ಗರಿಗೆದರಿದ ಗಡಿ ಸಮಸ್ಯೆ: ವಯನಾಡು ಲೋಕಸಭಾ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಪದಾರ್ಪಣೆ ಪರಿಣಾಮ

| ಸಿ.ಕೆ.ಮಹೇಂದ್ರ ಮೈಸೂರು

ವಯನಾಡು ಲೋಕಸಭಾ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಆಗಮನವಾಗುತ್ತಿದ್ದಂತೆ ಗಡಿ ಸಮಸ್ಯೆ ಚುನಾವಣೆಯ ಮುಂಚೂಣಿಗೆ ಬಂದಿದೆ. ಚುನಾವಣೆ ನಂತರವಾದರೂ ರಾಜ್ಯದ ಅಭಿಪ್ರಾಯಕ್ಕೆ ವಿರುದ್ಧವಾಗಿ ಕೆಲಸ ಸಾಧಿಸಿಕೊಳ್ಳುವ ಉತ್ಸಾಹದಲ್ಲಿ ಅಲ್ಲಿನ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ.

ನಂಜನಗೂಡು ಮಾರ್ಗವಾಗಿ ಸುಲ್ತಾನ್ ಬತ್ತೇರಿ, ವಯನಾಡು ಭಾಗ ಸಂರ್ಪಸುವ ರೈಲು ಮಾರ್ಗ, ರಾತ್ರಿ ವೇಳೆ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಗಡಿ ಸಮಸ್ಯೆಯ ಪ್ರಮುಖ ಅಂಶಗಳಾಗಿವೆ. ಈ ಹಿಂದೆ ಯುಡಿಎಫ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿ ರಾಜ್ಯಕ್ಕೆ 3 ಬಾರಿ ಭೇಟಿ ನೀಡಿ, ಇಲ್ಲಿನ ಮುಖ್ಯಮಂತ್ರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದರು. ಈ ಯೋಜನೆಗಳಿಗೆ ಒಪ್ಪಿಗೆ ನೀಡಿದರೆ ಆಗಬಹುದಾದ ಅನಾಹುತಗಳನ್ನು ಮನಗಂಡು ರಾಜ್ಯ ಸರ್ಕಾರ ಒಪ್ಪಿರಲಿಲ್ಲ.

ಈಗ ಸ್ವತಃ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರೇ ವಯನಾಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದರಿಂದ ಈ ಯೋಜನೆಗಳಿಗೆ ಜೀವ ಬಂದಂತಾಗಿದೆ. ರಾಜ್ಯದ ಮೈತ್ರಿ ಸರ್ಕಾರದ ಮೇಲೆ ರಾಹುಲ್ ಗಾಂಧಿಯಿಂದ ಒತ್ತಡ ತಂದು ತಮ್ಮ ಹಿತ ಸಾಧಿಸಿಕೊಳ್ಳಬಹುದು ಎಂಬುದು ಕೇರಳದ ಕಾಂಗ್ರೆಸ್ ಮುಖಂಡರ ಲೆಕ್ಕಾಚಾರ.

