ಸೋನಿಯಾ, ಸ್ಮೃತಿ ನಾಮಪತ್ರ: ಪ್ರತಿಷ್ಠಿತ ಕ್ಷೇತ್ರದಲ್ಲಿ ಉಭಯ ನಾಯಕರ ಭರ್ಜರಿ ರೋಡ್​ಶೋ

ರಾಯ್ಬರೇಲಿ: ಲೋಕಸಭೆಗೆ ಸತತ 5ನೇ ಆಯ್ಕೆ ಬಯಸಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ರಾಯ್ಬರೇಲಿಯ ಕಾಂಗ್ರೆಸ್ ಕಚೇರಿಯಲ್ಲಿ ವಿಶೇಷ ಪೂಜೆ ಹಾಗೂ ಹಿರಿಯ ಕಾಂಗ್ರೆಸ್ ನಾಯಕರ ಮನೆಯಲ್ಲಿ ಹೋಮ ನಡೆಸಿದರು. ಅಪಾರ ಕಾರ್ಯಕರ್ತರೊಂದಿಗೆ ರೋಡ್ ಶೋ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಸೋನಿಯಾ ಗಾಂಧಿಗೆ, ಪುತ್ರ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ, ಅಳಿಯ ರಾಬರ್ಟ್ ವಾದ್ರಾ ಸಾಥ್ ನೀಡಿದರು. ಸೋನಿಯಾ ಗಾಂಧಿಗೆ ಎದುರಾಳಿಯಾಗಿ ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ದಿನೇಶ್ ಪ್ರತಾಪ್ ಸಿಂಗ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಮೇ 6ರಂದು ಚುನಾವಣೆ ನಡೆಯಲಿರುವ ಕಣಕ್ಕೆ ಎಸ್​ಪಿ-ಬಿಎಸ್​ಪಿ-ಆರ್​ಎಲ್​ಡಿ ಮೈತ್ರಿಯಿಂದ ಅಭ್ಯರ್ಥಿ ನಿಲ್ಲಿಸಲಾಗಿಲ್ಲ.

ಧಾಷ್ಟ್ಯ್ರ ಮೆರೆದ, ನಮ್ಮನ್ನು ಯಾರೂ ಸೋಲಿಸಲಾಗದು ಎಂದು ತಿಳಿದುಕೊಂಡಿದ್ದ, ಎಲ್ಲರಿಗಿಂತಲೂ ನಾವು ಮೇಲು ಎಂದುಕೊಂಡಿದ್ದ ಹಲವರು ಭಾರತದ ಇತಿಹಾಸದಲ್ಲಿ ಆಗಿ ಹೋಗಿದ್ದಾರೆ. ಆದರೆ, ಜನರ ಮುಂದೆ ಯಾರೂ ದೊಡ್ಡವರಲ್ಲ.

| ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ

2004ರ ಚುನಾವಣೆ ನೆನಪಿಸಿಕೊಳ್ಳಿ

ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತೆ ಎಂದು ವಿಶ್ಲೇಷಿಸಲಾಗಿದ್ದ 2004ರ ಚುನಾವಣೆಯನ್ನು ಮರೆಯಬೇಡಿ. ಭಾರತ ಪ್ರಕಾಶಿಸುತ್ತದೆ ಎಂಬ ಘೋಷ ವಾಕ್ಯದೊಂದಿಗೆ ಪ್ರಧಾನಿ ವಾಜಪೇಯಿ ಪ್ರಚಾರ ನಡೆಸಿದ್ದರು. ಅವರನ್ನು ಕೂಡ ಸೋಲಿಸಲಾಗದ ವ್ಯಕ್ತಿ ಎಂದೇ ಬಿಂಬಿಸಲಾಗಿತ್ತು. ಆಗ ಕಾಂಗ್ರೆಸ್ ನೇತೃತ್ವದ ಯುಪಿಎ ಜಯಗಳಿಸಿತ್ತು ಎಂದು ಸೋನಿಯಾ ಗಾಂಧಿ ಇತಿಹಾಸ ನೆನಪಿಸಿದ್ದಾರೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಸೋಲಿಸಲಾಗದಷ್ಟು ಬಲಾಢ್ಯರೇನಲ್ಲ ಎಂದೂ ಹೇಳಿದ್ದಾರೆ.

ಅಮೇಠಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಠಿ ಕ್ಷೇತ್ರದಿಂದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಪತಿ ಜುಬಿನ್ ಜತೆಗೂಡಿ ವಿಶೇಷ ಪೂಜೆ, ಹೋಮ ನೆರವೇರಿಸಿದರು. ನಾಮಪತ್ರ ಸಲ್ಲಿಕೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುವ ಮುನ್ನ ಸಾವಿರಾರು ಬಿಜೆಪಿ ಕಾರ್ಯಕರ್ತ ರೊಂದಿಗೆ ರೋಡ್ ಶೋ ನಡೆಸಿದರು. ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಜತೆಗಿದ್ದರು. ಕಳೆದ ಚುನಾವಣೆಯಲ್ಲಿ ಸ್ಮೃತಿ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ರಾಹುಲ್ ಎದುರು ಸೋತಿದ್ದರು. ಬಳಿಕವೂ ಕ್ಷೇತ್ರದೊಂದಿಗೆ ಹೆಚ್ಚು ಸಂಪರ್ಕ ಹೊಂದಿರುವ ಸ್ಮೃತಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಕೇಂದ್ರ ಸರ್ಕಾರದ ಹಲವು ಯೋಜನೆ, ಕಾಮಗಾರಿಗಳಿಗೆ ಪ್ರಧಾನಿ ಜತೆ ಚಾಲನೆ ನೀಡಿರುವುದು ಸ್ಮೃತಿ ವಿಶೇಷ. ರಾಹುಲ್ ಬುಧವಾರ ಅಮೇಠಿಯಿಂದ ನಾಮಪತ್ರ ಸಲ್ಲಿಸಿದ್ದು, ಕೇರಳದ ವಯನಾಡಿನಿಂದಲೂ ಸ್ಪರ್ಧಿಸಿದ್ದಾರೆ.

ಜಾಮೀನಿನ ಮೇಲೆ ಹೊರಗಿರುವವರು ಭ್ರಷ್ಟರ ಕೂಟದೊಂದಿಗೆ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಅಮೇಠಿ ಮತದಾರರು ಈ ಕುಟುಂಬದ ನಾಟಕ ನೋಡಿ ಸುಸ್ತಾಗಿದ್ದಾರೆ.

| ಸ್ಮೃತಿ ಇರಾನಿ ಕೇಂದ್ರ ಸಚಿವೆ