ದೇವೇಗೌಡರಿಗೆ ಮತ್ತೆ ಪ್ರಧಾನಿಯಾಗುವ ಅವಕಾಶ

ಚಿಕ್ಕಮಗಳೂರು: ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮಾಜಿ ಪ್ರಧಾನಿ ಎಚ್.ದೇವೇಗೌಡ ಮತ್ತೆ ರಾಷ್ಟ್ರದ ಪ್ರಧಾನಿಯಾದರೂ ಅಚ್ಚರಿ ಇಲ್ಲ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.

ಜಿಲ್ಲಾ ಜಾತ್ಯತೀತ ಜನತಾದಳದ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಎಚ್.ಡಿ.ದೇವೇಗೌಡರ 87ನೇ ಜನ್ಮದಿನಾಚರಣೆಯಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿ ಮಾತನಾಡಿದರು.

ಹಿರಿಯ ಮುತ್ಸದ್ಧಿ್ದ ದೇವೇಗೌಡರ ಜನ್ಮದಿನವನ್ನು ಕಾರ್ಯಕರ್ತರು, ಮುಖಂಡರು ಸೇರಿ ಆಚರಿಸಲಾಗುತ್ತಿದೆ. ಅವರು ನೂರ್ಕಾಲ ಬದುಕಿ ದೇಶಸೇವೆ ಮಾಡಲು ಅವರಿಗೆ ಇನ್ನಷ್ಟು ಆರೋಗ್ಯಭಾಗ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.

23ರಂದು ಹಲವಾರು ದಿಗ್ಗಜರ ಭವಿಷ್ಯ ನಿರ್ಧಾರವಾಗಲಿದೆ. ಅಂದು ಪ್ರಕಟವಾಗುವ ಫಲಿತಾಂಶದಲ್ಲಿ ಬಿಜೆಪಿ ಹೊರತಾದ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರಾದೇಶಿಕ ಪಕ್ಷಗಳೂ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಹೊಸ ಸರ್ಕಾರ ರಚಿಸಲಿವೆ ಎಂಬ ನಿರೀಕ್ಷೆಯಿದೆ. ಅದರಲ್ಲಿ ದೇವೇಗೌಡರ ಪಾತ್ರ ದೊಡ್ಡದಿದೆ. ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್​ಗಿಂತ ಹೆಚ್ಚು ಸ್ಥಾನ ಗಳಿಸಿದರೆ ಹಿರಿಯರಾದ ದೇವೇಗೌಡರಿಗೆ ಮತ್ತೆ ಪ್ರಧಾನಿಯಾಗುವ ಅವಕಾಶಗಳಿವೆ ಎಂದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ಉತ್ತಮ ಮತದಾನವಾಗಿದ್ದು ಸಂಸದೆ ಶೋಭಾ ಕರಂದ್ಲಾಜೆ ಮೇಲಿನ ಜನರ ಆಕ್ರೋಶ ಮತದಾನದಲ್ಲಿ ಬಹಿರಂಗವಾಗಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗೆಲ್ಲುವಂತಹ ಅವಕಾಶ ಬಹಳಷ್ಟಿದೆ ಎಂದರು.

ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ತಮ್ಮ 87ನೇ ವಯಸ್ಸಿನಲ್ಲೂ ದೇಶಾದ್ಯಂತ ಪ್ರವಾಸ ಮಾಡಿ ಪ್ರಾದೇಶಿಕ ಪಕ್ಷಗಳ ಹಿತ ಕಾಯುತ್ತ ಸಂಘಟನೆಗೆ ಒತ್ತು ಕೊಡುತ್ತಿದ್ದಾರೆ. ರೈತರು, ಬಡವರು, ಕೂಲಿಕಾರ್ವಿುಕರು, ಅಲ್ಪಸಂಖ್ಯಾತರ ಧ್ವನಿಯಾಗಿ ದೇಶಸೇವೆ ಮಾಡುತ್ತಿದ್ದಾರೆ ಎಂದರು.

ನಗರಾಧ್ಯಕ್ಷ ಜಯರಾಜ್ ಅರಸ್, ಕಾರ್ವಿುಕ ವಿಭಾಗದ ಜಿಲ್ಲಾಧ್ಯಕ್ಷ ಮಾನು ಮಿರಾಂಡ, ಹುಣಸೇಮಕ್ಕಿ ಲಕ್ಷ್ಮಣ್, ತಾಪಂ ಮಾಜಿ ಅಧ್ಯಕ್ಷ ಭೈರೇಗೌಡ, ಖಾಲಿದ್ ಅಹಮದ್, ಜಮೀಲ್ ಅಹಮದ್, ಜಯಂತಿ, ಮುಸ್ತಾಕ್, ಆನಂದ ಗೌಡ, ಹಾರ್ಜಿಹಳ್ಳಿ ಪುಟ್ಟಸ್ವಾಮಿ ಇದ್ದರು.

Leave a Reply

Your email address will not be published. Required fields are marked *