ಕೊರಿಯಾಗಳ ಮರುಮಿಲನ ಸಾಧ್ಯವೇ? ಸದ್ಯಕ್ಕಿಲ್ಲ…

| ಎನ್​.ಪಾರ್ಥಸಾರಥಿ

ಕಳೆದ ವಾರದ ವಿದ್ಯಮಾನವಿದು. ಸೊಗಸಾದ ಹಸಿರು ಸೀರೆಯುಟ್ಟು ಭಾರತ ಭೇಟಿಗೆ ಆಗಮಿಸಿದ ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಕಿಮ್ ಜುಂಗ್-ಸೂಕ್, ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರ ಜತೆಗೂಡಿ, ಅಯೋಧ್ಯಾದಲ್ಲಿ ನಡೆದ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿದರು; ಇದು ಕೊರಿಯಾಕ್ಕೆ ತೆರಳಿ, ಅಲ್ಲಿನ ರಾಜ ಕಿಮ್ ಸುರೋನನ್ನು ಮದುವೆಯಾಗಿ ಕ್ರಿ.ಪೂ. 48ರಲ್ಲಿ ಗಯಾ ಸಾಮ್ರಾಜ್ಯವನ್ನು ಸಂಸ್ಥಾಪಿಸಿದ ಅಯೋಧ್ಯೆಯ ಇತಿಹಾಸಪ್ರಸಿದ್ಧ ರಾಜಕುಮಾರಿ ಸ್ರೀರತ್ನಾ ಎಂಬಾಕೆಗೆ ಸಮರ್ಪಿತವಾದ ಸ್ಮಾರಕವೊಂದರ ನಿರ್ವಣದ ಪ್ರಯುಕ್ತ ಹಮ್ಮಿಕೊಳ್ಳಲಾದ ಕಾರ್ಯಕ್ರಮವಾಗಿತ್ತು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಕೊರಿಯಾ ನಡುವಿನ ಐತಿಹಾಸಿಕ ಬಾಂಧವ್ಯಗಳನ್ನು ಸ್ಮರಿಸಿಕೊಂಡರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ‘ಅಯೋಧ್ಯಾ ಮತ್ತು ದಕ್ಷಿಣ ಕೊರಿಯಾ ನಡುವೆ ಪ್ರಾಚೀನ ನಂಟಿದ್ದು, ಇದು ಭಾರತ ಮತ್ತು ಕೊರಿಯಾ ಗಣರಾಜ್ಯದ ನಡುವಿನ ಐತಿಹಾಸಿಕ ಹಾಗೂ ನಾಗರಿಕತೆಗೆ ಸಂಬಂಧಿಸಿದ ಬಾಂಧವ್ಯಗಳ ಮೂಲಾಧಾರವಾಗಿದೆ’ ಎಂದು ಟ್ವೀಟ್ ಮಾಡಿದರು. ಇದಕ್ಕೂ ಮುನ್ನ, ಈ ವರ್ಷದ ಜುಲೈನಲ್ಲಿ ಭಾರತಕ್ಕೆ ಭೇಟಿಯಿತ್ತ ಅಧ್ಯಕ್ಷ ಮೂನ್ ಜೇ-ಇನ್ ಅವರು, ರಾಣಿ ಸುರಿರತ್ನಾ ಸ್ಮಾರಕ ಯೋಜನೆಯ ಕುರಿತಾದ ಜ್ಞಾಪಕಪತ್ರವೊಂದಕ್ಕೆ ಸಹಿಹಾಕಿದ್ದರು. ಭಾರತ ಮತ್ತು ಕೊರಿಯಾ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಯಾಗಿಸುವಲ್ಲಿ ಇತಿಹಾಸಪ್ರಸಿದ್ಧ ರಾಜಕುಮಾರಿ ವಹಿಸಿದ ಗಮನಾರ್ಹ ಪಾತ್ರವನ್ನು, ಕಿಮ್ ಜುಂಗ್-ಸೂಕ್ ಅವರ ಅದ್ವಿತೀಯ ‘ಭಾರತ-ಭೇಟಿ’ಯು ಈಗ ಮತ್ತಷ್ಟು ಉಜ್ವಲಗೊಳಿಸಿದೆ ಎನ್ನಲಡ್ಡಿಯಿಲ್ಲ.

ನಾನು ದಕ್ಷಿಣ ಕೊರಿಯಾದಲ್ಲಿ ಭಾರತೀಯ ರಾಯಭಾರಿಯಾಗಿದ್ದಾಗ, ಅಯೋಧ್ಯೆಯ ಆ ರಾಜಕುಮಾರಿಯ ದಂತಕತೆಗೆ ದಕ್ಕಿದ್ದ ಜನಪ್ರಿಯತೆ ಹಾಗೂ ಕೊರಿಯನ್ನರು ಆಕೆಯನ್ನು ಪೂಜ್ಯಭಾವದಿಂದ ಪರಿಗ್ರಹಿಸುತ್ತಿದ್ದ ಪರಿಯನ್ನು ಕಂಡು ನನಗೆ ಹೃದಯ ತುಂಬಿಬರುತ್ತಿತ್ತು. ಇಷ್ಟಾಗಿಯೂ, ಅಯೋಧ್ಯೆಗೆ, ಆಕೆಯ ಭಾರತೀಯ ಹೆಸರಿಗೆ ಅಥವಾ ಆಕೆಯ ಜೀವನ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಹಿನ್ನೆಲೆಗಿರುವ ಅತೀವ ಮಹತ್ವದ ಕುರಿತಾಗಿ ಅಲ್ಲಿನವರಿಗೆ ಹೆಚ್ಚೇನೂ ತಿಳಿದಿರಲಿಲ್ಲ. ಹೀಗಾಗಿ, ಆಳ ಅಧ್ಯಯನಕ್ಕೆ ಮುಂದಾದ ನಾನು ಅಯೋಧ್ಯಾ ರಾಜಕುಮಾರಿಯ ಐತಿಹ್ಯ ಕುರಿತಾದ ‘ಖಜ್ಝಿk ಉಞಟ್ಟಛಿಠಠ’ ಎಂಬ ಹೆಸರಿನ ಕೊರಿಯಾ ಭಾಷೆಯಲ್ಲಿನ ಕಾದಂಬರಿಯನ್ನು 2007ರಲ್ಲಿ ಪ್ರಕಟಿಸಿದೆ. ಇದಾದ ಒಂದು ದಶಕದ ತರುವಾಯ, ಉಭಯ ರಾಷ್ಟ್ರಗಳ ನಡುವಿನ ವಿಶ್ವಾಸ ಮತ್ತು ನಿಕಟ ಬಾಂಧವ್ಯದ ಒಂದು ಸಂಕೇತವಾಗಿ ‘ರಾಜಕುಮಾರಿ ಸ್ರೀರತ್ನಾ’ (ಕೊರಿಯನ್ ಭಾಷೆಯಲ್ಲಿ ಸುರಿರತ್ನಾ) ಹೃದಯಪೂರ್ವಕವಾಗಿ ಸ್ವೀಕರಿಸಲ್ಪಟ್ಟಿದ್ದಾಳೆ.

ಕಿಮ್ ಜುಂಗ್-ಸೂಕ್ ಅವರ ಇತ್ತೀಚಿನ ಭಾರತಭೇಟಿಗೂ ಸ್ವಲ್ಪ ಮುಂಚೆ, ಕೊರಿಯಾದ ಪರಿಣತರೊಂದಿಗಿನ ‘ವ್ಯೂಹಾತ್ಮಕ ಕಾರ್ಯತಂತ್ರದ ಮಾತುಕತೆ’ಯೊಂದಕ್ಕೆ ಸಂಬಂಧಿಸಿದ ನಿಯೋಗವೊಂದರ ಸದಸ್ಯನಾಗಿ ನಾನು ಸಿಯೋಲ್​ನಲ್ಲಿದ್ದೆ. ಉತ್ತರ ಕೊರಿಯಾದೊಂದಿಗೆ ಶಾಂತಿಯನ್ನು ವರ್ಧಿಸುವ ಮತ್ತು ಪುನರೇಕೀಕರಣವನ್ನು ಕಾರ್ಯಸಾಧ್ಯವಾಗಿಸುವ ನಿಟ್ಟಿನಲ್ಲಿ ಅಧ್ಯಕ್ಷ ಮೂನ್ ಜೇ-ಇನ್ ಪ್ರತಿಪಾದಿಸಿದ ‘ಘಟ್ಟಛ’ ಕಾರ್ಯನೀತಿ, ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿದೆ ಹಾಗೂ ಕಳೆದ ಹಲವು ದಶಕಗಳ ಯಾವುದೇ ಕಾಲಘಟ್ಟದಲ್ಲಿ ಕಾಣಬರುತ್ತಿದ್ದುದಕ್ಕಿಂತ, ಕೊರಿಯಾ ಪರ್ಯಾಯದ್ವೀಪದಲ್ಲಿ ಶಾಂತಿಗಾಗಿ ಎದುರುನೋಡುವುದು/ನಿರೀಕ್ಷಿಸುವುದು ಈಗ ಆಶಾದಾಯಕವೆನಿಸಿದೆ. ಒಂದು ವರ್ಷದ ಹಿಂದಷ್ಟೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾದ ಪರಮೋಚ್ಚ ನಾಯಕ ಕಿಮ್ ಜಾಂಗ್-ಉನ್ ಅವರನ್ನು ‘ಪುಟ್ಟ ಕ್ಷಿಪಣಿ ಮಾನವ’ ಎಂದು ಕರೆದಿದ್ದರು ಮತ್ತು ಉತ್ತರ ಕೊರಿಯಾವನ್ನು ಧ್ವಂಸಮಾಡುವುದಾಗಿ ಬೆದರಿಸಿದ್ದರು ಎಂಬುದು ಓದುಗರಿಗೆ ನೆನಪಿರಬಹುದು. ಇದನ್ನು ಕೇಳಿಸಿಕೊಂಡು ಸುಮ್ಮನಿರದ ಕಿಮ್ ಜಾಂಗ್, ಸೇನಾಬಲದೊಂದಿಗೆ ಇದಕ್ಕೆ ಪ್ರತಿಕ್ರಿಯಿಸುವುದಾಗಿ ಬೆದರಿಕೆ ಹಾಕಿದ್ದೇ ಅಲ್ಲದೆ, ತಮ್ಮ ಸಂಗ್ರಹದಲ್ಲಿದ್ದ ಪರಮಾಣು ಶಸ್ತ್ರಾಸ್ತ್ರಗಳು ಹಾಗೂ ಖಂಡಾಂತರ ಕ್ಷಿಪಣಿಗಳನ್ನು ಪ್ರದರ್ಶಿಸಿಯೇಬಿಟ್ಟಿದ್ದರು.

