಎಂಬ ಹಿನ್ನೆಲೆಯಲ್ಲಿ ಆಕ್ಷೇಪ ತಿರಸ್ಕರಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

26,605 ಹೊಸ ಮತದಾರರು: ಮತದಾರರ ಪಟ್ಟಿಗಳ ನಿರಂತರ ಪರಿಷ್ಕರಣೆ ಮಾಡಲಾಗಿದ್ದು, ಮಾರ್ಚ್ 16ಕ್ಕೆ ಸ್ಥಗಿತಗೊಳಿಸಲಾಗಿದೆ, ಮುಂದೆ ಹೊಸ ಅರ್ಜಿ ಸ್ವೀಕಾರ ನಡೆಯುವುದಿಲ್ಲ. 26,605 ಮತದಾರರ ಸೇರ್ಪಡೆಯಾಗಿದ್ದು, ಒಟ್ಟು ಮತದಾರರ ಸಂಖ್ಯೆ 17,24,022ಕ್ಕೇರಿದೆ. ಜಿಲ್ಲೆಯಲ್ಲಿ 1861 ಮತಗಟ್ಟೆಗಳಿದ್ದು, ಇದರಲ್ಲಿ 640 ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲ್ಪಟ್ಟಿವೆ. ಇವುಗಳಿಗೆ ಮೈಕ್ರೋ ವೀಕ್ಷಕರು ಹಾಗೂ ವಿಡಿಯೋ ಚಿತ್ರೀಕರಣ ನಿಯೋಜಿಸಲಾಗಿದೆ. ಇವಿಎಂ/ ವಿವಿಪಾಟ್‌ಗಳ ಪ್ರಥಮ ಹಂತದ ಪರಿಶೀಲನೆ ನಡೆಸಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮಕ್ಷಮ ಮಿಶ್ರಣ ನಡೆಸಿ ಸಹಾಯಕ ಚುನಾವಣಾಧಿಕಾರಿಗೆ ಹಂಚಿಕೆ ಮಾಡಲಾಗಿದೆ. 1861 ಮತಗಟ್ಟೆಗಳಿಗೆ 2236 ಮತಯಂತ್ರ/ ವಿವಿಪಾಟ್ ವಿತರಿಸಲಾಗಿದೆ ಎಂದು ಡಿಸಿ ತಿಳಿಸಿದರು.

ಸಿಬ್ಬಂದಿ ಹಾಜರು ಕಡ್ಡಾಯ: ಚುನಾವಣಾ ಕರ್ತವ್ಯ ನಿರ್ವಹಣೆ ಬಗ್ಗೆ ಮಾರ್ಚ್ 31ರಂದು 9346 ಮತಗಟ್ಟೆ ಅಧಿಕಾರಿಗಳಿಗೆ ಆಯಾ ತಾಲೂಕು ಕೇಂದ್ರದಲ್ಲಿ 48 ತಜ್ಞ ಅಧಿಕಾರಿಗಳಿಂದ ತರಬೇತಿ ನಡೆಯಲಿದೆ. ಅಲ್ಲದೆ ಏಪ್ರಿಲ್ 9ರಂದು ಕೇಂದ್ರ ಸ್ಥಾನದ ಹೊರಗೆ ತರಬೇತಿ ನೀಡಲಾಗುವುದು. ಇದಕ್ಕೆ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕು. ಬೆಳ್ತಂಗಡಿ-ಎಸ್‌ಡಿಎಂ ಪಿಯು ಕಾಲೇಜು, ಮೂಡುಬಿದಿರೆ-ಧವಳಾ ಕಾಲೇಜು, ಮಂಗಳೂರು ಉತ್ತರ-ರೊಸಾರಿಯೊ ಶಿಕ್ಷಣ ಸಂಸ್ಥೆ ಪಾಂಡೇಶ್ವರ, ಮಂಗಳೂರು ದಕ್ಷಿಣ- ಕೆನರಾ ಹೈಸ್ಕೂಲ್ ಉರ್ವ, ಮಂಗಳೂರು- ರಾಮಕೃಷ್ಣ ಶಿಕ್ಷಣ ಸಂಸ್ಥೆ ಬಂಟ್ಸ್‌ಹಾಸ್ಟೆಲ್, ಬಂಟ್ವಾಳ-ಇನ್ಫಾಂಟ್ ಜೀಸಸ್ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆ ಮೊಡಂಕಾಪು, ಪುತ್ತೂರು-ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಸುಳ್ಯ-ಸರ್ಕಾರಿ ಪದವಿ ಪೂರ್ವ ಕಾಲೇಜು ಸುಳ್ಯ.

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿ 8,73,000 ರೂ. ವಶಪಡಿಸಿದ್ದು, ಕಾನೂನುಬದ್ಧ ಎಂದು ದೃಢಪಡಿಸಿ ಬಿಡುಗಡೆ ಮಾಡಲಾಗಿದೆ. 77.77 ಲಕ್ಷ ರೂ. ಮೌಲ್ಯದ 53805 ಲೀಟರ್ ಮದ್ಯ ವಶಪಡಿಸಿ 266 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉಚಿತ ಸಹಾಯವಾಣಿ 1950ಕ್ಕೆ ಇದುವರೆಗೆ 2062 ಕರೆ ಬಂದಿದ್ದು, 120 ಕರೆಗಳಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ, ಉಳಿದ 1942 ಮಂದಿ ಮಾಹಿತಿಗೆ ಕರೆ ಮಾಡಿದ್ದಾರೆ. ಸಿವಿಜಿಲ್ ಆ್ಯಪ್ ಮೂಲಕ 23 ದೂರುಗಳು ದಾಖಲಾಗಿವೆ.

ವೋಟರ್ ಸ್ಲಿಪ್ ಮಾತ್ರ ತಂದರೆ ಸಾಲದು: ಈ ಬಾರಿ ಮತದಾನಕ್ಕೆ ಬರುವ ಜನರು ಮತದಾರರ ಗುರುತು ಚೀಟಿ ಅಥವಾ 11 ರೀತಿಯ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತರಬೇಕು. ಹಿಂದಿನ ಚುನಾವಣೆಯಂತೆ ಕೇವಲ ವೋಟರ್ ಸ್ಲಿಪ್ ಹಿಡಿದು ಬಂದರೆ ಮತದಾನಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.