ಜಿ-20 ಶೃಂಗಸಭೆಯಿಂದ ಭಾರತಕ್ಕಾದ ಪ್ರಯೋಜನವೇನು?

ರ್ಜೆಂಟೀನಾದ ರಾಜಧಾನಿ ಬ್ಯೂನಸ್ ಐರಿಸ್​ನಲ್ಲಿ ನ. 30 ಮತ್ತು ಡಿ.1ರಂದು ನಡೆದ 13ನೇ ಜಿ-20 (20 ದೇಶಗಳ ಗುಂಪು) ಶೃಂಗಸಭೆಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಓರ್ವ ನಿರ್ಣಾಯಕ ಪಾತ್ರಧಾರಿಯಾಗಿದ್ದುದನ್ನು ಬಿಡಿಸಿ ಹೇಳಬೇಕಿಲ್ಲ; ಈ ಸಂದರ್ಭದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್, ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಜಪಾನ್ ಪ್ರಧಾನಿ ಶಿಂಜೊ ಅಬೆಯಂಥ ಘಟಾನುಘಟಿಗಳ ಜತೆ ಅವರು ವೇದಿಕೆ ಹಂಚಿಕೊಂಡರು. ‘ನ್ಯಾಯಸಮ್ಮತ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಬಹುಮತಾಭಿಪ್ರಾಯವನ್ನು ರೂಪಿಸುವುದು’ ಶೃಂಗದ ಧ್ಯೇಯವಾಕ್ಯವಾಗಿತ್ತು.

ಶೃಂಗದ ಸಮಾಪನ ಸಮಾರಂಭದಲ್ಲಿ, ‘ಭಾರತ ಇದೇ ಮೊದಲ ಬಾರಿಗೆ 2022ರಲ್ಲಿ ವಾರ್ಷಿಕ ಜಿ-20 ಶೃಂಗಸಭೆಯನ್ನು ಆಯೋಜಿಸಲಿದೆ’ ಎಂಬುದಾಗಿ ಘೋಷಿಸಿದರು; ಇದು ಭಾರತಕ್ಕೆ ಸ್ವಾತಂತ್ರ್ಯ ದಕ್ಕಿ 75 ವರ್ಷಗಳಾಗುವ ಸಂದರ್ಭವೂ ಹೌದು ಎಂಬುದಿಲ್ಲಿ ಗಮನಾರ್ಹ. ಇತ್ತೀಚಿನ ಪಂಚರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಪಾಲಿಗೆ ದೊಡ್ಡಮಟ್ಟದ ಹೊಡೆತವಾಗಿರುವುದರ ಹೊರತಾಗಿಯೂ, ಐದು ತಿಂಗಳಷ್ಟೇ ಬಾಕಿಯಿರುವ ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ಜಯಭೇರಿ ಬಾರಿಸುವ, ತನ್ಮೂಲಕ ಮುಂದಿನ ಶೃಂಗಸಭೆಯಲ್ಲಿ ಜಾಗತಿಕ ನಾಯಕರನ್ನು ವೈಯಕ್ತಿಕವಾಗಿ ಆಹ್ವಾನಿಸುವಂತಾಗುವ ಭರವಸೆ ಅವರಿಗಿದ್ದಂತಿದೆ. ‘ಭಾರತದ ಸಮೃದ್ಧ ಇತಿಹಾಸ ಮತ್ತು ವೈವಿಧ್ಯವನ್ನು ಪ್ರದರ್ಶಿಸುವ ಹಾಗೂ ಭಾರತೀಯರ ಸೌಹಾರ್ದಯುತ ಆತಿಥ್ಯದ ಅನುಭವವನ್ನು ಜಾಗತಿಕ ನಾಯಕರಿಗೆ ದಕ್ಕಿಸಿಕೊಡುವ’ ಆಶಯವೂ ಅವರ ಟ್ವಿಟರ್ ಸಂದೇಶದಲ್ಲಿ ವ್ಯಕ್ತವಾಗಿರುವುದು ಈ ಮಾತಿಗೆ ಪುಷ್ಟಿನೀಡುತ್ತದೆ. 2019 ಮತ್ತು 2020ರ ವರ್ಷಗಳಲ್ಲಿ ಕ್ರಮವಾಗಿ ಜಪಾನ್ ಮತ್ತು ಸೌದಿ ಅರೇಬಿಯಾದಲ್ಲಿ ಜಿ-20 ಶೃಂಗಸಭೆ ನಡೆಯಲಿದೆ.

‘ಜಿ-20’ ಎಂಬುದು ವಿಶ್ವದ ಅಗ್ರಗಣ್ಯ ಕೈಗಾರಿಕೀಕೃತ ಮತ್ತು ನವೋದಯದ ಹೊಸ್ತಿಲಲ್ಲಿರುವ ರಾಷ್ಟ್ರಗಳ ಒಂದು ಅಂತಾರಾಷ್ಟ್ರೀಯ ವೇದಿಕೆಯಾಗಿದ್ದು ಐರೋಪ್ಯ ಒಕ್ಕೂಟದಂಥ ಘಟಾನುಘಟಿಯ ಜತೆಜತೆಗೆ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟರ್ಕಿ, ಬ್ರಿಟನ್ ಮತ್ತು ಅಮೆರಿಕದಂಥ 19 ಗಮನಾರ್ಹ ದೇಶಗಳನ್ನು ಒಳಗೊಂಡಿದೆ. ಈ ಒಕ್ಕೂಟದ ಸದಸ್ಯರಾಷ್ಟ್ರಗಳು, ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಹಾಗೂ ಆರ್ಥಿಕತೆಯ ಶೇ. 85ರಷ್ಟು ಭಾಗವನ್ನು ಪ್ರತಿನಿಧಿಸುತ್ತವೆ ಎಂಬುದು ಉಲ್ಲೇಖನೀಯ. 2008-2010ರ ಕಾಲಘಟ್ಟದಲ್ಲಿ ತಲೆದೋರಿದ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಗಿಮುಷ್ಟಿಯಿಂದ ವಿಶ್ವವನ್ನು ಹೊರಸೆಳೆಯುವಲ್ಲಿ ಜಿ-20 ಸದಸ್ಯ ರಾಷ್ಟ್ರಗಳು ಪ್ರಧಾನ ಪಾತ್ರ ವಹಿಸಿದ್ದವು.

ಅಂತಾರಾಷ್ಟ್ರೀಯ ಹಣಕಾಸು ಸ್ಥಿರತೆಯನ್ನು ಪ್ರವರ್ತಿಸುವಂಥ ಕಾರ್ಯನೀತಿಗಳನ್ನು ರ್ಚಚಿಸಲೆಂದು ಸರ್ಕಾರಗಳು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್​ಗಳಿಗಾಗಿರುವ ಒಂದು ಅಂತಾರಾಷ್ಟ್ರೀಯ ವೇದಿಕೆಯಾಗಿ 1999ರಷ್ಟು ಹಿಂದೆಯೇ ಜಿ-20 ಅಸ್ತಿತ್ವಕ್ಕೆ ಬಂತಾದರೂ, 2008ರಲ್ಲಿ ಲೆಹ್​ವುನ್ ಬ್ರದರ್ಸ್ ಕುಸಿತವನ್ನು ಅನುಸರಿಸಿ ವಾಷಿಂಗ್ಟನ್ ಡಿಸಿಯಲ್ಲಿ ಜಿ-20 ನಾಯಕರ ಉದ್ಘಾಟನಾ ಶೃಂಗಸಭೆಯ ನಂತರವಷ್ಟೇ ಇದಕ್ಕೆ ಪ್ರಾಮುಖ್ಯ-ಪ್ರಸಿದ್ಧಿ ದಕ್ಕಿತು. ಅಲ್ಲಿಂದೀಚೆಗೆ, ಭವಿಷ್ಯದ ಆರ್ಥಿಕ ಬಿಕ್ಕಟ್ಟುಗಳನ್ನು ತಡೆಯುವ ಅಂಗವಾಗಿ ಜಾಗತಿಕ ಹಣಕಾಸು ವ್ಯವಸ್ಥೆಯನ್ನು ಸುಧಾರಿಸುವುದಕ್ಕಿರುವ ಕಾರ್ಯವಿಧಾನಗಳಿಗೆ ಚಾಲನೆ ನೀಡುವಂಥ ಅಮೂಲ್ಯ ವೇದಿಕೆಯಾಗಿ ಈ ಒಕ್ಕೂಟ ನೆಲೆಗೊಂಡು ತನ್ನತನ ನಿದರ್ಶಿಸಿದೆ. ಈಗಂತೂ ವಾರ್ಷಿಕ ಕಾರ್ಯಕ್ರಮಗಳೇ ಆಗಿಬಿಟ್ಟಿರುವ ಜಿ-20 ಶೃಂಗಗಳು, ಸದೃಢ, ಹೆಚ್ಚು ಸುಸ್ಥಿರ ಹಾಗೂ ಸಮತೋಲಿತ ಬೆಳವಣಿಗೆಯೊಂದಿಗೆ ಯಶಸ್ವಿ ರೂಪಾಂತರವನ್ನು ದಾಖಲಿಸುವ ನಿಟ್ಟಿನಲ್ಲಿ ರಾಷ್ಟ್ರಗಳಿಗೆ ಸಹಾಯಹಸ್ತ ಚಾಚಿವೆ. ಒಂದು ದಶಕಕ್ಕೂ ಕಡಿಮೆ ಅವಧಿಯಲ್ಲಿ, ಜಾಗತಿಕ ಆರ್ಥಿಕ ವಿನ್ಯಾಸದಲ್ಲಿನ ಒಂದು ಪ್ರಧಾನ ಪಾತ್ರಧಾರಿಯಾಗಿ ಹೊರಹೊಮ್ಮಿರುವ ಜಿ-20, ವಿಶ್ವದ ಪ್ರಮುಖ ಆರ್ಥಿಕ ಪರಿಷತ್ತು ಎಂಬ ಹೆಗ್ಗಳಿಕೆಯಿದ್ದ ಜಿ-8 ಒಕ್ಕೂಟವನ್ನು ತನ್ನ ವಿಸõತ ಕಾರ್ಯಸೂಚಿ ನೆರವಿನೊಂದಿಗೆ ಕಾರ್ಯತಃ ಸ್ಥಾನಪಲ್ಲಟಗೊಳಿಸಿದೆ.

ಆದಾಗ್ಯೂ, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ‘ಅಮೆರಿಕ ಮೊದಲು’ ಹಣೆಪಟ್ಟಿಯ ಕಾರ್ಯನೀತಿಗಳ ಅನುಷ್ಠಾನಕ್ಕೆ ಶುರುವಿಟ್ಟುಕೊಳ್ಳುತ್ತಿದ್ದಂತೆ, ಜಿ-20 ಒಕ್ಕೂಟದಲ್ಲಿ ಅಂತರ್ಗತವಾಗಿದ್ದ ಸಾಮರಸ್ಯದಲ್ಲಿ ಒಡಕುಂಟಾಗಲು ಶುರುವಾಯಿತು. 2008ರಿಂದೀಚೆಗೆ, ತನ್ನ ಇತಿಹಾಸದಲ್ಲೇ ಕಾಣದಿದ್ದಂಥ ಆಳ ಪ್ರತ್ಯೇಕತೆಗಳ ಕಾರಣದಿಂದ ಹುಟ್ಟಿಕೊಂಡ ತಲ್ಲಣಗಳ ನಡುವೆಯೂ ಪ್ರಸಕ್ತ ವರ್ಷದ ಜಿ-20 ಶೃಂಗ ಆಯೋಜನೆಗೊಂಡಿತು. ಚೀನಾ ಜತೆಗಿನ ವ್ಯಾಪಾರ ಸಮರದ ಮೂಲಕ ಒಕ್ಕೂಟದಲ್ಲಿನ ಇಂಥ ಸಾಮರಸ್ಯ ‘ನಾಶಪಡಿಸಿದ್ದಕ್ಕಾಗಿ’, ವಿಶ್ವ ವ್ಯಾಪಾರ ಸಂಘಟನೆ ನೆಲೆಗಟ್ಟನ್ನು ಒಳಗೊಳಗೇ ಹಾಳುಮಾಡಿದ್ದಕ್ಕಾಗಿ ಹಾಗೂ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದಡಿ ಇಟ್ಟಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್ ನಿರೀಕ್ಷೆಯಂತೆಯೇ ಚರ್ಚೆಯ ಕೇಂದ್ರಬಿಂದುವಾಗಿದ್ದರು. ರಷ್ಯಾದ ಭದ್ರತಾ ಪಡೆಗಳು ಉಕ್ರೇನಿನ 3 ಹಡಗುಗಳನ್ನು ವಶಕ್ಕೆ ತೆಗೆದುಕೊಂಡಿದ್ದಕ್ಕಾಗಿ ಅದರ ಅಧ್ಯಕ್ಷ ಪುತಿನ್ ಒತ್ತಡಕ್ಕೆ ಸಿಲುಕಿದ್ದು ಮಾತ್ರವಲ್ಲ, ಅಮೆರಿಕ ಮತ್ತು ಐರೋಪ್ಯ ಒಕ್ಕೂಟದಿಂದ ಹೇರಲ್ಪಟ್ಟ ‘ಕುತ್ಸಿತ’ ನಿರ್ಬಂಂಧಗಳ ಕುರಿತು ಸ್ವತಃ ಪುತಿನ್ ವ್ಯಗ್ರರಾಗಿದ್ದರು. ಅಷ್ಟೇ ಅಲ್ಲ, ಜಿ-20 ಶೃಂಗವು ಒಂದು ಸಂಕಷ್ಟಮಯ ಕಾಲಘಟ್ಟದಲ್ಲಿ ಹಾದುಹೋಗುತ್ತಿದೆ ಹಾಗೂ ವ್ಯಾಪಾರ, ಹವಾಮಾನ ಬದಲಾವಣೆ, ವಲಸೆಗಾರಿಕೆ ಮತ್ತಿತರ ಅನೇಕ ಪ್ರಮುಖ ಚರ್ಚಾವಿಷಯಗಳ ಕುರಿತಾಗಿ ಸಮಗ್ರಕ್ರಮ ಕೈಗೊಳ್ಳುವ ಉದ್ದೇಶದೊಂದಿಗೆ ಪ್ರತಿಕೂಲ ದೃಷ್ಟಿಕೋನವನ್ನು ಡೊನಾಲ್ಡ್ ಟ್ರಂಪ್ ಹೊಮ್ಮಿಸುತ್ತಿದ್ದಾರೆ ಎಂಬ ಸಾರ್ವತ್ರಿಕ ಅಭಿಪ್ರಾಯವೂ ರೂಪುಗೊಳ್ಳುವಂತಾಯಿತು.

ಈ ವರ್ಷದ ಶೃಂಗದ ಆತಿಥೇಯರಾಗಿದ್ದ ಅರ್ಜೆಂಟೀನಾದ ಅಧ್ಯಕ್ಷ ಮಾರಿಕೊ ಮ್ಯಾಕ್ರಿ ಅವರು, ಜಿ-20 ಶೃಂಗಸಭೆಗಳಿಗೆ ಸಂಬಂಧಿಸಿದಂತಿರುವ ಮೂರು ಪ್ರಧಾನ ಆದ್ಯತಾ ವಿಷಯಗಳನ್ನು ಸಾದರಪಡಿಸಿದರು. ಅವೆಂದರೆ- 1) ತಾಂತ್ರಿಕ ಪ್ರಗತಿ ಅಳವಡಿಸಿಕೊಳ್ಳುವ ಮೂಲಕ ಮಾನವ ಸಾಮರ್ಥ್ಯ ಪರಿಪೂರ್ಣವಾಗಿ ಬಳಸಿಕೊಳ್ಳುವಂತಾಗುವ ಕಾರ್ಯದ ಭವಿಷ್ಯ 2) ಅಭಿವೃದ್ಧಿಗೆ ಸಂಬಂಧಿಸಿದಂತಿರುವ ಮೂಲಸೌಕರ್ಯ 3) ಒಂದು ಸುಸ್ಥಿರ ಆಹಾರ ಭವಿಷ್ಯ. ಜಾಗತಿಕ ಆರ್ಥಿಕತೆ, ವ್ಯಾಪಾರಕ್ಷೇತ್ರ ಸಂಬಂಧಿತ ತಲ್ಲಣಗಳು, ಕಚ್ಚಾತೈಲ ಬೆಲೆಗಳು, ಭಯೋತ್ಪಾದನೆ ಹಾಗೂ ದೇಶಭ್ರಷ್ಟ/ತಲೆತಪ್ಪಿಸಿಕೊಂಡು ಓಡಿಹೋಗುವ ಆರ್ಥಿಕ ಅಪರಾಧಿಗಳಂಥ ಚರ್ಚಾವಿಷಯಗಳ ಕುರಿತಾಗಿ ಜಿ-20 ಸದಸ್ಯರಾಷ್ಟ್ರಗಳ ನಡುವೆ ಸಹಕಾರ ಹೆಚ್ಚಬೇಕಿರುವ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿಹೇಳಿದರು. ಸಂಪರ್ಕಶೀಲತೆ, ಸುಸ್ಥಿರ ಅಭಿವೃದ್ಧಿ, ಭಯೋತ್ಪಾದನೆಯ ಪಿಡುಗಿನ ನಿಗ್ರಹ, ಸಮುದ್ರತೀರ ಮತ್ತು ಸೈಬರ್ ಭದ್ರತೆಯಂಥ ಜಾಗತಿಕ ಮತ್ತು ಬಹುಪಕ್ಷೀಯ ಹಿತಾಸಕ್ತಿಗಳನ್ನು ಆವರಿಸಿರುವ ಎಲ್ಲ ಪ್ರಧಾನ ಸಮಸ್ಯೆಗಳ ಕುರಿತಾಗಿ ಸದಸ್ಯರಾಷ್ಟ್ರಗಳ ನಡುವೆ ಸಹಕಾರಸೇತು ನಿರ್ವಣವಾಗಬೇಕಿರುವುದರ ಪ್ರಾಮುಖ್ಯದ ಕುರಿತು ಮಿಕ್ಕ ನಾಯಕರು ಒತ್ತಿಹೇಳಿದರು.

ಶೃಂಗಸಭೆಯ ಒಂದು ಸರ್ವಸಮ್ಮತ ಹೇಳಿಕೆಯಿಲ್ಲದೆಯೇ ಅದು ಸಮಾಪನಗೊಳ್ಳುವಂತಾಗುವಷ್ಟರ ಮಟ್ಟಿಗೆ ಅಭಿಪ್ರಾಯಭೇದಗಳು ತಾರಕಕ್ಕೇರಿದ್ದವು ಎಂಬುದು ಮಾಧ್ಯಮ ವರದಿಗಳಿಂದ ದಕ್ಕಿರುವ ಮಾಹಿತಿ. ಹೀಗಾಗಿ, ಈ ನಿಟ್ಟಿನಲ್ಲಿ ಕಾರ್ಯಕ್ಷಮತೆ ಮೆರೆದ ರಾಜತಾಂತ್ರಿಕರು ಇಂಥ ಅಭಿಪ್ರಾಯಭೇದಗಳನ್ನು ಅಸ್ಪಷ್ಟ ಭಾಷೆಯಲ್ಲೇ ಹುದುಗಿಸಿಬಿಟ್ಟರು. ಪ್ಯಾರಿಸ್ ಹವಾಮಾನ ಒಡಂಬಡಿಕೆಯೆಡೆಗಿನ ಸದಸ್ಯ ರಾಷ್ಟ್ರಗಳ ಬದ್ಧತೆಯನ್ನು ಅಧಿಕೃತ ಪ್ರಕಟಣೆ ಮರುದೃಢೀಕರಿಸುವ ಸಂದರ್ಭದಲ್ಲಿ, ಈ ನಿಟ್ಟಿನಲ್ಲಿ ವಿರೋಧಿಸಿದ ಏಕೈಕ ದನಿಯಾಗಿತ್ತು ಅಮೆರಿಕ. ಜಾಗತಿಕ ವ್ಯಾಪಾರ ವ್ಯವಸ್ಥೆಯ ದುರಸ್ತಿಮಾಡಿ ವಿಶ್ವ ವ್ಯಾಪಾರ ಸಂಘಟನೆ ಬಲವರ್ಧನೆಗೆ ಆಶಿಸುವುದರ ಜತೆಜತೆಗೇ ಜಾಗತಿಕ ವಾಣಿಜ್ಯವಲಯದಲ್ಲಿ ಲೋಪದೋಷಗಳಿರುವುದನ್ನು ಒಪ್ಪಿಕೊಂಡ ರಾಷ್ಟ್ರಗಳು ವಿಶ್ವ ವ್ಯಾಪಾರ ಸಂಘಟನೆ ಕಾರ್ಯವೈಖರಿಯನ್ನು ಸುಧಾರಿಸಬೇಕಾದ ಅಗತ್ಯವಿದೆ ಎಂದು ಕರೆನೀಡಿದವಾದರೂ, ಅಮೆರಿಕದಿಂದ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ‘ಆರ್ಥಿಕ ರಕ್ಷಣಾನೀತಿ’ ಎಂಬ ಪರಿಕಲ್ಪನೆ ಉಲ್ಲೇಖಿಸಲು ಹಿಂದೆಗೆದವು.

ಜಾಗತಿಕ ಆರ್ಥಿಕ ಮತ್ತು ಹಣಕಾಸು ಸ್ಥಿರತೆಯೆಡೆಗಿನ ಒಂದು ಪರಿಣಾಮಕಾರಿ ಕೊಡುಗೆದಾರ ಎಂಬ ಹಣೆಪಟ್ಟಿಯನ್ನು ದಕ್ಕಿಸಿಕೊಂಡಿದ್ದ ಜಿ-20 ಒಕ್ಕೂದ ವಿಶ್ವಾಸಾರ್ಹತೆಯ ಮೇಲೆ, ಪ್ರಸಕ್ತ ವರ್ಷದ ಜಿ-20 ಶೃಂಗಸಭೆಯ ಪರಿಣಾಮವಂತೂ ಆಗಿದೆ. ಹಾಗಿದ್ದಲ್ಲಿ, ಇಂಥ ಶೃಂಗದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಧಾನಿ ಮೋದಿಯವರಿಗೆ ದಕ್ಕಿದ ಪ್ರಯೋಜನವಾದರೂ ಏನು? ಇಂಥ ಶೃಂಗಗಳಿಗೆ ಪೂರಕವಾಗಿ ನಡೆಯುವ ಒಂದಷ್ಟು ಸಭೆಗಳೂ ಕೆಲವೊಮ್ಮೆ ಮುಖ್ಯವಾಗುತ್ತವೆ. ಈ ಕುರಿತು ಕೊಂಚ ಗಮನಹರಿಸೋಣ-

1)ಜಾಗತಿಕ ಮತ್ತು ಬಹುಪಕ್ಷೀಯ ಹಿತಾಸಕ್ತಿಗಳಂಥ ಪ್ರಮುಖ ವಿಷಯಗಳನ್ನು ರ್ಚಚಿಸಲೆಂದು, ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್, ಜಪಾನ್ ಪ್ರಧಾನಿ ಶಿಂಜೊ ಅಬೆ ಮೊಟ್ಟಮೊದಲ ತ್ರಿಪಕ್ಷೀಯ ಸಭೆಯಲ್ಲಿ ಪರಸ್ಪರ ಮುಖಾಮುಖಿಯಾದರು; ದಕ್ಷಿಣ ಚೀನಾ ಸಮುದ್ರವಲಯದಲ್ಲಿ ಮುಕ್ತ ನೌಕಾಸಂಚಾರಕ್ಕೆ ತಡೆಯೊಡ್ಡುವ ಮೂಲಕ ಇಂಡೊ-ಪೆಸಿಫಿಕ್ ವ್ಯೂಹಾತ್ಮಕ ಪ್ರದೇಶದಲ್ಲಿ ಚೀನಾ ತನ್ನ ಕಬಂಧಬಾಹುಗಳನ್ನು ಚಾಚುವ ಕಸರತ್ತಿನಲ್ಲಿ ವ್ಯಸ್ತವಾಗಿರುವ ಹಿನ್ನೆಲೆಯಲ್ಲಿ ಈ ಭೇಟಿಗೆ ಇನ್ನಿಲ್ಲದ ಮಹತ್ವ ಬಂದಿತ್ತು. ಜಪಾನ್, ಅಮೆರಿಕ ಮತ್ತು ಇಂಡಿಯಾದಂಥ ರಾಷ್ಟ್ರಗಳ ಹೆಸರಿನ ಮೊದಲ ಅಕ್ಷರಗಳನ್ನು ಸಂಕಲಿಸಿ ‘ಒಅಐ’ ಎಂಬ ಪ್ರಥಮಾಕ್ಷರಿಯನ್ನು ವಿಶಿಷ್ಟವಾಗಿ ರೂಪಿಸಿದ ಪ್ರಧಾನಿ ಮೋದಿ, ಪರಸ್ಪರ ಹಂಚಿಕೊಂಡ ಮೌಲ್ಯಗಳ ನೆರವಿನೊಂದಿಗೆ ಒಟ್ಟಾಗಿ ನಿಂತು ವಿಜಯ ಸಾಧಿಸುವ ವಾಗ್ದಾನ ಮಾಡಿದ್ದೂ ಈ ಸಭೆಯಲ್ಲೇ.

2) ಪ್ರಧಾನಿ ಮೋದಿ ಹಾಗೂ ಸೌದಿ ಅರೇಬಿಯಾ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ನಡುವಿನ ಮಾತುಕತೆಯ ವೇಳೆ, ಭಾರತದಲ್ಲಿ ದಿನೇದಿನೆ ಹೆಚ್ಚುತ್ತಿರುವ ಇಂಧನ ಬೇಡಿಕೆಗಳ ನೆರವೇರಿಕೆಗೆಂದು ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತಕ್ಕೆ ಸರಬರಾಜು ಮಾಡುವುದಾಗಿ ಸೌದಿ ಯುವರಾಜ ಭರವಸೆಯಿತ್ತರು.

3) ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಜಿನ್​ಪಿಂಗ್ ನಡುವಿನ ಮಾತುಕತೆಯ ವೇಳೆ, ದ್ವಿಪಕ್ಷೀಯ ಬಾಂಧವ್ಯ ವರ್ಧನೆ ವಿಷಯದಲ್ಲಿ 2018ರ ವರ್ಷವು ಪ್ರಧಾನಪಾತ್ರ ವಹಿಸಿದೆಯೆಂಬ ಗ್ರಹಿಕೆಗೆ ಉಭಯ ನಾಯಕರೂ ಸಮ್ಮತಿಸಿದರು.

ಎಲ್ಲಕ್ಕಿಂತ ಮುಖ್ಯವಾಗಿ, ಭಾರತ 2022ರಲ್ಲಿ ಜಿ-20 ಶೃಂಗಸಭೆಯ ಆತಿಥೇಯನಾಗುವುದಕ್ಕೆ ಅಂಗೀಕಾರದ ಮುದ್ರೆ ಬಿದ್ದಿತು. ಪ್ರಸ್ತುತ ‘ಜಿ-20’ ಒಕ್ಕೂಟವು ಹಾದುಹೋಗುತ್ತಿರುವ ಕಾಲಘಟ್ಟ ಸಂಕಷ್ಟಮಯವಾಗಿದ್ದಿರಬಹುದು, ಆದರೆ ಇಷ್ಟಾಗಿಯೂ ಅದು ಅತೀವ ಸುಸಂಬದ್ಧವಾಗಿರುವ ಒಂದು ಜಾಗತಿಕ ವೇದಿಕೆಯಾಗಿದೆ ಎಂಬುದನ್ನು ಮರೆಯುವಂತಿಲ್ಲ. ಭಾರತ ಇದುವರೆಗೂ ಇಂಥದೊಂದು ಶೃಂಗವನ್ನು ಆಯೋಜಿಸಿಲ್ಲ; ಆದರೆ ಭಾರತದ ಹಿತಾಸಕ್ತಿಗಳನ್ನು ಪ್ರವರ್ತಿಸುವ ನಿಟ್ಟಿನಲ್ಲಿ ಜಾಗತಿಕ ನಾಯಕರೊಂದಿಗೆ ಪಾರಸ್ಪರಿಕ ಚರ್ಚೆಯಲ್ಲಿ ತೊಡಗುವ ವಿಷಯದಲ್ಲಿ ಪ್ರಧಾನಿ ಮೋದಿ ನಿಪುಣರು ಹಾಗೂ ಅಂಥ ಯಾವ ಅವಕಾಶವನ್ನೂ ಅವರು ಕಳೆದುಕೊಳ್ಳುವುದಿಲ್ಲ ಎಂಬುದಂತೂ ಖರೆ.

ಹೀಗಾಗಿ 2022ರ ಜಿ-20 ಶೃಂಗಸಭೆಗೆ ಅದರದ್ದೇ ಆದ ಮಹತ್ವ ದಕ್ಕಲಿದೆ. ಹಾಗಾದಲ್ಲಿ, ಆ ಸಭೆಯ ಆಯೋಜಿಸಿ ಜಾಗತಿಕ ನಾಯಕರನ್ನು ಆಹ್ವಾನಿಸುವ ವೇಳೆ ಮೋದಿ ಭಾರತದ ಪ್ರಧಾನಿಯಾಗಿರುತ್ತಾರೆಯೇ? ಎಂಬ ಪ್ರಶ್ನೆ ಕೆಲವರಲ್ಲಿ ಹುಟ್ಟುವುದು ಸಹಜ. ಮುಂದಿನ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಉಳಿದಿವೆ; ಜನ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡೋಣ.

(ಲೇಖಕರು ಮಾಜಿ ರಾಯಭಾರಿ, ಜಾಗತಿಕ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *