ವಿಚ್ಛೇದನ ತಡೆದ ಆಲಿಂಗನ: ಖಾಲಿ ಕೈಗಿಂತ ಮೈತ್ರಿಯೇ ಲೇಸೆಂಬ ನಿರ್ಣಯಕ್ಕೆ ಬಂದ ದೋಸ್ತಿ ಪಡೆ

ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕೇಂದ್ರ ಹಾಗೂ ರಾಜ್ಯದಲ್ಲಿ ಸಂಪುಟ ಕುತೂಹಲ ಇಮ್ಮಡಿಕೊಂಡಿದೆ. ಮೋದಿ ಅಲೆಯಲ್ಲಿ ಸಂಪೂರ್ಣವಾಗಿ ಕೊಚ್ಚಿಹೋಗಿರುವ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಪಕ್ಷಗಳು ರಾಜ್ಯದಲ್ಲಿ ಸರ್ಕಾರ ಉಳಿಸಿಕೊಳ್ಳಲು ಸರ್ಕಸ್ ನಡೆಸುತ್ತಿದ್ದರೆ ಅತ್ತ ಕೇಂದ್ರದಲ್ಲಿ ಮೋದಿ ಸಂಪುಟಕ್ಕೆ ಯಾರ್ಯಾರೆಂಬ ಚರ್ಚೆ ಆರಂಭವಾಗಿದೆ. ಬಿಜೆಪಿ ಬಲವರ್ಧನೆಗೆ ಭರ್ಜರಿ ಉಡುಗೊರೆ ನೀಡಿದ ರಾಜ್ಯದ ಬಿಜೆಪಿ ಸಂಸದರ ಪೈಕಿ ಎಷ್ಟು ಜನರಿಗೆ ಅದೃಷ್ಟ ಒಲಿಯಲಿದೆ ಎಂಬ ಲೆಕ್ಕಾಚಾರವೂ ಶುರುವಾಗಿದೆ.

ಬೆಂಗಳೂರು: ಲೋಕ ಸಮರದಲ್ಲಿ ಬಂದ ವ್ಯತಿರಿಕ್ತ ಫಲಿತಾಂಶದಿಂದಾಗಿ ಮೈತ್ರಿ ಮುರಿದುಕೊಳ್ಳುವ ತೀರ್ಮಾನಕ್ಕೆ ಬಂದಿದ್ದ ಜೆಡಿಎಸ್-ಕಾಂಗ್ರೆಸ್ ನಾಯಕರಿಗೆ ರಾತ್ರೋರಾತ್ರಿ ಜ್ಞಾನೋದಯವಾಗಿದೆ. ‘ಉಪವಾಸಕ್ಕಿಂತ ಸಹವಾಸ’ವೇ ಲೇಸೆಂಬ ಅಂತಿಮ ನಿರ್ಣಯಕ್ಕೆ ಬಂದಿರುವ ದೋಸ್ತಿ ಪಡೆ ಬಿಜೆಪಿಯಿಂದ ಎದುರಾಗಬಹುದಾದ ಆಪರೇಷನ್ ಕಮಲವನ್ನು ಮೆಟ್ಟಿ ನಿಂತು ಸರ್ಕಾರ ಉಳಿಸಿಕೊಳ್ಳುವ ಸಂಕಲ್ಪ ಕೈಗೊಂಡಿವೆ.

ಶುಕ್ರವಾರ ನಡೆದ ಅನೌಪಚಾರಿಕ ಸಂಪುಟ ಸಭೆ ಮತ್ತು ಸಿಎಂ-ಕಾಂಗ್ರೆಸ್ ಪ್ರಮುಖ ನಾಯಕರ ನಡುವಿನ ಪ್ರತ್ಯೇಕ ಸಭೆಯಲ್ಲಿ ಸರ್ಕಾರ ಉಳಿಸಿಕೊಳ್ಳಲು ಬೇಕಾದ ಕಾರ್ಯ ಸೂಚಿ ಸಿದ್ಧವಾಗಿದೆ. ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಕಾಂಗ್ರೆಸ್ ಶಾಸಕರ ಅಸಮಾಧಾನ ಪರಿಹರಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯಾಚರಣೆಗೂ ತಕ್ಷಣದಿಂದಲೇ ಚಾಲನೆ ದೊರೆಯಿತು.

