ಡಿಎಂಕೆ ನಾಯಕನಿಂದಾಗಿ ತಮಿಳುನಾಡಿನ ಕ್ಷೇತ್ರವೊಂದರಲ್ಲಿ ಲೋಕಸಭಾ ಚುನಾವಣೆ ರದ್ದಾಗುವ ಸಾಧ್ಯತೆ

ನವದೆಹಲಿ: ತಮಿಳುನಾಡಿನ ವೆಲ್ಲೋರ್​ನಲ್ಲಿ ನಡೆಯಬೇಕಿದ್ದ ಲೋಕಸಭಾ ಚುನಾವಣೆಯನ್ನು ರದ್ದುಪಡಿಸುವ ನಿರ್ಧಾರವನ್ನು ಕೇಂದ್ರ ಚುನಾವಣಾ ಆಯೋಗ ಇಂದು ಪ್ರಕಟಿಸುವ ಸಾಧ್ಯತೆ ಇದೆ.

ಕಳೆದ ಕೆಲವು ದಿನಗಳ ಹಿಂದೆ ಡಿಎಂಕೆ ಅಭ್ಯರ್ಥಿಯ ಕಚೇರಿಯಲ್ಲಿ ಬಹು ಮೊತ್ತದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆದಾಯ ತೆರಿಗೆ ಇಲಾಖೆಯ ವರದಿಯ ಆಧಾರದ ಮೇಲೆ ಜಿಲ್ಲಾ ಪೊಲೀಸರು ಆರೋಪಿ ಕತ್ತಿರ್​ ಆನಂದ್​ ಹಾಗೂ ಪಕ್ಷದ ಇಬ್ಬರು ಕಾರ್ಯಕರ್ತರ ವಿರುದ್ಧ ಏಪ್ರಿಲ್​ 10 ರಂದು ದೂರು ದಾಖಲಿಸಿ, ಚುನಾವಣೆ ರದ್ದುಗೊಳಿಸುವಂತೆ ಆಗ್ರಹಿಸಿದ್ದರು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ ವೆಲ್ಲೋರ್​ನಲ್ಲಿ ಲೋಕಸಭಾ ಚುನಾವಣೆಯನ್ನು ರದ್ದುಗೊಳಿಸುವ ಶಿಫಾರಸ್ಸನ್ನು ರಾಷ್ಟ್ರಪತಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆಯ ವೇಳೆ ತನ್ನ ಅಫಿಡವಿಟ್​ನಲ್ಲಿ ತಪ್ಪು ಮಾಹಿತಿ ನೀಡಿರುವ ಆಧಾರದ ಮೇಲೆ ಆರೋಪಿ ಆನಂದ್ ವಿರುದ್ಧ ಪೀಪಲ್​ ಆ್ಯಕ್ಟ್​ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನಿಬ್ಬರಾದ ಶ್ರೀನಿವಾಸನ್​ ಮತ್ತು ದಾಮೋದರನ್​ ವಿರುದ್ಧ ಲಂಚ ಪ್ರಕರಣವನ್ನು ದಾಖಲಿಸಲಾಗಿದೆ.​ ಆರೋಪಿ ಆನಂದ್​ ಡಿಎಂಕೆ ಪಕ್ಷದ ಹಿರಿಯ ನಾಯಕರಾಗಿರುವ ದೊರೈ ಮುರುಗನ್​ ಮಗ.

ಚುನಾವಣೆಗೆ ಹಣ ಸಂಗ್ರಹಿಸಿದ್ದಾರೆ ಎಂಬ ಅನುಮಾನದಿಂದ ಮಾರ್ಚ್​ 30ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೊರೈ ಮುರುಗನ್​ ಮನೆ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಸುಮಾರು 10.50 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಇದಾದ ಎರಡನೇ ದಿನದ ಬಳಿಕ ಡಿಎಂಕೆ ನಾಯಕನ ಸಹಾಯಕನಿಗೆ ಸಂಬಂಧಿಸಿದ ಸಿಮೆಂಟ್​ ಗೋಡೋನ್​ನಲ್ಲಿ 11.53 ಕೋಟಿ.ರೂ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ಬಗ್ಗೆ ಐಟಿ ಬಗ್ಗೆ ಮಾತನಾಡಿದ್ದ ದೊರೈ ಮುರುಗನ್​ ನಾನು ಏನನ್ನೂ ಮರೆ ಮಾಡಿಲ್ಲ. ಚುನಾವಣೆಯಲ್ಲಿ ನನ್ನನ್ನು ಎದುರಿಸಲಾಗದೆ ಕೆಲವು ರಾಜಕೀಯ ನಾಯಕರು ಈ ರೀತಿಯ ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)