ಶ್ರೀನಿವಾಸ-ಪದ್ಮಾವತಿ ಮೂರ್ತಿಗಳ ಭವ್ಯ ಮೆರವಣಿಗೆ

ಲೋಕಾಪುರ: ಸಂತರ ಭಜನಾ ಮೇಳ, ಕರಡಿ ಮಜಲಿನ ಝಲಕ್, ಮಹಿಳೆಯರ, ಮಕ್ಕಳ ಕೋಲಾಟ, ಕುಂಭ, ಕಲಶದೊಂದಿಗೆ ಭಾಗಹಿಸಿದ ಮುತ್ತೈದೆಯರ ಸಾಲು…

ಲೋಕಾಪುರ ಗ್ರಾಮದಲ್ಲಿ ಭಾನುವಾರ ಕಂಡುಬಂದ ದೃಶ್ಯಗಳಿವು. ವರುಣನ ಕೃಪೆಗಾಗಿ ಹಾಗೂ ಲೋಕಕಲ್ಯಾಣಾರ್ಥ ಮೊದಲ ಬಾರಿಗೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣ ಮಹೋತ್ಸವದ ವಧು-ವರ ಮೆರವಣಿಗೆ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು.

ಮಹೋತ್ಸವ ಅಂಗವಾಗಿ ದುರ್ಗಾದೇವಿ ದೇವಸ್ಥಾನದಿಂದ ನಡೆದ ಮೆರವಣಿಗೆಗೆ ಜ್ಞಾನೇಶ್ವರ ಮಠದ ಶ್ರೀ ಬ್ರಹ್ಮಾನಂದ ಸ್ವಾಮಿಗಳು ಚಾಲನೆ ನೀಡಿದರು. ಸುಮಂಗಲೆಯರ ಕುಂಭ-ಕಲಶಗಳು ಸಾಂಸ್ಕೃತಿಕ ವೈಭವ ಮೆರೆದರೆ, ಎತ್ತಿನ ಬಂಡಿಗಳಲ್ಲಿ ಗ್ರಾಮದ ಸಮಸ್ತ ದೇವಾಲಯಗಳ ದೇವರ ಭಾವಚಿತ್ರಗಳ ಮೆರವಣಿಗೆ ಗಮನ ಸೆಳೆಯಿತು.

ಮುಧೋಳ, ಜಮಖಂಡಿ, ಕಲಾದಗಿ ಸೇರಿ ಇತರ ಗ್ರಾಮಗಳಿಂದ ಆಗಮಿಸಿದ್ದ ವಿಪ್ರರು, ಲಕ್ಷಾನಟ್ಟಿ, ಅರಳಿಕಟ್ಟಿ, ಜಾಲಿಕಟ್ಟಿ, ನಾಗಣಾಪುರ, ವೆಂಕಟಾಪುರ ಸುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸಂಜೆ ತೆರದ ಜೀಪಿನಲ್ಲಿ ಲಕ್ಷ್ಮೀ-ಪದ್ಮಾವತಿ ದೇವಿಯರ ಕಂಚಿನ ಮೂರ್ತಿಗಳ ಮೆರವಣಿಗೆ ವೇಳೆ ಭಕ್ತರು ಪುಷ್ಪವೃಷ್ಟಿಗೈಯ್ಯುತ್ತಿದ್ದ ದೃಶ್ಯ ಮನಮೋಹಕವಾಗಿತ್ತು. 6 ಅಡಿ ಎತ್ತರದ ಸಾಕ್ಷಾತ್ ತಿರುಪತಿ ವೆಂಕಟರಮಣನ ಪ್ರತಿರೂಪದಂತೆ ಕಂಡು ಬಂದ ಶ್ರೀನಿವಾಸ ದೇವರ ಮೂರ್ತಿ ಮೆರವಣಿಗೆ ಕಳೆ ತಂದಿತ್ತು. ಕೇಸರಿ ಶೆಲ್ಯೆ ಹೊತ್ತ ಯುವಕರು ಕುಣಿದು ಕುಪ್ಪಳಿಸಿದರು.

ದುರ್ಗಾದೇವಿ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಮುಖ್ಯದ್ವಾರದಲ್ಲಿ ಪ್ರವೇಶ ಪಡೆದು ಮೇನ್‌ಬಜಾರ್ ಮೂಲಕ ಸಾಗಿ ದೇಸಾಯರ ವಾಡೆದಲ್ಲಿ ಹಾಕಲಾಗಿದ್ದ ವರ್ಣಾಲಂಕೃತವಾದ ಶ್ಯಾಣೆ ಮಾಸ್ತರ ಭವ್ಯವೇದಿಕೆ ಬಂದು ತಲುಪಿತು.

ಸಂತೋಷ ದೇಶಪಾಂಡೆ, ವಿಜಯೀಂದ್ರ ದೇಶಪಾಂಡೆ, ರಾಘು ಮುರಗೋಡ, ಸಂತೋಷ ಕುಲಕರ್ಣಿ, ನಾಗರಾಜ ಕುಲಕರ್ಣಿ, ಶ್ರೀನಿವಾಸ ಬಬಲಾದಿ, ಗಿರೀಶ ಚಿನಗುಂಡಿ, ಪ್ರವೀಣ ಸೋಮಾಪುರ, ಪವನ ಜಾಲವಾದಿ ಇತರರು ಇದ್ದರು.

Leave a Reply

Your email address will not be published. Required fields are marked *