ಪ್ರಗತಿಯ ಹಾದಿಯಲಿ ಜತೆಜತೆಯಲಿ…!

ನೇಪಾಳ ಪ್ರಧಾನಮಂತ್ರಿ ಖಡ್ಗ ಪ್ರಸಾದ್ ಶರ್ಮ ಓಲಿ ಅವರು ಕಳೆದ ತಿಂಗಳು ಭಾರತಕ್ಕೆ 3 ದಿನದ ಅಧಿಕೃತ ಭೇಟಿ ನೀಡಿದ್ದು ಭಾರತದ ರಾಜತಾಂತ್ರಿಕ ನಡೆಗಳಿಗೆ ಸಿಕ್ಕಿದ ಯಶಸ್ಸು ಎನ್ನಲೇಬೇಕು. ನೇಪಾಳದೊಂದಿಗಿನ ಭಾರತದ ಸಂಬಂಧಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಮೂಡಿದ ಕಹಿಛಾಯೆ ತೆಳುವಾಗಿಸಿ ದ್ವಿಪಕ್ಷೀಯ ಐತಿಹಾಸಿಕ ಬಾಂಧವ್ಯಗಳನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಭೇಟಿ ಯಶಕಂಡಿದೆ ಎನ್ನಲಡ್ಡಿಯಿಲ್ಲ.

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ಹಾಗೂ ನಿಯೋಗಿ ಮಟ್ಟದಲ್ಲಿ ವಿವರವಾದ ಚರ್ಚೆಗಳನ್ನು ನಡೆಸಿದ ನಂತರ, ತಮ್ಮ ಭಾರತ-ಭೇಟಿ ‘ಮಹತ್ವದ್ದೂ ಫಲದಾಯಕವೂ’ ಆಗಿದ್ದು, ಉಭಯ ದೇಶಗಳ ನಡುವೆ ಹರಳುಗಟ್ಟಿದ್ದ ತಪು್ಪಗ್ರಹಿಕೆ ಹಾಗೂ ಅಪನಂಬಿಕೆಗಳನ್ನು ನಿವಾರಿಸುವಲ್ಲಿ ಇದು ನೆರವಾಗಿದೆ ಎಂದು ಕೆ.ಪಿ. ಓಲಿ ಅಂತಿಮವಾಗಿ ಘೋಷಿಸಿದರು.

ನೇಪಾಳದ ಪ್ರತಿಯೊಬ್ಬ ಪ್ರಧಾನಿಯೂ ಭಾರತಕ್ಕೆ ‘ಮೊದಲಭೇಟಿ’ ನೀಡುವಂಥ ಸಂಪ್ರದಾಯದ ಮುಂದುವರಿಕೆ ಎಂಬಂತೆ ಈ ವರ್ಷದ ಫೆಬ್ರವರಿಯಲ್ಲಿನ ಚುನಾವಣಾ ವಿಜಯದ ನಂತರ ಓಲಿ ಕೂಡ ಭಾರತ-ಭೇಟಿಗೇ ಆದ್ಯತೆ ನೀಡಿದ್ದಾರೆ. ಸದರಿ ಭೇಟಿಯ ಸಂದರ್ಭದಲ್ಲಿ, ಬಿಹಾರದ ರಕ್ಸೋಲ್​ನಿಂದ ನೇಪಾಳದ ಕಾಠ್ಮಂಡುವಿಗೆ ಸಂರ್ಪಸುವ ರೈಲ್ವೆ ಯೋಜನೆ, ನೇಪಾಳದಲ್ಲಿನ ಒಳನಾಡು ಜಲಮಾರ್ಗಗಳ ಸಂಪರ್ಕಶೀಲತೆ ಹಾಗೂ ಕೃಷಿ ಅಭಿವೃದ್ಧಿಯಂಥ ಮೂರು ಪ್ರಮುಖ ಒಡಂಬಡಿಕೆಗಳಿಗೆ ಸಹಿಬಿದ್ದಿದೆ.

