ಉತ್ತರ ಕನ್ನಡ ಜೆಡಿಎಸ್​ಗೆ ಕೊಡಬೇಡಿ ಎಂದ್ರೂ ಕೇಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಆರ್​. ವಿ.ದೇಶಪಾಂಡೆ

ಬೆಂಗಳೂರು: ಉತ್ತರ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಅನಂತ್​ಕುಮಾರ್​ ಭರ್ಜರಿ ಅಂತರಗಳಿಂದ ಗೆಲುವು ಸಾಧಿಸಿದ್ದು ಅಧಿಕೃತ ಘೋಷಣೆ ಬಾಕಿ ಇದೆ. ಹಾಗೇ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 24 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಿದೆ.

ಈ ಬಗ್ಗೆ ಮಾತನಾಡಿದ ಕಾಂಗ್ರೆಸ್​ ಶಾಸಕ ದೇಶಪಾಂಡೆ, ಜನತಾದಳ ಹುಟ್ಟಿದ್ದೇ ಕಾಂಗ್ರೆಸ್​ ವಿರುದ್ಧವಾಗಿ. ಈಗ ಮೈತ್ರಿ ಮಾಡಿಕೊಂಡರೆ ಜನರು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ನಾವು ಮುಖಂಡರು ಒಂದಾಗಿ ಮೈತ್ರಿ ಮಾಡಿಕೊಳ್ಳಬಹುದು. ಆದರೆ, ಬೂತ್​ ಮಟ್ಟದ ಕಾರ್ಯಕರ್ತರು ಒಂದಾಗುವುದಿಲ್ಲ. ಉತ್ತರಕನ್ನಡದ ಹಲವು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದೆವು. ಆದರೆ, ಕೇಂದ್ರ ನಾಯಕರು ನಮ್ಮ ಮಾತನ್ನು ಪರಿಗಣಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಫಲಿತಾಂಶದಿಂದ ಮೈತ್ರಿ ಸರ್ಕಾರದ ಮೇಲೆ ಯಾವ ರೀತಿಯ ಪರಿಣಾಮ ಆಗುತ್ತದೆ ಎಂಬುದನ್ನು ನೋಡಬೇಕು. ಯಾರಿಗೆ ಯಾವ ಕ್ಷೇತ್ರ ನೀಡಬೇಕು ಎಂಬುದನ್ನು ನಾವು ಸರಿಯಾಗಿ ತೀರ್ಮಾನಿಸಬೇಕಿತ್ತು. ಉತ್ತರ ಕನ್ನಡ ಜೆಡಿಎಸ್​​ಗೆ ಬೇಡಿ, ಇಲ್ಲಿ ಅವರ ಅಸ್ತಿತ್ವ ಇಲ್ಲ ಎಂದು ಹೇಳಿದ್ದರೂ ಯಾರೂ ಕೇಳಲಿಲ್ಲ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಸೋಲಿಸಲ್ಲದ ಸರದಾರ. ಅವರೇ ಸೋತಿದ್ದಾರೆ ಎಂದರೆ ನೋವಾಗುತ್ತದೆ. ತುಮಕೂರಲ್ಲಿ ದೇವೇಗೌಡರು ಸೋತಿದ್ದಕ್ಕೂ ಬೇಸರವಿದೆ. ಮೈತ್ರಿ ಬಗ್ಗೆ ರಾಜ್ಯಮಟ್ಟದ, ರಾಷ್ಟ್ರಮಟ್ಟದ ನಾಯಕರು ತೀರ್ಮಾನ ಮಾಡಬೇಕು ಎಂದರು.

ಮೋದಿಗೆ ಅಭಿನಂದನೆ
ನರೇಂದ್ರ ಮೋದಿಯವರಿಗೆ ಅಭಿನಂದನೆ. ದೇಶದ ಜನರು ಮತ್ತೊಮ್ಮೆ ಅವರಿಗೆ 5 ವರ್ಷಗಳ ಅಧಿಕಾರ ಕೊಟ್ಟಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಜ್ವಲಂತವಾಗಿದೆ. ರೈತರು ಕಷ್ಟದಲ್ಲಿದ್ದಾರೆ. ಉತ್ಪಾದನಾ ಕ್ಷೇತ್ರ ಹಾಳಾಗಿದೆ ಈ ಬಗ್ಗೆ ಮೋದಿ ಗಮನ ಹರಿಸಬೇಕು ಎಂದರು.

Leave a Reply

Your email address will not be published. Required fields are marked *