ರಾಜಿಯಾದ ರಾಜೀನಾಮೆ: ಲೋಕಸಭೆ ಚುನಾವಣೆ ಫಲಿತಾಂಶದಿಂದ ಜಝುರಿತರಾಗಿದ್ದ ಜೆಡಿಎಸ್ ನಾಯಕರು, ಕಾಂಗ್ರೆಸ್​ನಿಂದ ಬಂದ ಟೀಕೆ ಟಿಪ್ಪಣಿಯನ್ನು ಸಹಿಸದಾದರು. ಅಂತಿಮವಾಗಿ ಮೈತ್ರಿಗೆ ತಿಲಾಂಜಲಿ ಇಟ್ಟು ಸರ್ಕಾರಕ್ಕೆ ತೆರೆ ಎಳೆಯುವ ಅಭಿಪ್ರಾಯಕ್ಕೆ ಬಂದಿದ್ದರು. ಆದರೆ, ಕಾಂಗ್ರೆಸ್​ನ ಹಿರಿಯ ನಾಯಕರೇ ಖುದ್ದು ಮುಖ್ಯಮಂತ್ರಿಯನ್ನು ಸಮಾಧಾನಗೊಳಿಸಿ ಮೈತ್ರಿ ಅನಿವಾರ್ಯತೆ ಬಿಡಿಸಿಟ್ಟರು. ಒಂದೊಮ್ಮೆ ಆತುರದಿಂದ ಸರ್ಕಾರ ಕೆಡವಿದರೆ ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಂಡಂತಾಗುತ್ತದೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಬಿಜೆಪಿಗೆ ಅವಕಾಶ ಬಿಟ್ಟುಕೊಡುವುದರಿಂದ ಎರಡೂ ಪಕ್ಷಗಳಿಗೆ ನಷ್ಟವೇ ಹೆಚ್ಚು. ಬದಲಾಗಿ ಸರ್ಕಾರ ಮುಂದುವರಿದರೆ ಅಧಿಕಾರದ ಚುಕ್ಕಾಣಿ ಉಳಿಯುತ್ತದೆ ಎಂಬುದರ ಬಗ್ಗೆ ತಿಳಿ ಹೇಳಿದರು.

ಪಂಚ ತಂತ್ರ

1. ಸರ್ಕಾರ ಬಿದ್ದರೆ ಎರಡೂ ಪಕ್ಷಕ್ಕೆ ನಷ್ಟ. ಹೀಗಾಗಿ ಸರ್ಕಾರ ಮುಂದುವರಿಸಲು ಎರಡೂ ಪಕ್ಷದವರೂ ಒತ್ತುಕೊಡುವುದು.

2. ಹಿಂದಿನ ಎಲ್ಲ ಗೊಂದಲವನ್ನು ಅಲ್ಲಿಗೇ ಬಿಟ್ಟು, ಎಲ್ಲವನ್ನೂ ಮರೆತು ಮುಂದೆ ಒಟ್ಟಿಗೆ ಸಾಗುವುದು. ಸರ್ಕಾರಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುವುದು.

3. ಬಿಜೆಪಿ ಸಹಜವಾಗಿ ಸರ್ಕಾರ ರಚಿಸಲು ಪ್ರಯತ್ನ ನಡೆಸುತ್ತದೆ. 10 ಶಾಸಕರು ಆ ಪಕ್ಷಕ್ಕೆ ಬೇಕಾಗುತ್ತದೆ. ಈ ಪ್ರಯತ್ನ ವಿಫಲಗೊಳಿಸುವುದು.

4. ಕ್ಷೇತ್ರದಲ್ಲಿ ಕೆಲಸಗಳಾಗುತ್ತಿಲ್ಲ ಎಂಬ ಶಾಸಕರ ಕೂಗಿಗೆ ಸಿಎಂ ಆದ್ಯತೆ ಕೊಡುವುದು. ಹತ್ತು ದಿನಗಳ ನಂತರ ಜಿಲ್ಲಾವಾರು, ಇಲಾಖಾವಾರು ಸಭೆ ಕರೆದು ಅವರ ಅಸಮಾಧಾನ ತಣಿಸುವುದು.

5. ಜಂಟಿ ಶಾಸಕಾಂಗ ಪಕ್ಷದ ಸಭೆ ಕರೆದು ಎರಡೂ ಪಕ್ಷದ ನಡುವಿನ ವೈಮನಸ್ಯ ಕಡಿಮೆ ಮಾಡಿಕೊಳ್ಳುವುದು.

ಯಾರಾಗ್ತಾರೆ ಕೇಂದ್ರ ಮಂತ್ರಿ?:

ನವದೆಹಲಿ: ಎನ್​ಡಿಎ ಸರ್ಕಾರ ಎರಡನೇ ಅವಧಿಗೆ ದೆಹಲಿಯ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಮೋದಿ ಸಂಪುಟ ಸೇರುವವರ್ಯಾರೆಂಬ ಕುತೂಹಲ ಇಮ್ಮಡಿಗೊಂಡಿದೆ. ಮೋದಿ ಆಪ್ತ ಅಮಿತ್ ಷಾ ಸಂಪುಟ ಸೇರ್ಪಡೆ ಸಾಧ್ಯತೆ ದಟ್ಟವಾಗುತ್ತಿರುವಂತೆಯೇ, ಅವರಿಗೆ ಗೃಹ ಖಾತೆ ಸಿಗುವ ಸುಳಿವ ಸಿಕ್ಕಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್​ಗೆ ಕೊಕ್ ನೀಡುವುದು ಖಚಿತವಾಗಿರುವುದು ಷಾ ಸಂಪುಟ ಸೇರ್ಪಡೆ ವದಂತಿಗಳಿಗೆ ಬಲ ತುಂಬಿದೆ. ಇತ್ತ ಬಿಜೆಪಿ ಬಲವರ್ಧನೆಗೆ ಅಭೂತಪೂರ್ವ ಕೊಡುಗೆ ನೀಡಿದ ಕಾರಣಕ್ಕಾಗಿ ಕರ್ನಾಟಕದ ನಾಲ್ವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಸಂಭಾವ್ಯ ಸಚಿವರು

ಅಮಿತ್ ಷಾ, ನಿತಿನ್ ಗಡ್ಕರಿ, ರಾಜ ನಾಥ್ ಸಿಂಗ್, ಪಿಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್

ರಾಜ್ಯಕ್ಕೆಷ್ಟು ಸ್ಥಾನ?

ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ, ದಲಿತ ಕೋಟಾದಡಿ ತಲಾ ಒಬ್ಬರಿಗೆ ಸ್ಥಾನ

ಮೋದಿ ರಾಜೀನಾಮೆ

ಪ್ರಧಾನಿ ಮೋದಿ, ಅವರ ಸಂಪುಟ ಸದಸ್ಯರ ರಾಜೀನಾಮೆಯನ್ನು ರಾಷ್ಟ್ರಪತಿ ಅಂಗೀಕರಿಸಿದ್ದಾರೆ. ಹೊಸ ಸರ್ಕಾರ ರಚನೆಯಾಗುವವರೆಗೂ ಅಧಿಕಾರದಲ್ಲಿ ಮುಂದುವರಿಯಲು ರಾಷ್ಟ್ರಪತಿ ರಾಮ ನಾಥ ಕೋವಿಂದ ಮನವಿ ಮಾಡಿದ್ದಾರೆ.

One Reply to “ವಿಚ್ಛೇದನ ತಡೆದ ಆಲಿಂಗನ: ಖಾಲಿ ಕೈಗಿಂತ ಮೈತ್ರಿಯೇ ಲೇಸೆಂಬ ನಿರ್ಣಯಕ್ಕೆ ಬಂದ ದೋಸ್ತಿ ಪಡೆ”

  1. Loot Karnataka loot. Now other than BJP no choice. JDS and congress should ask them selves whether they have some shame. Roshan Baig is right to say Bafoon arrogant and flop leaders

Leave a Reply

Your email address will not be published. Required fields are marked *