2ನೇ ಆಟಕ್ಕೆ ತೆರೆ: ಇಂದು ರಾತ್ರಿವರೆಗೂ ಮನೆ ಮನೆ ಪ್ರಚಾರ, ಹದಿನಾಲ್ಕು ಕ್ಷೇತ್ರಗಳಿಗೆ ನಾಳೆ ಮತದಾನ

ಬೆಂಗಳೂರು: ಲೋಕಸಭೆ ಚುನಾವಣೆಯ ಎರಡನೇ ಹಂತದ ಬಹಿರಂಗ ಪ್ರಚಾರಕ್ಕೆ ತೆರೆಬೀಳುವುದರೊಂದಿಗೆ ಕರ್ನಾಟಕದ ರಾಜಕೀಯ ಜಿದ್ದಾಜಿದ್ದಿ ಅಂತಿಮ ಘಟ್ಟಕ್ಕೆ ಹೊರಳಿದೆ. ರಾಜಕೀಯ ನಾಯಕರ ಅಬ್ಬರದ ಪ್ರಚಾರ, ಊರು, ಕೇರಿಗಳ ಸುತ್ತಾಟ, ಸಭ್ಯತೆ ಮೀರಿದ ಕೆಸರೆರಚಾಟದ ರಾಜಕೀಯದ ಧೂಳಲ್ಲೇ ಮುಳುಗಿದ್ದ ರಾಜ್ಯದಲ್ಲಿ ಸತತ 3 ತಿಂಗಳ ಬಳಿಕ ಕೊನೆಯ ಆಟ ಕ್ಲೈಮಾಕ್ಸ್ ತಲುಪಿದೆ.

ಏ.18ರಂದು ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ನಡೆದ ಮತದಾನದ ಬಳಿಕ ಮಂಗಳವಾರ ಎರಡನೇ ಸುತ್ತಿನಲ್ಲಿ ಉಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಭಾನುವಾರ ಮೂರೂ ಪಕ್ಷಗಳ ನಾಯಕರು ಇಡೀ ದಿನ ಮತದಾರರನ್ನು ಸೆಳೆಯುವ ಅಂತಿಮ ಕಸರತ್ತು ನಡೆಸಿ ತಮ್ಮತಮ್ಮ ಕ್ಷೇತ್ರಗಳಿಗೆ ಹಿಂದಿರುಗಿದ್ದಾರೆ. ಸೋಮವಾರ ಅಭ್ಯರ್ಥಿಗಳಿಂದ ಮನೆಮನೆ ಪ್ರಚಾರ ನಡೆಯಲಿದೆ.

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಒಟ್ಟು 237 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ದಾಖಲಾಗಲಿದೆ. ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. 14 ಕ್ಷೇತ್ರಗಳಲ್ಲಿ 2.43 ಕೋಟಿ ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ಒಟ್ಟು 28,022 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ಕಾರ್ಯಕ್ಕೆ 1,43, 580 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಶಿವಮೊಗ್ಗ, ಕಲಬುರಗಿ ಚಿತ್ತ: ಹದಿನಾಲ್ಕೂ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟರೂ ಆಡಳಿತಾರೂಢ ದೋಸ್ತಿ ಹಾಗೂ ಬಿಜೆಪಿ ನಡುವಿನ ಪ್ರತಿಷ್ಠೆಯ ಕಣವಾಗಿ ಶಿವಮೊಗ್ಗ ಹಾಗೂ ಕಲಬುರಗಿ ಕ್ಷೇತ್ರ ಗಮನ ಸೆಳೆದಿವೆ. ಕಲಬುರಗಿ ಕ್ಷೇತ್ರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್​ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಬೆನ್ನಿಗೆ ಇಡೀ ದೋಸ್ತಿ ಪಡೆ ನಿಂತಿದ್ದರೆ, ಕಾಂಗ್ರೆಸ್​ನಿಂದ ಹೊರಬಂದು ಬಿಜೆಪಿ ಸೇರಿರುವ ಡಾ.ಉಮೇಶ್ ಜಾಧವ್ ಗೆಲ್ಲಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ರಾಘವೇಂದ್ರ ಕಣಕ್ಕಿಳಿದಿರುವ ಶಿವಮೊಗ್ಗ ಕ್ಷೇತ್ರವನ್ನು ಗೆದ್ದು ಬಿಎಸ್​ವೈಗೆ ಸೆಡ್ಡು ಹೊಡೆಯಲು ದೋಸ್ತಿ ಅಭ್ಯರ್ಥಿ ಮಧು ಬಂಗಾರಪ್ಪ ಗೆಲ್ಲಿಸಲು ಇಡೀ ಸರ್ಕಾರ ಶಿವಮೊಗ್ಗದಲ್ಲಿ ಬೀಡು ಬಿಟ್ಟಿತ್ತು. ಸಿಎಂ ಕುಮಾರಸ್ವಾಮಿ, ಸಚಿವರಾದ ಡಿ.ಕೆ. ಶಿವಕುಮಾರ್, ಎಚ್.ಡಿ.ರೇವಣ್ಣ ಕೊನೆಯ ದಿನದವರೆಗೂ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ರಣತ್ರಂತ್ರ ರೂಪಿಸಿದ್ದರು.

ಬಿಜೆಪಿ ಬಲ ಪ್ರದರ್ಶನ: ಬಿಜೆಪಿಯಿಂದ ಭಾನುವಾರ ಒಂದೇ ದಿನ ಎಲ್ಲ ಕ್ಷೇತ್ರಗಳಲ್ಲೂ ಹಮ್ಮಿಕೊಂಡಿದ್ದ ರೋಡ್​ಶೋಗಳಲ್ಲಿ ರಾಜ್ಯ ಬಿಜೆಪಿ ಪ್ರಭಾರಿ ಪಿ. ಮುರಳೀಧರ ರಾವ್, ಯಡಿಯೂರಪ್ಪ, ಈಶ್ವರಪ್ಪ, ಜಗದೀಶ ಶೆಟ್ಟರ್, ಶ್ರುತಿ, ತಾರಾ ಅನುರಾಧಾ, ಶ್ರೀರಾಮುಲು ಸೇರಿ ಅನೇಕ ನಾಯಕರು ಭಾಗವಹಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಚಿಕ್ಕೋಡಿಯ ರಾಯಭಾಗ ಹಾಗೂ ಬಾಗಲಕೋಟೆ ಕ್ಷೇತ್ರದ ಕೆರೂರು ಮತ್ತು ಹುನಗುಂದದಲ್ಲಿ ಪ್ರಚಾರ ನಡೆಸಿದರು.

ಬಿಗಿ ಬಂದೋಬಸ್ತ್

‘2ನೇ ಹಂತದ ಚುನಾವಣೆಯಲ್ಲಿ 5,605 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಪರಿಗಣಿಸಲಾಗಿದೆ. 1,026 ಮತಗಟ್ಟೆಗಳಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆಯ 57 ಕಂಪನಿ ನಿಯೋಜಿಸಲಾಗಿದೆ. 2,174 ಮತಗಟ್ಟೆಯಲ್ಲಿ ಸೂಕ್ಷ್ಮ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. 1,479 ಮತಗಟ್ಟೆಗಳನ್ನು ವೆಬ್ ಕ್ಯಾಮೆರಾಗಳು ನಿರ್ವಹಿಸಲಿವೆ. ಅಲ್ಲದೇ 1952 ಮತಗಟ್ಟೆಗಳಲ್ಲಿ ವಿಡಿಯೋಗ್ರಾಫರ್​ಗಳು ಚುನಾವಣಾ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದು ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಣ ಸ್ವಾರಸ್ಯ

*14 ಲೋಕಸಭೆ ಕ್ಷೇತ್ರ

*2.43 ಕೋಟಿ ಮತದಾರರು

*1.22 ಕೋಟಿ ಪುರುಷರು

*1.20 ಕೋಟಿ ಮಹಿಳೆಯರು

*2022 ಇತರರು

ರಾಯಚೂರಲ್ಲಿ ಹೆಚ್ಚು

2,184 ಮತಗಟ್ಟೆ ಹೊಂದಿರುವ ರಾಯಚೂರು ಅತಿ ಹೆಚ್ಚು ಮತಗಟ್ಟೆ ಹೊಂದಿರುವ ಕ್ಷೇತ್ರವಾಗಿದೆ. ಧಾರವಾಡದಲ್ಲಿ 1,872 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಅತಿ ಕಡಿಮೆ ಮತಗಟ್ಟೆಗಳಿರುವ ಪ್ರದೇಶವಾಗಿದೆ. ಈ ಬಾರಿ 216 ಸಖಿ ಮತಗಟ್ಟೆಗಳು, 7 ಪಾರಂಪರಿಕ ಮತಗಟ್ಟೆಗಳಿವೆ.

14 ಕ್ಷೇತ್ರಗಳ ವ್ಯಾಪ್ತಿಯಲ್ಲಿ 48,394 ಬ್ಯಾಲೆಟ್ ಯೂನಿಟ್, 33, 626 ಕಂಟ್ರೋಲ್ ಯೂನಿಟ್, 35,027 ವಿವಿಪ್ಯಾಟ್ ಬಳಕೆ ಮಾಡಲಾಗುತ್ತಿದೆ. ಮತಗಟ್ಟೆ ಸಿಬ್ಬಂದಿಗೆ ಮತದಾನ ಕೇಂದ್ರದಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಇವಿಎಂಗಳ ಬಳಕೆ ಸೇರಿದಂತೆ ಎಲ್ಲ ರೀತಿಯ ತರಬೇತಿಯನ್ನೂ ನೀಡಲಾಗಿದೆ ಎಂದು ಹೇಳಿದರು.

ವ್ಯಾಪಕ ಭದ್ರತೆ

ಮತದಾನ ಕೇಂದ್ರದ ವ್ಯಾಪ್ತಿಯ 100 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೊಷಿಸಲಾಗಿದೆ. ಮತದಾನ ಕೇಂದ್ರದ ಸುತ್ತಲೂ ಪೊಲೀಸ್, ಸಿಆರ್​ಪಿಎಫ್ ಸೇರಿದಂತೆ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ. ಮತಗಟ್ಟೆಗಳ ಭದ್ರತೆಗೆ 34, 548 ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಸಂಜೀವ್ ಕುಮಾರ್ ತಿಳಿಸಿದರು.