ಯೋಜನೆ ಏನು?: ನಂಜನಗೂಡಿನಿಂದ ಚಾಮರಾಜನಗರ ಜಿಲ್ಲೆಯ ಮದ್ದೂರು (ಬಂಡೀಪುರ ಅರಣ್ಯ) ಮಾರ್ಗವಾಗಿ ವಯನಾಡು ಜಿಲ್ಲೆಯ ನೀಲಂಬೂರು ಹಾಗೂ ತಮಿಳುನಾಡಿನ ನೀಲಗಿರಿ ಜಿಲ್ಲೆಯ ದೇವಲ ಎಂಬಲ್ಲಿಗೆ ರೈಲು ಮಾರ್ಗ ನಿರ್ವಿುಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ತೀರಾ ಹಳೆಯದಾದ ಈ ಯೋಜನೆಯಿಂದ 3 ರಾಜ್ಯಗಳು ಬಹಳ ಹತ್ತಿರಕ್ಕೆ ಬರುತ್ತಿದ್ದವು. ಅಲ್ಲದೆ ನೀಲಂಬೂರಿನಿಂದ ಕೇರಳ ರಾಜಧಾನಿ ತಿರುವನಂತಪುರಕ್ಕೂ ರೈಲು ಮಾರ್ಗ ಕಲ್ಪಿಸಿಕೊಳ್ಳುವುದು ಆ ರಾಜ್ಯದ ಉದ್ದೇಶವಾಗಿತ್ತು. 2010ರಲ್ಲಿ ಈ ಯೋಜನೆ ಕಾರ್ಯಗತಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ರೈಲ್ವೆ ಇಲಾಖೆಗೆ 4266 ಕೋಟಿ ರೂ. ಬಿಡುಗಡೆ ಮಾಡಿತ್ತು. ನಂತರ 2014ರಲ್ಲಿ ಕೇರಳ ಮುಖ್ಯಮಂತ್ರಿ ಉಮ್ಮನ್​ಚಾಂಡಿ, ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದು ಯೋಜನೆಯ ಮೊದಲ ಹಂತವಾಗಿ ನಂಜನಗೂಡಿನಿಂದ ಸುಲ್ತಾನ್ ಬತ್ತೇರಿವರೆಗಿನ ರೈಲು ಮಾರ್ಗ ಕಾಮಗಾರಿ ಆರಂಭಿಸಲು 641 ಕೋಟಿ ರೂ. ನೀಡಲು ಮುಂದೆ ಬಂದರು. ಇದಕ್ಕೆ ಕರ್ನಾಟಕ, ತಮಿಳುನಾಡು ಸರ್ಕಾರಗಳು ಒಪ್ಪಿಗೆ ನೀಡಲಿಲ್ಲ.

ಕೊಂಕಣ ರೈಲ್ವೆ ಮಾದರಿಯಲ್ಲಿ ಪಶ್ಚಿಮ ಘಟ್ಟದಲ್ಲಿ ರೈಲು ಮಾರ್ಗ ನಿರ್ವಿುಸುವುದರಿಂದ ಪರಿಸರದ ಮೇಲೆ ಆಗುವ ಘೊರ ಪರಿಣಾಮದ ಅರಿವಿರುವ ರಾಜ್ಯ ಸರ್ಕಾರ ಈವರೆಗೆ ಒಪ್ಪಿಗೆ ನೀಡಿಲ್ಲ. ಇದರಿಂದ ಕೇರಳ ರಾಜ್ಯಕ್ಕೆ ಹೆಚ್ಚು ಅನುಕೂಲವಿದ್ದು, ಮೈಸೂರು ಹಾಗೂ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಇದು ಸಹಕಾರಿಯಾಗಲಿದೆ.

ಅಲ್ಲದೆ, ಗುಂಡ್ಲುಪೇಟೆ ಮಾರ್ಗವಾಗಿ ಮದ್ದೂರು ಬಳಿಯಿಂದ ಮೂಲೆಹೊಳೆ ಅರಣ್ಯದ ಮೂಲಕ ವಯನಾಡು ಜಿಲ್ಲೆ ಸಂರ್ಪಸುವ ರಸ್ತೆಯನ್ನು ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಬಂದ್ ಮಾಡಲಾಗುತ್ತಿದೆ. ಈ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂಬ ಬೇಡಿಕೆ ಬಹಳ ದಿನಗಳಿಂದಲೂ ಇದೆ. ಇದಕ್ಕೂ ರಾಜ್ಯ ಸರ್ಕಾರ ಸಮ್ಮತಿಸಿಲ್ಲ. ವಾಹನ ಓಡಾಟದಿಂದ ವನ್ಯಜೀವಿಗಳಿಗೆ ರಾತ್ರಿ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂಬುದು ಪ್ರಮುಖ ಕಾರಣವಾಗಿದ್ದರೆ, ಕೇರಳ ಮೂಲಕ ನಡೆಯುವ ಅರಣ್ಯದ ಕಳ್ಳದಂಧೆಗೆ ಇದು ಅನುಕೂಲ ಮಾಡಿಕೊಡುತ್ತದೆ ಎಂಬ ಕಾರಣವೂ ಇದೆ.

ಈ ಮಾರ್ಗವನ್ನು ಮುಕ್ತಗೊಳಿಸಿದರೆ ವಯನಾಡು, ಕಲ್ಲಿಕೋಟೆ, ಮಾನಂದವಾಡಿ ಮೊದಲಾದ ಪ್ರಮುಖ ಪ್ರದೇಶಗಳ ಜನರಿಗೆ ಅನುಕೂಲವಾಗಲಿದೆ ಎಂಬುದು ಅಲ್ಲಿನವರ ವಾದ. ಕೇರಳದಲ್ಲಿ ಯುಡಿಎಫ್ ಅಧಿಕಾರಕ್ಕೆ ಬಂದಾಗೆಲ್ಲ ಈ ವಿಷಯಗಳು ಮುಂಚೂಣಿಗೆ ಬರುತ್ತವೆ. ಎಲ್​ಡಿಎಫ್ ಇದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬ ಬಗ್ಗೆ ಆ ಭಾಗದ ಜನರ ಬೇಸರವಿದೆ.

ರಾಹುಲ್ ಮೂಲಕ ಕೆಲಸ ಸಾಧಿಸಿಕೊಳ್ಳುವ ಉಪಾಯ

ರಾಹುಲ್ ಗಾಂಧಿ ಈಗ ವಯನಾಡು ಕ್ಷೇತ್ರದಲ್ಲಿ ಸ್ಪರ್ಧಿಸಿ ರುವುದು ಇಂಥ ಯೋಜನೆಗಳನ್ನು ಸಾಧಿಸಿಕೊಳ್ಳುವುದಕ್ಕೆ ಸುಲಭದ ಮಾರ್ಗ ಕಲ್ಪಿಸುತ್ತದೆ ಎಂದು ಅಲ್ಲಿನ ಕಾಂಗ್ರೆಸ್ ನಾಯಕರು ನಂಬಿದ್ದಾರೆ. ರಾಷ್ಟ್ರನಾಯಕರು ಚುನಾವಣೆ ಪ್ರಚಾರದಲ್ಲಿ ಈ ವಿಷಯ ಪ್ರಸ್ತಾಪಿಸುತ್ತಿಲ್ಲ. ಇದರಿಂದ ರಾಜ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಅಪಾಯದ ಅರಿವು ಅವರಿಗೆ ಇದ್ದೇ ಇದೆ.

ನಾನು ಸಿಎಂ ಆಗಿದ್ದಾಗ ಬೆಂಗಳೂರಿಗೆ ಬಂದು ಬಂಡೀಪುರ ರಸ್ತೆ ಮಾರ್ಗ ತೆರವು ಹಾಗೂ ರೈಲ್ವೆ ಯೋಜನೆ ಬಗ್ಗೆ ಕರ್ನಾಟಕ ಸರ್ಕಾರದ ಜತೆ ಮಾತಾಡಿದ್ದೆ. ಎಲ್​ಡಿಎಫ್ ಸರ್ಕಾರದ ಅವಧಿಯಲ್ಲಿ ಅದು ಕಾರ್ಯಸಾಧ್ಯವಾಗುತ್ತಿಲ್ಲ. ಇವರಿಗೆ ರಾಜ್ಯದ ಹಿತಕ್ಕಿಂತ ಸ್ವಾರ್ಥಸಾಧನೆ ಮುಖ್ಯವಾಗಿದೆ.

| ಉಮ್ಮನ್ ಚಾಂಡಿ ಮಾಜಿ ಸಿಎಂ, ಕೇರಳ