ಮೆಕ್ಸಿಕೊ ಗೋಡೆಕಟ್ಟುವರೇ ಟ್ರಂಪ್?

ಅಂದುಕೊಂಡ ಕೆಲಸವನ್ನು ಸಾಧಿಸುವಲ್ಲಿ ಮತ್ತೊಮ್ಮೆ ಯಶ ಕಂಡಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅಮೆರಿಕ-ಮೆಕ್ಸಿಕೊ ಗಡಿಭಾಗದಲ್ಲಿ 5.7 ಶತಕೋಟಿ ಡಾಲರ್ ವೆಚ್ಚದಲ್ಲಿ ಗೋಡೆ ನಿರ್ವಿುಸುವ ನಿರ್ಣಯಕ್ಕೆ ಡೆಮೋಕ್ರಾಟರು ಒಪ್ಪದಿದ್ದಲ್ಲಿ, ಸರ್ಕಾರದ ಕಾರ್ಯಚಟುವಟಿಕೆಯನ್ನೇ ಸ್ಥಗಿತಗೊಳಿಸಿ ಬಿಡುವುದಾಗಿ ಅವರು ಬೆದರಿಸಿದ್ದರು. ಆದರೆ, ‘ಕಾಂಕ್ರೀಟ್ ಗೋಡೆ ನಿರ್ಮಾಣ ನೀತಿಗೆ ವಿರುದ್ಧವೂ, ನಿಷ್ಪರಿಣಾಮಕಾರಿಯೂ ಮತ್ತು ದುಬಾರಿಯ ಬಾಬತ್ತೂ ಆಗಿದೆ’ ಎನ್ನುವ ಮೂಲಕ ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ (ಇವರು ಕ್ಯಾಲಿಫೋರ್ನಿಯಾವನ್ನು ಪ್ರತಿನಿಧಿಸುವ ಡೆಮೋಕ್ರಾಟ್) ಗೋಡೆ ನಿರ್ವಣಕ್ಕೆ ಹಣದ ಬಿಡುಗಡೆಯ ಪ್ರಸ್ತಾವವನ್ನು ತಳ್ಳಿಹಾಕಿದರು. ತತ್ಪರಿಣಾಮ, ಸರ್ಕಾರಿ ಕಾರ್ಯಚಟುವಟಿಕೆಯ ಸ್ಥಗಿತಕ್ಕೆ (ಶಟ್​ಡೌನ್)2018ರ ಡಿಸೆಂಬರ್ 22ರ ಮುಂಜಾನೆ ಚಾಲನೆ ಸಿಕ್ಕಿತು. ಈ ಬಾರಿ, ಟ್ರಂಪ್ ನಿರ್ಣಯದಿಂದಾಗಿ ತೊಂದರೆಗೊಳಗಾದವರಲ್ಲಿ ಅವರದೇ ಸರ್ಕಾರದ ಉದ್ಯೋಗಿಗಳು, ಅಪಾಯಕ್ಕೊಳಗಾಗಬಲ್ಲ ಸಮಾಜದ ವರ್ಗಗಳು ಹಾಗೂ ಅಮೆರಿಕದ ಆರ್ಥಿಕತೆ ಸೇರಿವೆ.

ಶಟ್​ಡೌನ್ ಮೂರನೇ ವಾರಕ್ಕೆ ಕಾಲಿಟ್ಟಿರುವುದರಿಂದಾಗಿ, ದೇಶಾದ್ಯಂತದ ಸುಮಾರು 8 ಲಕ್ಷದಷ್ಟು ಸರ್ಕಾರಿ ನೌಕರರು ಹಣಕಾಸಿನ ಅನಿಶ್ಚಿತತೆ ಎದುರಿಸುವಂತಾಗಿದೆ. ‘ಅತ್ಯಾವಶ್ಯಕ’ ಪಟ್ಟಿಯಲ್ಲಿನ ಸುಮಾರು 4,20,000 ಸರ್ಕಾರಿ ನೌಕರರ ಕೆಲಸ ಅಬಾಧಿತವಾಗಿದೆಯಾದರೂ, ಅದು ಸಂಬಳರಹಿತವಾಗಿರಲಿದೆ. ಸರ್ಕಾರದ ನಿರ್ಣಾಯಕ ಕಾರ್ಯಾಚರಣೆಗಳನ್ನು ನೋಡಿಕೊಳ್ಳುವ ಇವರಿಗೆ ‘ಕಾರ್ಯಸ್ಥಗನ’ ಅಂತ್ಯಗೊಳ್ಳುವವರೆಗೂ ಯಾವುದೇ ಪರಿಹಾರಧನ ಸಿಗುವುದಿಲ್ಲ ಎಂಬುದಷ್ಟೇ ಅಲ್ಲ, ಪೂರ್ವಾನ್ವಯವಾಗುವಂತೆ ಅವರಿಗೆ ವೇತನ ಪಾವತಿಸಲು ಅಗತ್ಯ ಕಾನೂನನ್ನು ಶಾಸಕರು ಅನುಮೋದಿಸುವವರೆಗೂ ಕಾಯಬೇಕಾಗುತ್ತದೆ. ಮಿಕ್ಕ 3,80,000 ಸರ್ಕಾರಿ ನೌಕರರನ್ನು ‘ಅವಶ್ಯಕವಲ್ಲದವರು’ ಎಂದು ಪರಿಗಣಿಸಲಾಗಿದ್ದು, ಪ್ರತಿಫಲವಿಲ್ಲದ ಬಲವಂತದ ರಜೆಯ ಮೇಲೆ ಅವರನ್ನು ಮನೆಗೆ ಕಳಿಸಲಾಗುವುದು. ಹೀಗೆ ನಷ್ಟವಾದ ದಿನಗಳಿಗೆ ಸಂಬಂಧಿಸಿದಂತೆ ಪ್ರತಿಫಲ ನೀಡಲೆಂದು ಶಾಸನಸಭೆ ಕಾನೂನನ್ನು ಅನುಮೋದಿಸಲು ಸಾಧ್ಯವಿದೆಯಾದರೂ, ಅವರಿಗೆ ಯಾವುದೇ ಪರಿಹಾರಧನ ಸಿಗದಿರಬಹುದು. ಫೆಡರಲ್ ಸರ್ಕಾರದ ಗುತ್ತಿಗೆದಾರರು ಕೆಲಸ-ಕಾರ್ಯಗಳಿಗೆಂದು ನೇಮಿಸಿಕೊಂಡಿರುವ ನೌಕರರ ಮೇಲೂ ಪರಿಣಾಮವಾಗಲಿದ್ದು, ಒಂದೊಮ್ಮೆ ಯಾವುದೇ ಕೆಲಸ/ಕಾಮಗಾರಿ ಇಲ್ಲದಿದ್ದಲ್ಲಿ, ಕೆಲಸಗಾರರಿಗೂ ಹಣಪಾವತಿಯಾಗುವುದಿಲ್ಲ.

ಒಳನಾಡು ಭದ್ರತೆ, ನ್ಯಾಯಾಂಗ, ಕೃಷಿ, ಖಜಾನೆ, ಆಂತರಿಕ ಸಾರಿಗೆ, ವಾಣಿಜ್ಯ, ಆಹಾರ ಮತ್ತು ಔಷಧ ನಿರ್ವಹಣೆ ಸೇರಿದಂತೆ ಹಲವು ಇಲಾಖೆಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ಉದಾಹರಣೆಗೆ, ಕೃಷಿ ಇಲಾಖೆ ಸಂಕಷ್ಟದಲ್ಲಿ ಸಿಲುಕುತ್ತಿದ್ದಂತೆ, 38 ದಶಲಕ್ಷದಷ್ಟು ಅಮೆರಿಕನ್ನರು ಆಹಾರದ ನೆರವಿನ ಲಭ್ಯತೆಯೂ ಕೈಬಿಟ್ಟುಹೋಗುತ್ತದೆ, ಕಾರಣ, ಆಹಾರ ಕೊಳ್ಳಲು ಬಳಸುವಂಥ ಚೀಟಿಗಳ (ಊಟಟಛ ಖಠಿಚಞಟಠ) ಲಭ್ಯತೆ ಫೆಬ್ರವರಿಯಲ್ಲಿ ನಿಲ್ಲುತ್ತದೆ. ಗಡಿಭದ್ರತೆೆಗೆಂದು ಗೋಡೆ ಕಟ್ಟಲು ಹಣವನ್ನು ಅಪೇಕ್ಷಿಸುತ್ತ, ಸರ್ಕಾರಿ ಕಾರ್ಯವನ್ನೇ ಸ್ಥಗಿತಗೊಳಿಸಲು ಟ್ರಂಪ್ ಹೊರಟಿರುವುದು ವಿಪರ್ಯಾಸವೇ ಸರಿ. ಅಷ್ಟಕ್ಕೂ, ಟ್ರಂಪ್ ಇಂಥ ಕಾರ್ಯತಂತ್ರಗಳನ್ನು ನೆಚ್ಚಿರುವುದೇಕೆ?

