‘ಇವಿಎಂ’ ಮೇಲಿನ ಅನುಮಾನ ಶುರುವಾಗಿದ್ದೇ ಬಿಜೆಪಿಯಿಂದ: ಸಾಕ್ಷಿ ಸಮೇತ ತಿರುಗೇಟು ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಲೋಕಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಬಹಿರಂಗವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿವೆ. ಇವಿಎಂ ಮೇಲಿನ ನಂಬಿಕೆ ಹಾಗೂ ಸಮೀಕ್ಷೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ.

ಇವಿಎಂ ಬಗ್ಗೆ ಮೊದಲು ಅನುಮಾನ ವ್ಯಕ್ತಪಡಿಸಿದ್ದೇ ಬಿಜೆಪಿ,‌ ಆ ಪಕ್ಷದ ವಕ್ತಾರ ಜಿವಿಎಲ್ ನರಸಿಂಹರಾವ್ ಇವಿಎಂ ಬಗ್ಗೆ ಪುಸ್ತಕವನ್ನೇ ಬರೆದಿದ್ದರು. ಆ ಅನುಮಾನವನ್ನು ಬೆಂಬಲಿಸಿ ಎಲ್.ಕೆ.ಆಡ್ವಾಣಿ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರು. ‘ಇವಿಎಂ’ ಬಗ್ಗೆ ಈ ಹತ್ತು ವರ್ಷಗಳಲ್ಲಿ ಬದಲಾದ ಬಿಜೆಪಿಯ ನಿಲುವಿಗೆ ಕಾರಣವೇನು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್​ ಮೂಲಕ ಪ್ರಶ್ನಿಸಿದ್ದಾರೆ.

ಮತದಾನೋತ್ತರ ಸಮೀಕ್ಷೆ ಬಹಿರಂಗವಾಗುತ್ತಿದ್ದಂತೆ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್​ಡಿಎ ಕೇಂದ್ರದ ಗದ್ದುಗೆ ಏರಲಿದೆ ಎಂದು ಹಲವು ಸಮೀಕ್ಷೆಗಳು ಅಂದಾಜಿನ ಫಲಿತಾಂಶ ನೀಡಿರುವುದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಪ್ರಮುಖ ನಾಯಕರು ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *