ನಮೋ 2.0 ಸರ್ಕಾರ ರಚನೆ ಕಸರತ್ತು: ಷಾ ಹೆಗಲಿಗೆ ಗೃಹ ಖಾತೆ?

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯಗಳಿಸಿದ್ದ ಪ್ರಧಾನಿ ನರೇಂದ್ರ ಮೋದಿಯ ಎರಡನೇ ಸರ್ಕಾರಕ್ಕೆ ಸಚಿವ ಸಂಪುಟ ರಚನೆಯ ಸವಾಲು ಮುಂದಿದೆ. ನವ ಭಾರತ ನಿರ್ವಣದ ಸಂಕಲ್ಪ ಈಡೇರಿಸುವ ಉತ್ತಮ ಸಂಪುಟ ರಚಿಸುವ ಜವಾಬ್ದಾರಿ ಮೋದಿ ಮೇಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆಯೇ ಅಥವಾ ಪಕ್ಷದ ಜವಾಬ್ದಾರಿಯಲ್ಲೇ ಮುಂದುವರಿಸಲು ನಿರ್ಧರಿಸುತ್ತಾರೋ ಎನ್ನುವ ಬಗ್ಗೆ ಗೊಂದಲವಿದೆ. ಮಹಾರಾಷ್ಟ್ರ, ದೆಹಲಿ, ಹರಿಯಾಣ ಹಾಗೂ ಪಶ್ಚಿಮ ಬಂಗಾಳದ ಚುನಾವಣೆ ಕಾರಣದಿಂದ ಅಧ್ಯಕ್ಷ ಹುದ್ದೆ ಬದಲಾವಣೆ ಬಗ್ಗೆ ಅಸ್ಪಷ್ಟತೆ ಇದೆ ಎನ್ನಲಾಗಿದೆ. ಒಂದೊಮ್ಮೆ ಸಂಪುಟಕ್ಕೆ ಷಾ ಬರುವುದಾದರೆ ಪ್ರಭಾವಿ ಗೃಹ ಅಥವಾ ಆರ್ಥಿಕ ಖಾತೆ ನೀಡುವ ಸಾಧ್ಯತೆ ನಿಚ್ಚಳವಾಗಿದೆ.

ಗೃಹ ಖಾತೆ ಮೇಲೆ ಹಾಲಿ ಸಚಿವ ರಾಜನಾಥ್ ಸಿಂಗ್ ಕಣ್ಣು ಹಾಕಿದ್ದರೆ, ಆರ್ಥಿಕ ಖಾತೆಯನ್ನು ಪಿಯೂಷ್ ಗೋಯಲ್​ಗೆ ವಹಿಸುವ ಬಗೆಗೂ ಚಿಂತನೆ ನಡೆದಿದೆ. ಇದೆಲ್ಲ ಅಮಿತ್ ಷಾ ನಡೆಯ ಮೇಲೆ ಅವಲಂಬನೆಯಾಗಿದೆ. ಆದರೆ ಹಾಲಿ ಸಚಿವರಾದ ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್​ಗೆ ಕೊಕ್ ನೀಡುವುದು ಬಹುತೇಕ ಖಚಿತವಾಗಿದೆ. ತೀವ್ರ ಅನಾರೋಗ್ಯ ಕಾರಣದಿಂದ ಇವರಿಬ್ಬರೂ ಸಂಪುಟ ಸೇರದಿರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪೂರಕವೆನ್ನುವಂತೆ ಶುಕ್ರವಾರ ನಡೆದ ಸಂಪುಟ ಸಭೆಗೂ ಜೇಟ್ಲಿ ಹಾಜರಾಗಿಲ್ಲ. ಆದರೆ ಬೀಳ್ಕೊಡುಗೆ ರೀತಿಯಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಜೇಟ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಲಾಬಿಗೆ ಭಯ, ಗೌಪ್ಯತೆ: ಸಚಿವ ಸಂಪುಟಕ್ಕೆ ಸೇರಲು ಲಾಬಿ ನಡೆಸಿದರೆ ಇರುವ ಅವಕಾಶವೂ ಕೈ ತಪ್ಪಲಿದೆ ಎನ್ನುವ ಭಯ ಸಾಕಷ್ಟು ಸಂಸದರಿಗಿದೆ. ಹೀಗಾಗಿ ಸಂಪುಟಕ್ಕೆ ಸೇರುವ ಹಂಬಲವಿದ್ದರೂ ದೆಹಲಿಗೆ ಹೋಗಿ ಪ್ರಭಾವ ಬೀರಲು ಯಾರೊಬ್ಬರೂ ಪ್ರಯತ್ನ ಮಾಡುತ್ತಿಲ್ಲ. ಮೋದಿ-ಷಾ ಜೋಡಿ ನಿರ್ಧರಿಸಲಿ ಎಂದು ಸುಮ್ಮನೆ ಕುಳಿತಿದ್ದಾರೆ.