ಅಮೆರಿಕ ಮತ್ತು ಮೆಕ್ಸಿಕೊ ನಡುವೆ ಗಡಿಗೋಡೆ ನಿರ್ವಿುಸುವುದಾಗಿ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ಭಾವಾವೇಶದಲ್ಲಿ ವಾಗ್ದಾನ ಮಾಡಿದ್ದರು ಟ್ರಂಪ್. ಮಾದಕವಸ್ತುಗಳು, ದಾಖಲೆರಹಿತ ವಲಸೆಗಾರರು ಮತ್ತು ಅಪರಾಧಿಗಳ ದೇಶಪ್ರವೇಶವನ್ನು ತಡೆಯುವುದು ಈ ಗೋಡೆನಿರ್ವಣದ ಹಿಂದಿನ ಘೋಷಿತ ಉದ್ದೇಶವಾಗಿದೆ. ರಿಯಲ್ ಎಸ್ಟೇಟ್ ವಲಯದ ಸಾಮ್ರಾಟರಲ್ಲೊಬ್ಬರೂ ಆಗಿರುವ ಟ್ರಂಪ್, ‘ನಾನೊಂದು ಮಹಾನ್ ಗೋಡೆಯನ್ನು ಕಟ್ಟುತ್ತೇನೆ; ನನಗಿಂತ ಉತ್ತಮವಾಗಿ ಇದನ್ನು ಯಾರೂ ನಿರ್ವಿುಸಲಾರರು. ಅದನ್ನು ಅಗ್ಗದ ದರದಲ್ಲಿ ನಿರ್ವಿುಸುತ್ತೇನೆ ಮತ್ತು ಅದಕ್ಕಾಗಿ ಮೆಕ್ಸಿಕೊ ಬೆಲೆ ತೆರುವಂತೆ ಮಾಡುತ್ತೇನೆ’ ಎಂಬುದಾಗಿ ಘೋಷಿಸಿದ್ದರು. ಮಾದಕವಸ್ತುಗಳ ಅಗಾಧ ಒಳಹರಿವಿಗೆ ಹೊರತಾಗಿ, ಅಕ್ರಮ ವಲಸೆಗಾರಿಕೆಯ ಕಾರಣದಿಂದಲೇ ಅಮೆರಿಕಕ್ಕೆ ಪ್ರತಿವರ್ಷ 250 ಶತಕೋಟಿ ಡಾಲರ್​ನಷ್ಟು ನಷ್ಟವಾಗುತ್ತಿದೆ ಎಂದೂ ಟ್ರಂಪ್ ಸಮರ್ಥಿಸಿಕೊಂಡಿದ್ದರು.

‘ಗಡಿಭಾಗದಲ್ಲಿ ಬಿಕ್ಕಟ್ಟಿದೆ’ ಎಂಬುದಾಗಿ ಸರ್ಕಾರ ಹೇಳಿಕೊಳ್ಳುತ್ತದೆಯಾದರೂ, ಮೆಕ್ಸಿಕೊದಿಂದ ಅಮೆರಿಕಕ್ಕೆ ಆಗುತ್ತಿರುವ ಅಕ್ರಮ ಗಡಿಪ್ರವೇಶ ಪ್ರಕರಣಗಳು ತಗ್ಗಿವೆ ಎಂಬುದಕ್ಕೆ ಪೂರಕ ಮಾಹಿತಿಗಳಿವೆ. ಪ್ರತಿ ತಿಂಗಳೂ 71,000ದಿಂದ 2,20,000ದವರೆಗೆ ಅಕ್ರಮ ಪ್ರವೇಶಿಗರು ಅಮೆರಿಕಕ್ಕೆ ಕಾಲಿಡುತ್ತಿದ್ದಾರೆ ಎಂಬುದು 2000ದ ವರ್ಷದ ಲೆಕ್ಕಾಚಾರವಾಗಿತ್ತು. ಕಳೆದ ವರ್ಷ ಈ ಪ್ರಮಾಣ ಕೇವಲ 20,000-40,000ದ ಆಸುಪಾಸಿನಲ್ಲಿದ್ದರೆ, ನವೆಂಬರ್​ನಲ್ಲಿ 25,000ಕ್ಕೂ ಹೆಚ್ಚಿನ ಕುಟುಂಬಗಳು (ಇವುಗಳಲ್ಲಿ ಹೆಚ್ಚಿನವು ಮಧ್ಯ ಅಮೆರಿಕ ಮೂಲದವು) ಗಡಿದಾಟಿದ್ದವು ಹಾಗೂ ಹಿಂಸಾಚಾರ-ಬಡತನದ ಕಾರಣಕ್ಕೆ ಹೀಗೆ ಮಾಡಿದ್ದವು.

