1.45 ಕೋಟಿ ರೂ. ಒಡೆಯ ನಳಿನ್ ಬಳಿ ವಾಹನವಿಲ್ಲ, ಸಾಲವೂ ಇಲ್ಲ

ಮಂಗಳೂರು: ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್ ಮತ್ತು ಅವರ ಪತ್ನಿ ಶ್ರೀದೇವಿ ಒಟ್ಟು 1.45 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿ ಹೊಂದಿದ್ದಾರೆ. ಐದು ವರ್ಷದ ಹಿಂದೆ ಇವರು 1.06 ಕೋಟಿ ಮೌಲ್ಯದ ಒಟ್ಟು ಆಸ್ತಿ ಹೊಂದಿದ್ದರು.

2014ರ ಚುನಾವಣೆಯ ನಳಿನ್ ಅಫಿಡವಿಟ್‌ಗೆ ಹೋಲಿಸಿದರೆ ಹೆಚ್ಚಿನ ಏರುಪೇರು ಕಂಡು ಬಂದಿಲ್ಲ. 39 ಲಕ್ಷ ರೂ. ಆಸ್ತಿ ಮೌಲ್ಯ ಹೆಚ್ಚಾಗಿದೆ. ಐದು ವರ್ಷದ ಹಿಂದೆ ಪತ್ನಿ ಹೆಸರಿನಲ್ಲಿದ್ದ 13.93 ಲಕ್ಷ ರೂ. ಸಾಲ ಮಾತ್ರ ಈಗ 44.32 ಲಕ್ಷ ರೂ.ಗೆ ಏರಿಕೆಯಾಗಿದೆ.

ನಳಿನ್‌ಕುಮಾರ್ 60 ಸಾವಿರ ರೂ. ನಗದು ಹಾಗೂ ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿ ಒಟ್ಟು 4.94 ಲಕ್ಷ ರೂ. ಹೊಂದಿದ್ದಾರೆ. ಪತ್ನಿ ಶ್ರೀದೇವಿ 22 ಸಾವಿರ ರೂ. ನಗದು ಹಾಗೂ ವಿವಿಧ ಬ್ಯಾಂಕ್ ಖಾತೆಯಲ್ಲಿ 35 ಸಾವಿರ ರೂ. ಹೊಂದಿದ್ದಾರೆ. ಇಬ್ಬರು ಪುತ್ರಿಯರ ಖಾತೆಯಲ್ಲಿ ತಲಾ 15,633 ರೂ.ಇದೆ.
ನಳಿನ್ ಯಾವುದೇ ವಾಹನ ಹೊಂದಿಲ್ಲ. ಪತ್ನಿ ಬಳಿ ಈಗ 60 ಸಾವಿರ ರೂ. ಮಾರುಕಟ್ಟೆ ದರ ಇರುವ ಮಾರುತಿ ಆಲ್ಟೋ ಕಾರು , 27.16 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 9 ಸಾವಿರ ರೂ.ಮೌಲ್ಯದ ಬೆಳ್ಳಿ, 1 ಲಕ್ಷ ರೂ.ಮೌಲ್ಯದ ಪೀಠೋಪಕರಣ, 1ಲಕ್ಷ ರೂ. ಮೌಲ್ಯದ ಇಲೆಕ್ಟ್ರಾನಿಕ್ ಸಾಮಗ್ರಿ ಒಟ್ಟು 30.42 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ. ನಳಿನ್ ಬಳಿ 50 ಸಾವಿರ ರೂ. ಮೊತ್ತದ ಇನ್ಶೂರೆನ್ಸ್, 28 ಸಾವಿರ ರೂ. ಮೌಲ್ಯದ 10 ಗ್ರಾಂ.ಚಿನ್ನ ಸಹಿತ ಒಟ್ಟು 6.55 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ. ಇಬ್ಬರು ಪುತ್ರಿಯರ ಬಳಿ ತಲಾ 84 ಸಾವಿರ ರೂ. ಮೌಲ್ಯದ ಚಿನ್ನಾಭರಣವಿದೆ.

ಸ್ಥಿರಾಸ್ತಿಯಾಗಿ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದಲ್ಲಿ 10.15 ಎಕರೆ ಜಾಗ ಹೊಂದಿದ್ದಾರೆ. ಇದರಲ್ಲಿ ಕುಟುಂಬದವರಿಗೆ ಪಾಲಿದೆ. ಪ್ರಸ್ತುತ ಮಾರುಕಟ್ಟೆ ದರ 80.52 ಲಕ್ಷ ರೂ. ಎಂದು ಅಂದಾಜಿಸಲಾಗಿದ್ದು, ಇದರಲ್ಲಿ ನಳಿನ್ ಪಾಲಿಗೆ 20.13 ಲಕ್ಷ ರೂ. ಮೌಲ್ಯದ ಆಸ್ತಿ ಇದೆ. ಪತ್ನಿ ಬೋಳೂರಿನಲ್ಲಿ 88 ಲಕ್ಷ ರೂ. ಮೌಲ್ಯದ ಫ್ಲಾೃಟ್ ಹೊಂದಿದ್ದಾರೆ. ನಳಿನ್ ಯಾವುದೇ ಸಾಲ ಹೊಂದಿಲ್ಲ. ಪತ್ನಿ ಶ್ರೀದೇವಿ ಶೆಟ್ಟಿ ಹೆಸರಿನಲ್ಲಿ 44.50 ಲಕ್ಷ ರೂ. ಗೃಹಸಾಲ ಇದೆ.

ಪ್ರಚೋದನಕಾರಿ ಭಾಷಣ, ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಸಂಬಂಧಿಸಿ ನಳಿನ್ ಅವರ ಮೇಲೆ ಒಟ್ಟು 4 ಪ್ರಕರಣ ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.