ಒಂಚೂರು ಇಲ್ಕಾಣಿ, ಮತದಾನ ಮಾಡ್ದೋರಿಗೆ ಮದುವೇಲಿ ಸ್ಪೆಶಲ್ ಗಿಫ್ಟ್!

ಉಡುಪಿ: ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಏನಿರಬಹುದು? ನಾಮ ಸಂವತ್ಸರ, ವಧುವರರ ಹೆಸರು, ಮದುವೆ ನಡೆಯುವ ಸ್ಥಳ, ಇನ್ನೂ ಹೆಚ್ಚೆಂದರೆ ಆಶೀರ್ವಾದವೇ ಉಡುಗೊರೆ ಎಂಬ ಸಂದೇಶ… ಆದರೆ ಇಲ್ಲೊಂದು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಮಾಡಿ ಬರುವ ಅತಿಥಿಗಳಿಗೆ ಭರಪೂರ ಉಡುಗೊರೆ ಘೋಷಿಸಲಾಗಿದೆ.

ಮೇ 1ರಂದು ತಲ್ಲೂರು ಪಾರ್ತಿಕಟ್ಟೆ ಶೇಷಕೃಷ್ಣ ಕನ್ವೆಷನ್ ಸಭಾಭವನದಲ್ಲಿ ನಡೆಯುವ ಗೌರಿ ಶ್ರೀನಿವಾಸ್ ಪುತ್ರ ಗಣೇಶ್ ಕುಮಾರ್ ಪಡುಕೋಣೆ ಮತ್ತು ಲೀಲಾವತಿ ನಾರಾಯಣ ಅವರ ಪುತ್ರಿ ಪೂರ್ಣಿಮಾ ಅವರ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಜಾಗೃತಿ ಸಂದೇಶ ಪಸರಿಸಲಾಗುತ್ತಿದೆ. ಮತದಾನ ಮಾಡಿ, ಪ್ರಜಾಪ್ರಭುತ್ವ ಗೆಲ್ಲಿಸಿ, ನಾವು ಮಾರಾಟಕ್ಕಿಲ್ಲ ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಸಂದೇಶ ಎಲ್ಲ ಬಂಧು ಬಳಗಕ್ಕೆ ತಲುಪಿಸಲಾಗುತ್ತಿದೆ.

ವಿವಾಹ ಪತ್ರಿಕೆಯಲ್ಲಿ ಆಶೀರ್ವಾದವೇ ಉಡುಗೊರೆ ಎಂದಿದೆ. ಇದಕ್ಕೆ ಪ್ರತಿಯಾಗಿ ‘ಒಂಚೂರು ಇಲ್ಕಾಣಿ’ (ಗಮನಕ್ಕೆ) ಎಂಬ ಕುಂದಾಪ್ರ ಕನ್ನಡದ ಒಕ್ಕಣೆಯಲ್ಲಿ ವಿಶೇಷ ಕೊಡುಗೆ ಬರಹವಿದೆ. ಮತದಾನ ಮಾಡಿದ ಬಗ್ಗೆ ಬೆರಳಿನ ಶಾಯಿ ಗುರುತು ತೋರಿಸಿದವರಿಗೆ 250 ರೂ. ಮೌಲ್ಯದ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವ್ಯಂಗ್ಯಚಿತ್ರ ಪ್ರದರ್ಶನ, ಪುರಾತನ ಜಾನಪದ ವಸ್ತುಗಳ ಪ್ರದರ್ಶನ ಸಹ ಇರಲಿದೆ. ಸಮಾಜಕ್ಕೆ ಮತದಾನ ಜಾಗೃತಿಯ ಸಂದೇಶದ ಜತೆಗೆ ಪುಸ್ತಕ ಓದುವುದನ್ನು ಪ್ರೋತ್ಸಾಹಿಸಿ, ಅತ್ಯಂತ ಅರ್ಥಪೂರ್ಣವಾಗಿ ವಿವಾಹವಾಗುತ್ತಿರುವ ಈ ಜೋಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.