ಅಕ್ರಮ ವಲಸೆಯೆಂಬುದು ಅಮೆರಿಕಕ್ಕೆ ಒದಗಿರುವ ಸಮಸ್ಯೆ ಎಂಬುದರಲ್ಲಿ ಸಂಶಯವಿಲ್ಲ. ವಲಸಿಗರು ತಮ್ಮೊಂದಿಗೆ ಪುಟ್ಟಮಕ್ಕಳನ್ನೂ ತರುತ್ತಾರೆ. ಇದರಿಂದಾಗಿ ತಮ್ಮನ್ನು ಸಹಾನುಭೂತಿಯಿಂದ ನೋಡುವ ಸಾಧ್ಯತೆಗಳು ಹೆಚ್ಚು ಎಂಬುದು ಅವರ ಗ್ರಹಿಕೆ. ಅಪ್ರಾಪ್ತ ವಯಸ್ಕರನ್ನು ದಸ್ತಗಿರಿ ಮಾಡಿಟ್ಟುಕೊಳ್ಳಬಹುದಾದ ಕಾಲಾವಧಿಯ ಮೇಲೆ ಅಮೆರಿಕ ನ್ಯಾಯಾಲಯದ ತೀರ್ಪು ಮಿತಿ ಹೇರಿರುವ ಪರಿಣಾಮವಾಗಿ, ಜತೆಗೆ ಮಗುವನ್ನೂ ಕರೆದುಕೊಂಡು ಬರುವ ಪಾಲಕರಿಗೆ ಸುದೀರ್ಘ ದಸ್ತಗಿರಿ ಹಾಗೂ ಗಡಿಪಾರನ್ನು ತಪ್ಪಿಸಿಕೊಳ್ಳುವುದಕ್ಕೊಂದು ಉತ್ತಮ ಅವಕಾಶ ಸಿಕ್ಕಂತಾಗುತ್ತದೆ. ಆದರೆ 2018ರ ಮೇ ತಿಂಗಳಲ್ಲಿ, ಮಿತಿಮೀರಿದ ವಲಸೆಯಿಂದಾಗಿ, ಮಕ್ಕಳನ್ನು ಅವರ ಪಾಲಕರಿಂದ ಪ್ರತ್ಯೇಕಿಸುವುದಕ್ಕೆ ವಲಸೆ ಅಧಿಕಾರಿಗಳು ಶುರುವಿಟ್ಟುಕೊಂಡರು.

