ಮೀನು ಮಾರ್ಕೆಟ್‌ನಲ್ಲಿ ತಾರಾ ಪ್ರಚಾರ

ಮಂಗಳೂರು: ಚಿತ್ರನಟಿ- ಬಿಜೆಪಿ ನಾಯಕಿ ತಾರಾ ಅನುರಾಧಾ ನಗರದ ಕೇಂದ್ರ ಮೀನು ಮಾರುಕಟ್ಟೆಯಲ್ಲಿ ಗುರುವಾರ ಪಕ್ಷದ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್ ಪರಮತ ಯಾಚಿಸಿದರು.
ಸಂಸದರಾಗಿ ನಳಿನ್ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೇಂದ್ರ ಸರ್ಕಾರ ಇತ್ತೀಚೆಗೆ ಮೀನುಗಾರರಿಗೆ ಪ್ರತ್ಯೇಕ ಇಲಾಖೆಯನ್ನೂ ಪ್ರಕಟಿಸಿದ್ದು, ಮೀನುಗಾರರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಾರಾ ಹೇಳಿದರು. ಮೀನು ಮಾರುಕಟ್ಟೆ ದುರವಸ್ಥೆ ಬಗ್ಗೆ ಮಹಿಳೆಯರು ಗಮನ ಸೆಳೆದಾಗ, ಈ ಚುನಾವಣೆ ಬಳಿಕ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಬರುತ್ತದೆ. ಆಗ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಬಿಜೆಪಿ ಮಹಿಳಾ ಮೋರ್ಚಾ ನಾಯಕಿಯರು ತಾರಾಗೆ ಕರಾವಳಿಯ ಸಾಂಪ್ರದಾಯಿಕ ಮುಟ್ಟಾಳೆ ತೊಡಿಸಿ, ಕೇಸರಿ ಶಾಲು ಹಾಕಿ ಸ್ವಾಗತಿಸಿದರು. ಶಾಸಕ ವೇದವ್ಯಾಸ ಕಾಮತ್, ರಾಜ್ಯ ಬಿಜೆಪಿ ಸಹ ವಕ್ತಾರೆ ಸುಲೋಚನಾ ಜಿ.ಕೆ.ಭಟ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ, ರೂಪಾ ಡಿ.ಬಂಗೇರ, ಅಮಿತಕಲಾ, ಭಾಸ್ಕರಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಪ್ರಧಾನಿ ಮೋದಿ ಹೆಸರಿನಲ್ಲಿ ಚುನಾವಣಾ ಪ್ರಚಾರ ನಡೆಸುವುದಕ್ಕೆ ಕಾಂಗ್ರೆಸ್ ಆಕ್ಷೇಪಿಸುವುದರಲ್ಲಿ ಅರ್ಥವಿಲ್ಲ. ಕಾಂಗ್ರೆಸ್ ಇಂದಿರಾ, ರಾಜೀವ್ ಹೆಸರಿನಲ್ಲಿ, ಜೆಡಿಎಸ್ ದೇವೇಗೌಡರ ಹೆಸರಲ್ಲಿ ಪ್ರಚಾರ ನಡೆಸುವುದಿಲ್ಲವೇ? ಮೋದಿಯವರು ಪ್ರಧಾನಿಯಾಗಿ ದೇಶಕ್ಕೆ ಉತ್ತಮ ಕೆಲಸ ಮಾಡಿದ್ದಾರೆ. ಬಿಜೆಪಿ ಅವರ ಹೆಸರಿನಲ್ಲಿ ಮತಯಾಚನೆ ಮಾಡುವುದರಲ್ಲಿ ತಪ್ಪೇನಿದೆ?
|ತಾರಾ ಅನುರಾಧಾ