ಜಯದ ಮಾಲೆ ಯಾರ ಕೊರಳಿಗೆ

ಚಿತ್ರದುರ್ಗ: ಲೋಕಸಭೆ ಚುನಾವಣೆ ಫಲಿತಾಂಶದ ಕುತೂಹಲಕ್ಕೆ ಗುರುವಾರ ಸಂಜೆ ವೇಳೆಗೆ ತೆರೆ ಬೀಳಲಿದ್ದು, ಚಿತ್ರದುರ್ಗದಲ್ಲಿ ಯಾರಿಗೆ ವಿಜಯಲಕ್ಷ್ಮೀ ಒಲಿಯುತ್ತಾಳೆಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಇದೀಗ ಕ್ಷಣಗಣನೆ ಆರಂಭವಾಗಿದೆ.
ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ, ಬಿಜೆಪಿಯ ಮಾಜಿ ಸಚಿವ ಎ.ನಾರಾಯಣಸ್ವಾಮಿ ಸೇರಿ 19 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.
ಸರ್ಕಾರಿ ವಿಜ್ಞಾನ ಕಾಲೇಜು ಹೊಸ ಕಟ್ಟಡದಲ್ಲಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಬೆಳಗ್ಗೆ 8ರಿಂದ ಆರಂಭವಾಗಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಆಯ್ದ ಐದು ಬೂತ್‌ಗಳಲ್ಲಿ ಇವಿಎಂ ಹಾಗೂ ವಿವಿ ಪ್ಯಾಟ್‌ಗಳಲ್ಲಿ ಮತಗಳನ್ನು ತಾಳೆ ಹಾಕಿದ ಬಳಿಕ ಅಧಿಕೃತವಾಗಿ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಮಧ್ಯೆ ಮಧ್ಯಾಹ್ನ 12 ಗಂಟೆ ವೇಳೆಗೆ ಗೆಲುವಿನ ನಗೆ ಯಾರು ಬೀರಲಿದ್ದಾರೆ ಎಂಬ ಮುನ್ಸೂಚನೆ ಸಿಗುವ ಸಾಧ್ಯತೆ ಇದೆ.
ಲೋಕಸಭೆ ಎಸ್‌ಸಿ ಮೀಸಲು ಕ್ಷೇತ್ರಕ್ಕೆ ಏಪ್ರಿಲ್ 18ರಂದು ಮತದಾನ ನಡೆದಿತ್ತು. ಕ್ಷೇತ್ರದಲ್ಲಿ ಒಟ್ಟು 17,60,111 ಮತದಾರ ಪೈಕಿ 12,44,940 (ಶೇ.70.79) ಮಂದಿ ಹಕ್ಕು ಚಲಾಯಿಸಿದ್ದರು. ಇವಿಎಂಗಳನ್ನು 19ರಂದು ವಿಜ್ಞಾನ ಕಾಲೇಜು ಹೊಸ ಕಟ್ಟಡ ಸ್ಟ್ರಾಂಗ್ ರೂಂ. ಗಳಲ್ಲಿಟ್ಟು, ಮೂರು ಹಂತದಲ್ಲಿ 24/7ಭದ್ರತೆ ಒದಗಿಸಲಾಗಿತ್ತು.
ವಿಧಾನಸಭಾ ಕ್ಷೇತ್ರವಾರು ಮತದಾನ ಪ್ರಮಾಣ ಚಿತ್ರದುರ್ಗ-ಶೇ.68.18, ಚಳ್ಳಕೆರೆ-71.86, ಹೊಳಲ್ಕೆರೆ-72.7, ಹೊಸದುರ್ಗ-71.67, ಹಿರಿಯೂರು-68.32, ಮೊಳಕಾಲ್ಮೂರು-73.86, ಶಿರಾ-74.16 ಹಾಗೂ ಪಾವಗಡ-64.48.
ವಿವಿಧ ಪಕ್ಷದ ಹುರಿಯಾಳುಗಳು: ಮೈತ್ರಿ ಪಕ್ಷ-ಸಂಸದ ಬಿ.ಎನ್.ಚಂದ್ರಪ್ಪ. ಬಿಜೆಪಿ-ಎ.ನಾರಾಯಣಸ್ವಾಮಿ. ಬಿಎಸ್‌ಪಿ-ಸಿ.ಯು.ಮಹಂತೇಶ್. ಪಿರಮಿಡ್ ಪಾರ್ಟಿ ಆಫ್ ಇಂಡಿಯಾ-ವೈ.ಅರುಣಾಚಲಂ. ಉತ್ತಮ ಪ್ರಜಾಕೀಯ ಪಾರ್ಟಿ-ದೇವೇಂದ್ರಪ್ಪ. ಅಂಬೇಡ್ಕರ್ ಸಮಾಜ ಪಕ್ಷ-ಎ.ಡಿ.ನಿರಂಜನ ಚೀಳಂಗಿ. ಪ್ರಗತಿಶೀಲ ಸಮಾಜವಾದಿ ಪಾರ್ಟಿ (ಲೋಹಿಯಾ)-ಎಸ್.ಮೀಠ್ಯಾನಾಯ್ಕ.
ಪಕ್ಷೇತರರು: ವೈ.ಕುಮಾರ್, ಗಣೇಶ್, ಟಿ.ತಿಪ್ಪೇಸ್ವಾಮಿ, ಸಿ.ಎಚ್.ನಾರಾಯಣಸ್ವಾಮಿ-ಡಿ.ಪೆನ್ನಪ್ಪ-ವಿ.ಎಸ್.ಭೂತರಾಜ, ವಿ.ರಮೇಶ, ಎಲ್.ರಂಗಪ್ಪ, ಎಂ.ಕೆ.ಲೋಕೇಶ, ಎನ್.ಟಿ.ವಿಜಯಕುಮಾರ್, ಎಲ್.ವೇಣುಗೋಪಾಲ್, ಆರ್.ಹನುಮಂತಪ್ಪ.
ಬಿಜೆಪಿ ಅಭ್ಯರ್ಥಿ ಸಹಿತ ನಾರಾಯಣಸ್ವಾಮಿ ಎಂಬ ಒಂದೇ ಹೆಸರಿನ ಇಬ್ಬರು ಈಗ ಕಣದಲ್ಲಿದ್ದಾರೆ.