ಮೋದಿ ನಿಯತ್ತಿನ ಮೇಲೆ ಜನರಿಗಿದೆ ವಿಶ್ವಾಸ: ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅಭಿಮತ

ಬಿಜೆಪಿ ಜತೆಗೆ ಅನೇಕ ವರ್ಷಗಳಿಂದಲೂ ಒಡನಾಟ ಹೊಂದಿ ಚುನಾವಣೆಯಲ್ಲೂ ತೊಡಗಿದ್ದರೂ ಅಧಿಕೃತವಾಗಿ ಮೇನಲ್ಲಿ ಬಿಜೆಪಿ ಸೇರ್ಪಡೆಯಾಗಿರುವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಈ ಬಾರಿ ಲೋಕಸಭೆ ಚುನಾವಣೆ ಸಮಿತಿ ಸಹ ಸಂಚಾಲಕ. ರಾಜ್ಯದಲ್ಲಿನ ಚುನಾವಣೆ ನಿರ್ವಹಣೆಗೆ ಕೇಂದ್ರದ ಪ್ರತಿನಿಧಿ ಎಂದೇ ಭಾವಿಸಲಾಗಿದೆ. ರಾಷ್ಟ್ರದಲ್ಲಿ ಚುನಾವಣೆ ಸ್ಥಿತಿ, ಕಾಂಗ್ರೆಸ್ ತಂತ್ರ, ಬಿಜೆಪಿ ತಯಾರಿ ಕುರಿತು ವಿಜಯವಾಣಿ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

# ಕರ್ನಾಟಕದಲ್ಲಿ ಮೈತ್ರಿಯಿಂದ ಬಿಜೆಪಿಗೆ ಅಪಾಯವಿಲ್ಲವೇ?

-ಉತ್ತರಪ್ರದೇಶದಲ್ಲಿ ಯಾದವ+ಮುಸ್ಲಿಂ+ಒಬಿಸಿ =ಬಿಜೆಪಿ ವಿರುದ್ಧ ಜಯ ಎನ್ನುವುದು ಎಷ್ಟು ಸುಳ್ಳೋ, ಕರ್ನಾಟಕದಲ್ಲಿ ಕಾಂಗ್ರೆಸ್+ಜೆಡಿಎಸ್= ಬಿಜೆಪಿಗಿಂತ ಹೆಚ್ಚು ಮತ ಎಂಬುದೂ ಸಾಧ್ಯವಿಲ್ಲ. ಜನರ ಜತೆಗೆ ಪ್ರಧಾನಿ ಮೋದಿ ನೇರವಾಗಿ ಸಂಪರ್ಕದಲ್ಲಿರುವ ಕಾರಣ ಈ ಚುನಾವಣೆಯಲ್ಲಿ ಯಾವ ಜಾತಿ ಲೆಕ್ಕಾಚಾರವೂ ನಡೆಯುವುದಿಲ್ಲ.

# ರಫೇಲ್ ಖರೀದಿ ಕುರಿತು ಮತ್ತೆ ವಿಚಾರಣೆ ಬಂದದ್ದು ಹಿನ್ನಡೆಯೇ?

-ರಫೇಲ್ ವಿಚಾರ ಈಗಾಗಲೆ ಸುಪ್ರೀಂಕೋರ್ಟ್ ನಲ್ಲಿ ಇತ್ಯರ್ಥವಾಗಿದೆ. ಆದರೆ ಯಾವುದೇ ತೀರ್ಪನ್ನು ಮರುಪರಿಶೀಲಿಸುವಂತೆ ನ್ಯಾಯಾಲಯದ ಮೊರೆ ಹೋಗಲು ಎಲ್ಲ ನಾಗರಿಕರಿಗೆ ಅಧಿಕಾರವಿದೆ. ರಾಹುಲ್ ಇದನ್ನು ರಾಜಕೀಯವಾಗಿ ಬಳಸಿಕೊಂಡು ಲಾಭ ಪಡೆಯಲು ಮುಂದಾಗುತ್ತಿದ್ದಾರೆ. ಮಧ್ಯಪ್ರದೇಶ ಸಿಎಂ ವಿರುದ್ಧ ಸುತ್ತಿಕೊಳ್ಳುತ್ತಿದ್ದ 500 ಕೋಟಿ ರೂ. ಐಟಿ ದಾಳಿ ವಿಷಯಾಂತರ ಮಾಡಲು ಈ ಕಸರತ್ತು ಅಷ್ಟೆ.

