
ಲೋಕಾಪುರ: ಗಾಳಿ, ನೀರು, ಬೆಳಕಿನಷ್ಟೇ ವಿದ್ಯುತ್ ಕೂಡ ಎಲ್ಲರಿಗೂ ಅವಶ್ಯವಾಗಿದೆ. ಹಿತಮಿತವಾಗಿ ವಿದ್ಯುತ್ ಸದ್ಬಳಕೆ ಮಾಡಿಕೊಂಡರೆ ಮಾಲಿನ್ಯ ರಹಿತ ಪರಿಸರ ನಿರ್ಮಿಸಬಹುದು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವೈ.ಎನ್. ಸಿಪರಮಟ್ಟಿ ಹೇಳಿದರು.
ಪಟ್ಟಣದ ಲೋಕೇಶ್ವರ ದೇವಸ್ಥಾನ ಆವರಣದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯುತ್ ಸುರಕ್ಷತಾ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿದ್ಯುತ್ ಉತ್ಪಾದನೆಗಿಂತ ಬಳಕೆ ಹೆಚ್ಚಾಗುತ್ತಿದೆ. ಈಗಿನಿಂದಲೇ ಉಳಿತಾಯ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ತೊಂದರೆ ಉಂಟಾಗುತ್ತದೆ ಎಂದರು.
ಭಂಟನೂರ ಶಾಖೆಯ ಜೆಇ ಎಂ.ಎಸ್. ಬಡಿಗೇರ ಮಾತನಾಡಿ, ವಿದ್ಯುತ್ ಸುರಕ್ಷಿತವಾಗಿ ಬಳಸಲು ಗ್ರಾಮೀಣ ಮಟ್ಟದಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ. ತುಂಡಾದ ವಿದ್ಯುತ್ ಅಥವಾ ಇನ್ಸುಲೇಷನ್ ಇಲ್ಲದ ತಂತಿಯನ್ನು ಮುಟ್ಟಬಾರದು. ಪ್ರಾಣಿಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟಬಾರದು, ಕಂಬ ಹಾಗೂ ತಂತಿಗಳ ಹತ್ತಿರ ಹಸಿ ಬಟ್ಟೆಗಳನ್ನು ಒಣಗಿಸಬಾರದು ಎಂದು ಸಲಹೆ ನೀಡಿದರು.
ಶಿಕ್ಷಕ ಕೃಷ್ಣಾ ಲಮಾಣಿ, ರವಿ ಕಂದಗಲ್ಲ, ಶಂಕರ ಮಡಿವಾಳ ಮಾತನಾಡಿದರು. ತಾಂತ್ರಿಕ ಸಹಾಯಕ ಆರ್.ಪಿ. ಕುಲಕರ್ಣಿ, ಶಾಖಾಧಿಕಾರಿಗಳಾದ ಎಂ.ಕೆ. ಬೆವೂರ, ವೈ.ಎಸ್. ತಳವಾರ, ಎ್.ಎಫ್. ಉಗಲವಾಟ, ಈರಣ್ಣ ಚಿಕ್ಕನರಗುಂದ, ಶಬ್ಬೀರ ಗುದಗಿ, ಮಲ್ಲಪ್ಪ ಚೌಧರಿ, ಗುರುಪಾದಪ್ಪ ಪಾಟೀಲ, ವಿಠ್ಠಲ ತುಳಸಿಗೇರಿ, ಎಲ್.ಬಿ. ಪಾಟೀಲ, ಎಚ್.ಕೆ. ಪಾಟೀಲ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಇದ್ದರು.