ಈಗ, ಟ್ರಂಪ್ ಕಟ್ಟಲು ಹೊರಟಿರುವ ಗೋಡೆಯ ಉದ್ದವೆಷ್ಟು? ಅಮೆರಿಕ-ಮೆಕ್ಸಿಕೊ ಗಡಿ 1,954 ಮೈಲುಗಳಷ್ಟು ಉದ್ದವಾಗಿದ್ದು, ಕಾಂಕ್ರೀಟ್ ಅಥವಾ ಉಕ್ಕಿನಿಂದ ರೂಪುಗೊಳ್ಳುವ 1,000 ಮೈಲು ಉದ್ದದ ಗೋಡೆ ಕಟ್ಟುವುದು ಟ್ರಂಪ್ ಬಯಕೆ. ಅವರು ಅಧ್ಯಕ್ಷರಾಗುವುದಕ್ಕೂ ಮುನ್ನ, ಕ್ಯಾಲಿಫೋರ್ನಿಯಾ, ಅರಿಜೋನಾ ಮತ್ತು ನ್ಯೂ ಮೆಕ್ಸಿಕೋ ಪ್ರದೇಶಗಳ 654 ಮೈಲುಗಳಷ್ಟು ಉದ್ದದ ದಕ್ಷಿಣದ ಗಡಿಗಳಲ್ಲಿ, ಜನರು ಮತ್ತು/ಅಥವಾ ವಾಹನಗಳ ಹರಿವನ್ನು ತಡೆಗಟ್ಟಬಲ್ಲ 18 ಅಡಿ ಎತ್ತರದ ಉಕ್ಕಿನ ಬೇಲಿ ಹಾಗೂ ಉಬ್ಬು-ತಗ್ಗಿನ ಲೋಹದ ಫಲಕಗಳಿಂದ ಮೊದಲ್ಗೊಂಡು ವೈವಿಧ್ಯಮಯ ಶ್ರೇಣಿಯ ತಡೆಗೋಡೆಗಳಿದ್ದವು. ಟ್ರಂಪ್ ಅಧಿಕಾರ ವಹಿಸಿಕೊಂಡಾಗಿನಿಂದ, ಇದಕ್ಕೆ ಹೊಸದಾಗಿ ಸೇರ್ಪಡೆಯಾಗಿಲ್ಲ. 2017ರಲ್ಲಿ, 3,10,531ರಷ್ಟು ಅಕ್ರಮ ವಲಸೆಗಾರರು ದಕ್ಷಿಣ ಗಡಿಭಾಗದಲ್ಲಿರಬಹುದೆನ್ನಲಾಗಿತ್ತು ; ಅದೇ ವರ್ಷದಲ್ಲಿ ವಾಯುಮಾರ್ಗದಲ್ಲೋ ಸಮುದ್ರಮಾರ್ಗದಲ್ಲೋ ಅಮೆರಿಕವನ್ನು ಪ್ರವೇಶಿಸಿದ 6 ಲಕ್ಷಕ್ಕೂ ಹೆಚ್ಚಿನ ಜನ ಅವಧಿಗೂ ಮೀರಿ ಅಲ್ಲೇ ತಳವೂರಿದ್ದರಿಂದ ಅವರ ವೀಸಾಗಳಿಗೆ ‘ಅಕ್ರಮ’ ಎಂಬ ಹಣೆಪಟ್ಟಿ ಅಂಟಿಕೊಂಡಿತು. ಆದ್ದರಿಂದ, ಗೋಡೆ ನಿರ್ವಣದಿಂದ ಅಕ್ರಮ ವಲಸೆ ಗಣನೀಯವಾಗಿ ತಗ್ಗುತ್ತದೆ ಎಂದು ಸಮರ್ಥಿಸಿಕೊಳ್ಳುವುದು ಕಷ್ಟವೇ.

ಆದರೆ ಇದು ರಾಜಕೀಯ ಚರ್ಚಾವಿಷಯವಾಗಿ ಮಾರ್ಪಟ್ಟಿದ್ದು, ಈ ಸಂಬಂಧದ ‘ಮೀಸಲು ಹಣ’ದ ಮಸೂದೆಯನ್ನು ನಿರಾಕರಿಸುವಂತೆ ಮತ್ತು ಗೋಡೆ ನಿರ್ವಣಕ್ಕೆಂದು ಹಣಕಾಸು ಹಂಚಿಕೆಗೆ ಹೋರಾಟ ನಡೆಸುವಂತೆ ಟ್ರಂಪ್ ಬೆಂಬಲಿಗರು ಅವರನ್ನು ಒತ್ತಾಯಿಸಿದ್ದಾರೆ. ಇದು ನೆರವೇರದಿದ್ದಲ್ಲಿ ಟ್ರಂಪ್ ನೆಲೆಯನ್ನು ಕಳೆದುಕೊಳ್ಳುವುದು ನಿಕ್ಕಿ ಮತ್ತು ಹೀಗಾದಲ್ಲಿ 2020ರಲ್ಲಿ ಪುನರಾಯ್ಕೆಗೊಳ್ಳುವ ಅವಕಾಶವೂ ತಪ್ಪಬಹುದು ಎಂಬುದು ಅವರ ವಾದ.

