ರಾತ್ರಿ ಫಲಿತಾಂಶ: ಲೋಕ ರಿಸಲ್ಟ್​ಗೆ ವಿವಿ ಪ್ಯಾಟ್ ತಾಳೆ ಸವಾಲು

| ವಿಲಾಸ ಮೇಲಗಿರಿ ಬೆಂಗಳೂರು

ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ತಿಂಗಳಿನಿಂದ ಕುತೂಹಲದಿಂದ ಕಾದಿರುವ ಜನಸಾಮಾನ್ಯರು ಮೇ 23ರಂದು ಕೂಡ ರಾತ್ರಿಯವರೆಗೆ ಕಾಯಬೇಕು! ಸುಪ್ರೀಂಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಇವಿಎಂ-ವಿವಿಪ್ಯಾಟ್ ಮತಗಳನ್ನು ತಾಳೆ ಹಾಕುವುದು ಕಡ್ಡಾಯವಾಗಿರುವುದರಿಂದ ಈವರೆಗೆ ಮಧ್ಯಾಹ್ನ ದೊರಕುತ್ತಿದ್ದ ಫಲಿತಾಂಶ ಈ ಬಾರಿ ಕನಿಷ್ಠ ಐದಾರು ಗಂಟೆ ತಡವಾಗುವುದು ನಿಶ್ಚಿತ.

ಇವಿಎಂಗಳ ಬಗ್ಗೆ ಕೆಲ ರಾಜಕೀಯ ಪಕ್ಷಗಳು ಅನುಮಾನ ವ್ಯಕ್ತಪಡಿಸಿದ ಕಾರಣದಿಂದಾಗಿ ವಿ.ವಿ.ಪ್ಯಾಟ್ ಹುಟ್ಟಿಕೊಂಡು ಮತದಾನವನ್ನು ಮತ್ತಷ್ಟು ಪಾರದರ್ಶಕಗೊಳಿಸುವ ಪ್ರಯತ್ನ ನಡೆಯಿತು. ಇವಿಎಂ ಮತ್ತು 5 ವಿ.ವಿ.ಪ್ಯಾಟ್​ಗಳ ಮತ ತಾಳೆ ಮಾಡಿ ಮತ ಎಣಿಕೆ ಮಾಡುವ ಮೂಲಕ ಯಾರಿಗೂ ಯಾವುದೇ ಅನುಮಾನ ಬಾರದಂತೆ ಪಾರದರ್ಶಕತೆ ಕಾಪಾಡಿಕೊಳ್ಳಲು ಸುಪ್ರೀಂಕೋರ್ಟ್ ಸೂಚಿಸಿದೆ.

ಮೊದಲು ಒಂದು, ಈಗ ಐದು: ಈ ಮೊದಲು ಪ್ರತಿ ವಿಧಾನಸಭಾ ಕ್ಷೇತ್ರದ ಯಾವುದಾದರೂ ಒಂದು ಮತಗಟ್ಟೆಯ ಇವಿಎಂ-ವಿವಿಪ್ಯಾಟ್ ಮತಗಳನ್ನು ತಾಳೆ ಹಾಕಲಾಗುತ್ತಿತ್ತು. ಈಗ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳಲ್ಲಿ ಇವಿಎಂ-ವಿವಿಪ್ಯಾಟ್ ಮತಗಳನ್ನು ತಾಳೆ ಹಾಕಬೇಕಿದೆ. ಅದರ ಜತೆಗೆ ಎಣಿಕೆ ಸಂದರ್ಭದಲ್ಲಿ ಉಂಟಾಗಬಹುದಾದ ತಾಂತ್ರಿಕ ಕಾರಣ, ಹಲವೆಡೆ ಅಭ್ಯರ್ಥಿಗಳು ಹೆಚ್ಚಿರುವುದು ಕೂಡ ಫಲಿತಾಂಶ ವಿಳಂಬಕ್ಕೆ ಕಾರಣವಾಗಲಿವೆ.

ವಿ.ವಿ.ಪ್ಯಾಟ್ ಆಯ್ಕೆ ಹೇಗೆ?: ಮೊದಲು ಅಂಚೆ ಮತ ಎಣಿಕೆ ನಡೆಯಲಿದೆ. ತರುವಾಯ ಇವಿಎಂ ಮತ ಎಣಿಕೆ ನಡೆಯುತ್ತದೆ. ಇವಿಎಂನ ಎಲ್ಲ ಮತ ಎಣಿಕೆ ಸುತ್ತುಗಳು ಮುಗಿದ ಬಳಿಕ ಒಂದು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ವಿ.ವಿ.ಪ್ಯಾಟ್ ನಂಬರ್ ಬರೆದು ಚೀಟಿಗಳನ್ನು ಡಬ್ಬಿಯಲ್ಲಿ ಹಾಕಿ ಅದರಲ್ಲಿ ಐದನ್ನು ಆಯ್ಕೆ ಮಾಡಿ ಅವುಗಳನ್ನು ಎಣಿಕೆ ಮಾಡಲಾಗುತ್ತದೆ. ವಿ.ವಿ.ಪ್ಯಾಟ್ ಮುದ್ರಿತ ಚೀಟಿಗಳ ಎಣಿಕೆ ಆಗಿ ಇವಿಎಂ ಮತಗಳ ಜತೆ ತಾಳೆ ಆದ ಮೇಲೆಯೇ ಚುನಾವಣಾಧಿಕಾರಿ ಫಲಿತಾಂಶ ಪ್ರಕಟಿಸಲಿದ್ದಾರೆ. ಹಾಗಾಗಿ ಅಂತಿಮ ಫಲಿತಾಂಶ ಪ್ರಕಟಗೊಳ್ಳಲು ರಾತ್ರಿ 6-7 ಗಂಟೆ ಆಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ. 11,200 ಸಿಬ್ಬಂದಿ : ಆಯೋಗ ಮತ ಎಣಿಕೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ. ಸುಮಾರು 11,200 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

1,120 ವಿ.ವಿ.ಪ್ಯಾಟ್ ಲೆಕ್ಕ

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 224 ವಿಧಾನಸಭಾ ಕ್ಷೇತ್ರಗಳಿದ್ದು, ಒಂದೊಂದು ವಿಧಾನಸಭೆ ಕ್ಷೇತ್ರದಲ್ಲಿ ತಲಾ 5 ವಿ.ವಿ.ಪ್ಯಾಟ್ ಮತ ಎಣಿಕೆ ನಡೆಯಬೇಕಾಗಿದೆ. ಒಟ್ಟು ಒಂದು ಲೋಕಸಭಾ ಕ್ಷೇತ್ರದಲ್ಲಿ (8 ವಿಧಾನಸಭೆ ಕ್ಷೇತ್ರಗಳ ಲೆಕ್ಕದಲ್ಲಿ) 40 ವಿ.ವಿ.ಪ್ಯಾಟ್ ಎಣಿಕೆ ಮಾಡಬೇಕಾಗುತ್ತದೆ. ಒಟ್ಟು 28 ಕ್ಷೇತ್ರದಲ್ಲಿ 1,120 ವಿ.ವಿ.ಪ್ಯಾಟ್ ಮತ ಚೀಟಿಯನ್ನು ಎಣಿಕೆ ಮಾಡಿ ಇವಿಎಂ ಮತಗಳ ಜತೆ ತಾಳೆ ನೋಡಬೇಕಾಗುತ್ತದೆ. ಒಂದು ವಿ.ವಿ.ಪ್ಯಾಟ್ ಮತ ಎಣಿಕೆ /ತಾಳೆಗೆ 45 ನಿಮಿಷದಿಂದ 1 ಗಂಟೆ ಬೇಕಾಗುತ್ತದೆ. ಕಾರಣ ಎಲ್ಲ 40 ವಿ.ವಿ.ಪ್ಯಾಟ್ ಮತ ಚೀಟಿ ಎಣಿಕೆ ಮಾಡಲು ಮತ್ತು ತಾಳೆ ನೋಡಲು 4 ರಿಂದ 5 ಗಂಟೆ ಹೆಚ್ಚುವರಿಯಾಗಿ ಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.

ಫಲಿತಾಂಶ ತಡವೇಕೆ?

ಇವಿಎಂ-ವಿವಿಪ್ಯಾಟ್ ಮತ ತಾಳೆ ಹಾಕಬೇಕಾದ್ದರಿಂದ ಮತ ಎಣಿಕೆ ಪ್ರಕ್ರಿಯೆ ನಿಧಾನವಾಗಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ 5 ವಿ.ವಿ.ಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಬೇಕು. ಒಂದು ವಿ.ವಿ.ಪ್ಯಾಟ್​ನ ಚೀಟಿಗಳ ಎಣಿಕೆಗೆ ಕನಿಷ್ಠ 45 ನಿಮಿಷ ಬೇಕಾಗುತ್ತದೆ. 5 ವಿ.ವಿ.ಪ್ಯಾಟ್ ಎಣಿಕೆಗೆ ಕನಿಷ್ಠ 3ರಿಂದ 4 ಗಂಟೆ ಬೇಕಾಗುತ್ತದೆ. ಈ ಕಾರಣಗಳಿಂದಾಗಿ ಅಂತಿಮ ಫಲಿತಾಂಶ ತಡವಾಗಲಿದೆ.

Leave a Reply

Your email address will not be published. Required fields are marked *