ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್‌ ತಪಾಸಣೆ ಮಾಡಿದ್ದಕ್ಕೆ ಅಧಿಕಾರಿಗೆ ಸಿಕ್ಕ ಉಡುಗೊರೆ ಇದು…

ಭುವನೇಶ್ವರ್‌: ಪ್ರಧಾನಿ ಮೋದಿಯವರ ಹೆಲಿಕಾಪ್ಟರ್‌ನ್ನು ಮಂಗಳವಾರ ಸಂಬ್ಲಾಪುರದಲ್ಲಿ ಪರಿಶೀಲಿಸಿದ್ದಕ್ಕಾಗಿ ನಿಯಮ ಉಲ್ಲಂಘನೆ ಆರೋಪದಡಿ ಒಡಿಶಾದಲ್ಲಿ ಸಾಮಾನ್ಯ ವೀಕ್ಷಕನಾಗಿ ನೇಮಕಗೊಂಡಿದ್ದ ಅಧಿಕಾರಿಯನ್ನು ಚುನಾವಣೆ ಆಯೋಗ ಅಮಾನತು ಮಾಡಿದೆ.

1996ರ ಬ್ಯಾಚ್‌ನ ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿಯಾಗಿರುವ ಮೊಹಮ್ಮದ್‌ ಮೊಹ್ಸಿನ್, ವಿಶೇಷ ರಕ್ಷಣಾ ಗುಂಪು ಅಥವಾ ಎಸ್‌ಪಿಜಿ ಸಿಬ್ಬಂದಿ ಬಗ್ಗೆ ಚುನಾವಣಾ ಆಯೋಗ ನೀಡಿದ್ದ ಸೂಚನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲಿಲ್ಲ. ಇದರಿಂದಾಗಿ ಅಮಾನತು ಮಾಡಿರುವುದಾಗಿ ಚುನಾವಣೆ ಆಯೋಗ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಸಂಬ್ಲಾಪುರದಲ್ಲಿ ಪ್ರಧಾನಿ ಮೋದಿಯವರ ಹೆಲಿಕಾಪ್ಟರ್‌ನ್ನು ಅಧಿಕಾರಿ ಪರಿಶೀಲನೆ ನಡೆಸಿದ್ದರು. ಇದು ಚುನಾವಣೆ ಆಯೋಗದ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿರಲಿಲ್ಲ. ಎಸ್ಪಿಜಿ ರಕ್ಷಣೆಯನ್ನು ಅಂತಹ ತಪಾಸಣೆಯಿಂದ ವಿನಾಯಿತಿ ನೀಡಲಾಗಿದೆ. ದಿಢೀರ್‌ ತಪಾಸಣೆಯಿಂದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 15 ನಿಮಿಷ ನಿಂತುಕೊಳ್ಳಬೇಕಾಯಿತು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಇನ್ನು ಮಂಗಳವಾರ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ಹೆಲಿಕಾಪ್ಟರ್‌ನ್ನು ಕೂಡ ಚುನಾವಣೆ ಆಯೋಗದ ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಗಳು ರೌರ್ಕೇಲಾದಲ್ಲಿ ತಪಾಸಣೆಗೆ ಒಳಪಡಿಸಿದ್ದರು.
ಸಂಬ್ಲಾಪುರದಲ್ಲಿಯೇ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ಹೆಲಿಕಾಪ್ಟರ್‌ನ್ನು ಕೂಡ ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಗಳು ತಪಾಸಣೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

Leave a Reply

Your email address will not be published. Required fields are marked *