ಚಿಕ್ಕಮಗಳೂರಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಜೋರು

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕ ಸಮರದ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಕ್ಷೇತ್ರದ ಫಲಿತಾಂಶದ ಜತೆಗೆ ಇತರೆ ಜಿಲ್ಲೆ, ರಾಜ್ಯದ ಘಟಾನುಘಟಿಗಳ ಸೋಲು-ಗೆಲುವಿನ ಲೆಕ್ಕಾಚಾರ ತಿಳಿಯಲು ಮತದಾರರು ತುದಿಗಾಲ ಮೇಲೆ ನಿಂತಿದ್ದಾರೆ.

ತಿಂಗಳಿಂದ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಕಾದು ಸುಸ್ತಾದಂತೆ ಮತದಾರೂ ವೋಟು ಹಾಕಿದ ಅಭ್ಯರ್ಥಿ ಏಳ್ತಾರೋ-ಬೀಳ್ತಾರೋ ಎಂಬುದು ತಿಳಿಯಲು ಕಾತರರಾಗಿದ್ದಾರೆ. ಜತೆಗೆ ತೀವ್ರ ಕುತೂಹಲ ಕೆರೆಳಿಸಿರುವ ಕ್ಷೇತ್ರದಲ್ಲಿ ಘಟಾನುಘಟಿಗಳ ಭವಿಷ್ಯ ಏನಾಗಬಹುದು ಎಂಬುದರ ಬಗ್ಗೆಯೇ ಸಾಮಾನ್ಯ ಜನ ವಲಯದಲ್ಲೂ ಚರ್ಚೆಯಾಗುತ್ತಿದೆ.

ಜಿಲ್ಲೆಯಲ್ಲಿ ಅಭ್ಯರ್ಥಿ ಗೆಲುವು-ಸೋಲಿನ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಚುನಾವಣೋತ್ತರ ಸಮೀಕ್ಷೆ ಹೊರ ಬಿದ್ದ ಮೇಲೆ ಬಿಜೆಪಿಯವರು ತಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಉಬ್ಬಿದರೆ, ಸಮೀಕ್ಷೆಯೇ ಸುಳ್ಳು, ಅದರ ಹಿಂದೆ ಪ್ರಬಲರ ಕೈವಾಡವಿದೆ ಎಂದು ಮೈತ್ರಿಕೂಟದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಅಲ್ಲಗಳೆಯುತ್ತಿದ್ದಾರೆ.

ರಾಜ್ಯದಲ್ಲಿ ಮಂಡ್ಯದ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ, ತುಮಕೂರಿನ ಎಚ್.ಡಿ.ದೇವೇಗೌಡರು ಮತ್ತು ಜಿ.ಎಸ್.ಬಸವರಾಜ್, ಕಲಬುರಗಿ ಉಮೇಶ್ ಜಾಧವ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ, ಮಂಡ್ಯದಲ್ಲಿ ಪ್ರಜ್ವಲ್ ರೇವಣ್ಣ ಮತ್ತು ಎ. ಮಂಜು ಇವರ ಸೋಲು-ಗೆಲುವಿನ ಕುರಿತು ಚರ್ಚೆ ಬಿರುಸಾಗಿಯೇ ನಡೆಯುತ್ತಿದೆ. ಯಾರು ಗೆಲ್ಲುತ್ತಾರೆ? ಗೆದ್ದರೆ ಆ ಕ್ಷೇತ್ರದಲ್ಲಿ ಯಾರ ಪ್ರಭಾವ ಕೆಲಸ ಮಾಡಿದೆ? ಮೋದಿ ಅಲೆ ಪ್ರಯೋಜನವಾಗಿದೆಯಾ? ಎಂಬ ವಿಚಾರಗಳ ಬಗ್ಗೆ ತಡ ರಾತ್ರಿಯವರೆಗೂ ಗಲ್ಲಿ ಕಟ್ಟೆಗಳ ಮೇಲೆ ಫಲಿತಾಂಶದ ಲೆಕ್ಕಾಚಾರ ಹಾಕುತ್ತಿದ್ದಾರೆ.

ಹೊರ ರಾಜ್ಯದ ಕ್ಷೇತ್ರಗಳ ಫಲಿತಾಂಶ ಏನಾಗಬಹುದು ಎಂಬುದರ ವಿಶ್ಲೇಷಣೆ ಮಾಡದೆ ಜನರ ಚರ್ಚೆ ಪೂರ್ಣಗೊಳ್ಳುವುದಿಲ್ಲ. ಅಮೇಥಿ ರಾಹುಲ್ ಈ ಬಾರಿಯೂ ಸ್ಮೃತಿ ಇರಾನಿ ಅವರನ್ನು ಸುಲಭವಾಗಿ ಸೋಲಿಸುತ್ತಾರೆ ಎಂಬುದು ಕಾಂಗ್ರೆಸಿಗರ ದೃಢ ವಿಶ್ವಾಸವಾಗಿದ್ದರೆ, ಮೋದಿ ಅಲೆ ಜತೆ ಅನುಕಂಪವೂ ಸ್ಮೃತಿ ಬೆನ್ನಿಗಿರುವುದರಿಂದ ಜಯದ ಗೆರೆ ಮುಟ್ಟುತ್ತಾರೆಂಬ ಆಶಾ ಭಾವ ಬಿಜೆಪಿಗರಲ್ಲಿ ವ್ಯಕ್ತವಾಗುತ್ತಿದೆ.

ಅಮೇಥಿಯಲ್ಲಿ ಗೆಲುವು ಪ್ರಯಾಸವಾಗಿದ್ದರಿಂದಲೇ ವಯನಾಡಿಗೆ ರಾಹುಲ್ ವಲಸೆ ಹೋಗಿದ್ದಾರೆ ಎಂಬುದು ಬಿಜೆಪಿ ಬೆಂಬಲಿಗರ ಅಭಿಪ್ರಾಯವಾಗಿದ್ದರೆ, ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ಸಂವಿಧಾನವೇ ಕೊಟ್ಟಿದೆ ಎಂಬುದು ಕಾಂಗ್ರೆಸಿಗರ ಸಮರ್ಥನೆ. ಹೀಗೆ ಇನ್ನೂ 24 ಗಂಟೆ ತನಕವೂ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಮತದಾರರಲ್ಲಿ ಚರ್ಚೆ ನಡೆಯುತ್ತಲೇ ಇರುವುದು.

ಮೈತ್ರಿ ಸರ್ಕಾರದ ಭವಿಷ್ಯದ ಚಿಂತೆ: ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದರೆ ಮೈತ್ರಿ ಸರ್ಕಾರದ ಆಯಸ್ಸು ಕೊನೆಯಾಗಲಿದೆ ಎಂಬುದು ಕಮಲ ಪಕ್ಷದವರ ವಿಶ್ವಾಸ. ಲೋಕಸಭೆ ಫಲಿತಾಂಶಕ್ಕೂ ರಾಜ್ಯ ಮೈತ್ರಿ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ತಮ್ಮ ಎರಡೂ ಪಕ್ಷಗಳಲ್ಲಿಯೂ ಅಧಿಕಾರ ಬಿಟ್ಟುಕೊಡಲು ಯಾವ ಶಾಸಕರೂ ಸಿದ್ಧರಿಲ್ಲವೆಂದು ಕಾಂಗ್ರೆಸ್-ಜೆಡಿಎಸ್ ದೊಸ್ತಿ ಬೆಂಬಲಿಗರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೆ ಮೈತ್ರಿ ಸರ್ಕಾರದ ದೋಸ್ತಿಗಳ ನುಡವೆ ಬಾಂಧವ್ಯ ಹಳಸಿ ಉಲ್ಬಣವಾಗಿದ್ದು, ಅದು ಫಲಿತಾಂಶ ಹೊರ ಬಿದ್ದ ಕ್ಷಣದಲ್ಲಿ ಸ್ಪೋಟಗೊಳ್ಳಲಿದೆ ಎಂಬುದು ಬಿಜೆಪಿ ಆಪ್ತರ ಲೆಕ್ಕಾಚಾರ. ಮೈತ್ರಿ ಸರ್ಕಾರ ಗೆಳತನ ಮುರಿದು ಬಿದ್ದು ಕಮಲ ಪಕ್ಷ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲಿದೆಯೆಂಬ ಆಸೆ ಪಕ್ಷದ ಬಹಳ ಕಾರ್ಯಕರ್ತರಲ್ಲಿ ಚಿಗುರೊಡೆದಿದೆ.

ಪ್ರಧಾನಿ ಯಾರಾಗುತ್ತಾರೆಂಬ ಕುತೂಹಲ: ಎನ್​ಡಿಎ ಬಹುಮತ ಪಡೆದರೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ ಎಂಬುದರಲ್ಲಿ ಸಂದೇವಿಲ್ಲವೆಂಬುದು ಬಿಜೆಪಿಗರ ಸ್ಪಷ್ಟ ಅಭಿಪ್ರಾಯ. ಎನ್​ಡಿಎ ನಿರೀಕ್ಷಿತ ಸಂಖ್ಯೆ ತಲುಪದಿದ್ದರೆ ಪ್ರತಿಪಕ್ಷಗಳ ಸಾಲಿನಲ್ಲಿ ಪ್ರಧಾನಿಯಾಗಲು ಸರದಿಯಲ್ಲಿ ನಿಂತಿರುವ ರಾಹುಲ್ ಗಾಂಧಿ, ಮಾಯಾವತಿ, ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ ಅವರ ಬಗ್ಗೆಯೂ ಹಳ್ಳಿಯಲ್ಲಿಯೂ ಜೋರಾಗಿ ಚರ್ಚೆ ನಡೆಯುತ್ತಿ್ತೆ. ಕಾಂಗ್ರೆಸ್ ಅಧಿಕ ಸ್ಥಾನ ಪಡೆದರೂ ರಾಹುಲ್ ಪ್ರಧಾನಿಯಾಗಲು ಮಮತಾ ಮತ್ತು ಮಾಯಾವತಿ ಬಿಡುವುದಿಲ್ಲವೆಂದು ಹಳ್ಳಿ ರಾಜಕೀಯ ಪಂಡಿತರು ವಾದ ಮಂಡಿಸುತ್ತಿದ್ದಾರೆ. ಹೀಗಾಗಿ ಚುನಾವಣೆ ಪೂರ್ವ ಘಟಬಂಧನ ಒಳಗೆ ಗಟ್ಟಿಯಾದ ಕೂಡುವಿಕೆ ಆಗಿಲ್ಲ. ಫಲಿತಾಂಶ ನೋಡಿಕೊಂಡು ರಾಜಕೀಯ ಆಟ ಆಡವಾಡಲು ಮಮತಾ ಬ್ಯಾನರ್ಜಿ, ಮಯಾವತಿ, ಚಂದ್ರಬಾಬು ನಾಯ್ಡು ಸನ್ನದ್ಧರಾಗಿದ್ದಾರೆಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Leave a Reply

Your email address will not be published. Required fields are marked *