ಈ ಕಾರಣದಿಂದಲೇ, ತಮ್ಮ ಕನಸಿನ ‘ಗಡಿಗೋಡೆ’ಗೆ ಹಣ ದಕ್ಕಿಸಿಕೊಳ್ಳಲೆಂದು ಫೆಡರಲ್ ಸರ್ಕಾರವನ್ನು ಒಂದು ವರ್ಷದವರೆಗೆ ಸ್ಥಗಿತಗೊಳಿಸುವುದಾಗಿ ಟ್ರಂಪ್ ಬೆದರಿಸಿದ್ದಾರೆ ಹಾಗೂ ವಲಸೆಗಾರಿಕೆ ಕುರಿತಾಗಿ ರಾಷ್ಟ್ರೀಯ ತುರ್ತಪರಿಸ್ಥಿತಿಯನ್ನೂ ಘೋಷಿಸಬಹುದು ಎಂದೂ ಹೇಳಿದ್ದಾರೆ. ಅಮೆರಿಕದಲ್ಲಿನ ಮೆಕ್ಸಿಕನ್ ವಲಸೆಗಾರರು ಮೆಕ್ಸಿಕೊಕ್ಕೆ ಕಳಿಸುವ ಹಣಪಾವತಿಗಳನ್ನು ಕಡಿತಗೊಳಿಸುವುದಕ್ಕೆ ಇಲ್ಲವೇ ಅದರ ಮೇಲೆ ತೆರಿಗೆ ವಿಧಿಸುವುದಕ್ಕೆ ಅನುವುಮಾಡಿಕೊಡುವ ಸ್ವದೇಶಾಭಿಮಾನಿ ಕಾಯ್ದೆಯನ್ನು ಕಾರ್ಯರೂಪಕ್ಕೆ ತರುವ ಕಲ್ಪನೆಯನ್ನೂ ಅವರು ತೇಲಿಬಿಟ್ಟಿದ್ದಾರೆ. 1976ರಲ್ಲಿ ಅಮೆರಿಕ ಶಾಸನಸಭೆ ಆಧುನಿಕ ಆಯವ್ಯಯ ಪ್ರಕ್ರಿಯೆಯನ್ನು ಶುರುವಿಟ್ಟುಕೊಂಡಾಗಿನಿಂದ ಇದುವರೆಗೂ ಇಂಥ 21 ಶಟ್​ಡೌನ್ ಸಂಭವಿಸಿವೆ. ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ, 2013ರ ಅಕ್ಟೋಬರ್ ಅವಧಿಯಲ್ಲಿ ಸರ್ಕಾರಕ್ಕೆ 16 ದಿನಗಳ ‘ಸ್ಥಗನಭಾಗ್ಯ’ ದಕ್ಕಿತ್ತು; ‘ಒಬಾಮಾ ಕೇರ್’ ಕಾರ್ಯಕ್ರಮ ಇದಕ್ಕೆ ಮೂಲಕಾರಣವಾಗಿತ್ತು. ಅಷ್ಟೇಕೆ, ಈಗಾಗಲೇ ಇಂಥ ಎರಡು ಘಟ್ಟಗಳಿಗೆ ಟ್ರಂಪ್ ಆಡಳಿತಾವಧಿ ಸಾಕ್ಷಿಯಾಗಿದೆ- 2018ರ ಜನವರಿಯಲ್ಲಿನ 3 ದಿನಗಳ ಸ್ಥಗಿತತೆ ಮತ್ತು ಫೆ. 9ರಂದು ರಾತ್ರೋರಾತ್ರಿ ಸಂಭವಿಸಿದ ‘ಅನುದಾನ ಹಂಚಿಕೆಯಲ್ಲಿನ ಅಂತರ’ ಇಂಥ ಎರಡು ನಿದರ್ಶನಗಳು.

