ಬಿಜೆಪಿ ಮಹಾ ಸಂಪರ್ಕ ಅಭಿಯಾನ

ಮಂಗಳೂರು: ದ.ಕ. ಜಿಲ್ಲೆಯ ಎಲ್ಲ 1861 ಬೂತ್‌ಗಳಲ್ಲಿ ಏ.7 ಮತ್ತು 14ರಂದು ಬಿಜೆಪಿ ಮಹಾ ಸಂಪರ್ಕ ಅಭಿಯಾನ ನಡೆಸಲಿದೆ. ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಶಾಸಕರು ಸಹಿತ ಪಕ್ಷದ ಎಲ್ಲ ನಾಯಕರು ವಿವಿಧ ಬೂತ್‌ಗಳಲ್ಲಿ ನಡೆಯುವ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೂತ್ ಸಮಿತಿ ರಚನೆ, 54 ಮಹಾ ಶಕ್ತಿ ಕೇಂದ್ರಗಳಲ್ಲಿ ಜನಸಂಪರ್ಕ ಸಭೆ ಸಹಿತ ಪಕ್ಷ ಸಂಘಟನೆಯ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಮಾ.28ರಿಂದ 30ರವರೆಗೆ ಪೇಜ್ ಪ್ರಮುಖರ ಸಮಾವೇಶ, ಏ.3ರಿಂದ 5ರವರೆಗೆ ಎಲ್ಲ ಬೂತ್‌ಗಳಲ್ಲಿ ಮನೆ ಸಂಪರ್ಕ ನಡೆಯಲಿದೆ. ಏ.7 ಮತ್ತು 14ರಂದು ನಡೆಯುವ ಮಹಾ ಸಂಪರ್ಕ ಅಭಿಯಾನದ ಒಂದೇ ದಿನದಲ್ಲಿ ಜಿಲ್ಲೆಯ ಎಲ್ಲ ಮನೆಗಳನ್ನು ಸಂಪರ್ಕಿಸಲಾಗುವುದು ಎಂದರು.

ಸಂಸದ ನಳಿನ್‌ಕುಮಾರ್ ಕಟೀಲ್ 16,500 ಕೋಟಿ ರೂ. ಅನುದಾನ ತರುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಮೋದಿ ನಾಯಕತ್ವ ಮತ್ತು ಸಂಸದರ ಸಾಧನೆ ಆಧಾರದಲ್ಲಿ ಬಿಜೆಪಿ ಮತ ಯಾಚಿಸಲಿದೆ. ನಳಿನ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರ, ಜಿಪಂ, ತಾಪಂ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ 134 ಗ್ರಾಪಂಗಳಲ್ಲಿ ಬಿಜೆಪಿ ಅಧಿಕಾರ ಪಡೆದಿದೆ. ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಬಲಿಷ್ಠವಾಗಿದ್ದು, 2 ಲಕ್ಷ ಮತಗಳ ಅಂತರದಲ್ಲಿ ಜಯ ಸಾಧಿಸುವುದು ನಮ್ಮ ಗುರಿ ಎಂದು ತಿಳಿಸಿದರು.
ಶಾಸಕರಾದ ಎಸ್.ಅಂಗಾರ, ಡಾ.ವೈ.ಭರತ್ ಶೆಟ್ಟಿ, ಹರೀಶ್ ಪೂಂಜ, ಮುಖಂಡರಾದ ಜಿತೇಂದ್ರ ಕೊಟ್ಟಾರಿ, ರಾಜೇಶ್ ಕೊಟ್ಟಾರಿ ಸುದ್ದಿಗೋಷ್ಠಿಯಲ್ಲಿದ್ದರು.

ಮೋದಿ ಪ್ರಚಾರ ಸಭೆ: ಏ.8ರಿಂದ 14ರವರೆಗೆ ಗ್ರಾಮೀಣ ಸಂವಾದ ಮತ್ತು ನಗರ ಸಂವಾದ ಕಾರ್ಯಕ್ರಮ ಆಯೋಜಿಸಲಾಗುವುದು. ಏ.15 ಮತ್ತು 16ರಂದು ರೋಡ್ ಶೋ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 55 ಸಾರ್ವಜನಿಕ ಸಭೆ ನಡೆಸಲು ಉದ್ದೇಶಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದು, ಮುಂದಿನ ವಾರ ಕಾರ್ಯಕ್ರಮದ ದಿನಾಂಕ ನಿಗದಿಯಾಗಲಿದೆ ಎಂದು ಮಠಂದೂರು ತಿಳಿಸಿದರು.