ಅವಸರ ಮಾಡಿದ್ರೆ ಸೋಲ್ತೀರಿ ಎಂದ ಪೂಜಾರಿ

ಮಂಗಳೂರು: ಒಂದು ದಿನ ಹಿಂದೆ ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್‌ಗೆ ಆಶೀರ್ವಾದ ಮಾಡಿ. ‘ನೀವು ಗೆಲ್ಲುತ್ತೀರಿ’ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ, ಹೊರಡಲು ಅವಸರ ಮಾಡಿದ ಯು.ಟಿ.ಖಾದರ್ ಅವರನ್ನು ಗದರಿಸಿದ ಪ್ರಸಂಗ ನಡೆಯಿತು.

‘ನೀವು ಅವಸರ ಮಾಡಿದರೆ ಮಿಥುನ್ ಚುನಾವಣೆಯಲ್ಲಿ ಸೋಲುತ್ತಾರೆ, ನಾನು ಶಾಪ ಕೊಡುತ್ತಿದ್ದೇನೆ, ಅವರ ಸೋಲಿಗೆ ನೀವು ಜವಾಬ್ದಾರರಾಗ್ತೀರಿ’ ಎನ್ನುತ್ತ ಖಾದರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ನಾಮಪತ್ರ ಸಲ್ಲಿಕೆಗೆ ಮುನ್ನ ಮಿಥುನ್ ರೈ ಮತ್ತು ಖಾದರ್ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದರು. ಇದೇ ವೇಳೆ ದೇವಸ್ಥಾನ ಕಚೇರಿಯಲ್ಲಿದ್ದ ಪೂಜಾರಿ ಅವರನ್ನೂ ಭೇಟಿಯಾದರು. ಮೊದಲು ಮಿಥುನ್ ರೈ ಅವರಿಗೆ ಆಶೀರ್ವದಿಸಿ, ಗೆಲ್ಲುವ ಅಭ್ಯರ್ಥಿಯನ್ನು ನಿಲ್ಲಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೇರೆ ಕಡೆಗೂ ಭೇಟಿ ನೀಡುವ ಒತ್ತಡವಿದ್ದ ಕಾರಣ, ಹೊರಡಲು ಮಿಥುನ್ ಮತ್ತು ಖಾದರ್ ಮುಂದಾದಾಗ, ಪೂಜಾರಿ ಸಿಟ್ಟಿಗೆದ್ದರು. ಅವಸರ ಮಾಡಿದ್ದಾರೆ, ಸೋಲ್ತಾರೆ…ಎಂದು ಸಿಡಿಮಿಡಿಗೊಂಡರು. ನಾನು ಶಾಪ ಕೊಡ್ತಾ ಇದ್ದೇನೆ, ಒಳಗೆ ಹೋಗಿ ದೇವಸ್ಥಾನದಲ್ಲಿ ಪ್ರಾಯಶ್ಚಿತ್ತ ಮಾಡಿ, ಚರ್ಚ್, ಮಸೀದಿಗೂ ಹೋಗಿ ಕ್ಷಮೆ ಯಾಚಿಸಿ ಎಂದು ಸೂಚನೆ ನೀಡಿದರು. ಆದರೆ, ಕಾಂಗ್ರೆಸ್ ನಾಯಕರೂ ಮಾರುತ್ತರೆ ಕೊಡದೆ ಸಂಯಮ ಕಾಪಾಡಿಕೊಂಡರು. ಸಿಟ್ಟನ್ನು ನಿಯಂತ್ರಿಸಿಕೊಂಡ ಪೂಜಾರಿ ಖಾದರ್ ಅವರ ಮೈದಡವಿ ಬೀಳ್ಕೊಟ್ಟರು.

ಇದಕ್ಕೆ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾರಿ, ಪಕ್ಷ ಒಳ್ಳೆಯ ಹಾಗೂ ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಯನ್ನು ನಿಲ್ಲಿಸಿದೆ. ಜನರ ಆಶೀರ್ವಾದ ಪಡೆಯಲು ಹೋಗುವಾಗ ನಾನೂ ಒಟ್ಟಿಗೆ ಇರುತ್ತೇನೆ, ದೇವರು ಅವರ ಕೈ ಬಿಡುವುದಿಲ್ಲ, ನನಗೆ ಕನಸಿನಲ್ಲಿ ದೇವರೇ ಬಂದು ಅವರು ಗೆಲ್ಲುವುದಾಗಿ ಹೇಳಿದ್ದಾರೆ ಎಂದರು.

ಮಿಥುನ್ ಸೋತರೆ ಮಂದಿರ-ಮಸೀದಿಗೆ ಹೋಗಲ್ಲ!: ತಮ್ಮ ವೈವಿಧ್ಯಮಯ ಹೇಳಿಕೆಗಳ ಮೂಲಕ ಪ್ರಚಾರದಲ್ಲಿರುವ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಸೋಮವಾರ ಮಿಥುನ್ ನಾಮಪತ್ರ ಸಲ್ಲಿಕೆ ಮೊದಲಿನ ಕಾಂಗ್ರೆಸ್ ಸಮಾವೇಶದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದರು.
ಕಾರ್ಯಕರ್ತರ ಘೋಷಣೆಗಳ ಮಧ್ಯೆ ಮಾತನಾಡಿದ ಪೂಜಾರಿ, ಮಿಥುನ್ ರೈ ಈ ಬಾರಿ ಚುನಾವಣೆಯಲ್ಲಿ ಗೆಲ್ಲದಿದ್ದರೆ ನಾನು ನಿರಂತರವಾಗಿ ಹೋಗುವ ಕುದ್ರೋಳಿ ದೇವಸ್ಥಾನ, ಉಳ್ಳಾಲ ಮಸೀದಿ, ಇಗರ್ಜಿಗಳಿಗೆ ಹೋಗುವುದನ್ನೇ ನಿಲ್ಲಿಸುತ್ತೇನೆ ಎಂದು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದರು. ನಾಮಪತ್ರ ಸಲ್ಲಿಕೆ ವೇಳೆ ಮಿಥುನ್ ಜೊತೆ ಪೂಜಾರಿ ಇದ್ದರು.