2ನೇ ಹಂತದ ಮತದಾನ ತಯಾರಿ ಕುರಿತು ರಾಜ್ಯ ಚುನಾವಣಾ ಆಯುಕ್ತರಿಂದ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದ್ದು, ಎರಡನೇ ಹಂತದ ಚುನಾವಣೆಗೆ ಇನ್ನು ಮೂರೇ ದಿನ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಚುನಾವಣಾ ಆಯುಕ್ತ ಸಂಜೀವ್​ ಕುಮಾರ್​ ಚುನಾವಣಾ ತಯಾರಿ ಕುರಿತು ಮಾಹಿತಿ ನೀಡಿದರು.

ಒಟ್ಟು 28 ಲೋಕಸಭಾ ಸ್ಥಾನ ಹೊಂದಿರುವ ರಾಜ್ಯದಲ್ಲಿ ಈಗಾಗಲೇ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಉಳಿದ 14 ಕ್ಷೇತ್ರಗಳಿಗೆ ಏ. 23ರಂದು ಚುನಾವಣೆ ನಡೆಯಲಿದ್ದು, 237 ಅಭ್ಯರ್ಥಿಗಳು ಕಣದಲ್ಲಿರುವುದಾಗಿ ಸಂಜೀವ್​ ಕುಮಾರ್​ ಮಾಹಿತಿ ನೀಡಿದರು.

ಎರಡನೇ ಹಂತದ ಚುನಾವಣೆಗೆ 1,512 ಫೈಯಿಂಗ್ ಸ್ಕ್ವಾಡ್, 1,837 ಸ್ಟಾಟಿಕ್ ಸರ್ವೆಲೆನ್ಸ್ ಸ್ಕ್ವಾಡ್ಸ್​, 320 ಅಬಕಾರಿ ತಂಡ ಹಾಗೂ 180 ವಾಣಿಜ್ಯ ತೆರಿಗೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಎರಡನೇ ಹಂತದಲ್ಲಿ ಒಟ್ಟು 2,43,03,279 ಕೋಟಿ ಮತದಾರಿದ್ದು, ಒಟ್ಟು 28,022 ಮತಗಟ್ಟೆಗಳಿವೆ. ಸಖಿ ಮತಗಟ್ಟೆಗಳು 216, ವಿಕಲಚೇತನ ಮತಗಟ್ಟೆಗಳು 37, ಹಾಗೂ 5,605 ಸೂಕ್ಷ್ಮ ಮತಗಟ್ಟೆಗಳು ಎರಡನೇ ಹಂತದಲ್ಲಿವೆ ಎಂದು ಹೇಳಿದರು.

1,026 ಮತಗಟ್ಟೆಗಳಿಗೆ ಸಿ.ಆರ್ ಪಿ.ಎಫ್ ಭದ್ರತೆ, 1,479 ಮತಗಟ್ಟೆಗಳಲ್ಲಿ ವೆಬ್ ಕ್ಯಾಮರಾ ಅಳವಡಿಕೆ, 1952 ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಭದ್ರತಾ ದೃಷ್ಟಿಯಿಂದ ಅನುಮತಿ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಎರಡನೇ ಹಂತದಲ್ಲಿ ಚುನಾವಣಾ ಸಂದರ್ಭದಲ್ಲಿ ಇದುವರೆಗೂ 16,64,11,585 ರೂ. ಹಣ ವಶಕ್ಕೆ ಪಡೆಯಲಾಗಿದೆ. ಅಲ್ಲದೆ, 15,80,52,544 ಲೀಟರ್ ಮದ್ಯ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಮತದಾರ ಪಟ್ಟಿಯಲ್ಲಿ ಹೆಸರು ನಾಪತ್ತೆ ವಿಚಾರವಾಗಿ ಮಾತನಾಡಿ, ಹೆಸರು ಡಿಲೀಟ್ ದೊಡ್ಡ ಸಂಖ್ಯೆಯಲ್ಲಿ ಆಗಿಲ್ಲ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಮನೆ ಸ್ಥಳಾಂತರ ಮಾಡಿದವರಿಗೆ ಸಮಸ್ಯೆ ಆಗಿದೆ. ಮತ್ತೆ ಕೆಲವರ ಹೆಸರು ವೋಟರ್ ಲಿಸ್ಟ್ ನಿಂದ ಡಿಲಿಟ್ ಆಗಿರುವ ಕುರಿತಾಗಿ ತನಿಖೆ ನಡೆಸಲಾಗುತ್ತಿದೆ. ಸಾಮೂಹಿಕವಾಗಿ ಹೆಸರು ನಾಪತ್ತೆಯಾಗಿರುವುದು ತಪ್ಪು ಮಾಹಿತಿ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)