ಭೀಮಾತೀರದ ಹಂತಕರಿಗೆ ಹೆದರಿ, ಬಳಲಿ ಬೆಂಡಾಗಿರುವ ಪೊಲೀಸರು, ಚುನಾವಣಾ ಅಧಿಕಾರಿಗಳು…!

ಯಾದಗಿರಿ: ಮುಂಬರುವ ಲೋಕಸಭಾ ಚುನಾವಣೆ ಅಂಗವಾಗಿ ದೇಶಾದ್ಯಂತ ಚುನಾವಣೆ ಕಾವು ಏರುತ್ತಲೇ ಸಾಗಿದ್ದು, ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸಬೇಕಾದ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳಿಗೀಗ ಭೀಮಾತೀರದ ಹಂತಕರ ಭೀತಿ ಶುರುವಾಗಿದೆ. ಆ ಭಯದಲ್ಲಿ ನಿದ್ರಾರಹಿತ ರಾತ್ರಿಗಳನ್ನು ಕಳೆಯುವಂತಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ಅಕ್ರಮ ಚಟುವಟಿಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಜೋಳದಡಗಿ ಸೇತುವೆ ಹತ್ತಿರ ಚೆಕ್ ಪೋಸ್ಟ್ ಆರಂಭಿಸಿದೆ. ಆದರೆ, ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಸಮೀಪದಲ್ಲಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಬ್ರಿಜ್ ಕಂ ಬ್ಯಾರೇಜ್ ಇರುವಲ್ಲಿಗೆ ಮೊಸಳೆಗಳು ಬರುತ್ತಿವೆ. ಇದರಿಂದಾಗಿ ಕಳೆದ ಒಂದು ವಾರದಿಂದ ಚೆಕ್‌ಪೋಸ್ಟ್‌ನಲ್ಲಿರುವ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ಮೊಸಳೆಗಳು ಯಾವಾಗ ದಾಳಿ ಮಾಡುತ್ತವೆಯೋ ಎಂದು ಭಯಪಡುವಂತಾಗುತ್ತಿದೆ.

ಭೀಮಾ ನದಿ ಬತ್ತಿ ಹೋದ ಹಿನ್ನೆಲೆ ಆಹಾರ ಅರಸಿ ಮೊಸಳೆಗಳು ಈಗ ಜನರತ್ತ ಬರುತ್ತಿವೆ. ಹಾಗಾಗಿ ಕಳೆದ ಎಂಟು ದಿನಗಳಿಂದ ರಾತ್ರಿ ಹೊತ್ತು ಕರ್ತವ್ಯ ನಿರ್ವಹಿಸಬೇಕಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೊಸಳೆ ದಾಳಿ ಭೀತಿಗೆ ಆತಂಕದಲ್ಲಿಯೇ ಕೆಲಸ ಮಾಡುವಂತಾಗಿದೆ.

ಜಿಲ್ಲಾಡಳಿತ ಚೆಕ್ ಪೋಸ್ಟ್ ಸ್ಥಳಾಂತರ ಮಾಡಿ ಸ್ಪಲ್ಪ ದೂರದಲ್ಲಿ ಚೆಕ್ ಪೋಸ್ಟ್ ಆರಂಭ ಮಾಡಿದರೆ ಅನುಕೂಲವಾಗುತ್ತದೆ ಎಂಬುದು ಅಧಿಕಾರಿಗಳ ಅಳಲು.