ಇಂದು ಸಂಸದೀಯ ಪಕ್ಷದ ಸಭೆ

ನರೇಂದ್ರ ಮೋದಿಯನ್ನು ಸಂಸದೀಯ ಪಕ್ಷದ ನಾಯಕರಾಗಿ ಮರು ಆಯ್ಕೆ ಮಾಡುವ ಉದ್ದೇಶದಿಂದ ಬಿಜೆಪಿ ಸಂಸದೀಯ ಪಕ್ಷದ ಸಭೆಯನ್ನು ಶನಿವಾರ ಕರೆಯಲಾಗಿದೆ. ಬಳಿಕ ಸಂಸದರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.

ಸ್ಮೃತಿಗೆ ಪ್ರಭಾವಿ ಇಲಾಖೆ

ಕಳೆದ ಬಾರಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸುವ ಧೈರ್ಯ ತೋರಿದ್ದ ಕಾರಣಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿಯಂಥ ಪ್ರಭಾವಿ ಖಾತೆಯನ್ನು ಸ್ಮೃತಿ ಆರಂಭದಲ್ಲಿ ನಿಭಾಯಿಸಿದ್ದರು. ಬಳಿಕ ಜವಳಿ ಖಾತೆ ಪಡೆದಿದ್ದರು. ಹೊಸ ಸರ್ಕಾರದಲ್ಲಿ ಸ್ಮೃತಿಗೆ ಇನ್ನಷ್ಟು ಪ್ರಭಾವಿ ಖಾತೆ ದೊರೆಯಲಿದೆ ಎನ್ನಲಾಗುತ್ತಿದೆ.

ಸಂಪುಟದ ಸಾಧ್ಯಾಸಾಧ್ಯತೆ

  • ಯುವಕರು, ಮೊದಲ ಬಾರಿಗೆ ಸಂಸದ ರಾದವರಿಗೆ ಅವಕಾಶ
  • ರಾಜಕೀಯೇತರ ವ್ಯಕ್ತಿಗಳಿಗೆ ಪ್ರಭಾವಿ ಖಾತೆ
  • ಮೈತ್ರಿಯಲ್ಲಿ ಜೆಡಿಯು, ಶಿವಸೇನೆಗೆ ಆದ್ಯತೆ
  • ಮುಂದಿನ ವರ್ಷ ಚುನಾವಣೆ ಎದುರಿಸುವ ಮಹಾರಾಷ್ಟ್ರ, ದೆಹಲಿ, ಹರಿಯಾಣದ ಸಂಸದರಿಗೆ ಮಣೆ

30ಕ್ಕೆ ಮೋದಿ ಪ್ರಮಾಣವಚನ

ನರೇಂದ್ರ ಮೋದಿ ಸತತ ಎರಡನೇ ಬಾರಿಗೆ ಪ್ರಧಾನಿಯಾಗಿ ಮೇ 30ರ ಸಂಜೆ 5 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದ ಎದುರು ನಡೆಯುವ ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.

ಪ್ರಮಾಣವಚನಕ್ಕೂ ಮುನ್ನ…

  • ಮೇ 28ಕ್ಕೆ ಗುಜರಾತ್​ಗೆ ಭೇಟಿ ನೀಡಿ ತಾಯಿ ಆಶೀರ್ವಾದ.
  • ಸ್ಥಳೀಯ ಬಿಜೆಪಿ ಘಟಕದಿಂದ ನರೇಂದ್ರ ಮೋದಿಗೆ ಅಭಿನಂದನಾ ಕಾರ್ಯಕ್ರಮ.
  • ಮೇ 29ಕ್ಕೆ ವಾರಾಣಸಿಗೆ ಭೇಟಿ ನೀಡಲಿರುವ ಮೋದಿ, ವಿಶೇಷ ಪೂಜೆ ಮತ್ತು ಗಂಗಾರತಿಯಲ್ಲಿ ಭಾಗಿ.

ವಿದೇಶಿ ದಿಗ್ಗಜರಿಗೆ ಆಹ್ವಾನ?

ಮೊದಲ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಸಾರ್ಕ್ ದೇಶಗಳ ಮುಖ್ಯಸ್ಥರಿಗೆ ಮೋದಿ ಆಹ್ವಾನ ನೀಡಿದ್ದರು. ಆದರೆ ಈ ಬಾರಿ ಜಾಗತಿಕವಾಗಿ ಭಾರತ ಹಾಗೂ ಮೋದಿ ವರ್ಚಸ್ಸು ಹೆಚ್ಚಿಸುವ ಉದ್ದೇಶದಿಂದ ಬಲಿಷ್ಠ ದೇಶಗಳ ನಾಯಕರನ್ನು ಆಹ್ವಾನಿಸುವ ಬಗ್ಗೆ ಪ್ರಕ್ರಿಯೆ ಆರಂಭವಾಗಿದೆ. ಆದರೆ ಈ ಕುರಿತು ಪ್ರಧಾನಿ ಕಚೇರಿಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈಗಿರುವ ಮಾಹಿತಿ ಪ್ರಕಾರ ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್, ಜರ್ಮನಿ, ಜಪಾನ್, ಇಸ್ರೇಲ್, ಸೌದಿ ಅರೇಬಿಯಾ ಹಾಗೂ ಯುಎಇ ದೇಶಗಳ ಮುಖ್ಯಸ್ಥರ ಜತೆಗೆ ಸಾರ್ಕ್ ದೇಶಗಳ ಮುಖ್ಯಸ್ಥರನ್ನು ಆಹ್ವಾನಿಸಿ ಪ್ರಮಾಣವಚನಕ್ಕೆ ಭರ್ಜರಿ ಮೆರುಗು ನೀಡಲು ಪ್ರಯತ್ನ ನಡೆಯುತ್ತಿದೆ. ಆದರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆಹ್ವಾನಿಸುವ ಬಗ್ಗೆ ಇನ್ನೂ ಗೊಂದಲವಿದೆ ಎನ್ನಲಾಗಿದೆ.

ಮಾರ್ಗದರ್ಶಕರಿಗೆ ನಮೋಸ್ತುತೆ

ಬಿಜೆಪಿ ವರಿಷ್ಠರಾದ ಎಲ್.ಕೆ. ಆಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿಯನ್ನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಭೇಟಿಯಾಗಿ ಶುಕ್ರವಾರ ಆಶೀರ್ವಾದ ಪಡೆದರು. ಬಳಿಕ ಟ್ವೀಟ್ ಮಾಡಿದ ಮೋದಿ, ಆಡ್ವಾಣಿಯವರಂತವರು ದಶಕಗಳ ಕಾಲ ಪಕ್ಷವನ್ನು ಬಲಿಷ್ಠಗೊಳಿಸಲು ಸಾಕಷ್ಟು ಶ್ರಮಿಸಿದ್ದಾರೆ. ಅದರಿಂದ ಇಂದು ಬಿಜೆಪಿಗೆ ಈ ಗೆಲುವು ದಕ್ಕಿದೆ ಎಂದು ಹೇಳಿದ್ದಾರೆ. ನಂತರ ಜೋಶಿಯವರನ್ನು ಭೇಟಿಯಾದ ಬಗ್ಗೆಯೂ ಟ್ವೀಟ್ ಮಾಡಿದ ಮೋದಿ, ಜೋಶಿ ವಿದ್ವಾಂಸರು, ಬೌದ್ಧಿಕ ಪರಿಣತರು. ಭಾರತದ ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಅವರ ಕೊಡುಗೆ ದೊಡ್ಡದು. ಅವರು ಬಿಜೆಪಿಯನ್ನು ಬಲಿಷ್ಠಗೊಳಿಸಲು ಶ್ರಮಿಸಿದ್ದಾರೆ. ನನ್ನಂತಹ ಹಲವು ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದ್ದಾರೆ. ಮೋದಿ ಭೇಟಿ ಬಗ್ಗೆ ಜೋಶಿ ಕೂಡ ಪ್ರತಿಕ್ರಿಯಿಸಿದ್ದು, ಹಿರಿಯರಿಂದ ಆಶೀರ್ವಾದ ಪಡೆದುಕೊಳ್ಳುವುದು ಪಕ್ಷದ ಪರಂಪರೆ. ಸದ್ಯ ಬಿಜೆಪಿಯ ಬೀಜವನ್ನು ಬಿತ್ತಲಾಗಿದೆ. ಇನ್ನು ಇದರಿಂದ ಸಿಗುವ ರುಚಿಕರವಾದ ಹಣ್ಣುಗಳನ್ನು ಜನರಿಗೆ ದಕ್ಕುವಂತೆ ಮಾಡುವುದು ನಮ್ಮ ಕರ್ತವ್ಯ ಎಂದರು. ದೇಶದಲ್ಲಿ ಬಲಿಷ್ಠ ಸರ್ಕಾರದ ಅಗತ್ಯವಿತ್ತು. ಒಂದು ಪಕ್ಷವಾಗಿ ಬಿಜೆಪಿ ಮತ್ತು ಪ್ರಧಾನಿಯಾಗಿ ಮೋದಿ ಉತ್ತಮ ನಿರ್ವಹಣೆ ತೋರಿದ್ದಾರೆ. ಹೀಗಾಗಿ ವಿಪಕ್ಷಗಳ ಯಾವ ಕಸರತ್ತೂ ಫಲ ನೀಡಲಿಲ್ಲ ಎಂದು ಹೇಳಿದ್ದಾರೆ.

ದೆಹಲಿ ಕಾರಿಡಾರ್…

  • ಮೋದಿ ನೇತೃತ್ವದಲ್ಲಿ ಹಾಲಿ ಸಚಿವ ಸಂಪುಟದ ಕೊನೆಯ ಸಭೆ.
  • 16ನೇ ಲೋಕಸಭೆ ವಿಸರ್ಜನೆಗೆ ಕೇಂದ್ರ ಸಚಿವ ಸಂಪುಟದಿಂದ ರಾಷ್ಟ್ರಪತಿಗೆ ಶಿಫಾರಸು. ಪ್ರಧಾನಿ ಹುದ್ದೆಗೆ ಮೋದಿ ರಾಜೀನಾಮೆ.
  • ಪ್ರಧಾನಿ ಹಾಗೂ ಹಾಲಿ ಕೇಂದ್ರ ಸಚಿವರಿಗೆ ರಾಷ್ಟ್ರಪತಿ ಭವನದಲ್ಲಿ ಔತಣಕೂಟ

ಸಂಪುಟಕ್ಕೆ ಯಾರು?

ಅಮಿತ್ ಷಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಪಿಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ವಿನಯ್ ಸಹಸ್ರಬುದ್ಧೆ, ಭೂಪೇಂದ್ರ ಯಾದವ್, ರಾಜ್ಯವರ್ಧನ್ ಸಿಂಗ್ ರಾಠೋಡ್.

ಯಾರಿಗೆ ಕೊಕ್

ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಉಮಾ ಭಾರತಿ, ಹರ್ದೀಪ್ ಸಿಂಗ್ ಪುರಿ,

Leave a Reply

Your email address will not be published. Required fields are marked *