# 2018ರಲ್ಲಿ ನಡೆದಿದ್ದ ಮೂರು ರಾಜ್ಯಗಳ ಚುನಾವಣೆಯಲ್ಲಿ ರೈತರು ಬಿಜೆಪಿಯಿಂದ ದೂರ ಹೋಗಿದ್ದರು. ಅದನ್ನು ಸರಿಪಡಿಸುವ ಪ್ರಯತ್ನ ಏನು?

-ರೈತರು ಸಂಕಷ್ಟದಲ್ಲಿದ್ದಾರೆ, ಸಾಲಮನ್ನಾ ಮಾಡುತ್ತೇವೆ ಎಂಬ ಕಾಂಗ್ರೆಸ್ ಚುನಾವಣಾ ತಂತ್ರ ಈ ಮೂರು ರಾಜ್ಯಗಳಲ್ಲಿ ಫಲ ನೀಡಿದೆ ಎಂಬುದನ್ನು ಒಪು್ಪತ್ತೇವೆ. ಆದರೆ ಅದೇ ಮಧ್ಯಪ್ರದೇಶ, ರಾಜಸ್ಥಾನದ ಜತೆಗೆ ಪಂಜಾಬ್​ನಲ್ಲಿ ಕಾಂಗ್ರೆಸ್​ನ ನಿಜಮುಖ ರೈತರಿಗೆ ಅರ್ಥವಾಗಿದೆ. ಕರ್ನಾಟಕದಲ್ಲೂ ಸಾಲಮನ್ನಾ ಘೊಷಣೆಗೆ ಸೀಮಿತವಾಗಿದೆ. ಸಾಲಮನ್ನಾದಂತಹ ತಾತ್ಕಾಲಿಕ ಪರಿಹಾರದ ಬದಲಿಗೆ 2022ರ ವೇಳೆಗೆ ಇಡೀ ಕೃಷಿ ವಲಯವನ್ನು ಉತ್ತೇಜಿಸುವ, ರೈತರನ್ನು ಸ್ವಾವಲಂಬಿಯಾಗಿಸುವ ಗುರಿ ಪ್ರಧಾನಿಯವರದ್ದು.

# 2022ರಕ್ಕೆ ಕೇವಲ ಮೂರು ವರ್ಷವಿದೆ, ಇಷ್ಟು ಕಡಿಮೆ ಅವಧಿಯಲ್ಲಿ ಅಗಾಧ ಕೆಲಸ ಹೇಗೆ ಸಾಧ್ಯ?

-ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಬಲ್ಲದೇ? ದೊಡ್ಡ ಉದ್ಯಮಿಗಳು ಪಡೆದ ಸಾಲ ಹಿಂದಿರುಗಿಸುತ್ತಾರೆಯೇ? ಭಾರತ ಸರ್ಕಾರ ಭ್ರಷ್ಟಾಚಾರದಿಂದ ಮುಕ್ತವಾಗಲು ಸಾಧ್ಯವೇ ಎಂಬ ಪ್ರಶ್ನೆ 2014ರಲ್ಲಿ ಕೇಳಿದ್ದರೆ ಉತ್ತರ ಕಷ್ಟವಾಗುತ್ತಿತ್ತು. ಆದರೆ ಇಂದು ಮೋದಿಯವರ ನಿಯತ್ತಿನ ಮೇಲೆ ಜನರಿಗೆ ವಿಶ್ವಾಸವಿದೆ.

# ಕೇರಳದಲ್ಲಿ ರಾಹುಲ್ ಗಾಂಧಿ ಸ್ಪರ್ಧೆ, ಬಿಜೆಪಿ ಸ್ಥಿತಿ ಬಗ್ಗೆ ನಿಮ್ಮ ವಿಶ್ಲೇಷಣೆ?

-ರಾಹುಲ್ ಸ್ಪರ್ಧೆ ಕಾರಣಕ್ಕೇ ಕೇರಳದಲ್ಲಿ ಬಿಜೆಪಿ ಹೆಚ್ಚು ಲಾಭ ಪಡೆಯುತ್ತದೆ. 5-6 ಕ್ಷೇತ್ರದಲ್ಲಿ ಬಿಜೆಪಿ 1 ಅಥವಾ 2ನೇ ಸ್ಥಾನ ಪಡೆಯುತ್ತದೆ.

# ಬೆಂಗಳೂರಿಗೆ ಬಿಜೆಪಿ ಕೊಡುಗೆಯನ್ನು ಪ್ರಶ್ನಿಸಿದರೆ?

-ಬೆಂಗಳೂರು ಅಭಿವೃದ್ಧಿ ವಿಚಾರ ಚರ್ಚೆ ಆಗಲೇ ಬೇಕು. ಪ್ರತಿ ವರ್ಷ 10 ಸಾವಿರ ಕೋಟಿ ರೂ. ಬಜೆಟ್ ಹೊಂದಿರುವ ಸಂಸ್ಥೆ ಏನು ಕೆಲಸ ಮಾಡಿದೆ? ಅಭಿವೃದ್ಧಿ ಏಕೆ ಆಗಿಲ್ಲ? ಈ ಪ್ರಶ್ನೆಗೆ ರಿಜ್ವಾನ್ ಅರ್ಷದ್ ಮತ್ತೆ ಕೃಷ್ಣ ಭೈರೇಗೌಡ ಉತ್ತರಿಸಬೇಕು.

# ಕರ್ನಾಟಕದಲ್ಲಿ ವಾತಾವರಣ ಹೇಗಿದೆ?

-ರಾಜ್ಯಾದ್ಯಂತ ಉತ್ತಮ ವಾತಾವರಣವಿದೆ. ಸದ್ಯದ ಸ್ಥಿತಿಯಲ್ಲಿ ನನ್ನ ಪ್ರಕಾರ 23 ಸ್ಥಾನ ಬಿಜೆಪಿ ಗೆಲ್ಲುತ್ತದೆ.

# ಸ್ಥಳೀಯವಾಗಿ ಸಂಸದರ ಕುರಿತು ಸದಾಭಿಪ್ರಾಯ ಇಲ್ಲವಲ್ಲ?

-ನಾನು ಯಾವ ಸಂಸದರಿಗೂ ಪ್ರಮಾಣಪತ್ರ ನೀಡಲು ಹೋಗುವುದಿಲ್ಲ. ಆದರೆ ಕಳೆದ ಅವಧಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು ಎಂಬುದು ಮುಖ್ಯ. ನನ್ನದೇ ಸಂಸದ ಆದರ್ಶ ಗ್ರಾಮ ಕಾರ್ಯಕ್ಕೆ ಅನೇಕ ಅಡ್ಡಿ ಎದುರಿಸಬೇಕಾಯಿತು. ಯಾವ ಕೆಲಸವನ್ನೂ ಮಾಡಲು ಬಿಡದೆ ತಡೆ ಒಡ್ಡುತ್ತಿರುತ್ತಾರೆ.

# ಬಿಜೆಪಿ ಹುಳುಕು ಮುಚ್ಚಿ ಕೊಳ್ಳಲು ಐಟಿ ದಾಳಿ ನಡೆಸುತ್ತಿದೆ ಎಂಬ ಆರೋಪದ ಬಗ್ಗೆ?

– ನನಗೆ ಒಂದು ವಿಚಾರ ಅರ್ಥವಾಗುತ್ತಿಲ್ಲ. ಚುನಾವಣೆ ಸಮಯದಲ್ಲಿ ಕಪು್ಪ ಹಣ ಚಲಾವಣೆ, ಕಾಂಟ್ರಾಕ್ಟರ್​ಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿ ಐಟಿ ಇಲಾಖೆ, ಪೊಲೀಸರು ರಜೆ ತೆಗೆದುಕೊಳ್ಳಬೇಕೆ? ಚುನಾವಣೆ ಸಮಯದಲ್ಲಿ ಅತ್ಯಾಚಾರವಾದರೆ ಪೊಲೀಸರು ಸುಮ್ಮನಿರುತ್ತಾರೆಯೇ? ಜನರ ದಾರಿ ತಪ್ಪಿಸಲು ಈ ತಂತ್ರ.