ಮತಸಂಭ್ರಮದಲ್ಲಿ ತಾಯಿಗೆ ನಮೋ: ಅಮ್ಮನ ಆಶೀರ್ವಾದ ಪಡೆದು ಮತದಾನದಲ್ಲಿ ಭಾಗಿಯಾದ ಪ್ರಧಾನಿ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಆಶೀರ್ವಾದ ಪಡೆದು ದೇಶದ 17ನೇ ಮತೋತ್ಸವದಲ್ಲಿ ಭಾಗಿಯಾದರು.

ಮತದಾನದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಸೋಮವಾರ ರಾತ್ರಿಯೇ ಅಹಮದಾಬಾದ್​ಗೆ ಆಗಮಿಸಿದ್ದ ಪ್ರಧಾನಿ ಮೋದಿ, ಗಾಂಧಿನಗರದಲ್ಲಿರುವ ರಾಜಭವನದಲ್ಲಿ ತಂಗಿದ್ದರು. ಗಾಂಧಿನಗರದ ಸಮೀಪದ ರೈಸನ್ ಎಂಬ ಹಳ್ಳಿಯಲ್ಲಿರುವ ಸಹೋದರ ಪಂಕಜ್ ಮೋದಿ ನಿವಾಸಕ್ಕೆ ತೆರಳಿ ತಾಯಿಯನ್ನು ಪ್ರಧಾನಿ ಭೇಟಿಯಾದರು. ಪ್ರಧಾನಿ ತಾಯಿ ಇಲ್ಲೇ ಕಿರಿಯ ಪುತ್ರನ ಜತೆ ವಾಸವಿದ್ದಾರೆ. ಎಸ್​ಪಿಜಿ ಭದ್ರತೆಯ ಕೇವಲ ಒಂದು ಕಾರಿನಲ್ಲಿ ತೆರಳಿದ ಮೋದಿ ತಾಯಿಯೊಂದಿಗೆ ಸುಮಾರು 20 ನಿಮಿಷ ಮಾತನಾಡಿದರು. ತಾಯಿಗೆ ನಮಸ್ಕರಿಸಿ ಲೋಕಸಭಾ ಚುನಾವಣೆ ಹಾಗೂ ವಾರಾಣಸಿ ಉಮೇದುವಾರಿಕೆಗೆ ಮೋದಿ ಆಶೀರ್ವಾದ ಪಡೆದರು. ಇದಕ್ಕೆ ಪ್ರತಿಯಾಗಿ ಪುತ್ರನಿಗೆ ತೆಂಗಿನಕಾಯಿ, ಶಾಲು ಹಾಗೂ ಕಲ್ಲು ಸಕ್ಕರೆ ನೀಡಿ ಹರಸಿದರು. ಇದಲ್ಲದೇ ಮೋದಿಗೆ ಇಷ್ಟವಾದ ಸಿಹಿ ತಿಂಡಿಯನ್ನು ತಿನಿಸಿದರು.

ಮತದಾನಕ್ಕೆ ಜಾಗೃತಿ

ತಾಯಿ ಭೇಟಿಯಾದ ಬಳಿಕ ಸುತ್ತಮುತ್ತಲಿನ ನಿವಾಸಿ ಗಳು ಹಾಗೂ ಮಕ್ಕಳೊಂದಿಗೂ ಕೆಲಕಾಲ ಮೋದಿ ಖಾಸಗಿ ಮಾತುಕತೆ ನಡೆಸಿದರು. ಪ್ರಜಾಪ್ರಭುತ್ವ ಬಲಪಡಿಸಲು ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಮನವಿ ಮಾಡಿದರು. ಇದಲ್ಲದೇ ಮಕ್ಕಳೊಂದಿಗೆ ಸೆಲ್ಪಿ ತೆಗೆಸಿಕೊಂಡು ಸಂಭ್ರಮಿಸಿದರು.

ಐಇಡಿಗಿಂತ ವೋಟರ್ ಐಡಿ ಶಕ್ತಿಶಾಲಿ!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸ್ಪರ್ಧಿಸಿರುವ ಕ್ಷೇತ್ರಕ್ಕೆ ಸೇರುವ ಮತಗಟ್ಟೆಯಲ್ಲಿ ಪ್ರಧಾನಿ ಮತ ಚಲಾಯಿಸಿದರು. ಮತದಾನದ ಬಳಿಕ ಷಾ ಮೊಮ್ಮಗಳ ಜತೆ ಕೆಲಕಾಲ ಸಮಯ ಕಳೆದರು. ಹಾಗೆಯೇ ಮತದಾನ ಮಾಡಿ ಹಿಂತಿರುಗುವಾಗ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾವಿರಾರು ಜನರತ್ತ ಕೈ ಬೀಸಿ ಮೋದಿ ತೆರಳಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮೋದಿ ಮಾತನಾಡಿ, ‘ಐಇಡಿ ಬಾಂಬ್​ಗಳಿಗಿಂತ ವೋಟರ್ ಐಡಿ ಶಕ್ತಿಶಾಲಿಯಾಗಿದೆ. ಪ್ರತಿಯೊಬ್ಬ ಅರ್ಹ ನಾಗರಿಕರು ಮತೋತ್ಸವದಲ್ಲಿ ಭಾಗಿಯಾಗಿ ಪ್ರಜಾಪ್ರಭುತ್ವ ಬಲಪಡಿಸಬೇಕು’ ಎಂದು ಕರೆ ನೀಡಿದರು.

ಅವಳಿ ನಗರದಲ್ಲಿ ಘಟಾನುಘಟಿಗಳ ಮತ ಚಲಾವಣೆ

ಬಿಜೆಪಿಯ ಘಟಾನುಘಟಿಗಳಲ್ಲಿ ಬಹುತೇಕರು ಗಾಂಧಿನಗರ ಹಾಗೂ ಅಹಮದಾಬಾದ್​ನಲ್ಲಿ ಮತದಾನ ಮಾಡಿದ್ದು ವಿಶೇಷ. ಪ್ರಧಾನಿ ಮೋದಿಯಲ್ಲದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವ ಅರುಣ್ ಜೇಟ್ಲಿ ಮತ ಚಲಾಯಿಸಿದರು. ಜ್ವರದ ಮಧ್ಯೆಯೂ ಬಿಜೆಪಿ ವರಿಷ್ಠ ಎಲ್.ಕೆ.ಆಡ್ವಾಣಿ ಅವಳಿ ನಗರದಲ್ಲಿ ಮತದಾನ ಮಾಡಿದರು.

Leave a Reply

Your email address will not be published. Required fields are marked *