ಆದರೀಗ, ಇಂಥ ದೃಶ್ಯದಲ್ಲಿ ಭಾರಿ ಬದಲಾವಣೆಯಾಗಿಬಿಟ್ಟಿದೆ. 2018ರ ಜನವರಿಯಲ್ಲಿ ಕಿಮ್ ಜಾಂಗ್-ಉನ್ ಮಾಡಿದ ಹೊಸವರ್ಷದ ಭಾಷಣವು, ದಕ್ಷಿಣ ಕೊರಿಯಾದಲ್ಲಿ ಫೆಬ್ರವರಿಯಲ್ಲಿ ನಡೆದ ಪ್ಯೋಂಗ್​ಚಾಂಗ್ ಚಳಿಗಾಲದ ಒಲಿಂಪಿಕ್ಸ್​ನಲ್ಲಿ ಉತ್ತರ-ದಕ್ಷಿಣ ಕೊರಿಯಾಗಳೆರಡೂ ಜಂಟಿಯಾಗಿ ಪಾಲ್ಗೊಳ್ಳುವಂತಾಗುವುದಕ್ಕೆ ಅನುವುಮಾಡಿಕೊಟ್ಟಿತು ಮತ್ತು ಉಭಯ ದೇಶಗಳೂ ಶಾಂತಿಯುತವಾಗಿ ಒಂದಾಗಲು ಸಾಧ್ಯವಿದೆ ಎಂಬ ಆಶಯವನ್ನು ಈ ಬೆಳವಣಿಗೆ ಮತ್ತೆ ಚಿಗುರಿಸಿತು. ಅಲ್ಲಿಂದೀಚೆಗೆ ಅಧ್ಯಕ್ಷ ಮೂನ್ ಜೇ-ಇನ್ ಅವರು ಅವಕಾಶವನ್ನು ಬಿಡದೆ ಬಳಸಿಕೊಂಡಿದ್ದು, ಅವರ ಮತ್ತು ಕಿಮ್ ಜಾಂಗ್-ಉನ್ ನಡುವೆ ಮೂರು ಶೃಂಗಸಭೆಗಳು ನಡೆಯುವುದೂ ಸಾಧ್ಯವಾಗಿದೆ. ಪ್ರಸಕ್ತ ವರ್ಷದ ಸೆಪ್ಟೆಂಬರ್​ನಲ್ಲಿ ಪ್ಯೋಂಗ್​ಯಾಂಗ್​ನಲ್ಲಿ ನಡೆದ ಸಭೆ ಈ ಪೈಕಿ ಇತ್ತೀಚಿನದು. ಎಲ್ಲಕ್ಕಿಂತ ಮುಖ್ಯವಾಗಿ, ಅಮೆರಿಕದ ಹಾಲಿ ಅಧ್ಯಕ್ಷ ಹಾಗೂ ಉತ್ತರ ಕೊರಿಯಾದ ಹಾಲಿ ಪರಮೋಚ್ಚ ನಾಯಕನ ನಡುವಿನ ಮೊಟ್ಟಮೊದಲ ಶೃಂಗಸಭೆಯನ್ನು ಅಧ್ಯಕ್ಷ ಮೂನ್ ಜೇ-ಇನ್ ಅವರು ಸುಸಂಘಟಿತವಾಗಿಸಿದರು ಎಂಬುದು ಗಮನಾರ್ಹ. ಟ್ರಂಪ್ ಮತ್ತು ಕಿಮ್ ಜಾಂಗ್-ಉನ್ ಅವರು ಪ್ರಸಕ್ತ ವರ್ಷದ ಜೂನ್ 12ರಂದು ಸಿಂಗಾಪುರದಲ್ಲಿ ಪರಸ್ಪರ ಭೇಟಿಯಾಗಿದ್ದು ಮಾತ್ರವಲ್ಲದೆ, ಉತ್ತರ ಕೊರಿಯಾಕ್ಕೆ ಸಂಬಂಧಿಸಿದ ಭದ್ರತಾ ಖಾತರಿ, ಹೊಸ ಶಾಂತಿಯುತ ಬಾಂಧವ್ಯಗಳನ್ನು ಕಾಯ್ದುಕೊಳ್ಳುವಿಕೆ ಮತ್ತು ಕೊರಿಯಾ ಪರ್ಯಾಯದ್ವೀಪವನ್ನು ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತವಾಗಿಸುವಿಕೆಗೆ ಸಮ್ಮತಿಸುವ ಜಂಟಿ ಹೇಳಿಕೆಯೊಂದಕ್ಕೂ ಸಹಿ ಹಾಕಿದರು. ಉತ್ತರ ಕೊರಿಯಾ ಜತೆಗಿನ ಅಮೆರಿಕದ ನಂಟು ಇನ್ನು ಮುಂದೆ ತೀರಾ ವಿಭಿನ್ನವಾಗಿ ಇರಲಿದೆಯೆಂದೂ ಹೇಳಿದರು.

ಕೇವಲ ಒಂದು ‘ಕದನವಿರಾಮ’ ಒಪ್ಪಂದಕ್ಕಷ್ಟೇ (ಇದು ಶಾಂತಿ ಒಡಂಬಡಿಕೆಯಲ್ಲ) ಸಹಿಹಾಕಲ್ಪಟ್ಟಿದ್ದರಿಂದಾಗಿ, ಉತ್ತರ ಕೊರಿಯಾ ಮತ್ತು ಅಮೆರಿಕ ದೇಶಗಳು ತಾಂತ್ರಿಕವಾಗಿ ಯುದ್ಧನಿರತ ಸ್ಥಿತಿಯಲ್ಲೇ ಉಳಿದಿದ್ದರೂ, ಉತ್ತರ ಕೊರಿಯಾ ಜತೆಗಿನ ಶಾಂತಿಯುತ ಸಹಬಾಳ್ವೆಯ ಆಶಾಕಿರಣವನ್ನು ದಕ್ಷಿಣ ಕೊರಿಯಾದ ಜನ ಈಗ ಎದುರುನೋಡುತ್ತಿದ್ದಾರೆ. ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಗಳಿಗೆ ಇತಿಶ್ರೀ ಹಾಡುವುದಾಗಿ ಈಗಾಗಲೇ ವಾಗ್ದಾನ ಮಾಡಿರುವ ನಾಯಕ ಕಿಮ್ ಜಾಂಗ್-ಉನ್, ಇದರನ್ವಯ ಪಂಗ್ಯೇ-ರಿ ಪರಮಾಣು ಶಸ್ತ್ರಾಸ್ತ್ರ ಪರೀಕ್ಷಾ ನೆಲೆಯನ್ನು ಕಳಚಿ ತೆರವುಗೊಳಿಸುವುದಕ್ಕೆ ಒಪ್ಪಿದ್ದಾರೆ. ಇಷ್ಟೆಲ್ಲ ಸಕಾರಾತ್ಮಕ ಬೆಳವಣಿಗೆಗಳು ಘಟಿಸಿದ್ದರೂ, ಕೆಲವೇ ದಿನಗಳಲ್ಲಿ ‘ಉಭಯ ಕೊರಿಯಾಗಳ’ ಮರುಮಿಲನವಾಗುವುದು ಅಸಂಭವವೇ ಎನ್ನಬೇಕು. ಇಂಥದೊಂದು ಪುನರೇಕೀಕರಣವು ದೂರದ ಗುರಿಯಾಗಿದೆ. ಮುಂದೆ ವಿವರಿಸಲಾಗಿರುವ ಚಿತ್ರಣ ಕೈಗೂಡಿದಲ್ಲಿ ಮಾತ್ರವೇ ಪುನರೇಕೀಕರಣವನ್ನು ಪರಿಗಣಿಸಬಹುದು.

# ದಕ್ಷಿಣ ಕೊರಿಯಾದ ಪ್ರಸಕ್ತ ರಾಜಕೀಯ ವ್ಯವಸ್ಥೆಯ ಅನುಸಾರ, ಒಂದು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಏಕೀಕೃತ ಕೊರಿಯಾ ಹೊರಹೊಮ್ಮುವುದು ಸಾಧ್ಯವಿಲ್ಲ- ಏಕೆಂದರೆ, ತಮ್ಮದೇ ರಾಜವಂಶೀಯ ಪ್ರಭುತ್ವವು ಕಣ್ಮರೆಯಾಗುವಂತಾಗುವುದಕ್ಕೆ ಅಧ್ಯಕ್ಷ ಕಿಮ್ ಸಮ್ಮತಿಸಲಾರರು.

# ಉತ್ತರ ಕೊರಿಯಾದಲ್ಲಿ ಪ್ರಸ್ತುತ ಇರುವ ಪ್ರಭುತ್ವದ ಅಡಿಯಲ್ಲಿ ಏಕೀಕೃತ ಕೊರಿಯಾ ಹೊರಹೊಮ್ಮುವುದು ಸಾಧ್ಯವಿಲ್ಲ- ಏಕೆಂದರೆ, ತಾನು ಕಷ್ಟಪಟ್ಟು ಹೋರಾಡಿ ದಕ್ಕಿಸಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೈಬಿಡಲು ದಕ್ಷಿಣ ಕೊರಿಯಾ ಸಿದ್ಧವಿಲ್ಲ.

# ಇನ್ನು, ಚೀನಾ ಮತ್ತು ಹಾಂಕಾಂಗ್​ಗಳಲ್ಲಿ ಕಂಡುಬರುವ ಎರಡು ವಿಶಿಷ್ಟ ರಾಜಕೀಯ ವ್ಯವಸ್ಥೆಗಳ ರೀತಿಯಲ್ಲಿ ‘ಒಂದು ದೇಶ, ಎರಡು ಪದ್ಧತಿಗಳು’ ಎಂಬ ಪರಿಕಲ್ಪನೆಯ ಕುರಿತೂ ಆಲೋಚಿಸೋಣ- ಜನರು, ಮಾಹಿತಿ ಮತ್ತು ಬಂಡವಾಳ ವಿನಿಮಯಕ್ಕೆ ಅನುಮತಿಸಲೆಂದು ಆಂತರಿಕ ಹತೋಟಿಗಳಲ್ಲಿ ಒಂದೊಮ್ಮೆ ಯಾವುದೇ ತೆರನಾದ ವಿನಾಯಿತಿ ನೀಡಿದಲ್ಲಿ, ಆರ್ಥಿಕತೆ, ಸ್ವಾತಂತ್ರ್ಯ ಇತ್ಯಾದಿ ವಿಷಯಗಳಲ್ಲಿ ಸೋದರ-ದೇಶದ ‘ಸಹ-ನಾಗರಿಕರಿಗೆ’ ಸರಿಸಾಟಿಯಾದ ವ್ಯವಸ್ಥೆ/ಮಾನ್ಯತೆಯನ್ನೇ ತಮ್ಮ ದೇಶದ ಜನರೂ ಬಯಸುವುದರಿಂದಾಗಿ, ಇಂಥ ಬೆಳವಣಿಗೆ ಪ್ರಭುತ್ವದ ಪಾಲಿಗೆ ‘ಸಾವಿನಗಂಟೆ’ಯಾಗಿ ಪರಿಣಮಿಸುವುದು ನಿಕ್ಕಿ ಎಂಬುದನ್ನು ಗ್ರಹಿಸುವಷ್ಟು ಚಾಲಾಕಿಯಾಗಿದ್ದಾರೆ ಅಧ್ಯಕ್ಷ ಕಿಮ್ ಹೀಗಾಗಿ ಇಂಥ ಪರಿಕಲ್ಪನೆಯ ಈಡೇರಿಕೆ ಅಂದುಕೊಂಡಷ್ಟು ಸುಲಭವಲ್ಲ.

# ಉಭಯ ಕೊರಿಯಾಗಳ ನಡುವಿನ ಅಲೋಚನೆಗಳಿಗೆ ಸಂಬಂಧಿಸಿದ ಮತ್ತು ಆರ್ಥಿಕ ವ್ಯತ್ಯಾಸಗಳು ಅದೆಷ್ಟು ಅಗಾಧವಾಗಿದೆಯೆಂದರೆ, ಕೊರಿಯಾ ದೇಶಗಳ ಪುನರೇಕೀಕರಣದ ಯೋಜನೆ ಹಂತಹಂತವಾಗಿ ಸಾಕಾರಗೊಳ್ಳಬೇಕಿರುವ ಪ್ರಕ್ರಿಯೆಯಾಗಿದ್ದು, ಇದಕ್ಕೆ ದಶಕಗಳೇ ಹಿಡಿದರೂ ಅಚ್ಚರಿಯಿಲ್ಲ. ಪ್ರಸ್ತುತ ದಕ್ಷಿಣ ಕೊರಿಯಾದಲ್ಲಿ ನೆಲೆಗೊಂಡಿರುವ ಉತ್ತರ ಕೊರಿಯಾದ ದೇಶಭ್ರಷ್ಟ ಪ್ರಜೆಗಳ ಸಂಖ್ಯೆಯೇ 30,000ಕ್ಕೂ ಹೆಚ್ಚಿದ್ದು, ಆರ್ಥಿಕ ಅವಕಾಶಗಳು ಹಾಗೂ ಸ್ವಾತಂತ್ರ್ಯ ನೀಡಿರುವುದರ ಹೊರತಾಗಿಯೂ ಇವರು ಜೀವನಶೈಲಿಗಳನ್ನು ಮಾರ್ಪಡಿಸಿಕೊಂಡು ಸಂತೋಷವಾಗಿರಲು ಹೆಣಗಾಡುತ್ತಿದ್ದಾರೆ. ದಿಗ್ಬಂಧನ ಅಥವಾ ನಿರ್ಬಂಧಗಳ ಕೊನೆಗಾಣಿಸುವಿಕೆ, ಆರ್ಥಿಕ ಬೆಂಬಲ ಹಾಗೂ ಕೇಸಾಂಗ್ ಮಾದರಿಯ ಹೆಚ್ಚೆಚ್ಚು ಕೈಗಾರಿಕಾ ಸಮುಚ್ಚಯಗಳು ಸೇರಿದಂತೆ ಹೂಡಿಕೆಗಳು- ಇವೇ ಮೊದಲಾದ ಉಪಕ್ರಮಗಳನ್ನು ಹಂತಹಂತವಾಗಿ ಕೈಗೊಳ್ಳುವ ಮೂಲಕ, ಪುನರೇಕೀಕರಣದ ಯಾವುದೇ ಯತ್ನಕ್ಕೂ ಮುನ್ನ ಉತ್ತರ ಕೊರಿಯನ್ನರ ಜೀವನಮಟ್ಟಗಳನ್ನು ಒಂದು ಕಾರ್ಯಸಾಧ್ಯ ಹಂತಕ್ಕೆ ತರಬೇಕಾದ ಅಗತ್ಯವಿದೆ.

ಖಂಡಾಂತರ ಕ್ಷಿಪಣಿಗಳಿಗೆ ಅಳವಡಿಸಿ ಅಮೆರಿಕದ ಭೂಪ್ರದೇಶವನ್ನು ಗುರಿಯಾಗಿಸಿ ದಾಳಿಮಾಡಬಲ್ಲಂಥ ಪುಟ್ಟಗಾತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ರೂಪಿಸಬೇಕೆಂಬ ಗುರಿಯನ್ನು ನಾಯಕ ಕಿಮ್ ಜಾಂಗ್-ಉನ್ ಸಾಧಿಸಿದ್ದಾರೆ. ಉತ್ತರ ಕೊರಿಯಾದಲ್ಲಿ ಪರಮಾಣು ಶಸ್ತ್ರಾಸ್ತ್ರಗಳಿವೆ ಎಂಬ ಒಂದೇ ಕಾರಣಕ್ಕೆ, ವಿಶ್ವದ ಅತ್ಯಂತ ಬಲಾಢ್ಯ ಎಂಬ ಹೆಗ್ಗಳಿಕೆಯ ರಾಷ್ಟ್ರದ ನಾಯಕನೂ ತಮ್ಮ ನಾಯಕನನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾನೆ ಎಂಬುದು ಉತ್ತರ ಕೊರಿಯನ್ನರ ಮನದಲ್ಲಿ ದಟ್ಟವಾಗಿರುವ ಗ್ರಹಿಕೆ. ಉತ್ತರ ಕೊರಿಯಾ ಈಗ ಒಂದು ಪರಮಾಣು-ಶಸ್ತ್ರಾಸ್ತ್ರ ಶಕ್ತಿಯಾಗಿದ್ದು, ಅದರ ನಾಯಕ ಕಿಮ್ ಜಾಂಗ್-ಉನ್ ಅವರು ಅಂದುಕೊಂಡಷ್ಟು ಬೇಗನೆ ತಮ್ಮಲ್ಲಿರುವ ಪರಮಾಣು ಶಸ್ತ್ರಾಸ್ತ್ರ ಸಾಮರ್ಥ್ಯಗಳಿಗೆ ತಿಲಾಂಜಲಿ ನೀಡುವುದಿಲ್ಲ ಎಂಬುದನ್ನು ಅಮೆರಿಕ ಅರ್ಥಮಾಡಿಕೊಳ್ಳಬೇಕಾಗಿದೆ. ಕೊರಿಯಾ ಪರ್ಯಾಯದ್ವೀಪ ಪ್ರದೇಶವನ್ನು ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತವಾಗಿಸುವಿಕೆ ಒಂದು ಸುದೀರ್ಘ ಗುರಿಯಾಗಿದ್ದು, ಕಿಮ್ ಜಾಂಗ್-ಉನ್​ರನ್ನು ನಿರ್ಬಂಧಿಸುವ ಮೂಲಕ ಇದನ್ನು ನೆರವೇರಿಸುವುದು ದುಸ್ಸಾಧ್ಯವೇ ಸರಿ. ಮುಂಬರುವ ಕೆಲ ವಾರಗಳಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್ ನಡುವೆ ಮತ್ತೊಂದು ಶೃಂಗಸಭೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಉತ್ತರ ಕೊರಿಯಾ ಮೇಲಿನ ನಿರ್ಬಂಧಗಳನ್ನು ಕ್ರಮೇಣ ಸಡಿಲಿಸುವುದಕ್ಕೆ ಹಾಗೂ ಜಾಗತಿಕ ಆರ್ಥಿಕತೆಯೊಳಗೆ ಸಂಯೋಜಿಸಲ್ಪಡುವಂತಾಗಲು ಉತ್ತರ ಕೊರಿಯಾದ ಆರ್ಥಿಕತೆಗೆ ಅನುವು ಮಾಡಿಕೊಡುವುದಕ್ಕೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಪರಮಾಣು ಶಸ್ತ್ರಾಸ್ತ್ರ ಮತ್ತು ಕ್ಷಿಪಣಿ ಸಾಮರ್ಥ್ಯಗಳನ್ನು ಹೊಂದಿರುವ ಉತ್ತರ ಕೊರಿಯಾವನ್ನು ಚೀನಾ-ಸಾಂಗತ್ಯದಿಂದ ಬಿಡಿಸಿ ಅಮೆರಿಕದ ಮಿತ್ರರಾಷ್ಟ್ರವಾಗಿ ಅದನ್ನು ಪರಿವರ್ತಿಸುವುದಕ್ಕೆ ಒಂದು ವೇಳೆ ಡೊನಾಲ್ಡ್ ಟ್ರಂಪ್ ಒಪ್ಪಿದ್ದೇ ಆದಲ್ಲಿ, ಅದು ಪ್ರಾಯಶಃ ಅಮೆರಿಕದ ಅಷ್ಟೇಕೆ ಇಡೀ ವಿಶ್ವದ ಹಿತಾಸಕ್ತಿಗಳಿಗೆ ಪೂರಕವಾಗಬಲ್ಲದು. ಹಾಗಾದಲ್ಲಿ, ಸದ್ಯದಲ್ಲೇ ಶಾಂತಿ ಒಪ್ಪಂದವೊಂದಕ್ಕೆ ಸಹಿಬೀಳಬಹುದೇ? ಕಾದು ನಿರೀಕ್ಷಿಸುವುದಷ್ಟೇ ನಮ್ಮ ಕೆಲಸ!

(ಲೇಖಕರು ಮಾಜಿ ರಾಯಭಾರಿ, ಜಾಗತಿಕ ವಿದ್ಯಮಾನಗಳ ವಿಶ್ಲೇಷಕರು)