ಹೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ

ಲೋಕಾಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಮೀಪದ ಚಿಕ್ಕೂರ ಗ್ರಾಮದ ರೈತರು ಲೋಕಾಪುರ ಹೆಸ್ಕಾಂ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಚಿಕ್ಕೂರ ಗ್ರಾಮದ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ನಿಯಮಿತವಾಗಿ ವಿದ್ಯುತ್ ಪೂರೈಕೆ, ಕಡಿಮೆ ವೋಲ್ಟೇಜ್ ನಿವಾರಣೆ ಹಾಗೂ ಶಿಥಿಲಗೊಂಡ ಕಂಬ, ಹಳೇ ತಂತಿ ಬದಲಾಯಿಸುವಂತೆ ಒತ್ತಾಯಿಸಿದ ರೈತರು, ತಮ್ಮ ಬೇಡಿಕೆಗಳು ಈಡೇರುವವರೆಗೆ ಕಚೇರಿ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ರೈತ ಮುಖಂಡ ಡಿ.ಆರ್. ದಾಸರಡ್ಡಿ ಮಾತನಾಡಿ, ಲೋಕಾಪುರ 110 ಕೆ.ವಿ. ಸ್ಟೇಷನ್ ಲಿಂಕ್‌ಲೈನ್‌ಗೆ ಚೌಡಾಪುರ ಮತ್ತು ಚಿತ್ರಭಾನುಕೋಟಿ ಪಂಪ್‌ಸೆಟ್‌ಗಳಿಗೆ ಸಂಪರ್ಕ ಕಲ್ಪಿಸಿದ ಕಾರಣ ಚಿಕ್ಕೂರಿಗೆ ಕಡಿಮೆ ವೋಲ್ಟೇಜ್ ವಿದ್ಯುತ್ ಪೂರೈಕೆಯಾಗುತ್ತಿದೆ. ಚಿಕ್ಕೂರಿಗೆ ಪ್ರತ್ಯೇಕ ಲೈನ್ ಮಾಡಬೇಕೆಂದು ಆಗ್ರಹಿಸಿದರು.

40 ವರ್ಷಗಳಷ್ಟು ಹಳೆಯದಾದ ವಿದ್ಯುತ್ ತಂತಿ ಇರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಗು ತ್ತಿದೆ. ಗ್ರಾಮಗಳಲ್ಲಿ ಸಾಕಷ್ಟು ಶಿಥಿಲಾವಸ್ಥೆಯ ಕಂಬಗಳಿವೆ. ಕೂಡಲೇ ತಂತಿ ಹಾಗೂ ಕಂಬಗಳನ್ನು ಬದಲಿಸ ಬೇಕು ಎಂದು ಒತ್ತಾಯಿಸಿದರು.

ರೈತರ ಟಿಸಿ ಸುಟ್ಟರೆ ಬದಲಾಯಿಸಿ ಕೊಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತ ರೈತರು ಅಳಲು ತೋಡಿಕೊಂಡರು. ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು. ವೈ.ಜಿ. ದಾಸರಡ್ಡಿ, ಡಿ.ಆರ್. ದಾಸರಡ್ಡಿ, ಕೆ.ಬಿ. ದಾಸರಡ್ಡಿ, ರಂಗಪ್ಪ ಹೂಲಗೇರಿ, ಕಿಷ್ಟಪ್ಪ ದಾಸನಗೌಡರ, ಹನುಮಂತ ಕಮಕೇರಿ, ಕೃಷ್ಣ ನ್ಯಾಮಗೌಡ್ರ, ಶಿವಪ್ಪ ದಾಸನಗೌಡರ, ಸಂಜು ದಾಸರಡ್ಡಿ ಇತರರಿದ್ದರು.

ಸರ್ಕಾರದ ಆದೇಶದಂತೆ ಲೋಕಾಪುರ 110 ಕೆ.ವಿ. ವಿದ್ಯುತ್ ಕೇಂದ್ರದಿಂದ 7 ತಾಸು 3ಫೇಸ್ ವಿದ್ಯುತ್ ರೈತರ ಪಂಪ್‌ಸೆಟ್‌ಗಳಿಗೆ ಒದಗಿಸಬೇಕಾಗಿತ್ತು. ಆದರೆ ಇಲ್ಲಿನ ಅಧಿಕಾರಿ ಕೇವಲ 5 ತಾಸು ವಿದ್ಯುತ್ ಒದಗಿಸುತ್ತಿದ್ದಾರೆ. ಅದು ಕೂಡ 180 ರಿಂದ 200 ವೋಲ್ಟೇಜ್ ಇರುತ್ತದೆ. ಇದರಿಂದ ಯಾವ ಪಂಪ್‌ಸೆಟ್ ಚಾಲನೆಯಾಗುವುದಿಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ನಮಗೆ ಸಾಕಾಗಿದೆ.
ವೈ.ಜಿ. ದಾಸರಡ್ಡಿ ಚಿಕ್ಕೂರ ರೈತ ಮುಖಂಡ

Leave a Reply

Your email address will not be published. Required fields are marked *