23ರ ಬಳಿಕ ನೀತಿ ಸಂಹಿತೆ ಸಡಿಲ

ಮಂಗಳೂರು/ಉಡುಪಿ: ರಾಜ್ಯದಲ್ಲಿ ಎರಡು ಹಂತದ ಲೋಕಸಭಾ ಚುನಾವಣೆ ಏಪ್ರಿಲ್ 18 ಹಾಗೂ 23ರಂದು ಮುಗಿದ ಬಳಿಕ ನೀತಿಸಂಹಿತೆಯನ್ನು ಸಡಿಲಗೊಳಿಸುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 18ಕ್ಕೇ ಮತದಾನ ಮುಗಿಯುತ್ತದಾದರೂ, 23ರವರೆಗೂ ನೀತಿ ಸಂಹಿತೆ ಕಟ್ಟು ನಿಟ್ಟಾಗಿಯೇ ಇರಲಿದೆ. ಆ ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿ ಮತದಾನ ಹಲವು ಹಂತಗಳಲ್ಲಿ ನಡೆಯುತ್ತಲೇ ಇರುತ್ತದೆ. ತಾತ್ವಿಕವಾಗಿ ಆಗಲೂ ನೀತಿ ಸಂಹಿತೆ ಜಾರಿಯಲ್ಲಿ ಇರಲಿದೆ.
ಚುನಾವಣೆ ಘೋಷಣೆಯಾದ ಬಳಿಕ ಬಾಕಿಯಾಗಿರುವ ಹಲವು ಕೆಲಸ, ಕಾಮಗಾರಿಗಳನ್ನು ಕೈ ಬಿಡುವಂತಿಲ್ಲ. ಅದಕ್ಕಾಗಿ ನೀತಿ ಸಂಹಿತೆ ಸಡಿಲಗೊಳಿಸುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಇನ್ನೂ ನಿರ್ದಿಷ್ಟ ನಿದೇರ್ಶನ ಬಂದಿಲ್ಲ, ಹಾಗಿದ್ದರೂ ಬಹುತೇಕ ಕಾಮಗಾರಿಗಳನ್ನು ಕೈಗೊಳ್ಳುವ ನಿರೀಕ್ಷೆ ಹೆಚ್ಚು ಎಂದು ಜಿಲ್ಲಾ ಚುನಾವಣಾಧಿಕಾರಿ ಶಶಿಕಾಂತ್ ಸೆಂಥಿಲ್ ‘ವಿಜಯವಾಣಿ’ಗೆ ತಿಳಿಸಿದರು.

ಆದರೆ, ಅಧಿಕಾರಿಗಳ ಜತೆ ಜನಪ್ರತಿನಿಧಿಗಳು ಸಭೆ, ಸಮಾರಂಭ ನಡೆಸುವ ಹಾಗಿಲ್ಲ, ಪ್ರಗತಿ ಪರಿಶೀಲನೆ ಮಾಡುವಂತಿಲ್ಲ. ಕಾಮಗಾರಿಗಳನ್ನು ಮಾತ್ರವೇ ಕೈಗೊಳ್ಳಬಹುದು ಎಂದರು.

ಆದೇಶ ಪಾಲನೆ: ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ 18ರಂದು ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರ ಒಳಪಟ್ಟಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ 23ರಂದು ಮತದಾನ ನಡೆಯಲಿದೆ. ರಾಜ್ಯದಲ್ಲಿ 2 ಹಂತ ಚುನಾವಣೆ ಮುಗಿಯುವವರೆಗೆ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತದೆ. ಬಳಿಕ ತುರ್ತು ಕೆಲಸ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಚುನಾವಣಾ ಆಯೋಗ ನೀತಿ ಸಂಹಿತೆ ಸಡಿಲ ಮಾಡಬಹುದು. ಆದರೆ ದೇಶದಲ್ಲಿ ಮೇ 27ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಆಯೋಗದ ಆದೇಶವನ್ನು ಪಾಲಿಸಲಾಗುತ್ತದೆ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.