ನೇಪಾಳದೊಂದಿಗಿನ ಇಂಥದೊಂದು ಮರುಮೈತ್ರಿ ಸರಳವಾಗಿ ಕಾಣುತ್ತದೆಯಾದರೂ, ಹಲವು ತಿಂಗಳ ಪ್ರಚಂಡ ರಾಜತಂತ್ರದ ಫಲಶ್ರುತಿಯಿದು ಎನ್ನಬೇಕು. ಆದರೆ, ಸಾಂಪ್ರದಾಯಿಕ ಬಾಂಧವ್ಯವನ್ನು ಮತ್ತೆ ಹಳಿಗೆ ತರಲು ಹಾಗೂ ಬೆಳೆಯುತ್ತಲೇ ಇರುವ ಚೀನಾ ಪ್ರಭಾವದ ತೆಕ್ಕೆಯಿಂದ ನೇಪಾಳವನ್ನು ಹೊರಸೆಳೆಯಲು ಸಾಧ್ಯವಿರುವ ಎಲ್ಲ ಯತ್ನವನ್ನೂ ಮಾಡುವುದು ಭಾರತದ ಪಾಲಿಗೆ ಅತ್ಯವಶ್ಯವಾಗಿತ್ತು ಎಂಬುದೂ ದಿಟವೇ.

ಭಾರತಕ್ಕಂಟಿಕೊಂಡಿರುವ ಎಲ್ಲ ನೆರೆರಾಷ್ಟ್ರಗಳೊಂದಿಗಿನ ಸಂಬಂಧಗಳು ಭಾರತದ ಪಾಲಿಗೆ ಮಹತ್ವದ್ದೇ ಆದರೂ, ನೇಪಾಳದೊಂದಿಗಿನ ಸಂಬಂಧ ವಿಶೇಷವಾದುದೇ ಎನ್ನಬೇಕು. ಕಾರಣ, ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ ಮತ್ತು ಉತ್ತರಾಖಂಡದಂಥ ಭಾರತದ ಐದು ರಾಜ್ಯಗಳೊಂದಿಗೆ ನೇಪಾಳ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಅಷ್ಟೇ ಅಲ್ಲ, ಚೀನಾದ ಸ್ವಯಮಾಧಿಕಾರದ ಪ್ರಾಂತ್ಯವಾದ ಟಿಬೆಟ್ ಜತೆಗೂ ಅದು ತನ್ನ ಸೀಮೆಯನ್ನು ಹಂಚಿಕೊಂಡಿದೆ. 1950ರಲ್ಲಿ ರೂಪುಗೊಂಡ ‘ಭಾರತ-ನೇಪಾಳ ಶಾಂತಿ ಮತ್ತು ಮಿತ್ರತ್ವದ ಒಡಂಬಡಿಕೆ’ಯು ಇಂಥ ವಿಶೇಷ ಸಂಬಂಧಗಳಿಗೆ ಮೂಲಾಧಾರವಾಯಿತೆನ್ನಬೇಕು. ಭಾರತ ಮತ್ತು ನೇಪಾಳ ಮುಕ್ತಗಡಿಗಳನ್ನು ಹೊಂದಿದ್ದು, ತಾವು ಭಾರತದ ಪ್ರಜೆಗಳೇನೋ ಎಂಬ ರೀತಿಯಲ್ಲಿ ನೇಪಾಳಿ ನಾಗರಿಕರು ಸೌಲಭ್ಯಗಳು ಮತ್ತು ಅವಕಾಶಗಳನ್ನು ಹೊಂದಲು ಸಾಧ್ಯವಿದೆ. ಏನಿಲ್ಲವೆಂದರೂ 60 ಲಕ್ಷ ನೇಪಾಳಿ ನಾಗರಿಕರು, ಸರ್ಕಾರಿ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವುದೂ ಸೇರಿದಂತೆ ಭಾರತದಲ್ಲಿ ನೆಲೆಸಿದ್ದಾರೆ, ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೇಕೆ, ಅವರು ಭಾರತೀಯ ಸೇನೆಯ ಒಂದು ಭಾಗವೂ ಆಗಿದ್ದಾರೆ. ಭಾರತೀಯ ಕಂಪನಿಗಳು ನೇಪಾಳದಲ್ಲಿನ ಅತಿದೊಡ್ಡ ಹೂಡಿಕೆದಾರರಾಗಿದ್ದರೆ, ಭಾರತವು ನೇಪಾಳದ ಅತಿದೊಡ್ಡ ವ್ಯಾಪಾರ ಸಹಭಾಗಿಯಾಗಿದೆ. ಪರರಾಷ್ಟ್ರಗಳಿಂದ ಸುತ್ತುವರಿಯಲ್ಪಟ್ಟ ದೇಶವಾಗಿರುವ ನೇಪಾಳ, ತನ್ನ ವ್ಯಾಪಾರ ಹಾಗೂ ಅಭಿವೃದ್ಧಿಗಾಗಿ ಭಾರತವನ್ನೇ ಸಾಂಪ್ರದಾಯಿಕವಾಗಿ ಅವಲಂಬಿಸಿದೆ.

‘ನೇಪಾಳದ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ದೊಡ್ಡಣ್ಣನಂತೆ ವರ್ತಿಸುತ್ತಿದ್ದು, ತನ್ನ ಭದ್ರತಾ ಹಿತಾಸಕ್ತಿಗಳು ಮತ್ತು ಪ್ರಭಾವವನ್ನು ಖಾತ್ರಿಪಡಿಸಿಕೊಳ್ಳಲೆಂದೇ ನೇಪಾಳವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಮಾತ್ರವಲ್ಲದೆ ಅಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮ ರೀತಿಯಲ್ಲಿ ನಿರ್ವಹಿಸಲು ಯತ್ನಿಸುತ್ತಿದೆ’ ಎಂಬ ಕೆಲ ದೇಶಗಳ ಗ್ರಹಿಕೆಗೆ ಕಾರಣ ಇಂಥ ವಿಶೇಷ ಸಂಬಂಧವೇ. ಭಾರತದ ಇಂಥ ‘ಅಧಿನಾಯಕತ್ವ’ದ ವರ್ತನೆಗೆ ದಶಕಗಳಿಂದಲೂ ಮುನಿಸಿಕೊಂಡಿರುವ ನೇಪಾಳ, ಭಾರತದಿಂದ ರಿಯಾಯಿತಿಗಳನ್ನು ಬಲವಂತವಾಗಿ ಸೆಳೆಯಲೆಂದೇ ಚೀನಾ ಹೆಸರನ್ನು ‘ಗುರಾಣಿಯಂತೆ’ ಬಳಸಿಕೊಂಡೇ ಬಂದಿದೆ. ಹಾಗೆ ನೋಡಿದರೆ, 1956ರಷ್ಟು ಹಿಂದೆಯೇ ನೇಪಾಳದ ಅಂದಿನ ಪ್ರಧಾನಿ ಟಿ.ಪಿ. ಆಚಾರ್ಯ ಚೀನಾಕ್ಕೆ ಭೇಟಿಯಿತ್ತು ‘ಚೀನಾ-ನೇಪಾಳ ಸಾರ್ವತ್ರಿಕ ಮಿತ್ರತ್ವದ ಒಡಂಬಡಿಕೆ’ಗೆ ಸಹಿಹಾಕಿದರು; ಇದು ಟಿಬೆಟ್ ಮೇಲಿನ ಚೀನಾ ಸಾರ್ವಭೌಮತೆಯನ್ನು ಮಾನ್ಯಮಾಡುವ ಮತ್ತು ಭಾರತಕ್ಕೆ ಮಾಹಿತಿಯನ್ನೂ ನೀಡದೆ ಮಾಡಿಕೊಂಡ ಒಪ್ಪಂದವಾಗಿತ್ತು. ಅಲ್ಲಿಂದೀಚೆಗೆ ಸಾರ್ವಭೌಮತೆಯನ್ನು ಸಮರ್ಥಿಸಿಕೊಳ್ಳಲು ಹಾಗೂ ತನ್ನ ಆಂತರಿಕ ವ್ಯವಹಾರಗಳಲ್ಲಿನ ಭಾರತದ ಹಸ್ತಕ್ಷೇಪವನ್ನು ವಿರೋಧಿಸಲು ಚೀನಾದೊಂದಿಗಿನ ಇಂಥ ನಂಟನ್ನು ನೇಪಾಳ ‘ಸನ್ನೆ’ಯಂತೆ ಬಳಸಿಕೊಂಡೇ ಬಂದಿದೆ.