ಹಾಗಿದ್ದರೆ, ಮುಂದೇನು? ‘ದೇಶದ ದಕ್ಷಿಣ ಗಡಿಭಾಗದಲ್ಲಿ ಭದ್ರತೆಗೆ ಮತ್ತು ಮಾನವಹಿತಕ್ಕೆ ಸಂಬಂಧಿಸಿದ ಬಿಕ್ಕಟ್ಟು ಬೆಳೆಯುತ್ತಲೇ ಇದೆ, ಅನಿಯಂತ್ರಿತ ಅಕ್ರಮ ವಲಸೆಯಿಂದಾಗಿ ಅಮೆರಿಕನ್ನರಿಗೆ ಘಾಸಿಯಾಗುತ್ತಿದೆ, ಆಫ್ರಿಕಾಮೂಲದ ಅಮೆರಿಕನ್ನರು ಮತ್ತು ಲ್ಯಾಟಿನ್ ಅಮೆರಿಕ ಮೂಲದ ಅಮೆರಿಕನ್ನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಳೆದ ತಿಂಗಳೊಂದರಲ್ಲೇ 20,000ದಷ್ಟು ವಲಸೆಗಾರ ಮಕ್ಕಳನ್ನು ಅಮೆರಿಕದೊಳಕ್ಕೆ ಅಕ್ರಮವಾಗಿ ತರಲಾಗಿದ್ದು, ದುರಾಚಾರಿ ತಂಡಗಳು ಸ್ವಾರ್ಥಸಾಧನೆಗೆ ಈ ಮಕ್ಕಳನ್ನು ದಾಳಗಳಾಗಿ ಬಳಸಿಕೊಳ್ಳುತ್ತಿವೆ’ ಎಂದು ಟ್ರಂಪ್ ಈಚೆಗಷ್ಟೆ ಪ್ರತಿಪಾದಿಸಿದ್ದರು. ಮೇಲಾಗಿ, ಅಕ್ರಮ ಮಾದಕವಸ್ತುಗಳು ದೇಶದೊಳಗೆ ಹರಿದುಬರುವುದಕ್ಕೆ ದಕ್ಷಿಣ ಗಡಿಭಾಗವು ಸುಲಲಿತ ಮಾರ್ಗವಾಗಿಬಿಟ್ಟಿದೆ ಎಂದ ಟ್ರಂಪ್, ಈ ಪರಿಸ್ಥಿತಿಯನ್ನು ಬಿಕ್ಕಟ್ಟಿನ ಕೇಂದ್ರಬಿಂದು ಎಂದರೇ ವಿನಾ, ಅದೊಂದು ರಾಷ್ಟ್ರೀಯ ತುರ್ತಸ್ಥಿತಿಯಾಗಿದೆ ಎಂದು ಘೋಷಿಸಲಿಲ್ಲ.

ಬಿಕ್ಕಟ್ಟು-ಇಕ್ಕಟ್ಟಿನ ಸ್ಥಿತಿ ಹೀಗೇ ಮುಂದುವರಿದಲ್ಲಿ, ಅದು ಭಾಗಶಃವಾಗಿಯಾದರೂ ಸುದೀರ್ಘ ಕಾಲಾವಧಿವರೆಗಿನ ಅಮೆರಿಕದ ಸರ್ಕಾರದ ಸ್ಥಗಿತತೆಗೆ ಕಾರಣವಾಗಬಹುದು. ಇಂಥ ಬೆಳವಣಿಗೆಯ ಹೊಡೆತಕ್ಕೆ ಸಿಕ್ಕವರು ತಮ್ಮ ಕ್ರಮಕ್ಕೆ ಒತ್ತಾಸೆಯಾಗಿ ನಿಲ್ಲುತ್ತಾರೆ ಎಂದು ಟ್ರಂಪ್ ಸಮರ್ಥಿಸಿಕೊಳ್ಳುತ್ತಾರಾದರೂ, ಇದರಿಂದ ಉದ್ಭವಿಸುವ ಅನಿಶ್ಚಿತತೆ ಹಾಗೂ ಅದು ಬೀರುವ ಆರ್ಥಿಕ ಪರಿಣಾಮಗಳು, ರಾಜಿ ನಿಲುವು ತಳೆಯುವಂತೆ ಅವರನ್ನು ನಿರ್ಬಂಧಿಸಬಹುದು. ಹಾಗಿದ್ದಲ್ಲಿ, ತುರ್ತಪರಿಸ್ಥಿತಿಯನ್ನು ಘೋಷಿಸುವಂಥ ಅತಿರೇಕದ ಹೆಜ್ಜೆಯನ್ನು ಟ್ರಂಪ್ ಇಡಲಿದ್ದಾರೆಯೇ? ಅಷ್ಟಕ್ಕೂ, ಟ್ರಂಪ್ ವಿಷಯದಲ್ಲಿ ನಾವು-ನೀವು ‘ಹೀಗೇ’ ಎಂದು ಊಹಿಸಲಿಕ್ಕಾದೀತೇ?!!

(ಲೇಖಕರು ಮಾಜಿ ರಾಯಭಾರಿ, ಜಾಗತಿಕ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *