ಆಸ್ಪತ್ರೆಯ ಒತ್ತುವರಿ ಜಾಗ ಪರಿಶೀಲನೆ

ಲೋಕಾಪುರ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಯಲ್ಲಿರುವ ಮಹಿಳೆಯರ ಜತೆ ಜಿಪಂ ಸಿಇಒ ಮಾತನಾಡಿ, ಗರ್ಭಿಣಿಯರು ಕಡ್ಡಾಯವಾಗಿ ಶೌಚಗೃಹ ಬಳಸಬೇಕು. ಪಾದರಕ್ಷೆ ಬಳಸುವ ಜತೆಗೆ ಕೈಗಳನ್ನು ಚೆನ್ನಾಗಿ ಸಾಬೂನಿನಿಂದ ತೊಳೆದುಕೊಳ್ಳಬೇಕು ಹಾಗೂ ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು. ಗರ್ಭಿಣಿಯರು ಮಾತೃ ಪೂರ್ಣ ಯೋಜನೆಯಡಿ ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರ ತೆಗೆದು ಕೊಳ್ಳುವಂತೆ ಕ್ರಮ ಜರುಗಿಸಬೇಕೆಂದು ಅಧಿಕಾ ರಿಗಳಿಗೆ ಸೂಚಿಸಿದರು. ನಂತರ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ಆವರಣ ಹಾಗೂ ಔಷಧ ಉಗ್ರಾಣ ಪರಿಶೀಲಿಸಿ ಸ್ವಚ್ಛತೆ ಕಾಪಾಡಲು ಸಿಬ್ಬಂದಿಗೆ ತಿಳಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಒತ್ತುವರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ವಾರದಲ್ಲಿ ಒತ್ತುವರಿ ತೆರವುಗೊಳಿಸಲಾಗುವುದು. ಸರ್ಕಾರಿ ಜಾಗವನ್ನು ಖಾಸಗಿಯವರ ಹೆಸರಿಗೆ ಮಾಡಿ ಪಹಣಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಒತ್ತುವರಿದಾರರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಜಿಪಂ ಸದಸ್ಯ ಮಹಾಂತೇಶ ಉದಪುಡಿ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗ ಸರ್ವೆ ಮಾಡಿಸಿ ಕಾಂಪೌಂಡ್ ನಿರ್ವಿುಸಲು ಅನುದಾನ ಬಂದಿದೆ. ಆಸ್ಪತ್ರೆ ಉನ್ನತೀಕರಿಸಲು ಪ್ರಾಮಾಣಿಕವಾಗಿ ಪ್ರಯತ್ನಿ ಸುತ್ತೇನೆ. ಇದಕ್ಕೆ ಸ್ಥಳೀಯರ ಹಾಗೂ ಅಧಿಕಾರಿಗಳ ಸಹಕಾರ ಅಗತ್ಯ ಎಂದರು.

ಡಿಎಚ್​ಒ ಡಾ. ಎ.ಎನ್. ದೇಸಾಯಿ, ಟಿಎಚ್​ಒ ಡಾ. ವೆಂಕಟೇಶ ಮಲಘಾಣ, ತಾಪಂ ಇಒ ಬಿ.ವಿ. ಅಡವಿಮಠ, ಅಸಿಸ್ಟಂಟ್ ಸರ್ವೆಯರ್ ಯಂಡಿಗೇರಿ, ಅನಿಲ ಜಾಧವ, ಪಾಟೀಲ, ಡಾ. ಕವಿತಾ ಬೂದಿಹಾಳ, ಡಾ. ವಿನಯ ಕುಲಕರ್ಣಿ, ಪಿಡಿಒಗಳಾದ ಆರ್.ಕೆ. ಮಹೇಂದ್ರಕರ, ಎಸ್.ವೈ. ನರಸನ್ನವರ, ಗ್ರಾಪಂ ಸದಸ್ಯರಾದ ಹನುಮಂತ ಕುಡಚಿ, ವಿಠಲ ಕನಸಗೇರಿ, ರವಿ ರೊಡ್ಡಪ್ಪನವರ, ಪರಮಾನಂದ ಟೊಪ್ಪಣ್ಣವರ ಹಾಗೂ ಸಿಬ್ಬಂದಿ ಇದ್ದರು.