ನರೇಂದ್ರ ಮೋದಿ ಅವರು 2014ರಲ್ಲಿ ಭಾರತದ ಪ್ರಧಾನಮಂತ್ರಿಯಾದಾಗ, ಅಚ್ಚರಿಯ ನಡೆಯೆಂಬಂತೆ, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನೇಪಾಳ ಸೇರಿದಂತೆ ಎಲ್ಲ ಸಾರ್ಕ್ ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರನ್ನೂ ಆಹ್ವಾನಿಸಿದರು. ಅಷ್ಟೇ ಅಲ್ಲ, ಮೋದಿಯವರ ಈ ಉಪಕ್ರಮವು ತರುವಾಯದಲ್ಲಿ, ಅತಿಸಮೀಪದ ನೆರೆರಾಷ್ಟ್ರಗಳೊಂದಿಗಿನ ಬಾಂಧವ್ಯಕ್ಕೆ ಅಗ್ರತಾಂಬೂಲ ನೀಡುವಂಥ ‘ನೆರೆಹೊರೆ ರಾಷ್ಟ್ರಗಳು ಮೊದಲು’ ಎಂಬ ಭಾರತದ ಕಾರ್ಯನೀತಿಯಾಗಿಬಿಟ್ಟಿತು. ಅಧಿಕಾರ ಸ್ವೀಕರಿಸುತ್ತಿದ್ದಂತೆ ಪ್ರಧಾನಿ ಮೋದಿ, ತಮ್ಮ ಭೇಟಿಯ ಮೊದಲ ಕೆಲವೇ ರಾಷ್ಟ್ರಗಳ ಪಟ್ಟಿಯಲ್ಲಿ ನೇಪಾಳಕ್ಕೂ ಸ್ಥಾನ ನೀಡಿ, 2014ರ ಆಗಸ್ಟ್ 3-4ರಂದು ಕಾಠ್ಮಂಡುವಿಗೆ ಭೇಟಿಯಿತ್ತರು. ನೇಪಾಳಕ್ಕೆ ಒಂದು ಶತಕೋಟಿ ಡಾಲರ್ ಮೊತ್ತದ ನೆರವು ಪ್ರಕಟಿಸಿದ ಮೋದಿ, ‘ಗಡಿಗಳೆಂಬುದು ಸೇತುವೆಗಳಾಗಬೇಕೇ ವಿನಾ, ತಡೆಗೋಡೆಗಳಾಗಬಾರದು’ ಎಂದು ಘೋಷಿಸಿ ನೇಪಾಳದ ಆಂತರಿಕ ವ್ಯವಹಾರಗಳಲ್ಲಿ ಭಾರತ ಮೂಗು ತೂರಿಸುವುದಿಲ್ಲ ಎಂಬುದಾಗಿ ವಾಗ್ದಾನ ಮಾಡಿದರು. ಇದು ನೇಪಾಳಿಗರಲ್ಲಿ ಹಿಂದೆಂದೂ ಕಾಣದ ಸೌಹಾರ್ದ ಭಾವನೆಯನ್ನು ಹುಟ್ಟುಹಾಕಿತೆನ್ನಬೇಕು. 2014ರಲ್ಲಿ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲೆಂದು ಮೋದಿ ಮತ್ತೊಮ್ಮೆ ನೇಪಾಳಕ್ಕೆ ಭೇಟಿಯಿತ್ತಾಗ, ಬಾಂಧವ್ಯಗಳಿಗೆ ಏರುಗತಿ ದಕ್ಕಿದಂತೆ ತೋರಿತು. 2015ರಲ್ಲಿ ನೇಪಾಳದಲ್ಲಿ ವಿನಾಶಕಾರಿ ಭೂಕಂಪ ಸಂಭವಿಸಿದ ನಂತರ ಅಗಾಧ ಪ್ರಮಾಣದಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದ್ದು ಮತ್ತು ಭಾರಿ ಹಣಕಾಸು ನೆರವು ನೀಡಿದ್ದು ಭಾರತವೇ. ಆದರೆ, ಈ ಸಂಬಂಧವಾಗಿ ಸುದ್ದಿಬಿತ್ತರಿಸಿದ ಪರಿಯಲ್ಲಿ ಸೂಕ್ಷ್ಮತೆ ಇರಲಿಲ್ಲ ಮತ್ತು ಇದು ನೇಪಾಳಕ್ಕೆ ‘ಅನುಗ್ರಹ ತೋರುವ’ ರೀತಿಯಲ್ಲಿತ್ತು ಎಂದು ನೇಪಾಳಿಗಳು ಭಾರತೀಯ ಮಾಧ್ಯಮಗಳನ್ನು ದೂರಿದರು.

2015ರಲ್ಲಿ ನೇಪಾಳ ಹೊಸ ಸಂವಿಧಾನವನ್ನು ಘೋಷಿಸಿದಾಗ, ಭಾರತ-ನೇಪಾಳ ಸಂಬಂಧ ಹಳಸಿತೆನ್ನಬೇಕು. ತೆರಾಯ್ ಪ್ರಾಂತದಲ್ಲಿನ ಮಧೇಶಿ ಜನರ ಕಳವಳಗಳನ್ನು ಪರಿಹರಿಸುವೆಡೆಗೆ ನೇಪಾಳ ಗಮನ ಹರಿಸಲಿಲ್ಲ ಎಂದು ಭಾರತ ಬಲವಾಗಿ ಆಕ್ಷೇಪಿಸಿತು. ಇದಕ್ಕೆ ತಕ್ಕಂತೆ, ಕಾಠ್ಮಂಡುವಿಗೆ ಸಾಗುವ ಸರಕು ಸರಬರಾಜಿಗೆ ಮಧೇಶಿಗಳು ತಡೆಯೊಡ್ಡಿ ನಿಲ್ಲಿಸಿದ್ದರಿಂದ ನೇಪಾಳಿಗಳಿಗೆ ಭಾರಿ ತೊಂದರೆಯೇ ಆಯಿತು. ಸಂವಿಧಾನದ ಪ್ರಬಲ ಬೆಂಬಲಿಗ/ಸಮರ್ಥಕರಾಗಿದ್ದ ಓಲಿ, ಭಾರತವನ್ನು ವಿರೋಧಿಸಿದ್ದೇ ಅಲ್ಲದೆ, ನೇಪಾಳದ ಕತ್ತುಹಿಸುಕಿ ದಮನಿಸಲೆಂದೇ ಭಾರತ ಇಂಥದೊಂದು ತಡೆಗೆ ಕುಮ್ಮಕ್ಕು ನೀಡಿದೆ ಎಂದು ಬೊಟ್ಟುಮಾಡಿದರು. ಉಗ್ರ ರಾಷ್ಟ್ರೀಯತೆಯ ಭಾವನೆಗಳಿಗೆ ಅವರು ನೀಡಿದ ಪ್ರಚೋದನೆಯಿಂದಾಗಿ ಭಾರತದೆಡೆಗೆ ಹಗೆತನ ಹುಟ್ಟಿಕೊಳ್ಳುವಂತಾಯಿತು. ಪರ್ಯಾಯ ಇಂಧನ ಪೂರೈಕೆಯ ಭರವಸೆ ನೀಡುವ ಮೂಲಕ ಚೀನಾ ಕೂಡ ಓಲಿ ಅವರನ್ನು ಬೆಂಬಲಿಸಿತು. ಓಲಿ ಚುನಾಯಿತರಾಗಿ ಪ್ರಧಾನಿಯೂ ಆದರು. ಆಗ, ನೇಪಾಳಿ ಕಾಂಗ್ರೆಸ್ಸು, ಮಾವೋವಾದಿಗಳು ಮತ್ತು ಮಧೇಶಿಗಳ ಮೈತ್ರಿಕೂಟವೊಂದನ್ನು ರೂಪಿಸಲು ಭಾರತ ಯತ್ನಿಸಿತು; ತನ್ಮೂಲಕ ಪ್ರಧಾನಿ ಓಲಿ ಪದಚ್ಯುತಿಗೆ ಯತ್ನಿಸುತ್ತಿರುವ ಆರೋಪವನ್ನೂ ಭಾರತ ಎದುರಿಸಬೇಕಾಗಿ ಬಂತು. ಓಲಿ ಮಾವೋವಾದಿಗಳೊಂದಿಗೆ ಕೈಜೋಡಿಸಿದರು ಹಾಗೂ ಉಗ್ರ ರಾಷ್ಟ್ರೀಯತೆಯ ಭಾವನೆಗಳನ್ನು ಬಳಸಿಕೊಂಡು ಮತ್ತು ನೇಪಾಳದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ರೂಪಿಸುವುದಕ್ಕೆ ಅಗಾಧ ಬೆಂಬಲ ನೀಡುವೆ ಎಂಬ ಚೀನಾದ ಭರವಸೆಯ ಬಲದೊಂದಿಗೆ, 2017ರ ಅಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಗೆದ್ದರು.

ಹೀಗೆ, ಭಾರತವೆಂದರೆ ಉರಿದುರಿದು ಬೀಳುವವರು, ಚೀನಾದೆಡೆಗೆ ಒಲವು ಹೊಂದಿರುವವರು ಎಂದು ಪರಿಗಣಿಸಲ್ಪಟ್ಟಿದ್ದ ಓಲಿಯವರನ್ನು, ‘ಭೇಟಿಯ ಮೊದಲ ದೇಶವಾಗಿ’ ಭಾರತವನ್ನು ಪರಿಗಣಿಸುವಂತೆ ಹಾಗೂ ಹಿಂದಿನ ಕಹಿಅಧ್ಯಾಯಗಳನ್ನು ಮರೆತು, ಹೊಸತೊಂದು ಅಧ್ಯಾಯ ಕಟ್ಟಲು ಸಮ್ಮತಿಸುವಂತೆ ಮನವೊಲಿಸಿದ್ದಿದೆಯಲ್ಲಾ, ಅದೇ ಭಾರತದ ಪಾಲಿನ ಮಹಾನ್ ರಾಜತಾಂತ್ರಿಕ ಸಾಧನೆ. ಆದರೆ, ಚೀನಾದ ‘ಒನ್ ಬೆಲ್ಟ್ ಒನ್ ರೋಡ್’ (ಒಬಿಒಆರ್) ಯೋಜನೆಯ ಒಂದು ಭಾಗವಾಗುವುದಕ್ಕೆ ನೇಪಾಳ ಈಗಾಗಲೇ ಸಮ್ಮತಿಸಿದೆ ಎಂಬುದನ್ನು, ಕಾಠ್ಮಂಡು ಮತ್ತು ಟಿಬೆಟ್​ನ ಲ್ಹಾಸಾವನ್ನು ಸಂರ್ಪಸುವ ರೈಲುಮಾರ್ಗವನ್ನು ಸುಮಾರು 8 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ವಿುಸಲು ಚೀನಾ ಯೋಜಿಸುತ್ತಿದೆ ಎಂಬುದನ್ನು ಭಾರತ ಮರೆಯಬಾರದು. ಕೋಟಿಗಟ್ಟಲೆ ಡಾಲರ್ ಮೊತ್ತದ ಅನುದಾನದ ಕೊಡುಗೆಗಳು ಹಾಗೂ ರಿಯಾಯಿತಿ ಸಾಲಗಳ ಪ್ರಲೋಭನೆಯನ್ನು ನೇಪಾಳಕ್ಕೆ ಚೀನಾ ಒಡ್ಡುತ್ತಿದೆ. ಆರ್ಥಿಕ ದುಸ್ಥಿತಿಯಲ್ಲಿರುವ ನೇಪಾಳಕ್ಕೆ ಚೀನಾದ ಈ ‘ಆಫರ್’ ಆಕರ್ಷಕವಾಗಿ ಕಂಡಲ್ಲಿ ಅಚ್ಚರಿಯೇನಿಲ್ಲ; ಆದ್ದರಿಂದ ಭಾರತ ಮತ್ತು ಚೀನಾಗಳ ಜತೆ ತಾನು ಹೊಂದಿರುವ ಸಂಬಂಧಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ಅದು ಯತ್ನಿಸುತ್ತದೆ.

ಚೀನಾದೊಂದಿಗೆ ನಿಕಟ ಬಾಂಧವ್ಯವನ್ನು ಹೊಂದುವುದನ್ನು ತಪ್ಪಿಸುವಂತೆ ಭಾರತ ನೇಪಾಳವನ್ನು ಒತ್ತಾಯಿಸಲಾಗದು. ಆದಾಗ್ಯೂ, ತನ್ನ ಭೂ-ವ್ಯೂಹಾತ್ಮಕ ನೆಲೆ ಹಾಗೂ ಸಾಂಸ್ಕೃತಿಕ ಸಮನ್ವಯದ ಕಾರಣಗಳಿಂದಾಗಿ ನೇಪಾಳವು ದೀರ್ಘಕಾಲಿಕ ದೃಷ್ಟಿಕೋನವಿಟ್ಟುಕೊಂಡು ಭಾರತವನ್ನು ನೆಚ್ಚಬೇಕಾಗುತ್ತದೆ. ಆದ್ದರಿಂದ, ತನ್ನ ನೆರೆಹೊರೆಯಲ್ಲಿರುವ ಪುಟ್ಟರಾಷ್ಟ್ರಗಳ ಬೆಳೆಯುತ್ತಲೇ ಇರುವ ಮಹತ್ವಾಕಾಂಕ್ಷೆಗಳು ಹಾಗೂ ಅಭಿವೃದ್ಧಿ ಸಂಬಂಧಿತ ಅವಶ್ಯಕತೆಗಳನ್ನು ಭಾರತ ಅರ್ಥಮಾಡಿಕೊಳ್ಳಬೇಕಿದೆ. ಭಾರತ ಒದಗಿಸುತ್ತಿರುವ ಸಂಪನ್ಮೂಲಗಳು ಕಳಪೆಯಾಗಿರುವುದು ಮತ್ತು ಯೋಜನೆಗಳ ಅನುಷ್ಠಾನ ಮಂದಗತಿಯಲ್ಲಿರುವುದು ನೇಪಾಳದ ಅಳಲು/ಅಸಮಾಧಾನಗಳಲ್ಲೊಂದು. ಉದಾಹರಣೆ ನೀಡುವುದಾದರೆ, ಲ್ಹಾಸಾ ಮತ್ತು ಕಾಠ್ಮಂಡು ನಡುವಿನ ರೈಲುಸಂಪರ್ಕವನ್ನು 2022ರೊಳಗಾಗಿ ಕಾರ್ಯರೂಪಕ್ಕೆ ತರುವ ಭರವಸೆ ನೀಡಲು ಚೀನಾ ಸಮ್ಮತಿಸಬಹುದು; ಆದರೆ ರಕ್ಸೋಲ್-ಕಾಠ್ಮಂಡು ನಡುವಿನ ರೈಲುಸಂಪರ್ಕ ಯೋಜನೆಯೂ ಸೇರಿದಂತೆ ತನ್ನ ಮೂಲಸೌಕರ್ಯ ಯೋಜನೆಗಳನ್ನು ಸಂಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ವಿಶ್ವಾಸಾರ್ಹ ಕಾಲಮಿತಿಯನ್ನು ಭಾರತ ಒದಗಿಸಲಾಗದು. ಈ ಪರಿಸ್ಥಿತಿಯನ್ನು ಸುಧಾರಿಸಬೇಕು.

ಪ್ರಧಾನಿ ಮೋದಿಪ್ರಣೀತ ‘ನೆರೆಹೊರೆ ಮೊದಲು’ ಎಂಬ ಭಾರತದ ಕಾರ್ಯನೀತಿಗೆ ಒಳ್ಳೆಯ ಆರಂಭವೇನೋ ಸಿಕ್ಕಿದೆ; ಆದರೆ ಪಾಕಿಸ್ತಾನ-ನೇಪಾಳ-ಮಾಲ್ಡೀವ್ಸ್ ಜತೆಗಿನ ಭಾರತದ ಸಂಬಂಧಗಳು ಹದಗೆಟ್ಟಿವೆ. ಇನ್ನೊಂದು ದೇಶದೊಡನೆ ಕೈಜೋಡಿಸದೆ ತಾನು ಪ್ರತ್ಯೇಕವಾಗಿ ಬೆಳೆಯಲಾಗದು. ಭಾರತದ ನೆರೆರಾಷ್ಟ್ರಗಳೆಡೆಗಿನ ಚೀನಾದ ಒಲವು, ಸ್ನೇಹಸಂಧಾನ ಹೆಚ್ಚಿದಂತೆ, ಚೀನಾದ ಇಂಥ ‘ಪ್ರಭಾವವರ್ಧನೆ’ಯನ್ನು ತಗ್ಗಿಸುವ ನಿಟ್ಟಿನಲ್ಲಿ ಸಣ್ಣಪುಟ್ಟ ನೆರೆರಾಷ್ಟ್ರಗಳೊಂದಿಗಿನ ಭಿನ್ನಾಭಿಪ್ರಾಯಗಳನ್ನು ತಾನು ಪರಿಹರಿಸಿಕೊಳ್ಳಬೇಕಾದ್ದು ಹೆಚ್ಚೆಚ್ಚು ಅನಿವಾರ್ಯವಾಗುತ್ತದೆ ಎಂಬುದನ್ನು ಭಾರತ ಆದಷ್ಟು ಬೇಗ ಅರಿತರೆ ಒಳಿತು.

(ಲೇಖಕರು ಮಾಜಿ ರಾಯಭಾರಿ, ಜಾಗತಿಕ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *